ಜನವರಿಯಲ್ಲಿ ರಾಜ್ಯ ಅಂಧರ ಕ್ರಿಕೆಟ್

| ಇಮಾಮಹುಸೇನ್ ಗೂಡುನವರ

ಬೆಳಗಾವಿ: ಹೊಸ ವರ್ಷಾರಂಭದಲ್ಲೇ ಕುಂದಾನಗರಿಯ ಕ್ರೀಡಾಪ್ರೇಮಿಗಳಿಗೆ ಅಂಧರ ಕ್ರಿಕೆಟ್ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಸತತ ಎರಡನೇ ವರ್ಷವೂ ಸಮರ್ಥನಂ ಅಂಗವಿಕಲರ ಸಂಸ್ಥೆ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂರ್ನಿ ಆಯೋಜಿಸಲು ಮುಂದಾಗಿದ್ದು, 2 ತಿಂಗಳು ಮುನ್ನವೇ ಸಿದ್ಧತೆ ಆರಂಭಿಸಿದೆ. ದೃಷ್ಟಿಹೀನರಾಗಿದ್ದರೂ ಸಂಸ್ಥೆ ಸದಸ್ಯರು ಕ್ರಿಕೆಟ್ ಟೂರ್ನಿ ಆಯೋಜನೆಗಾಗಿ ದಣಿವರಿಯದೇ ದುಡಿಯುತ್ತಿರುವುದು ಸಂತಸದ ಜತೆಗೆ, ಅಚ್ಚರಿಗೂ ಕಾರಣವಾಗಿದೆ.

ಮೂರು ದಿನಗಳ ಟೂರ್ನಿ: ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ 2017ರ ಜನವರಿ 20ರಿಂದ 22ರವರೆಗೆ ನಗರದ ಪ್ರಮುಖ ಮೈದಾನಗಳಲ್ಲಿ ಟೂರ್ನಿ ನಡೆಯಲಿದ್ದು, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ರಾಯಚೂರು ಸೇರಿ ವಿವಿಧೆಡೆಯ 20 ತಂಡಗಳು ಪಾಲ್ಗೊಳ್ಳಲಿವೆ.

ಅಂಧ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ, ವೇದಿಕೆ ಒದಗಿಸಬೇಕು ಎಂಬ ಉದ್ದೇಶದಿಂದ ಅಂಧರ ಕ್ರಿಕೆಟ್ ಟೂರ್ನಿ ಆಯೋಜಿಸಲು ಮುಂದಾಗಿದ್ದೇವೆ. ಕಳೆದ ವರ್ಷ ಹಲವು ಗಣ್ಯರು, ಸಂಘ-ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ನೆರವು ನೀಡಿದ್ದವು.

ಈ ಬಾರಿಯೂ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಸಂಸ್ಥೆಯ ಬೆಳಗಾವಿ ಮುಖ್ಯಸ್ಥ ಎಂ.ಅರುಣ್ಕುಮಾರ್ ಕೋರಿದ್ದಾರೆ.

ಕಳೆದ ವರ್ಷ ಜನವರಿಯಲ್ಲಿಯೇ 3 ದಿನ ಬೆಳಗಾವಿಯಲ್ಲಿ ರಾಜ್ಯಮಟ್ಟದ ಅಂಧರ ಟೂರ್ನಿ ನಡೆದಿತ್ತು. ಟೂರ್ನಿ ವೀಕ್ಷಣೆಗೆ ಅದ್ಭುತ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಅಂಧರ ಕ್ರಿಕೆಟ್ ಕಂಡ ಕ್ರೀಡಾಭಿಮಾನಿಗಳು ಸಂಭ್ರಮಿಸುವ ಜತೆಗೆ, ದೇಣಿಗೆ ನೀಡಿ ಪ್ರೋತ್ಸಾಹಿಸಿದ್ದರು. ಪ್ರತಿವರ್ಷವೂ ಟೂರ್ನಿ ಆಯೋಜಿಸುವಂತೆ ಸಲಹೆಯನ್ನೂ ನೀಡಿದ್ದರು. ಈ ಭರವಸೆಯ ಮಾತುಗಳಿಂದ ಸಂತಸಗೊಂಡ ಸಮರ್ಥನಂ ಅಂಗವಿಕಲರ ಸಂಸ್ಥೆ, ಈ ಬಾರಿ ಮತ್ತೊಂದು ರಾಜ್ಯಮಟ್ಟದ ಟೂರ್ನಿ ಆಯೋಜನೆಗೆ ಮುಂದಾಗಿದೆ. ಸಂಘಟಕರಿಗೆ ನೆರವು ನೀಡಲು ಇಚ್ಛಿಸುವವರಿಗೆ ಸಂಪರ್ಕ: 9480809598.

ಪ್ರಾಯೋಜಕರ ಕೊರತೆ

ಕಳೆದ ವರ್ಷದಂತೆ ಈ ವರ್ಷವೂ ಅಂಧರ ಕ್ರಿಕೆಟ್ ಆಯೋಜಿಸುತ್ತಿರುವ ಸಂಘಟಕರಿಗೆ ಪ್ರಾಯೋಜಕರ ಕೊರತೆ ಕಾಡುತ್ತಿದೆ. ಟೂರ್ನಿಗೆ ಬರುವ ಆಟಗಾರರಿಗೆ ಊಟ, ವಸತಿ, ಪ್ರಯಾಣಭತ್ಯೆ ಮತ್ತಿತರ ಸೌಲಭ್ಯ ಕಲ್ಪಿಸಲು 16.23 ಲಕ್ಷ ರೂ. ಬೇಕಾಗಲಿದ್ದು, ಹಣ ಸಂಗ್ರಹಿಸುವುದಕ್ಕಾಗಿ ಸಂಘಟಕರು ಈಗಿನಿಂದಲೇ ವಿವಿಧ ಸಂಘ-ಸಂಸ್ಥೆಗಳು, ಗಣ್ಯರನ್ನು ಸಂರ್ಪಸುತ್ತಿದ್ದಾರೆ.

Leave a Reply

Your email address will not be published. Required fields are marked *