ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಹೇಳಿಕೆ, ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಗೆ ಚಾಲನೆ
ತುಮಕೂರು: ಕೆರೆ, ಕಟ್ಟೆ, ದೇವಾಲಯ ನಿರ್ಮಾಣ ಮಾಡುವ ಮೂಲಕ ಜನರ ನೆಮ್ಮದಿಯ ಬದುಕಿಗೆ ಆಸರೆಯಾಗಿ ನಿಂತವರು ಸಿದ್ದರಾಮರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.
ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ, ಜಿಲ್ಲಾಡಳಿತ, ಜಿಪಂ, ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಜಿಲ್ಲಾ ಬೋವಿ ಸಮಾಜ, ಭಾರತೀಯ ವಡ್ಡರ ಸಂಘ (ಒಸಿಸಿಐಐ)ವತಿಯಿಂದ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಗೆ ಚಾಲನೆ ನೀಡಿ ಮಾತನಾಡಿ, ಶಿವಶರಣ ಶಿವಯೋಗಿ ಸಿದ್ದರಾಮೇಶ್ವರರು ತಮ್ಮ ಜೀವಿತದ ಕೊನೆಯವರೆಗೆ ಜನೋಪಯೋಗಿ ಕೆಲಸಗಳಲ್ಲಿ ತೊಡಗಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ದುಡಿದವರು ಎಂದರು.
ಸೊನ್ನಲಗಿಯಲ್ಲಿ ಹುಟ್ಟಿದ ಸಿದ್ದರಾಮೇಶ್ವರರು ಮಹಾರಾಷ್ಟ್ರ, ಶ್ರೀಶೈಲ ಸೇರಿದಂತೆ, ದಕ್ಷಿಣ ಭಾರತದಲ್ಲಿ ಸಂಚರಿಸಿ, ಹಲವಾರು ಜನೋಪಯೋಗಿ ಕಾರ್ಯ ಮಾಡಿದವರು. ಅವರು ನಿರ್ಮಿಸಿದ ದೇವಾಲಯಗಳು ಧಾರ್ಮಿಕ ಕಾರ್ಯಗಳಿಗೆ ಸಿಮೀತವಾಗದೆ, ಅಲ್ಲಿ ಶಿಕ್ಷಣಕ್ಕೆ ಅದ್ಯತೆ ನೀಡಲಾಗಿತ್ತು, ಅನಾಥರಿಗೆ, ನಿರ್ಗತಿಕರಿಗೆ, ಪ್ರವಾಸಿಗರಿಗೆ ಆಶ್ರಯ ತಾಣವಾಗಿ ದೇವಾಲಯಗಳು ಬಳಕೆಯಾಗುತಿದ್ದವು. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಸಿದ್ದರಾಮೇಶ್ವರರು ಲೋಕೋಪಯೋಗಿ ಇಲಾಖೆ ಮಾಡುತ್ತಿರುವ ಕೆಲಸವನ್ನು ಅಂದೇ ಮಾಡಿದ್ದರು ಎಂದು ತಿಳಿಸಿದರು.
ಜಲಮೂಲಗಳು ಕಲುಷಿತವಾಗಿ ಜನರಿಗೆ ಶುದ್ಧವಾದ ನೀರು ಒದಗಿಸುವುದೇ ದೊಡ್ಡ ಸವಾಲಾಗಿದೆ. ಮಕ್ಕಳಲ್ಲಿ ಪರಿಸರ ಜ್ಞಾನ ಮೂಡಿಸುವ ಮೂಲಕ ಜಲಮೂಲಗಳು ಕಲುಷಿತಗೊಳ್ಳದಂತೆ ಅರಿವು ಮೂಡಿಸಬೇಕಿದೆ. ಧಾರ್ಮಿಕ, ಸಾಮಾಜಿಕ ಕಾರ್ಯಗಳ ಮೂಲಕ ಜನಜೀವನ ಹಸನುಗೊಳಿಸುವುದೇ ಸಿದ್ದರಾಮೇಶ್ವರರಿಗೆ ನಾವು ನೀಡುವ ಗೌರವವಾಗಿದೆ ಎಂದರು.
