ಜನಮನ ನೆಚ್ಚಿ ಸರ್ಕಾರ ಸೇವೆ ನೀಡಲಿ

ಬೆಂಗಳೂರು: ಜನರ ಮನಸ್ಥಿತಿ ಅರಿತು ಅಗತ್ಯ ಸೇವೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ, ವಿಜಯವಾಣಿ ಅಂಕಣಕಾರ ಸಜನ್ ಪೂವಯ್ಯ ಹೇಳಿದ್ದಾರೆ.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಗೋಖಲೆ ಜನ್ಮದಿನ ಸ್ಮರಣಾರ್ಥ ಉಪನ್ಯಾಸದಲ್ಲಿ ‘ಮಾಹಿತಿ ತಂತ್ರಜ್ಞಾನ ಮತ್ತು ಉತ್ತಮ ಆಡಳಿತ’ ಕುರಿತು ಮಾತನಾಡಿದರು.

ಆಡಳಿತ ನಡೆಸುವವರು ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿಲ್ಲ. ಒಂದು ವೇಳೆ ಬಳಸಿದರೂ ಅದರಿಂದ ಸಂಪೂರ್ಣ ಪ್ರಯೋಜನ ಪಡೆಯುತ್ತಿಲ್ಲ. ಆದರೆ, ಗೂಗಲ್​ನಂತಹ ಸಂಸ್ಥೆ ಪ್ರತಿ ಬಳಕೆದಾರನ ಬೇಕು- ಬೇಡಗಳನ್ನು ಗಮನದಲ್ಲಿಟ್ಟುಕೊಂಡು ಸೇವೆ ನೀಡುತ್ತಿದೆ. ಅದೇ ರೀತಿಯಲ್ಲಿ ಜನರಿಗೆ ಸೇವೆ ನೀಡುವ ಕ್ರಮಕ್ಕೆ ಸರ್ಕಾರಗಳು ಮುಂದಾಗಬೇಕು. ಆದರೆ, ಜನರ ಬದಲಿಗೆ ಜನಪ್ರತಿನಿಧಿಗಳ ಮನಸ್ಥಿತಿಯಂತೆ ಸರ್ಕಾರ ನಡೆಸಲಾಗುತ್ತಿದೆ ಎಂದರು.

4 ದಶಕಗಳ ಹಿಂದೆ ಪ್ರಪಂಚದ ಎಲ್ಲ ಡಾಟಾಗಳ ಸಂಗ್ರಹ ಕೇವಲ ಅರ್ಧ ಟೆರಾ ಬೈಟ್​ನಷ್ಟಿತ್ತು. ಆದರೆ, ಈಗ ಅಷ್ಟು ಡಾಟಾ ಒಂದು ಮೊಬೈಲ್ ಫೋನ್​ನಲ್ಲಿ ಸಂಗ್ರಹಿಸಬಹುದಾಗಿದೆ. ಮಾಹಿತಿ ತಂತ್ರಜ್ಞಾನ ಸಾಕಷ್ಟು ಬದಲಾಗಿದೆ. ದೇಶದಲ್ಲಿ ಪಕ್ಷ ನೋಡಿ ಸರ್ಕಾರದ ಕಾರ್ಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದು ಮೊದಲು ನಿಲ್ಲಬೇಕು. ಯಾರೇ ಒಳ್ಳೆಯ ಕೆಲಸ ಮಾಡಿದರೂ ಅದನ್ನು ಸ್ವಾಗತಿಸಬೇಕು ಎಂದು ಸಜನ್ ಪೂವಯ್ಯ ಹೇಳಿದರು.

ನಮ್ಮ ಸಾಮರ್ಥ್ಯ, ದೌರ್ಬಲ್ಯ ಎರಡೂ ನಾವು ಬಳಸುವ ಮೊಬೈಲ್​ನಲ್ಲಿ ಶೇಖರವಾಗಿರುತ್ತದೆ. ನಮ್ಮ ಅಭಿಪ್ರಾಯ, ಮನಸ್ಥಿತಿ ಕೂಡ ಅದರಿಂದ ತಿಳಿಯುತ್ತದೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಬಳಕೆ ಕುರಿತು ಎಚ್ಚರಿಕೆಯಿಂದ ಇರಬೇಕು. ದೇಶದಲ್ಲಿ ಅದಕ್ಕೆ ಸಂಬಂಧಿಸಿದ ಸೂಕ್ತ ಕಾನೂನುಗಳು ರಚನೆಯಾಗಬೇಕಿದೆ.

| ಸಜನ್ ಪೂವಯ್ಯ, ಸುಪ್ರೀಂಕೋರ್ಟ್ ಹಿರಿಯ ವಕೀಲ