ಜನ ಜೀವದ ಜತೆ ಆಡವಾಡಬೇಡಿ

ಕುಮಟಾ: ದಿವಗಿ ಗ್ರಾ.ಪಂ. ವ್ಯಾಪ್ತಿಯ ತಂಡ್ರಕುಳಿಯಲ್ಲಿ ನಡೆದಿರುವ ಚತುಷ್ಪಥ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಜನರ ಜೀವದ ಜೊತೆ ಆಡವಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಎಂದು ಶಾಸಕ ದಿನಕರ ಶೆಟ್ಟಿ ಐಆರ್​ಬಿ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ವಿಶೇಷ ಸಭೆ ನಡೆಸಿದ ಶಾಸಕ ಶೆಟ್ಟಿ ಕಾಮಗಾರಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಕಿಡಿ ಕಾರಿದರು.

ಚತುಷ್ಪಥ ಕಾಮಗಾರಿಯಲ್ಲಿ ಹೆದ್ದಾರಿಯನ್ನು ಹೆಗಡೆ ತಾರಿಬಾಗಿಲ ಮಾರ್ಗವಾಗಿ ಸೇತುವೆ ಮಾಡಿದ್ದರೆ ಈ ರೀತಿಯ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಈಗಲೂ ಕಾಲಾವಕಾಶವಿದೆ. ಜೀವದ ಜೊತೆ ಆಟವಾಡಬೇಡಿ ಎಂದು ಎಚ್ಚರಿಸಿದರು.

ದಿವಗಿ ಪಂಚಾಯಿತಿ ಸದಸ್ಯ ಹೇಮಂತಕುಮಾರ ಗಾಂವಕರ ಮಾತನಾಡಿ, ಚತುಷ್ಪಥ ಕಾಮಗಾರಿ ಮಾಡುವವರಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಜೀವದ ಬೆಲೆ ಗೊತ್ತಿಲ್ಲ. ತಂಡ್ರಕುಳಿಗೆ ನೀರು ಬರದಂತೆ ಹೆದ್ದಾರಿಯ ಎರಡೂ ಕಡೆಗಳಲ್ಲಿ ಟ್ರೆಂಚ್ ಕೊರೆಯಬೇಕು. ಪರಿಹಾರ ಒದಗಿಸಬೇಕು. ಸುಳ್ಳು ಭರವಸೆ ಬೇಡ ಎಂದರು.

ಅಂಬಿಗ ಸಮಾಜದ ಸಂಘದ ಸದಸ್ಯ ಗಣೇಶ ಅಂಬಿಗ ಮಾತನಾಡಿ, ತಂಡ್ರಕುಳಿಯಲ್ಲಿ ಇಷ್ಟು ಅನಾಹುತಗಳಾದರೂ ಐಆರ್​ಬಿ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಸಭೆಗೆ ಆಗಮಿಸಿದ್ದ ತಂಡ್ರಕುಳಿ ಗ್ರಾಮಸ್ಥರು ಮಾತನಾಡಿ, ಈ ಹಿಂದೆ ಅನಾಹುತವಾದಾಗಲೂ ಯಾವ ಪರಿಹಾರವನ್ನೂ ಒದಗಿಸಲಿಲ್ಲ. ಮನೆಗಳ ಮೇಲೆ ಕಲ್ಲು ಬಿದ್ದಾಗಲೂ ಏನೂ ನೀಡಿಲ್ಲ. ರಾತ್ರಿ ಮಲಗಿದಾಗ ಬೆಳಿಗ್ಗೆ ಏಳುತ್ತೇವೋ ಇಲ್ಲವೋ ಎಂಬ ಭಯ ಕಾಡುತ್ತಿದೆ ಎಂದರು. ದಿವಗಿ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೌಡ ಮಾತನಾಡಿ, ತಂಡ್ರಕುಳಿಯಂತೆಯೇ ದುಂಡಕುಳಿಯಲ್ಲೂ ಸಮಸ್ಯೆ ಇದೆ ಎಂದರು.

ಶೀಘ್ರ ಪರಿಹಾರ ವಿತರಿಸಬೇಕು….
ಜೂ. 22ರ ಒಳಗಾಗಿ ಎಲ್ಲ ತುರ್ತು ಕಾರ್ಯ ಪರಿಹಾರ ಮುಗಿಸಬೇಕು. ತಂಡ್ರಕುಳಿಯ ಜನತೆ ಕಳೆದ ಮೂರು ವರ್ಷದಿಂದ ಜೀವವನ್ನು ಕೈಯಲ್ಲಿಟ್ಟು ಬದುಕು ನಡೆಸುತ್ತಿದ್ದಾರೆ. ಐಆರ್​ಬಿ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಂಡ್ರಕುಳಿಯಲ್ಲಿ ಕೊರೆದ ಗುಡ್ಡದ ಮೇಲ್ಭಾಗಕ್ಕೆ ಟ್ರೆಂಚ್ ಹೊಡೆಸಬೇಕು. 1 ಹಿಟಾಚಿ, 1 ಜೆಸಿಬಿ, ಟಿಪ್ಪರ್ ಹಾಗೂ ಒಂದು ಆಂಬುಲೆನ್ಸ್ ಅನ್ನು 24 ಗಂಟೆಯೂ ಅಲ್ಲಿಯೇ ಇರುವಂತೆ ಮಾಡಬೇಕು. ಬಾವಿ, ಬೈಕ್, ಪಂಪ್, ಅಂಗಡಿ ಹಾನಿಯ ಜೊತೆಗೆ ಘೊಷಿಸಿದ ತಲಾ ಹತ್ತು ಸಾವಿರ ರೂ ಪರಿಹಾರ ಶೀಘ್ರ ವಿತರಿಸಬೇಕು. ನೀರು ನುಗ್ಗಿದ ಮನೆಗಳಿಗೆ ಇಂದೇ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಒದಗಿಸಿ ಎಂದು ಶಾಸಕ ಶೆಟ್ಟಿ ಸೂಚಿಸಿದರು.

ಉಪವಿಭಾಗಾಧಿಕಾರಿ ಶಾಜಿದ್​ವುುಲ್ಲಾ, ತಾ.ಪಂ. ಇಒ ಸಿಟಿ ನಾಯ್ಕ, ತಹಸೀಲ್ದಾರ್ ಮೇಘರಾಜ ನಾಯ್ಕ, ಸಿಪಿಐ ಸಂತೋಷ ಶೆಟ್ಟಿ ಐಆರ್​ಬಿ ಇಂಜಿನಿಯರ್ ಎಸ್. ಎನ್. ಕುಲಕರ್ಣಿ, ಸುರೇಶ ರಾಜಗುರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನಕುಮಾರ ಸೇರಿದಂತೆ ತಾಲೂಕ ಮಟ್ಟದ ಹಲವು ಅಧಿಕಾರಿಗಳಿದ್ದರು.