ಜನರ ಸಮಸ್ಯೆಗೆ ಸ್ಪಂದಿಸಿ

ಗದಗ: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಮತದಾನ ಕಾರ್ಯವನ್ನು ಜಿಲ್ಲಾಡಳಿತ ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಅದರಂತೆ ಬರ ಪರಿಸ್ಥಿತಿ ಹಾಗೂ ಜನರ ಸಮಸ್ಯೆಗಳಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಪರಸ್ಪರ ಸಹಕಾರ, ಸಮನ್ವಯತೆಯಿಂದ ಸ್ಪಂದಿಸಬೇಕು ಎಂದು ರಾಜ್ಯ ಕೌಶಲಾಭಿವೃದ್ಧಿ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲನ್ ಆದಿತ್ಯ ಬಿಸ್ವಾಸ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಬರ ನಿರ್ವಹಣೆ ಹಾಗೂ ಪ್ರಗತಿಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರ, ಗ್ರಾಮೀಣ ಜನತೆಗೆ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ಜಿಲ್ಲಾಡಳಿತ ಸದಾ ನಿಗಾ ವಹಿಸಬೇಕು. ಕುಡಿಯುವ ನೀರು, ಕೃಷಿ ಕಾರ್ವಿುಕರಿಗೆ ಉದ್ಯೋಗ ನೀಡುವುದು, ದನಕರುಗಳಿಗೆ ಮೇವು, ನೀರು ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಲೋಕಸಭೆ ಚುನಾವಣೆಗಾಗಿ ಊರಿಗೆ ಆಗಮಿಸಿದ ಜಿಲ್ಲೆಯ ಕೃಷಿ ಕಾರ್ವಿುಕರಿಗೆ ಉದ್ಯೋಗ ನೀಡುವ ಕಾರ್ಯಕ್ರಮವನ್ನು ಆಯಾ ಪಂಚಾಯಿತಿ ಅಧಿಕಾರಿಗಳು ಕೈಕೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಗುರಿ ಸಾಧನೆಗಿಂತ ಗ್ರಾಮೀಣ ಕುಟುಂಬಸ್ಥರ ಸಂಕಷ್ಟ ನಿವಾರಣೆ ಆಗಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆ 368.93 ಮಿ.ಮೀ. ಗೆ 209.6 ಮಿ.ಮೀ. ನಷ್ಟು ಮಾತ್ರ ಮಳೆಯಾಗಿದೆ. ಹಳ್ಳಿಗಳಲ್ಲಿ ಡಿಬಿಓಟಿ ಆಧಾರದ ಯೋಜನೆಯಡಿ ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದ್ದು, ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ 1,629 ಕೊಳವೆಬಾವಿಗಳು ಕಾರ್ಯಾಚರಣೆಯಲ್ಲಿವೆ. ಕುಡಿಯುವ ನೀರು ಪೂರೈಕೆಗಾಗಿ 101 ಕಾಮಗಾರಿ ಕೈಗೆತ್ತಿಕೊಂಡಿದ್ದು 114.96 ಲಕ್ಷ ರೂ. ಮೊತ್ತದಲ್ಲಿ 91 ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲೆಯ ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ನರೇಗಲ್​ನಲ್ಲಿ 6, ಗಜೇಂದ್ರಗಡದಲ್ಲಿ 8, ರೋಣದಲ್ಲಿ 4 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ಸ್ಥಳೀಯ ಸಂಸ್ಥೆಗಳ ಸರ್ಕಾರಿ ಟ್ಯಾಂಕರ್​ಗಳಿಂದ ನೀರು ಪೂರೈಸಲಾಗುತ್ತಿದೆ. ಬರ ನಿರ್ವಹಣೆಗಾಗಿ 16.16 ಕೋಟಿ ರೂ. ಜಿಲ್ಲಾಡಳಿತದ ಬಳಿ ಇದೆ ಎಂದು ತಿಳಿಸಿದರು.

