Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಜನಸಾಮಾನ್ಯರಿಗಾಗಿ ಆರೋಗ್ಯಕರ ಹೆಜ್ಜೆಗಳು…

Tuesday, 13.02.2018, 3:03 AM       No Comments

| ಡಾ. ಮಂಜುನಾಥ್​. ಬಿ. ಎಚ್​

ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್​ನಂಥ ಕಾಯಿಲೆಗಳು ಯಾರನ್ನೂ ಹೇಳಿ-ಕೇಳಿ ಬರುವುದಿಲ್ಲ. ಅವುಗಳಿಗಾಗಿ ಖರೀದಿಸುವ ಔಷಧಗಳ ಬೆಲೆ ಹೆಚ್ಚಾಗಿರುವಾಗ ಮಧ್ಯಮವರ್ಗದ ಜನತೆಗೆ ಜನೌಷಧಿ ವರದಾನವಾಗಿ ಪರಿಣಮಿಸಿದೆ. ಜನರ ಅವಶ್ಯಕತೆಗೆ ತಕ್ಕಂತೆ ಔಷಧಗಳನ್ನು ಒದಗಿಸಲು ಜಿಲ್ಲಾವಾರು ಮತ್ತು ಗ್ರಾಮೀಣವಾರು ಜನೌಷಧಿ ಮಳಿಗೆಗಳನ್ನು ತೆರೆಯಲಾಗುತ್ತಿದೆ.

ಕೆಲವು ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮ ಕೇಳುತ್ತಿದ್ದೆ. ಮೈಸೂರಿನ ದರ್ಶನ್ ಎಂಬ ವ್ಯಕ್ತಿ, ಪ್ರಧಾನಮಂತ್ರಿ ಜನ ಔಷಧಿ ಯೋಜನೆಯಿಂದ ತನ್ನ ತಂದೆಯ ಔಷಧಗಳಿಗಾಗಿ ಖರ್ಚುಮಾಡುತ್ತಿದ್ದ ಸಾವಿರಾರು ರೂ.ಗಳು ಉಳಿತಾಯವಾಗುತ್ತಿವೆ. ಯಾವ ಔಷಧಗಳಿಗೂ ಕಮ್ಮಿ ಇಲ್ಲದಂತೆ ಜನೌಷಧಿ ಕಾರ್ಯನಿರ್ವಹಿಸುತ್ತಿದೆ ಎಂದು ತಮಗೆ ಪತ್ರ ಬರೆದಿದ್ದ ವಿಷಯವನ್ನು ಈ ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಪ್ರಧಾನಿ, ಇದೇ ಅಲ್ಲವೇ ಸರ್ಕಾರದ ಯೋಜನೆಗಳ ಯಶಸ್ಸು ಎಂದರು.

ಅದಾದ ಬಳಿಕ ಒಂದು ಸಂವಾದದ ವೇಳೆ ಹಲವರು ಜನೌಷಧಿಯ ಬಗ್ಗೆ ಅವರಿಗಿದ್ದ ಅನೇಕ ಸಂದೇಹಗಳನ್ನು ತೋಡಿಕೊಂಡರು. ಇವು ಸರ್ವೆಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬರುವಂಥ ಸಂದೇಹಗಳೇ. ಬೇರೆಲ್ಲ ಔಷಧಗಳು ಅತ್ಯಂತ ದುಬಾರಿಯಾಗಿರುವಾಗ ಜನೌಷಧಿ ಕೇಂದ್ರಗಳು ಇಷ್ಟು ಕಡಿಮೆ ಬೆಲೆಗೆ ಹೇಗೆ ಔಷಧಗಳನ್ನು ಪೂರೈಸಲು ಸಾಧ್ಯ? ಈ ಔಷಧಗಳು ನಿಜಕ್ಕೂ ನಂಬಲರ್ಹವೇ? ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲವೇ? ಎಂದು ಪ್ರಶ್ನೆಗಳು ಮೂಡಿದವು.

