ಜನಪರ ಕಾರ್ಯಕ್ರಮಗಳಿಂದ ಗೆಲುವು

ದೊಡ್ಡಬಳ್ಳಾಪುರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳು, ಮೋದಿ ಅಲೆ ಹಾಗೂ ಕಳೆದ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋಲುಂಟಾದ ಅನುಕಂಪದ ಅಲೆ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಬಚ್ಚೇಗೌಡ ತಿಳಿಸಿದರು.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಯಲು ಸೀಮೆಯ ನೀರಿನ ಬವಣೆ ನೀಗಿಸಲು ಎತ್ತಿನಹೊಳೆ ಯೋಜನೆಗೆ ಬಜೆಟ್​ನಲ್ಲಿ ಅನುದಾನ ನೀಡಿದ್ದು, ಆ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಉದ್ದೇಶವಿಲ್ಲ. ಎತ್ತಿನಹೊಳೆ ಯೋಜನೆ ಕಾಮಗಾರಿ ತ್ವರಿಗತಿಯಲ್ಲಿ ಪೂರ್ಣಗೊಳಿಸಲು ಹೆಚ್ಚಿನ ಒತ್ತು ನೀಡುವ ಜತೆಗೆ ನದಿಗಳ ಜೋಡಣೆ ಯೋಜನೆ ಮೂಲಕ ಶಾಶ್ವತವಾಗಿ ಬಯಲು ಸೀಮೆ ನೀರಿನ ಸಮಸ್ಯೆ ನೀಗಿಸಿ, ಆ ಮೂಲಕ ಉದ್ಯೋಗ ಸೃಷ್ಟಿಸಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮಕೈಗೊಳ್ಳಗಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸದ ವೀರಪ್ಪ ಮೊಯ್ಲಿ ಎತ್ತಿನಹೊಳೆ ಯೋಜನೆ ಕೇವಲ ಚುನಾವಣೆಗೆ ಬಳಸಿಕೊಂಡಿದ್ದು, ಬಿಟ್ಟರೆ ಯಾವ ಪ್ರಮಾಣದಲ್ಲಿ ಆ ಯೋಜನೆಯಿಂದ ನೀರು ದೊರೆಯುತ್ತದೆ. ತ್ವರಿತವಾಗಿ ಕಾಮಗಾರಿ ಮುಗಿಸಿ ಕ್ಷೇತ್ರದ ಜನತೆಗೆ ನೀರನ್ನು ಹೇಗೆ ಪೂರೈಸಬಹುದೆಂಬ ಕನಿಷ್ಠ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಬಿಜೆಪಿ ಲೋಕಸಭೆ ಚುನಾವಣೆ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಮಾ.25ರಂದು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆ ಬಿಜೆಪಿ ಉಸ್ತುವಾರಿ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಚಿಕ್ಕಬಳ್ಳಾಪುರ ಲೋಕಸಭೆ ವ್ಯಾಪ್ತಿಯಲ್ಲಿನ 8 ವಿಧಾನಸಭೆ ಕ್ಷೇತ್ರಗಳಲ್ಲಿ ಬೂತ್​ವುಟ್ಟದ ಕಾರ್ಯಕರ್ತರ ಸಶಕ್ತಿಕರಣ ಗೊಳಿಸಲಾಗಿದ್ದು, ಶಕ್ತಿ ಕೇಂದ್ರ ಸಭೆ, ಗ್ರಾಪಂ ಕೇಂದ್ರ ಸಭೆಗಳನ್ನು ಕೈಗೊಂಡಿದ್ದು, 25ರಂದು ಚಿಕ್ಕಬಳ್ಳಾಪುರ ಶ್ರೀದೇವಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಕೇಂದ್ರ ರೇಷ್ಮೆಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಮುಖಂಡರಾದ ಸಚ್ಚಿದಾನಂದ್, ಜೋ.ನಾ.ಮಲ್ಲಿಖಾರ್ಜುನ್, ರಂಗರಾಜು, ಎಚ್.ಎಸ್.ಶಿವಶಂಕರ್, ವತ್ಸಲ, ಸಿ.ಡಿ.ಸತ್ಯನಾರಾಯಣಗೌಡ ಮತ್ತಿತರರಿದ್ದರು.

ರಾಹುಕಾಲ ಮುಗಿಸಿ ಸುದ್ದಿಗೋಷ್ಠಿಗೆ ಬಂದ ಬಚ್ಚೇಗೌಡ: ಬೆಳಗ್ಗೆ 11ಗಂಟೆ ಸುದ್ದಿಗೋಷ್ಠಿ ಕರೆಯಲಾಗಿದ್ದರು ರಾಹುಕಾಲದ ಕಾರಣ ಮಧ್ಯಾಹ್ನ 12 ಗಂಟೆಗೆ ನಂತರ ಬಚ್ಚೇಗೌಡ ಸುದ್ದಿಗೋಷ್ಠಿಗೆ ಆಗಮಿಸಿದರು. ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ನಡೆಸಲಾಗುತ್ತಿರುವ ಮೊದಲ ಸುದ್ದಿಗೋಷ್ಠಿಯಾದ ಕಾರಣ ರಾಹುಕಾಲ ಮುಗಿಸಿ ಬಂದೆ ಎಂದು ತಿಳಿಸಿದರು.