ಜನಪ್ರತಿನಿಧಿಗಳ ಮನವೊಲಿಕೆಗೆ ಕ್ರಮ

ರಾಮನಗರ: ಕಣ್ವ ಗ್ರಾಮದ ಬಳಿಯ ತ್ಯಾಜ್ಯ ವಿಲೇವಾರಿ ಘಟಕ ಪುನರಾರಂಭಕ್ಕೆ ಎದುರಾದ ಸ್ಥಳೀಯರ ವಿರೋಧ ಸಂಬಂಧ ಹಾಗೂ ಆ ಭಾಗದ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರ ಮನವೊಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಎಂ.ಪಿ. ಮುಲ್ಲೈ ಮುಹಿಲನ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಣ್ವದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸಾಪನೆ ಕುರಿತು ಶುಕ್ರವಾರ ಕರೆದಿದ್ದ ರೈತ ಮುಖಂಡರು ಮತ್ತು ಹೋರಾಟ ಸಮಿತಿ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳೆಯುತ್ತಿರುವ ಪಟ್ಟಣಗಳಲ್ಲಿ ಕಸ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಹರಿಸಿಕೊಳ್ಳುವುದು ಅನಿವಾರ್ಯ. ರಾಮನಗರ ಮತ್ತು ಚನ್ನಪಟ್ಟಣ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಚಾಮನಹಳ್ಳಿ ಸರ್ವೆ ನಂ.254ರಲ್ಲಿನ 50 ಎಕರೆ ಗೋಮಾಳದಲ್ಲಿ ಐದಾರು ವರ್ಷದ ಹಿಂದೆ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿತ್ತು. ಆದರೆ ಸ್ಥಳೀಯರ ವಿರೋಧದಿಂದಾಗಿ 2015ರಲ್ಲೇ ಸ್ಥಗಿತಗೊಂಡಿದೆ. ಕಸವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದಾಗ ಉಳಿಕೆಯಾಗುವ ಶೇ.10 ತ್ಯಾಜ್ಯ ಮಾತ್ರ ಡಂಪಿಂಗ್ ಯಾರ್ಡ್​ಗೆ ಸೇರುತ್ತದೆ. ಹಾಗಾಗಿ ಆ ಭಾಗದ ರೈತ ಮುಖಂಡರು, ಹೋರಾಟಗಾರರು, ಎರಡು ನಗರಸಭೆ ಆಯುಕ್ತರು ಸಮರ್ಪಕವಾಗಿ ರ್ಚಚಿಸಿ ಸೂಕ್ತ ನಿರ್ಣಯಕ್ಕೆ ಬರೋಣ. ಚಾಮನಹಳ್ಳಿ ಜನರಿಗೆ, ಪರಿಸರಕ್ಕೆ ಹಾನಿಯಾಗದಂತೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಘಟಕ ಸ್ಥಾಪಿಸಿ ಕಸ ನಿರ್ವಹಣೆ ಮಾಡುತ್ತೇವೆ. ನದಿ ಮೂಲಕ್ಕೂ ತೊಂದರೆಯಾಗುವುದಿಲ್ಲ. ಯೋಜನೆಗೆ ಸಹಕಾರ ನೀಡುವಂತೆ ಮುಲ್ಲೈ ಮುಹಿಲನ್ ವಿನಂತಿಸಿದರು.

ನಗರಸಭೆ ವ್ಯಾಪ್ತಿಯಲ್ಲೇ ಘಟಕ ಸ್ಥಾಪಿಸಿ: ರೈತ ಮುಖಂಡ ಲಕ್ಷ್ಮಣಸ್ವಾಮಿ ಮಾತನಾಡಿ, ಈ ಹಿಂದೆಯೇ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿದ್ದರೆ ಇಂಥ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಅಲ್ಲದೆ ಪಟ್ಟಣಗಳ ತ್ಯಾಜ್ಯವನ್ನು ನಮ್ಮ ಹಳ್ಳಿಗೆ ತಂದು ಹಾಕುವುದು ಯಾವ ನ್ಯಾಯ. ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಜಮೀನಿದೆ. ಆ ಜಮೀನು ಇವತ್ತು ಖಾಸಗಿಯವರ ಪಾಲಾಗುತ್ತಿದೆ. ಅಂಥ ಜಮೀನನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಳಸಿಕೊಳ್ಳಿ. ಇಲ್ಲವೆ ಆ ಗ್ರಾಮದಲ್ಲಿ ಎಲ್ಲ ಜನಪ್ರತಿನಿಧಿಗಳ ಮತ್ತು ಊರಿನ ಪ್ರಮುಖರನ್ನು ವಿಶ್ವಾಸಕ್ಕೆ ಪಡೆದು ಸಭೆ ನಡೆಸಿ. ಅಲ್ಲಿ ತೆಗೆದುಕೊಳ್ಳುವ ತೀರ್ವನದಂತೆ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.