ಜನೌಷಧಿಗೆ ಬೆಲೆ ಕಡಿಮೆ ಇದ್ದರೂ ಅವು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂಬುದನ್ನು ಗಮನಿಸಬೇಕು. ವಿಶ್ವ ಆರೋಗ್ಯ ಸಂಸ್ಥೆ (ಗಏಣ)ಯಿಂದ ಪ್ರಮಾಣಪತ್ರ ಹೊಂದಿರುವ ಉತ್ಕೃಷ್ಟ ಗುಣಮಟ್ಟದ ಔಷಧಗಳನ್ನೇ ಜನೌಷಧಿ ಕೇಂದ್ರಗಳು ಮಾರಾಟ ಮಾಡುತ್ತವೆ. ಆದರೂ ಅವು ಮಾರುಕಟ್ಟೆಯಲ್ಲಿರುವ ಇತರ ಔಷಧಗಳಿಗಿಂತ ಎಷ್ಟೋ ಪಟ್ಟು ಕಡಿಮೆ ಬೆಲೆಗೆ ಲಭಿಸುತ್ತವೆ. ಇದರ ಹಿಂದಿರುವ ಒಂದು ಸರಳ ಲೆಕ್ಕಾಚಾರವನ್ನು ಗಮನಿಸೋಣ. ಮಾತ್ರೆಯೊಂದರ ಉತ್ಪಾದನಾ ವೆಚ್ಚ 1 ರೂಪಾಯಿಯಾದರೆ, ಅದನ್ನು ಪ್ರಚಾರ ಮಾಡುವುದಕ್ಕಾಗಿ ಔಷಧ ಸಂಸ್ಥೆಯ ಜಾಹೀರಾತುಗಳಿಗಾಗಿ 9 ರೂ. ವೆಚ್ಚವಾಗುತ್ತದೆ. ಹೀಗಿರುವಾಗ ಲಾಭಾಂಶವಿಟ್ಟು, 10 ರೂ.ಗೆ ಆ ಮಾತ್ರೆ ಮಾರಾಟವಾಗುತ್ತದೆ. ಆದರೆ ಜನೌಷಧಿ ಈ ರೀತಿಯದಲ್ಲ. ಅದಕ್ಕಿರುವುದು ಬರಿಯ ಉತ್ಪಾದನಾ ವೆಚ್ಚವೇ ಹೊರತು ಜಾಹೀರಾತು ವೆಚ್ಚಗಳನ್ನು ಅದಕ್ಕೆ ಸೇರಿಸಲಾಗುವುದಿಲ್ಲ. ಜನತೆಯ ಅನುಕೂಲತೆಗಾಗಿ ಅತ್ಯಂತ ಕನಿಷ್ಠ ವೆಚ್ಚದಲ್ಲಿ ಈ ಔಷಧಗಳನ್ನು ಒದಗಿಸಲಾಗುತ್ತಿದೆ.

