ಜನರ ಜತೆಯಲ್ಲಿಯೇ ನಾವಿದ್ದೇವೆ

ಕುಮಟಾ: ಮೇ 23 ರ ಬಳಿಕ ಉತ್ತರ ಕನ್ನಡ ಕ್ಷೇತ್ರದಲ್ಲಿ ಅನಂತಕುಮಾರ ಎಲ್ಲಿದ್ದೀಯಪ್ಪಾ ಎಂದು ಕೇಳಬೇಕಾಗುತ್ತದೆ ಎಂದು ಕುಮಟಾಕ್ಕೆ ಬಂದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಲೇವಡಿ ಮಾಡಿದ್ದರು. ಈಗ ಫಲಿತಾಂಶ ಬಂದಿದೆ. ಕುಮಾರಸ್ವಾಮಿಯವರೇ ನಿಮ್ಮ ಅಪ್ಪ ಹಾಗೂ ಮಗ ಎಲ್ಲಿದ್ದಾರೆಂದು ನೋಡಿಕೊಳ್ಳಿ ಎಂದು 6ನೇ ಬಾರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಹೇಳಿದರು.

ಕುಮಟಾದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ನಾವಿಲ್ಲಿ ಜನರ ಜತೆಯಲ್ಲೇ ಇರುತ್ತೇವೆ. ನಿಮ್ಮ ಮಗ ಹಾಗೂ ಮಾಜಿ ಪ್ರಧಾನಿ ಎಲ್ಲಿ ತಲೆ ಮರೆಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವದ ತಾಕತ್ತೇ ಹಾಗಿದೆ. ಜನರ ಪ್ರೀತಿ ವಿಶ್ವಾಸ ದೊಡ್ಡದು, ಒಂದು ವಿಚಾರವನ್ನು ಈ ಮಣ್ಣು ಕಳೆದ 25 ವರ್ಷಗಳಿಂದ ಒಪ್ಪಿಕೊಂಡು ಬಂದಿರುವುದಕ್ಕೆ ನತಮಸ್ತಕನಾಗಿದ್ದೇನೆ ಎಂದರು.

ಉತ್ತರ ಕನ್ನಡ ಚುನಾವಣೆ ಉಳಿದೆಲ್ಲ ಚುನಾವಣೆಗಳಿಗೆ ಮಾದರಿಯಾಗಿದೆ. ಇಷ್ಟೊಂದು ಸುಂದರ ಚುನಾವಣೆ ಸಂಪನ್ನಗೊಳಿಸಿದ ನಿಮಗೆಲ್ಲರಿಗೂ ಕೃತಜ್ಞತೆಗಳು. ದೆಹಲಿಗೆ ಹೋಗಿ ಬಂದ ಬಳಿಕ ಸಂಘಟನೆ ಹಾಗೂ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಇಷ್ಟೊಂದು ಸ್ಥಾನ ಬಿಜೆಪಿ ಗೆದ್ದ ಉದಾಹರಣೆ ಇಲ್ಲ. ಗೆಲುವಿಗೆ ಹೊಸ ವ್ಯಾಖ್ಯಾನ ಕೊಟ್ಟಿದ್ದೀರಿ. ನಮ್ಮ ಶಾಸಕರಿಲ್ಲದಿದ್ದರೂ ಅತಿ ಹೆಚ್ಚು ಮತ ಕೊಟ್ಟಿದ್ದು ಖಾನಾಪುರ. ಒಟ್ಟಾಗಿ ಎಲ್ಲರೂ ಕೆಲಸ ಮಾಡಿದರೆ ಪರಿಣಾಮ ಏನು ಎನ್ನುವುದಕ್ಕೆ ಇದು ಉದಾಹರಣೆ ಎಂದು ಹೇಳಿದರು.

ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ಎಂ.ಜಿ. ನಾಯ್ಕ, ವಿನೋದ ಪ್ರಭು, ಕುಮಾರ ಮಾರ್ಕಾಂಡೆ ಇತರರಿದ್ದರು.

Leave a Reply

Your email address will not be published. Required fields are marked *