ಗೋಕಾಕ: ಜನರಿಗೆ ಅನುಕೂಲವಾಗುವ ರೀತಿ ತ್ವರಿತಗತಿಯಲ್ಲಿ 100 ಹಾಸಿಗೆಗಳ ಹೆಚ್ಚುವರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಎರಡು ವರ್ಷಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಶೇ.40 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗುವುದು. ರಾಜ್ಯಾದ್ಯಂತ ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿ, ಪಿಎಚ್‌ಒ ಹಾಗೂ ಎಚ್‌ಎಒ ಹುದ್ದೆಗಳು ಶೇ.40 ಖಾಲಿ ಇವೆ. ಇದರಿಂದಾಗಿ ಜನರಿಗೆ ತೊಂದರೆಯಾಗುತ್ತಿದ್ದು, ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡುವಂತೆ ಹಣಕಾಸು ಇಲಾಖೆಯನ್ನು ಕೋರಲಾಗಿದೆ ಎಂದರು.
ನಕಲಿ ವೈದ್ಯರ ಹಾವಳಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಜಾಸ್ತಿ ಇದೆ. ನಕಲಿ ವೈದ್ಯರನ್ನು ಹುಡುಕಿ ಅವರ ಕ್ಲಿನಿಕ್ ಬಂದ್ ಮಾಡಿಸುವ ಕೆಲಸ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಈಗಾಗಲೇ ಇಲಾಖೆ ಮಾಡಿದ್ದೇವೆ. ಅದಲ್ಲದೆ ಅಯುಷ್ ವೈದ್ಯರು ಕ್ಲಿನಿಕ್ ಮುಂದೆ ಗ್ರೀನ್ ಬೋರ್ಡ್ ಮತ್ತು ಆಲೋಪಥಿ ವೈದ್ಯರು ನೀಲಿ ಬೋರ್ಡ್ ಹಾಕೋದು ಕಡ್ಡಾಯ ಮಾಡಲಾಗಿದೆ. ನಗರದಲ್ಲಿ ಅಂತಹ ಯಾವುದೇ ಪ್ರಕರಣಗಳು ಕಂಡುಬಂದರೆ ಕಾನೂನು ರೀತಿ ಕಠಿಣ ಕ್ರಮ ಜರುಗಿಸುವಂತೆ ವೈದ್ಯರಿಗೆ ಸೂಚಿಸಿದರು.
ಡೆಂೆ ಪ್ರಕರಣಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಸಿದ ಅವರು ರಾಜ್ಯದಲ್ಲಿ ಡೆಂೆ ಪ್ರಕರಣಗಳು ಸ್ವಲ್ಪ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಡೆಂೆ ಜ್ವರವನ್ನು ಸಾಂಕ್ರಾಮಿಕ ರೋಗ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಜತೆಗೆ ಡೆಂೆ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸದವರಿಗೆ ದಂಡ ಕೂಡ ಹಾಕಲಾಗುವುದು ಎಂದರು.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ನಗರದ ಶಿಥಿಲಾವಸ್ಥೆಯಲ್ಲಿರುವ ಹಳೆಯ ಆಸ್ಪತ್ರೆಯನ್ನು ಹೊಸದಾಗಿ ನಿರ್ಮಾಣ ಮಾಡಬೇಕು ಎಂದು ಪತ್ರ ಬರೆದಿದ್ದಾರೆ. ಆದರೆ ಪ್ರಸ್ತುತ ಇಲಾಖೆಯಲ್ಲಿಯರುವ ಅನುದಾನ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಗೋಕಾಕ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿ ಇತರ ಕಡೆ ಆಸ್ಪತ್ರೆಯ ದುರಸ್ತಿ ಕಾರ್ಯ ಮಾಡಲು ಈಗಾಗಲೇ 7 ಕೋಟಿ ರೂ.ಬಿಡುಗಡೆ ಮಾಡಲು ಕ್ರಮ ಕೈಗೊಂಡಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು. ತಜ್ಞ ವೈದ್ಯರನ್ನು ನೇಮಕ ಮಾಡುವ ಕಾರ್ಯ ನಡೆಯುತ್ತಿದ್ದು, ಶೀಘ್ರ ಎಲ್ಲ ಆಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನು ನೇಮಕ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ತೊಂದರೆಯಾಗದಂತೆ ವೈದ್ಯರು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಅಪರ ಜಿಲ್ಲಾ ವೂದ್ಯಾಧಿಕಾರಿ ಡಾ.ಶರಣಪ್ಪ ಗಡೇದ, ತಾಲೂಕು ವೈದ್ಯಾಧಿಕಾರಿ ಡಾ.ಎಂ.ಎಸ್.ಕೊಪ್ಪದ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಯುವ ಮುಖಂಡ ಅಮರನಾಥ ಜಾರಕಿಹೊಳಿ, ಡಾ.ಮಹಾಂತೇಶ ಕಡಾಡಿ, ಸುರೇಶ ಸನದಿ, ಡಾ.ಮಂಗಳಾ ಸನದಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಅರವಿಂದ ದಳವಾಯಿ ಇತರರಿದ್ದರು.