ಜನ್ಯ ಗಾನಕ್ಕೆ ಕುಣಿದು ಕುಪ್ಪಲಿಸಿದ ಜನತೆ

ಆದರ್ಶ್ ಅದ್ಕಲೇಗಾರ್, ಮಡಿಕೇರಿ: ಕೊಡಗು ಪ್ರವಾಸಿ ಉತ್ಸವದ ಕೊನೆಯ ದಿನವಾದ ಭಾನುವಾರ ಸಂಜೆ ಖ್ಯಾತ ಗಾಯಕ ಅರ್ಜುನ್ ಜನ್ಯ ಹಾಗೂ ತಂಡದ ಗಾಯ ಕರಿಂದ ನಡೆಸಿಕೊಟ್ಟ ಸಂಗೀತ ರಸ ಸಂಜೆ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಸಂಜೆ ಏಳು ಗಂಟೆಯಿಂದ ಮಂಜಿನ ನಗರಿ ಮಡಿಕೇರಿಯ ಗಾಂಧಿ ಮೈದಾನದ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅರೆಭಾಷೆ ಅಕಾಡೆಮಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸಳೆದವು.
ಈ ಸಂದರ್ಭದಲ್ಲಿ ಅರೆಭಾಷೆಯ ಆಚಾರ-ವಿಚಾರ ಸೇರಿದಂತೆ ಅಂದಿನ ಕಾಲದಲ್ಲಿ ಅಪ್ಪ, ಅಮ್ಮ, ತಾತ, ಮೊಮ್ಮಕ್ಕಳ ಬಾಂಧವ್ಯದ ಕುರಿತು ಕಣ್ಣಿಗೆ ಕಟ್ಟಿದಂತೆ ನಾಟಕ ರೂಪದಲ್ಲಿ ಪ್ರದರ್ಶಿಸಿದರು.
ಅರ್ಜುನ್ ಜನ್ಯ ವೇದಿಕೆಯಿಂದ ಕೆಳಗಿಳಿದು ಹಾಡು ಹೇಳುತ್ತಾ, ಡಾನ್ಸ್ ಮಾಡುವ ಮೂಲಕ ಜನತೆಯನ್ನು ರಂಜಿಸಿದರು. ಜನ್ಯ ಅವರಿಗೆ ಸರಿಗಮಪ ತಂಡ ಸಾಥ್ ನೀಡಿದ್ದು ಮತ್ತಷ್ಟು ಕಳೆಗಟ್ಟುವಂತೆ ಮಾಡಿತು.
ಅನುರಾಧಭಟ್ ಹಾಗೂ ಅರ್ಜುನ್ ಜನ್ಯರ ಜುಗಲ್ ಬಂದಿಯಲ್ಲಿ ‘ಅಯೋಗ್ಯ’ ಚಿತ್ರದ ಏನಮ್ಮಿ ಏನಮ್ಮಿ ಹಾಡು ಹಾಗೂ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ನಂತರ ಅರ್ಜುನ್ ಜನ್ಯ, ತಾವೇ ಸಂಗೀತ ನಿರ್ದೇಶಿಸಿದ ಹಾಡುಗಳಾದ ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ., ಹುಲಿ, ಹುಲಿ, ಹೆಬ್ಬುಲಿ. ಜೈ.. ಜೈ… ಭಜರಂಗಿ.., ಅಧ್ಯಕ್ಷ, ಅಧ್ಯಕ್ಷ, ಅಧ್ಯಕ್ಷ.. ಹಾಡುಗಳ ಮೂಲಕ ರಂಜಿಸಿದರು. ಇನ್ನು ಹೆಸರಾಂತ ಗಾಯಕಿ ಇಂದು ನಾಗರಾಜ್ ಹಾಗೂ ಅರ್ಜುನ್ ಅವರು ಹುಡುಗಿ ಯಾಕಿಂಗ್ ಆಡ್ತಿ ಅಂತಾ…, ಹೊಸ ಬೆಳಕು ಮೂಡುತ್ತಿದೆ.., ಚುಟು, ಚುಟು ಆಗುತೈತೆ ಹಾಡುಗಳನ್ನು ಹಾಡಿ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗಳಿಗೆ ತಲೆ ಬಾಗಿದರು.
