ಯಾದಗಿರಿ: ಕೋವಿಡ್ 3ನೇ ಅಲೆ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೈಲಾಪುರ ಗ್ರಾಮದ ಐತಿಹಾಸಿಕ ಶ್ರೀ ಮೈಲಾರಲಿಂಗೇಶ್ವರ ಜಾತ್ರೋತ್ಸವಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಮುಂಜಾಗ್ರತಾ ಕ್ರಮವಾಗಿ ಗುರುವಾರ ಡಿಸಿ ಡಾ.ರಾಗಪ್ರಿಯ ಆರ್. ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಡಿನ ಹಲವು ಪ್ರಸಿದ್ಧ ಜಾತ್ರೆಗಳ ಪೈಕಿ ಮೈಲಾಪುರ ಉತ್ಸವ ಅತಿ ಸಂಭ್ರಮದಿಂದ ನಡೆಯುತ್ತದೆ. ಕರ್ನಾಟಕವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಮಕರ ಸಂಕ್ರಮಣದ ದಿನ ಬರುತ್ತಾರೆ. ಇದೀಗ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ಈ ಬಾರಿ ಜಾತ್ರೆಯನ್ನು ನಿಷೇಧಿಸಿದೆ ಎಂದು ಅವರು ತಿಳಿಸಿದರು.
ಭಕ್ತರು ಮಲ್ಲಯ್ಯನ ಪಲ್ಲಕ್ಕಿ ಮೇಲೆ ಹಾರಿಸಲು ತಂದಿದ್ದ ಹರಕೆ ಕುರಿಮರಿಗಳನ್ನು ವಶಪಡಿಸಿಕೊಳ್ಳಲು ಚೆಕ್ಪೋಸ್ಟ್ ಸಿಬ್ಬಂದಿಗೆ ಸೂಚಿಸಿದ ಅವರು, ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು. ದೇವಸ್ಥಾನದಲ್ಲಿ 20 ತಂಡ ರಚಿಸಲಾಗಿದ್ದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಬೇಕು. 14ರಂದು ಊರಿಗೆ ಹೊರಗಿನಿಂದ ಯಾರೊಬ್ಬರೂ ಪ್ರವೇಶಿಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ದೇವಸ್ಥಾನಕ್ಕೆ ಸುತ್ತಮುತ್ತಲಿನ ಗ್ರಾಮಗಳ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಿ ಸರಳವಾಗಿ ಪೂಜಾ ಕೈಂಕರ್ಯ ನಡೆಸಬಹುದು. ಚೆಕ್ ಪೋಸ್ಟ್ ಮಾತ್ರವಲ್ಲದೆ 100 ಮೀಟರ್ ಅಂತರದಲ್ಲಿ ಒಂದೊಂದು ಬ್ಯಾರಿಕೇಡ್ ಹಾಕಲಾಗಿದೆ. ಇಬ್ಬರು ಡಿವೈಎಸ್ಪಿ, 15 ಸಿಪಿಐ, 30 ಪಿಎಸ್ಐ ಹಾಗೂ 350ಕ್ಕಿಂತ ಹೆಚ್ಚು ಪೊಲೀಸ್ ಪೇದೆ ಮತ್ತು ಮುಖ್ಯ ಪೇದೆಗಳನ್ನು ನಿಯೋಜಿಸಲಾಗಿದೆ. ಎಲ್ಲ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಮ್ಮ ಜಿಲ್ಲೆಯಿಂದ ಭಕ್ತರು ಬರದಂತೆ ತಡೆಯುವಂತೆ ಕೋರಲಾಗಿದೆ ಎಂದು ಎಸ್ಪಿ ಡಾ.ಸಿ.ಬಿ. ವೇದಮೂರ್ತಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ ಇದ್ದರು.
ಸಾರಿಗೆ ಬಸ್ನಲ್ಲಿ ಬಂದಿದ್ದ ಭಕ್ತರು ವಾಪಸ್
ಮಲ್ಲಯ್ಯ ಜಾತ್ರೆಯಲ್ಲಿ ಪಾಲ್ಗೊಳ್ಳಲು ದೂರದ ಗದಗ, ಹುಬ್ಬಳ್ಳಿ, ಕೊಪ್ಪಳ ಹಾಗೂ ಮಹಾರಾಷ್ಟ್ರದಿಂದ ಯಾದಗಿರಿಗೆ ಬಂದು ಸಾರಿಗೆ ಬಸ್ಗಳಲ್ಲಿ ಮೈಲಾಪುರಕ್ಕೆ ಆಗಮಿಸಿದ್ದರು. ಇದನ್ನು ಕಂಡ ಪೊಲೀಸ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಅವರನ್ನು ಗ್ರಾಮದೊಳಗೆ ಸೇರಿಸದೆ ವಾಪಸ್ ಕಳಿಸಿಕೊಟ್ಟರು.
ವಿಶೇಷ ಪೂಜೆ ಸಲ್ಲಿಸಿದ ಡಿಸಿ
ಇಡೀ ಜಗತ್ತಿಗೆ ಕಾಡುತ್ತಿರುವ ಕರೊನಾ ಕಾಟ ತಡೆಯುವಂತೆ ಡಾ.ರಾಗಪ್ರಿಯ ಆರ್. ಮೈಲಾಪುರದಲ್ಲಿ ಶ್ರೀ ಮೈಲಾರಲಿಂಗೇಶ್ವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಲ್ಲಯ್ಯನಿಗೆ ಆರತಿ ಬೆಳಗುವ ಮೂಲಕ ಜನರ ಆರೋಗ್ಯ ಕಾಪಾಡುವಂತೆ ಪ್ರಾರ್ಥಿಸಿದರು. ಎಸ್ಪಿ ವೇದಮೂರ್ತಿ ಸಾಥ್ ನೀಡಿದರು.