ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ

ರಾಮನಗರ: ಆಡಳಿತ ಯಂತ್ರವನ್ನು ಜನರಿಗೆ ಮತ್ತಷ್ಟು ಹತ್ತಿವಾಗಿಸುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಹೇಳಿದರು.

ತಾಲೂಕಿನ ಬಿಡದಿ ವ್ಯಾಪ್ತಿಯ ಬೈರಮಂಗಲ ಸರ್ಕಾರಿ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಸರ್ಕಾರ ಮತ್ತು ಜನರ ನಡುವೆ ಸೇತುವೆಯಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಪರಿಹಾರ ಸೂಚಿಸುವ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವುದು ನಮ್ಮೆಲ್ಲರ ಮೊದಲ ಕರ್ತವ್ಯವಾಗಿದೆ ಎಂದರು.

ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಿ, ಸಾಧ್ಯವಿಲ್ಲ ಎನ್ನುವುದಾದರೆ ಅಂತಹ ಅಧಿಕಾರಿಗಳು ಸಭೆಗಳಿಗೆ ಬರುವುದೇ ಬೇಡ. ಕಡ್ಡಾಯವಾಗಿ ತಾಲೂಕು ಪಂಚಾಯಿತಿ ಇಒ ಹಾಜರಾತಿ ಪಡೆದು, ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಹೇಳಿದರು.

ಕೇವಲ ಸಭೆ ನಡೆಸಿ ಮನವಿ ಸ್ವೀಕರಿಸಿ ಹೋಗುವುದು ನಮ್ಮ ಜಾಯಮಾನವಲ್ಲ. ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸೂಕ್ತ ಪರಿಹಾರ ಕಂಡುಕೊಳ್ಳುವುದಕ್ಕೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಿ. ಆಗ ಮಾತ್ರ ಜನಸ್ಪಂದನಾ ಕಾರ್ಯಕ್ರಮ ಯಶಸ್ಸು ಕಾಣಲು ಸಾಧ್ಯ. ತಾಲೂಕು ಮಟ್ಟದ ಹಾಗೂ ಗ್ರಾಪಂ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿದರೆ ಜನಸಂಪರ್ಕ ಸಭೆಗಳ ಔಚಿತ್ಯವೇ ಇರುವುದಿಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿದರು.

ಸಣ್ಣ ಸಮಸ್ಯೆಗಳನ್ನೂ ಬಗೆಹರಿಸದೆ ವರ್ಷಾನುಗಟ್ಟಲೇ ಜನರನ್ನು ಕಚೇರಿಗಳಿಗೆ ಅಲೆದಾಡಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಲ್ಲೂ ಜನಸಂಪರ್ಕ ಸಭೆ ನಡೆಸಲಾಗುವುದು ಎಂದು ಮಂಜುನಾಥ್ ಹೇಳಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ, ಹೋಬಳಿ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಬೈರಮಂಗಲ ಜಿಪಂ ಸದಸ್ಯ ಮಂಜುನಾಥ್, ಬೈರಮಂಗಲ ಗ್ರಾಪಂ ಅಧ್ಯಕ್ಷ ಬನ್ನಗಿರಿ ರವಿ , ಕಂಚುಗಾರನಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀದೇವರಾಜು, ಬನಿಕುಪ್ಪೆ (ಬಿ) ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ನಂಧಪ್ರಭಾ, ತಾಪಂ ಸದಸ್ಯರಾದ ಪ್ರಕಾಶ್ ಮತ್ತು ನೀಲಾ, ಇಓ ಎಂ.ಬಾಬು, ಎಡಿ ರೂಪೇಶ್​ಕುಮಾರ್, ಪಂಚಾಯತ್​ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಓಗಳು ಇದ್ದರು.

Leave a Reply

Your email address will not be published. Required fields are marked *