ಈ ನಾಡು ಕಂಡು ಸಮಾಜ ಸುದಾರಕರಲ್ಲಿ ಶ್ರೀಶಿವಯೋಗಿ ಸಿದ್ದರಾಮರು ಒಬ್ಬರು. ಅವರ ನಡೆ ಕೇವಲ ಉಪದೇಶಕ್ಕೆ ಸಿಮೀತವಾಗದೆ, ಸ್ವತ ಕೆರೆ, ಕಟ್ಟೆ, ಗೋಶಾಲೆ, ದೇವಾಲಯಗಳು, ಮನೆಗಳನ್ನು ನಿರ್ಮಿಸುವ ಮೂಲಕ ಶರಣ ಪರಂಪರೆಯಲ್ಲಿಯೇ ಅಗ್ರಗಣ್ಯರೆನಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸಮುದಾಯದ ನಡುವೆ ಒಗ್ಗಟ್ಟು ಕಡಿಮೆಯಾಗಿದೆ. ಅಲ್ಲದೆ ಜಿಲ್ಲಾಡಳಿತ ಕೂಡ ಸರಿಯಾದ ಮಾಹಿತಿ ನೀಡದ ಕಾರಣ ಜಯಂತಿ ಆಚರಣೆಗೆ ಬರುವ ಸಮುದಾಯದವರ ಸಂಖ್ಯೆ ಕಡಿಮೆಯಾಗಿದೆ. ಮುಂದೆ ಹೀಗಾಗದಂತೆ ಕನ್ನಡ ಮತ್ತು ಸಂಸತಿ ಇಲಾಖೆ ಎಚ್ಚರಿಕೆ ವಹಿಸಬೇಕು. ಸಮುದಾಯದ ಎಲ್ಲರನ್ನು ಒಳಗೊಂಡ ಕಾರ್ಯಕ್ರಮ ಆಯೋಜಿಸಬೇಕೆಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ, ಬೋವಿ ಸಮಾಜದ ಮುಖಂಡ ಮಂಜುನಾಥ್ ಹೇಳಿದರು.
ಭಾರತೀಯ ವಡ್ಡರ ಸಂಘದ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಜಿಲ್ಲೆಯಲ್ಲಿ ಬೋವಿ ಸಮುದಾಯ ಸಾಕಷ್ಟು ಸಂಖ್ಯೆಯಲ್ಲಿ ಇದೆ. ಜಿಲ್ಲಾಡಳಿತ ಮಹನೀಯರ ಜಯಂತಿ ವೇಳೆ ಕನಿಷ್ಠ 15 ದಿನ ಮುಂಚಿತವಾಗಿ ಪೂರ್ವಭಾವಿ ಸಭೆ ಕರೆದು ಅದ್ದೂರಿ ಮತ್ತು ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ಸಹಕಾರ ನೀಡಬೇಕು. ದಾಖಲೆಗೊಸ್ಕರ ಕಾರ್ಯಕ್ರಮಬೇಡ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮುದಾಯದೊಂದಿಗೆ ಕೈಜೋಡಿಸುವಂತೆ ಆಗ್ರಹಿಸಿದರು. ಬೋವಿ ಸಮುದಾಯದ ಮುಖಂಡರಾದ ವೆಂಕಟೇಶ್, ಕೆ.ಎಂ ಕಾಶಿನಾಥ್, ಚಿಕ್ಕ ಉಲುಗಯ್ಯ, ಎಂ.ವೆಂಕಟೇಶ್, ಗಿರಿಯಪ್ಪ, ಪಿ.ಜಿ.ವೆಂಕಟಸ್ವಾಮಿ, ಕೃಷ್ಣಮೂರ್ತಿ, ಮಾಜಿ ಕೌನಿಲ್ಸರ್ ಟಿ.ವಿ.ವಿಶ್ವನಾಥ್, ಭೂತೇಶ್, ಇ.ರಮೇಶ್, ಜಿ.ವಿ.ಗಂಗಣ್ಣ, ಟಿ.ಜಿ. ವೆಂಕಟೇಶ್, ಅಂಜನಪ್ಪ ಉಪಸ್ಥಿತರಿದ್ದರು.