ಜನರ ಸಮಸ್ಯೆಯನ್ನು ಅರಿಯಿರಿ

ಹಾಸನ: ಜನಸೇವೆ ಮಾಡಲು ಬಯಸುವವರು ಮೊದಲು ಜನರ ಸಮಸ್ಯೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅದೊಂದು ಕೆಲಸ ಮಾಡಿದರೆ ನಮ್ಮ ಗುರಿಯು ಶೇ.99ರಷ್ಟು ಪೂರ್ಣಗೊಳ್ಳುತ್ತದೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ನಗರದ ಎಂಜಿ ರಸ್ತೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ‘ವಿಜಯವಾಣಿ’ ಏರ್ಪಡಿಸಿದ್ದ ಯುವ ಸಾಧಕರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾನು ರಾಜಕೀಯ ಪ್ರವೇಶ ಮಾಡಬೇಕು ಎಂದು ನಿರ್ಧರಿಸಿ ಹಾಸನಕ್ಕೆ ಬಂದಾಗ ಸತ್ಯಮಂಗಳ ಗ್ರಾಪಂ ವ್ಯಾಪ್ತಿಗೆ ಸೇರುವ ನಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಇಲ್ಲವಾಗಿತ್ತು. ಮನೆಗಳಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಇಲ್ಲವಾದ್ದರಿಂದ ಜನರು ಎಲ್ಲಿ ಬೇಕೆಂದರಲ್ಲಿ ಕಸ ಎಸೆದು ಹೋಗುತ್ತಿದ್ದರು. ಈ ಸಮಸ್ಯೆಗೆ ಏನಾದರೂ ಪರಿಹಾರ ರೂಪಿಸಬೇಕು ಎಂದು ನಿರ್ಧರಿಸಿ ನಾನು ಬೆಂಗಳೂರಿನಲ್ಲಿ 8 ವರ್ಷ ಕೆಲಸ ಮಾಡುತ್ತಿದ್ದಾಗಿನ ಅವಧಿಯ ಗ್ರಾಚ್ಯುಟಿ, ಪಿಎಫ್ ಹಣದಲ್ಲಿ ಒಂದು ಆಟೋ ಟಿಪ್ಪರ್ ಖರೀದಿಸಿ ನಮ್ಮ ಮನೆ ಸುತ್ತಮುತ್ತಲಿನ ಪ್ರದೇಶದ ಮನೆಗಳಿಂದ ಕಸ ಸಂಗ್ರಹಿಸುವ ಸೇವೆಗೆ ನೀಡಿದೆ. ನಮ್ಮ ಬಡಾವಣೆಯ ಜನರು ಆಟೋಗೆ ಕಸ ನೀಡಲು ಶುರು ಮಾಡಿದ ನಂತರ ಅಕ್ಕಪಕ್ಕದ ಬಡಾವಣೆಯ ಜನರು ಕಸ ತಂದು ಸುರಿಯಲು ಆರಂಭಿಸಿದರು.

ಆಗ ನಮ್ಮ ಬಡಾವಣೆ ಸ್ವಚ್ಛವಾಗಿರಬೇಕಾದರೆ ಸುತ್ತಮುತ್ತಲಿನ ಬಡಾವಣೆಗಳೂ ಸ್ವಚ್ಛವಾಗಿರಬೇಕು ಎನ್ನುವುದು ಗೊತ್ತಾಯಿತು. ಹೀಗಾಗಿ ಸುತ್ತಮುತ್ತಲಿನ ಗ್ರಾಪಂ ವ್ಯಾಪ್ತಿಯ ಬಡಾವಣೆಗಳಲ್ಲಿ ಕಸ ಸಂಗ್ರಹಣೆ ಮಾಡಲು ಆಟೋ ಟಿಪ್ಪರ್ ಸೇವೆ ವಿಸ್ತರಿಸಿದೆ. ವಿಧಾನಸಭೆ ಚುನಾವಣೆ ವೇಳೆಗೆ 12 ಆಟೋ ಟಿಪ್ಪರ್, 2 ಟ್ರ್ಯಾಕ್ಟರ್‌ಗಳು ಮನೆ ಮನೆ ಕಸ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದೆ. ಇದಾದ ನಂತರ 2016ರಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಯಿತು. ಆಗ ನಾನು ಜನರಿಗೆ ಉಚಿತವಾಗಿ ನೀರು ವಿತರಿಸುವ ಟ್ಯಾಂಕರ್ ಸೇವೆ ಪರಿಚಯಿಸಿದೆ. ಇದನ್ನು ಗಮನಿಸಿದ ಬೇರೆ ಊರುಗಳ ಜನರು ನನ್ನ ಬಳಿ ಬಂದು ತಮ್ಮ ಕಡೆಗೂ ನೀರು ಒದಗಿಸುವಂತೆ ಕೇಳಿದರು.

ಹೀಗೆ ಆ ಸೇವೆಯೂ ವಿಸ್ತರಿಸಿತು. ಇದರಿಂದ ಮಾಸಿಕ 4.25 ಲಕ್ಷ ರೂ. ವೆಚ್ಚವನ್ನು ನಾನು ಭರಿಸಬೇಕಾಯಿತು. ನನ್ನ ದುಡಿಮೆಯಿಂದ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನೂ ನಾನು ಮೊದಲೇ ಮಾಡಿದ್ದೆ. ಹೀಗೆ ನಾನು ಜನರ ಸಮಸ್ಯೆಗೆ ಸ್ಪಂದಿಸಿದ ಕಾರಣಕ್ಕಾಗಿ ಜಾತಿ, ಧರ್ಮ, ಪಕ್ಷಗಳ ಭೇದ ತೋರದೆ ಮತದಾರರು ನನಗೆ ಆಶೀರ್ವದಿಸಿ ನಾನು ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಶಾಸಕನಾಗಿ ಆಯ್ಕೆ ಮಾಡಿದರು.

ರಾಜಕೀಯ ನಾಯಕತ್ವ ಬೇಕು ಎನ್ನುವವರು ಮೊದಲು ಜನರ ಸಮಸ್ಯೆ, ಅವರ ಬೇಕುಗಳನ್ನು ಅರ್ಥ ಮಾಡಿಕೊಂಡು ಅವರ ಸೇವೆ ಮಾಡಬೇಕು. ಆಗ ಅವರ ವಿಶ್ವಾಸ, ಪ್ರೀತಿ ನಮಗೆ ಒಲಿಯುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ ಎಂದರು.

Leave a Reply

Your email address will not be published. Required fields are marked *