ಜನರಲ್ಲಿ ಕ್ಷಯರೋಗದ ಅರಿವು ಮೂಡಿಸಿ

ಸಾಗರ: ಕ್ಷಯರೋಗ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಯುವಜನರು ಮಾಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮುನಿವೆಂಕಟರಾಜು ಹೇಳಿದರು.

ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದಿಂದ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ಸಂರಕ್ಷಣೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಆರೋಗ್ಯ ಇಲಾಖೆಯ ಅನೇಕ ಯೋಜನೆಗಳು ಆರೋಗ್ಯವಂತ ಸಮಾಜ ನಿರ್ವಣಕ್ಕೆ ಪೂರಕವಾಗಿದೆ. ಭಾರತ ಅತ್ಯಂತ ಶಕ್ತಿಯುತ ರಾಷ್ಟ್ರವಾಗಿ ವಿಶ್ವಮಟ್ಟದಲ್ಲಿ ಬೆಳೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಆರೋಗ್ಯ ಸಂರಕ್ಷಣೆ ಕುರಿತ ಪ್ರಾಥಮಿಕ ಅರಿವು ಜನರು ಹೊಂದಿರಬೇಕು ಎಂದರು.

ಧೂಮಪಾನ, ಮದ್ಯಪಾನ ಮತ್ತು ಮಾದಕದ್ರವ್ಯ ವ್ಯಸನಿಗಳಿಗೆ ಕ್ಷಯರೋಗ ತಗಲುವ ಸಾಧ್ಯತೆ ಇದೆ. ಮಧ್ಯವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕ್ಷಯರೋಗಿಗಳಿಂದ ಮಕ್ಕಳನ್ನು ದೂರ ಇರಿಸಬೇಕು. ಇಲ್ಲವಾದಲ್ಲಿ ಅವರಿಗೂ ಕಾಯಿಲೆ ಹರಡುವ ಸಾಧ್ಯತೆ ಇರುತ್ತದೆ. ಕ್ಷಯರೋಗ ಬಂದವರು ನಿಯಂತರವಾಗಿ ಆರು ತಿಂಗಳು ಚಿಕಿತ್ಸೆ ಪಡೆದರೆ ರೋಗದಿಂದ ಗುಣಮುಖರಾಗುವ ಸಾಧ್ಯತೆ ಇದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದರು.

ಪ್ರಾಚಾರ್ಯ ಡಾ. ಅಶೋಕ ಡಿ. ರೇವಣಕರ್, ಕ್ಷಯರೋಗ ಮನುಷ್ಯನ ಆಯಸ್ಸನ್ನು ಕ್ಷೀಣಿಸುತ್ತ ಬರುತ್ತದೆ. ನಮ್ಮ ಕಾಲೇಜಿನಲ್ಲಿ ಪಠ್ಯದ ಜತೆಯಲ್ಲಿ ಆರೋಗ್ಯ, ಸಂಸ್ಕೃತಿ, ಸಾಹಿತ್ಯ, ಕಲೆ ಕುರಿತ ಶಿಬಿರಗಳನ್ನು ಕೂಡ ನಡೆಸಲಾಗುತ್ತಿದೆ. ಅಂತೆಯೆ ಕ್ಷಯರೋಗಕ್ಕೆ ಒಳಗಾದವರು ಸಹ ಕಾಲಕಾಲಕ್ಕೆ ಆರೋಗ್ಯ ಇಲಾಖೆ ಸೂಚಿಸುವ ಔಷಧ ಪಡೆದುಕೊಳ್ಳಬೇಕು ಎನ್ನುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಮೂಲಕ ಆರೋಗ್ಯದ ಅರಿವು ಮೂಡಿಸಲಾಗುತ್ತದೆ ಎಂದರು.

ಎನ್​ಎಸ್​ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಮಾರುತಿ ಗೌಡ, ಆರೋಗ್ಯ ಇಲಾಖೆಯ ಗಜೇಂದ್ರ, ರಾಘವೇಂದ್ರ, ಅವಿನಾಶ್, ಪ್ರಕಾಶ್, ಪೂರ್ಣಿಮಾ, ಪ್ರೊ. ಪ್ರತಿಭಾ, ಅರ್ಪಿತಾ, ಪ್ರಿಯದರ್ಶಿನಿ ಇತರರು ದ್ದರು.