ಜನರನ್ನು ಮರಳು ಮಾಡುವ ಪ್ರಧಾನಿ ಮೋದಿ

ಚಾಮರಾಜನಗರ: ಪ್ರಧಾನಿ ನರೇಂದ್ರಮೋದಿ ಅವರು ಭಾವನಾತ್ಮಕ ಮಾತುಗಾರಿಕೆಯ ಮೂಲಕ ದೇಶದ ಜನತೆಯನ್ನು ಮರುಳು ಮಾಡಿ ಮತ್ತೆ ಅಧಿಕಾರಕ್ಕೇರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಎಐಸಿಸಿ ಸದಸ್ಯ ಎಂ.ಆರ್.ಸೀತಾರಾಂ ತಿಳಿಸಿದರು.

ನಿರುದ್ಯೋಗಿಗಳ ಸಂಖ್ಯೆ ಬೇರೆಲ್ಲ ಸರ್ಕಾರಗಳಿಗೆ ಹೋಲಿಸಿದರೆ ನರೇಂದ್ರಮೋದಿ ಅವರ ಆಡಳಿತದಲ್ಲಿ ಹೆಚ್ಚಾಗಿದೆ. ನೋಟು ಅಮಾನ್ಯೀಕರಣ ದಂತಹ ದೂರದೃಷ್ಟಿ ಇಲ್ಲದ ವ್ಯರ್ಥ ಕಸರತ್ತುಗಳ ಕಾರಣಕ್ಕೆ ದೇಶದ ಅರ್ಥ ವ್ಯವಸ್ಥೆ ಕುಸಿದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪ್ರಧಾನಿ ನರೇಂದ್ರಮೋದಿ ಅವರು ಜನರಿಗೆ ಸುಳ್ಳು ಹೇಳಿ ಮೋಡಿ ಮಾಡುವುದನ್ನು ಕಲಿತಿದ್ದಾರೆ. ಕೇಂದ್ರ ಚುನಾವಣಾ ಆಯೋಗ, ಸಿಬಿಐ, ಐಟಿ ಸೇರಿದಂತೆ ಇತರೆ ಸಂಸ್ಥೆಗಳನ್ನು ತಮ್ಮ ಕೈ ವಶ ಮಾಡಿಕೊಂಡು ಎಲ್ಲ ಸಂಸ್ಥೆಗಳನ್ನು ನಾಶ ಮಾಡಲಾಗಿದೆ. ದೇಶದಲ್ಲಿರುವ ಸಣ್ಣ, ಅತಿ ಸಣ್ಣ ಉದ್ಯಮಗಳು ಚಿಂತಾಜನಕ ಸ್ಥಿತಿಯಲ್ಲಿವೆ. ರೈತರ ಸಾಲದ ಹೊರೆ ಹೆಚ್ಚಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎಂದರು.

ಕನಿಷ್ಠ ಪ್ರಮಾಣದ ಧನಾತ್ಮಕ ಆಡಳಿತ ನೀಡಲು ಕರ್ನಾಟಕ, ಮಧ್ಯಪ್ರದೇಶ, ರಾಜಸ್ತಾನ ಮಾದರಿಯಲ್ಲಿ ರೈತರ ಸಾಲ ಮನ್ನಾ ಮಾಡಲೂ ಸಹ ಕೇಂದ್ರ ಸರ್ಕಾರ ಮುಂದಾಗಿಲ್ಲ. 2 ಸಾವಿರ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆ ಹಾಕುತ್ತೇನೆ ಎಂದು ನರೇಂದ್ರ ಮೋದಿ ಹೇಳುತ್ತಾರೆ. ರೈತರೇನು ಬಿಕ್ಷುಕರೇ ಎಂದು ಪ್ರಶ್ನಿಸಿದರು.

ದೇಶದ 2 ಕೋಟಿ ಬಡ ಕುಟುಂಬಗಳಿಗೆ ತಿಂಗಳಿಗೆ 6 ಸಾವಿರ ರೂ.ಗಳಂತೆ ವರ್ಷಕ್ಕೆ 72 ಸಾವಿರ ರೂ.ಗಳನ್ನು ಕೊಡಲು ಕಾಂಗ್ರೆಸ್ ಮುಂದಾಗಿದೆ. ಸಂಸದ ಆರ್.ಧ್ರುವನಾರಾಯಣ್ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಿದೆ. ಸಹಕಾರ ಸಂಘಗಳ ಸಾಲಮನ್ನಾ ಪೂರ್ಣವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 2 ಹಂತಗಳಲ್ಲಿ ಸಾಲಮನ್ನಾ ಪೂರ್ಣಗೊಳಿಸಲಾಗಿದೆ. ಆದರೆ ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗೆ ಒತ್ತಡ ಹಾಕಿ ರೈತರಿಗೆ ನೋಟಿಸ್ ಕೊಡಿಸುತ್ತಿದೆ ಎಂದು ಆರೋಪಿಸಿದರು.