ಜನರ ತಪು್ಪಕಲ್ಪನೆ ಹೋಗಲಾಡಿಸಿ: ರೈತ ಹೋರಾಟಗಾರ ಸಿಂ.ಲಿಂ. ನಾಗರಾಜ್ ಮಾತನಾಡಿ, ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಆ ಭಾಗದ ಜನರಲ್ಲಿ ತಪ್ಪುಕಲ್ಪನೆಗಳಿವೆ. ಅದನ್ನು ಹೋಗಲಾಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಮೈಸೂರಿನಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ ಅತ್ಯಂತ ವೈಜ್ಞಾನಿಕ ಮತ್ತು ಆಧುನಿಕವಾಗಿದೆ. ಆ ಬಗ್ಗೆ ವರದಿ ಪಡೆದು, ನಮ್ಮ ಭಾಗದ ಜನರಿಗೆ ಮನವರಿಕೆ ಮಾಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಿ. ಆ ಮೂಲಕ ಜನರನ್ನು ವಿಶ್ವಾಸಕ್ಕೆ ಪಡೆದು ಯೋಜನೆ ಜಾರಿಗೆ ಕ್ರಮ ಕೈಗೊಳ್ಳಿ ಎಂದರು.

ಬೇರೆಡೆಗೆ ಸ್ಥಳಾಂತರಿಸಿ: ಕಣ್ವ ಭಾಗದ ಪ್ರಮುಖರಾದ ದೀಪಕ್, ಸತ್ಯನಾರಾಯಣ, ಶಿವರಾಮ್ ಮಾತನಾಡಿ, ಜಿಲ್ಲಾಡಳಿತ ಗುರುತಿಸಿರುವ ಜಾಗ ಇಳಿಜಾರಾಗಿದೆ. ಆ ಪ್ರದೇಶದಲ್ಲಿ ಘಟಕ ಸ್ಥಾಪಿಸಿದರೆ ತ್ಯಾಜ್ಯಗಳ ಕಲುಷಿತ ನೀರು, ಜನವಸತಿ ಪ್ರದೇಶಗಳಿಗೆ ಹರಿದುಬರುವುದಲ್ಲದೇ ಕಣ್ವ ನದಿ ಮಲಿನಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಇದನ್ನೆಲ್ಲ ಅರಿತುಕೊಂಡು ನಾವು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದೇವೆ. ಅಲ್ಲದೆ ಆ ಗ್ರಾಮದಲ್ಲಿರುವ ಏಕೈಕ ಗೋಮಾಳದ ಜಾಗವನ್ನು ರಕ್ಷಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಘಟಕ ಸ್ಥಾಪಿಸಲು ಒಪ್ಪಿ, ಸ್ಥಳೀಯ ವಾತಾವರಣ ಮತ್ತಷ್ಟು ಮಲಿನಗೊಳ್ಳಲು ಇಚ್ಚಿಸುವುದಿಲ್ಲ. ಜಿಲ್ಲಾಡಳಿತ ಈ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.

ರಾಮನಗರ ನಗರಸಭೆ ಆಯುಕ್ತೆ ಬಿ. ಶುಭಾ, ಚನ್ನಪಟ್ಟಣ ಪೌರಾಯುಕ್ತ ಪುಟ್ಟಸ್ವಾಮಿ, ಡಿಯುಡಿಸಿ ಯೋಜನಾ ನಿರ್ದೇಶಕ ಸೂರಜ್, ಹೋರಾಟ ಸಮಿತಿಯ ಪ್ರಮುಖರಾದ ರಮೇಶಗೌಡ, ಯೋಗೇಶ ಗೌಡ, ಇತರರು ಇದ್ದರು.

Leave a Reply

Your email address will not be published. Required fields are marked *