ಮೊದಲೆಲ್ಲ ಜನರಿಕ್ ಔಷಧಗಳೆಂಬುದು ಬರಿಯ ಸಿನಿಮಾಗಳಲ್ಲಷ್ಟೇ ತೋರಿಸುವ ವಿಚಾರವಾಗಿತ್ತು. ಹೀಗೊಂದು ವಿಚಾರ ನಿಜವಾಗಿಯೂ ಇತ್ತೆಂದು ಬಹಳ ಕಡಿಮೆ ಜನರಿಗಷ್ಟೇ ತಿಳಿದಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ವಹಿಸಿದ ಆಸ್ಥೆಯ ಪರಿಣಾಮವಾಗಿ ದೇಶಾದ್ಯಂತ ಸುಮಾರು 2,700ಕ್ಕೂ ಹೆಚ್ಚು ಭಾರತೀಯ ಜನೌಷಧಿ ಕೇಂದ್ರಗಳು ಪ್ರಾರಂಭವಾಗಿವೆ. ಮುಂದಿನ ಮೂರು ತಿಂಗಳಲ್ಲಿ 3,000ಕ್ಕೂ ಹೆಚ್ಚು ಕೇಂದ್ರಗಳು ಪ್ರಾರಂಭವಾಗಲಿವೆ. ಔಷಧಗಳು ನಿಖರವಾಗಿ ಮತ್ತು ಕಡಿಮೆ ಬೆಲೆಯಲ್ಲಿ, ಎಲ್ಲ ವರ್ಗದ ಜನರಿಗೂ ತಲುಪಲಿ ಎನ್ನುವ ಕಾರಣಕ್ಕೆ ಜನೌಷಧಿ ಯೋಜನೆಯು ವಿವಿಧ ರೀತಿಯ ಔಷಧಗಳನ್ನು ತಯಾರಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಔಷಧಗಳ ಉತ್ಪಾದನೆ ದರಕ್ಕಿಂತ ಅಧಿಕ ಬೆಲೆ ನಿಗದಿಪಡಿಸುತ್ತಿದ್ದಾರೆ, ಜನರು ಅನಿವಾರ್ಯವಾಗಿ ಅದೇ ಬೆಲೆಯನ್ನು ತೆತ್ತು ಅವನ್ನು ಖರೀದಿಸುತ್ತಿದ್ದಾರೆ; ದುಬಾರಿ ಬೆಲೆಯ ಔಷಧ ಖರೀದಿಸಲು ಕಷ್ಟವಾದಾಗ ಜೀವತೆರುವಂತಾದ ಸಾಕಷ್ಟು ಉದಾಹರಣೆಗಳು ಕಣ್ಣಮುಂದಿವೆ.

ಇಂದಿನ ದಿನಗಳಲ್ಲಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್​ನಂಥ ಕಾಯಿಲೆಗಳು ಯಾರನ್ನೂ ಹೇಳಿ-ಕೇಳಿ ಬರುವುದಿಲ್ಲ. ರಕ್ತದೊತ್ತಡ, ಮಧುಮೇಹಗಳು ಸರ್ವೆಸಾಮಾನ್ಯವಾಗಿರುವಾಗ ಅವುಗಳಿಗಾಗಿ ಖರೀದಿಸುವ ನಿತ್ಯಸೇವನೆಯ ಔಷಧಗಳ ಬೆಲೆ ಹೆಚ್ಚಾಗಿರುವಾಗ ಮಧ್ಯಮವರ್ಗದ ಜನತೆಗೆ ಜನೌಷಧಿ ವರದಾನವಾಗಿ ಪರಿಣಮಿಸಿದೆ. ಜನರ ಅವಶ್ಯಕತೆಗೆ ತಕ್ಕಂತೆ ಔಷಧಗಳನ್ನು ಒದಗಿಸಲು ಜಿಲ್ಲಾವಾರು ಮತ್ತು ಗ್ರಾಮೀಣವಾರು ಜನೌಷಧಿ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಹೆಚ್ಚೆಚ್ಚು ಕೇಂದ್ರಗಳನ್ನು ಆರಂಭಿಸಲು ಮೋದಿ ಸರ್ಕಾರ ಉತ್ತೇಜನ ನೀಡುತ್ತಿರುವುದರಿಂದ ಜನರಲ್ಲಿ ಜನರಿಕ್ ಔಷಧಗಳ ಕುರಿತು ಆಸಕ್ತಿ ಮೂಡುವಂತಾಗಿದೆ. ರಾಜ್ಯ ಸರ್ಕಾರ ಕೂಡ ಜನರಿಕ್ ಮಳಿಗೆ ಆರಂಭಿಸಲು ಆಸಕ್ತಿ ತೋರುತ್ತಿರುವುದು ಶ್ಲಾಘನೀಯವಾಗಿದೆ. ಖಾಸಗಿ ಔಷಧ ತಯಾರಕರ ಔಷಧ, ಮಾತ್ರೆಗಳು ದುಬಾರಿ ಎನಿಸಿದರೂ, ಕೊಳ್ಳುವುದು ಅನಿವಾರ್ಯವಾಗುವಂತೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ಆದರೆ ಸಾರ್ವಜನಿಕರು ಜನರಿಕ್ ಔಷಧಗಳನ್ನು ಕೊಂಡಲ್ಲಿ ಆರೋಗ್ಯದ ಕಾಳಜಿಯ ಜತೆಗೆ ಹಣದ ಉಳಿತಾಯವೂ ಆಗಲಿದೆ. ಜನೌಷಧಿ ಮಳಿಗೆಗಳಲ್ಲಿ 500ಕ್ಕೂ ಅಧಿಕ ಬಗೆಯ ಔಷಧಗಳು ದೊರೆಯುತ್ತವೆ ಹಾಗೂ 150 ಮಾದರಿಯ ವೈದ್ಯಕೀಯ ಪರಿಕರಗಳು ಲಭ್ಯವಿವೆ. ರಕ್ತದೊತ್ತಡ, ಮಧುಮೇಹ, ಎಚ್​ಐವಿ ಏಡ್ಸ್, ಕಿಡ್ನಿ ವೈಫಲ್ಯ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಔಷಧಗಳು ಕಡಿಮೆ ಬೆಲೆಗೆ ಇಲ್ಲಿ ದೊರೆಯುತ್ತವೆ.