ಇಂದು ನಾಗರಾಜ್ ಅವರ ಕಂಠದಲ್ಲಿ ಹೊರಹೊಮ್ಮಿದ ಮಡಿಕೇರಿ ಸಿಪಾಯಿ ಸೇರಿದಂತೆ, ಸಂಚಿತ್ ಹಾಗೂ ವ್ಯಾಸರಾಜ್ ಧ್ವನಿಯಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹಾಡಿ ರಾಜ್‌ಕುಮಾರ್ ಅಭಿಮಾನಿಗಳಿಗೆ ರಸ ದೌತಣ ಬಡಿಸಿದರು. ಇನ್ನು ರವಿಚಂದ್ರನ್ ಅಭಿಮಾನಿಗಳಿಗೆ ಕರುನಾಡೆ ಹಾಡು, ದರ್ಶನ್ ಅಭಿಮಾನಿಗಳಿಗೆ ಚಕ್ರವರ್ತಿ ಚಿತ್ರದ ಹಾಡುಗಳನ್ನು ಅನುರಾದಭಟ್, ಸಂಚಿತ್ ಹೆಗ್ಡೆ ಹಾಡಿದರು. ಅರ್ಜುನ್ ಹಾಗೂ ಅನುರಾಧಾಭಟ್ ಜತೆಗೂಡಿ ಹಾಡಿದ ಅಪ್ಪ ಐ ಲವ್ ಯು ಹಾಡು, ಅರ್ಜುನ್‌ಜನ್ಯರ ’ಕೋಲು ಮಂಡೆ ದೇವಾ’ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು.
ಜಿಲ್ಲೆಯಲ್ಲಿ ಮೊದಲ ಕಾರ್ಯಕ್ರಮ: ಅರ್ಜುನ್ ಜನ್ಯ ಹಲವು ಬಾರಿಗೆ ಮಡಿಕೇರಿಗೆ ಆಗಮಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಡಿಕೇರಿಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. ತಮ್ಮ ತಂಡದೊಂದಿಗೆ ಆಗಮಿಸಿದ್ದ ಜನ್ಯ, ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಅಭಿ ಮಾನಿಗಳು ಹೆಚ್ಚೆದು ಕುಣಿಯುವಂತೆ ಮಾಡಿದರು. ಒಟ್ಟಿನಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಜನ್ಯರ ಎಂಟ್ರಿಗಾಗಿ ಕಾದ ಜನತೆ: ನಿರೂಪಕಿ ಅನುಪಮಾಭಟ್ ಅರ್ಜುನ್ ಜನ್ಯರ ಕುರಿತು ಹೇಳುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರ ಚೀರಾಟ ಮುಗಿಲು ಮುಟ್ಟಿತ್ತು. ಒಂದೆಡೆ ಅರ್ಜುನ್ ಜನ್ಯರ ತಂಡ ವೇದಿಕೆ ಮೇಲೆ ಹಾಜರಾಗುತ್ತಿದ್ದರೆ, ವೇದಿಕೆಯನ್ನೇ ವೀಕ್ಷಿಸುತ್ತಿದ್ದ ಪ್ರೇಕ್ಷಕರು ಅರ್ಜುನ್ ಜನ್ಯ ಆಗಮನಕ್ಕೆ ಹಾತೊರೆಯುತ್ತಿದ್ದರು. ಕೊನೆಗೂ ಜೈ..ಜೈ..ಭಜರಂಗಿ ಎಂಬ ಹಾಡಿನೊಂದಿಗೆ ಎಂಟ್ರಿಕೊಟ್ಟ ಜನ್ಯ, ಪ್ರೇಕ್ಷಕರತ್ತ ತೆರಳಿ ಕೈ ಕುಲಕುತ್ತಾ ಹೆಜ್ಜೆ ಹಾಕಿದರು.

ಲಕ್ಷಾಂತರ ಜನರ ಆಗಮನ: ನಾಡ ಹಬ್ಬ ದಸರಾ ಆಚರಣೆ ಹೊರತುಪಡಿಸಿ ಮಡಿಕೇರಿಯಲ್ಲಿ ಹಿಂದೆಂದೂ ಯಾವುದೇ ಕಾರ್ಯಕ್ರಮಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿರಲಿಲ್ಲ. ಇದೇ ಮೊದಲ ಬಾರಿಗೆ ಕೊಡಗು ಪ್ರವಾಸಿ ಉತ್ಸವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದರು. ಉತ್ಸವದ ಕೊನೆ ದಿನವಾದ ಭಾನುವಾರದ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜಿಲ್ಲೆಯ ಜನತೆ ಹಾಗೂ ಪ್ರವಾಸಿಗರು, ವಿವಿಧ ಗಾಯಕರ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.