ಜಿಪಂ ಸಿಇಒ ಮಂಜುನಾಥ ಚವ್ಹಾಣ ಮಾತನಾಡಿ, ಉದ್ಯೊಗ ಖಾತ್ರಿ ಯೋಜನೆಯಡಿ 2018-19ರಲ್ಲಿ 96.57 ಕೋಟಿ ರೂ. ವೆಚ್ಚದಲ್ಲಿ 26.07 ಲಕ್ಷ ಮಾನವ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 140.77 ಕೋಟಿ ರೂ. ದಲ್ಲಿ 32.01 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಸಿ.ಬಿ. ಬಾಲರಡ್ಡಿ ಮಾತನಾಡಿ, ಜಿಲ್ಲೆಯ 37,571 ರೈತರಿಗೆ 10.15 ಕೋಟಿ ರೂ. 2018ರ ಮುಂಗಾರು ಬೆಳೆಹಾನಿ ಕುರಿತ ಇನ್​ಪುಟ್ ಸಬ್ಸಿಡಿ ವಿತರಣೆಯಾಗಿದೆ. 2018ರ ಹಿಂಗಾರು ಕೃಷಿ ಬೆಳೆ ಹಾನಿಗಾಗಿ 132.23 ಕೋಟಿ ರೂ. ಇನ್​ಪುಟ್ ಸಬ್ಸಿಡಿ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಜಿಲ್ಲೆಯಲ್ಲಿ 22 ಮೇವು ಬ್ಯಾಂಕ್ ಸ್ಥಾಪನೆ

ಗದಗ ಜಿಲ್ಲೆಯಲ್ಲಿ ದನಕರುಗಳಿಗೆ ಮೇವು ಬೇಡಿಕೆ ಪೂರೈಸಲು 22 ಮೇವು ಬ್ಯಾಂಕ್​ಗಳನ್ನು ಸ್ಥಾಪಿಸಲಾಗಿದೆ. ಗದಗ ತಾಲೂಕಿನ ಲಕ್ಕುಂಡಿ, ಬಿಂಕದಕಟ್ಟಿ, ಮುಳಗುಂದ, ಹುಯಿಲಗೋಳ, ಹಂಗನಕಟ್ಟಿ. ಗಜೇಂದ್ರಗಡ ತಾಲೂಕಿನ ರಾಜೂರು, ಹಾಳಕೇರಿ. ಲಕ್ಷ್ಮೇಶ್ವರ ತಾಲೂಕಿನ ಲಕ್ಷೆ್ಮೕಶ್ವರ, ಬಾಲೆಹೊಸೂರ, ಶಿಗ್ಲಿ, ಗೊಜನೂರು. ಮುಂಡರಗಿ ತಾಲೂಕಿನ ಹಳ್ಳಿಕೇರಿ, ಡೋಣಿ, ಕದಾಂಪೂರ, ಬಾಗೇವಾಡಿ. ರೋಣ ತಾಲೂಲಕಿನ ಚಿಕ್ಕಮಣ್ಣೂರ, ಮಾಡಲಗೇರಿ. ಶಿರಹಟ್ಟಿ ತಾಲೂಕಿನ ಶಿರಹಟ್ಟಿ, ಬೆಳ್ಳಟ್ಟಿ, ಕೊಗನೂರ, ಕಡಕೋಳ ಹಾಗೂ ಮಜ್ಜೂರು ಗ್ರಾಮದಲ್ಲಿ ಮೇವು ಬ್ಯಾಂಕ್​ಗಳು ಕಾರ್ಯನಿರ್ವಹಿಸುತ್ತಿವೆ. 22 ಮೇವು ಬ್ಯಾಂಕ್​ಗಳಿಗೆ ಒಟ್ಟು 226.47 ಮೆಟ್ರಿಕ್ ಟನ್ ಮೇವು ಪೂರೈಸಿದ್ದು, 141.88 ಮೆಟ್ರಿಕ್ ಟನ್ ಮೇವು ಮಾರಾಟವಾಗಿದೆ.

Leave a Reply

Your email address will not be published. Required fields are marked *