ಆರೋಗ್ಯವಂತ ದೇಹದಲ್ಲಷ್ಟೆ ಆರೋಗ್ಯವಂತ ಮನಸುಗಳಿರಲು ಸಾಧ್ಯ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕ್ರಾಂತಿಕಾರಿ ಹೆಜ್ಜೆಗಳನ್ನೇ ಇಟ್ಟಿದೆ ಎನ್ನಬಹುದು. ಭಾರತೀಯ ಮಾರುಕಟ್ಟೆಗಳಲ್ಲಿ ಬಟ್ಟೆ, ವಾಹನ, ಚಪ್ಪಲಿ, ಇಲೆಕ್ಟ್ರಾನಿಕ್ ವಸ್ತುಗಳಿಗೆ ರಿಯಾಯಿತಿ ನೀಡುವುದನ್ನು ನಾವು ಗಮನಿಸಿದ್ದೇವೆ. ಪ್ರತಿ ಬಜೆಟ್ ಘೊಷಣೆಯಲ್ಲೂ ‘ಸಿಗರೇಟ್ ತುಟ್ಟಿ, ಬಟ್ಟೆ ಅಗ್ಗ’ ಎಂಬ ವರದಿಗಳನ್ನೂ ಓದುತ್ತೇವೆ. ಆದರೆ ಈ ಬಾರಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಲೇಬೇಕಿದೆ.

ಹೃದಯ ಸಂಬಂಧಿ ಸಮಸ್ಯೆ ಎಂದರೆ ಬೆಚ್ಚಿಬೀಳುವವರೇ ಜಾಸ್ತಿ. ಅದಕ್ಕೆ ಸರಿಯಾಗಿ ಹೃದಯ ಶಸ್ತ್ರಚಿಕಿತ್ಸೆ ಅತ್ಯಂತ ವೆಚ್ಚದಾಯಕವೂ ಆಗಿತ್ತು. ಹೃದಯದ ರಕ್ತನಾಳಗಳು ಮುಚ್ಚಲ್ಪಟ್ಟಂತಾದಾಗ ಸ್ಟೆಂಟ್ ಎಂಬ ನಾಳದಂತಹ ಉಪಕರಣವನ್ನು ಆ ನಾಳದ ಮೂಲಕ ಕಳುಹಿಸಲಾಗುತ್ತದೆ. ಅಲ್ಲಿ ತೆರೆದುಕೊಳ್ಳುವ ಸ್ಟೆಂಟ್, ರಕ್ತನಾಳವು ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಆದರೆ ಈ ಸ್ಟೆಂಟ್ ಅಳವಡಿಕೆಗೆ 1.5 ಲಕ್ಷ ರೂ.ಗಳವರೆಗೂ ವೆಚ್ಚ ತಗುಲುತ್ತಿತ್ತು. ಮಂಡಿಚಿಪ್ಪು ಬದಲಾವಣೆಗೆ ಬೇಕಾದ ಕೃತಕ ಕೀಲುಗಳ ಬೆಲೆಯೂ ಲಕ್ಷದ ಗಡಿ ದಾಟುತ್ತಿತ್ತು. ಸಾಮಾನ್ಯ ಜನರು ಮಂಡಿನೋವು ತಿನ್ನುವ ಪರಿಸ್ಥಿತಿಯಲ್ಲಿ ಇದ್ದರೇ ಹೊರತು, ಮಂಡಿಚಿಪ್ಪಿನ ಬದಲಾವಣೆಯ ದುಬಾರಿ ವೆಚ್ಚ ತೆರುವ ಸ್ಥಿತಿವಂತಿಕೆ ಅವರಲ್ಲಿ ಖಂಡಿತಾ ಇರಲಿಲ್ಲ. ಆದರೆ ಮೋದಿ ಸರ್ಕಾರ ಸ್ಟೆಂಟ್​ಗಳಿಗೆ ಗರಿಷ್ಠ ದರ ನಿಗದಿಪಡಿಸಿ ಆದೇಶ ಹೊರಡಿಸಿದ ಪರಿಣಾಮ ಈಗ ಉತ್ಪಾದಕರು ನಿಗದಿಪಡಿಸಿದ ಬೆಲೆಗೆ ಸ್ಟೆಂಟ್​ಗಳನ್ನು ಮಾರಾಟ ಮಾಡಬೇಕಿದೆ. ಲಕ್ಷದಲ್ಲಿದ್ದ ಸ್ಟೆಂಟುಗಳು ಇಂದು 7 ಸಾವಿರ, 10 ಸಾವಿರ, 30 ಸಾವಿರ ರೂ.ಗಳಿಗೆ ದೊರಕುತ್ತವೆ. ಕೆಳಮಧ್ಯಮ ವರ್ಗದ ಸಾಧಾರಣ ವ್ಯಕ್ತಿಯೂ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದಾಗಿದೆ. ಇವೆಲ್ಲವೂ ದೂರದೃಷ್ಟಿಯ ಆಡಳಿತದ ಫಲವಲ್ಲದೆ ಮತ್ತಿನ್ನೇನು?

ಬಡಜನರಿಗೂ ವಿಮಾಸೌಲಭ್ಯ: ವಿಮಾಸೌಲಭ್ಯ ಎನ್ನುವುದು ಹೆಚ್ಚಿನ ದುಡ್ಡುಳ್ಳವರು ತೆರಿಗೆ ಉಳಿಸಲು ಇರುವಂಥದು, ಬಡಜನರ ಕೈಗೆಟುಕದ ಸೌಲಭ್ಯ ಆರೋಗ್ಯವಿಮೆ ಎಂಬ ಆರೋಪಗಳಿದ್ದವು. ಕೂಲಿ ಕಾರ್ವಿುಕರು, ಬಡಜನರು ವಿವಿಧ ಆರೋಗ್ಯ ವಿಮೆಗಳ ವಾರ್ಷಿಕ ಮೊತ್ತದಷ್ಟು ದುಡಿಯುವುದೂ ಕಷ್ಟಕರವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅವರು ವಿಮೆ ಮಾಡಿಸಿಕೊಳ್ಳುವುದು ಹೇಗಾದೀತು? ಆದರೆ ಇಂದು ಕೇವಲ ವಾರ್ಷಿಕ 12 ರೂ.ಗೆ 2 ಲಕ್ಷ ರೂ. ಮೌಲ್ಯದ ಪ್ರಧಾನಮಂತ್ರಿ ಸುರಕ್ಷಾ ವಿಮಾ ಎಂಬ ಅಪಘಾತ ವಿಮೆ ಮತ್ತು ವಾರ್ಷಿಕ 330 ರೂ.ಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ಎಂಬ ಜೀವವಿಮೆ ಒದಗಿಸಿ ವಿಮಾದಾರರಿಗೆ ಹಾಗೂ ಅವರ ಕುಟುಂಬಕ್ಕೆ ಸರ್ಕಾರ ಭದ್ರತೆ ಒದಗಿಸುತ್ತಿದೆ. ಅಸಂಘಟಿತ ವಲಯದ ಕಾರ್ವಿುಕರಿಗೆ ನಿವೃತ್ತಿ ಜೀವನದ ಬಳಿಕ, ಅವರಿಗೆ ಅಥವಾ ಪಾಲಿಸಿದಾರರ ಅವಲಂಬಿತರಿಗೆ ಅಧಾರವಾಗಲು ಮಾಸಿಕ 1000ದಿಂದ 5000 ರೂ.ವರೆಗೆ ಒದಗಿಸಲು ಅಟಲ್ ಪಿಂಚಣಿ ಯೋಜನೆ ಪರಿಚಯಿಸಲಾಗಿದೆ. ಇವೆಲ್ಲವೂ ಸಬಲೀಕರಣದ ಪ್ರಯೋಗಗಳೇ ಅಲ್ಲವೇ?

