ಹುಮನಾಬಾದ್: ಸ್ವಾತಂತ್ರ ಹೋರಾಟಗಾರ ಚಂದ್ರಶೇಖರ ಪಾಟೀಲರು ಚಿಕ್ಕ ವಯಸ್ಸಿನಲ್ಲಿಯೇ ಹೈದರಾಬಾದ್ ಕರ್ನಾಟಕ ಭಾಗದ ಸ್ವಾತಂತ್ರಕ್ಕಾಗಿ ಹೋರಾಡಿದ್ದರಿಂದ ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಸರ್ವೋದಯ ಕಾಲೇಜಿನಲ್ಲಿ ರೋಟರಿ ಕ್ಲಬ್ ಹುಮನಾಬಾದ್ ಎಲೈಟ್‌ನಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರ ಪಾಟೀಲರ ಜೀವನ ಸಾಧನೆ ಕುರಿತ ಕಿರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸಾಧಕರನ್ನು ಮಾತ್ರ ಸಮಾಜ ನೆನಪಿಡುತ್ತದೆ. ಚಂದ್ರಶೇಖರ ಪಾಟೀಲರು ಈ ಭಾಗಕ್ಕೆ ಜೀವನವನ್ನೇ ಸಮರ್ಪಿಸಿದ್ದರು. ಅವರ ಹೋರಾಟ, ತ್ಯಾಗ ಮಕ್ಕಳು ಅರಿಯಬೇಕು ಎಂದರು.
ಎಲೈಟ್ ಅಧ್ಯಕ್ಷ ನಾಗರಾಜ ಕರ್ಪೂರ ಮಾತನಾಡಿ, ರಾಮಚಂದ್ರ ವೀರಪ್ಪ ಅವರು ಸೇರಿದಂತೆ ಹಲವು ನಾಯಕರು ಈ ನಾಡಿಗಾಗಿ ಶ್ರಮಿಸಿದ್ದಾರೆ. ಡಾ.ಚಂದ್ರಶೇಖರ ಪಾಟೀಲರು ೪೧ ವರ್ಷ ಬದುಕಿದ್ದರೂ ಅಪಾರ ಸೇವೆ ಮಾಡಿದ್ದಾರೆ ಎಂದರು.
ನಾಗರಾಜ ಕರ್ಪೂರ ಅವರು ಸ್ವಾತಂತ್ರ ಹೋರಾಟಗಾರ ಚಂದ್ರಶೇಖರ ಪಾಟೀಲರ ಜೀವನ ಸಾಧನೆ ಕುರಿತ ಕಿರು ಹೊತ್ತಿಗೆ ರೋಟರಿ ಕ್ಲಬ್ ಮೂಲಕ ಮಕ್ಕಳಿಗೆ ವಿತರಿಸಿದರು.
ಯಲಾಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಾಂತವೀತ ಯಲಾಲ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಅಭಿಷೇಕ ಚಿದ್ರಿ, ಖಜಾಂಚಿ ಗೌತಮ ಕಾಂಬಳೆ, ಸಾಕ್ಷರತಾ ಸಮಿತಿ ಮುಖ್ಯಸ್ಥ ಶರತ ನಾರಾಯಣಪೇಟ್ಕರ್, ಸದಸ್ಯರಾದ ಪ್ರಕಾಶ ತಟಪಟಿ, ಪ್ರಶಾಂತ ಸಾಗರ, ಪ್ರಾಚಾರ್ಯ ರಾಘವೇಂದ್ರ, ಶಿಕ್ಷಕ ಗಣೇಶ, ಗೇಮು ಚವ್ಹಾಣ್ ಇತರರಿದ್ದರು.