ರಾಷ್ಟ್ರೀಯ ಆರೋಗ್ಯ ನೀತಿ: ದೇಶದ ಎಲ್ಲ ಪ್ರಜೆಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಒದಗಿಸುವುದು ಸರ್ಕಾರದ ಆದ್ಯಕರ್ತವ್ಯವಾಗಿರಬೇಕು. ಇವುಗಳ ಪೂರೈಕೆಯನ್ನು ಉಚಿತವಾಗಿ ಮಾಡುತ್ತದೋ ಅಥವಾ ಹಣ ಪಡೆದು ಕೈಗೊಳ್ಳಲಾಗುತ್ತದೋ ಎನ್ನುವುದು ಸರ್ಕಾರದ ಮರ್ಜಿಗೆ ಬಿಟ್ಟ ವಿಚಾರ. ಆದರೆ ಭಾರತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳಂತೂ ಜನಸಾಮಾನ್ಯರಿಗೆ ಹರ್ಷದಾಯಕವೇ. ಕೇಂದ್ರ ಬಜೆಟ್​ನಲ್ಲಿ ರಾಷ್ಟ್ರೀಯ ಆರೋಗ್ಯ ನೀತಿಯಡಿಯಲ್ಲಿ ದೇಶದ 10 ಕೋಟಿ ಬಡಕುಟುಂಬಗಳ ಸದಸ್ಯರಿಗೆ ತಲಾ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಪರಿಚಯಿಸಲಾಗಿದೆ. ಇದರಿಂದ ದೇಶದ 50 ಕೋಟಿ ಜನರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಪ್ರಪಂಚದಲ್ಲೇ ಇಷ್ಟು ಬೃಹತ್ ಪ್ರಮಾಣದ ಆರೋಗ್ಯ ಯೋಜನೆ ಎಲ್ಲೂ ಜಾರಿಯಾಗಿರಲಿಲ್ಲ. ಅಮೆರಿಕದ ‘ಒಬಾಮಾ ಕೇರ್’ ಯೋಜನೆ ಸಹ ಈ ಪ್ರಮಾಣದ ಆರೋಗ್ಯ ಸೇವೆಯನ್ನು ಒಳ ಗೊಂಡಿರಲಿಲ್ಲ. ಈ ಯೋಜನೆಯನ್ನು ಎಲ್ಲ ಪ್ರಜೆಗಳಿಗೂ ವಿಸ್ತರಿಸಿದರೆ ಪ್ರತಿಯೊಬ್ಬ ಭಾರತೀಯನೂ ಆರೋಗ್ಯದ ವಿಚಾರದಲ್ಲಿ ನಿರ್ಭಯದಿಂದಿರಲು ಸಾಧ್ಯ.

(ಲೇಖಕರು ತಜ್ಞವೈದ್ಯರು, ಸಾಮಾಜಿಕ ಕಾರ್ಯಕರ್ತರು)

Leave a Reply

Your email address will not be published. Required fields are marked *

Back To Top