ಜನಪರ ಆಡಳಿತಕ್ಕೆ ಮನ್ನಣೆ

ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಶಿವಕುಮಾರ ಉದಾಸಿ ಭರ್ಜರಿ ಜಯ ದಾಖಲಿಸುವುದರೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಅವರ ಗೆಲುವಿಗೆ ಕಾರಣ, ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಕುರಿತು ‘ವಿಜಯವಾಣಿ’ಯೊಂದಿಗೆ ನಡೆಸಿದ ಚಿಟ್​ಚಾಟ್ ಸಂದರ್ಶನ ಇಲ್ಲಿದೆ.

*ನಿಮ್ಮ ಗೆಲುವನ್ನು ಯಾವ ರೀತಿ ವಿಶ್ಲೇಷಿಸುತ್ತೀರಿ?

ಕೇಂದ್ರ ಸರ್ಕಾರದ ಜನಪರ ಆಡಳಿತಕ್ಕೆ ಜನರು ಮನ್ನಣೆ ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ನೀಡಿದ ಯೋಜನೆಗಳು, ದೇಶ ರಕ್ಷಣೆ ವಿಷಯದಲ್ಲಿ ಕೈಗೊಂಡ ನಿರ್ಧಾರಗಳಿಗೆ ಜನತೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ತನ್ನ ಸಿದ್ಧಾಂತಗಳನ್ನು ಬದಲಾಯಿಸಿಕೊಳ್ಳಬೇಕು ಎಂಬುದು ನಮ್ಮ ಕಾಂಗ್ರೆಸ್ ಮುಕ್ತ ಭಾರತದ ಕಲ್ಪನೆಯಾಗಿತ್ತು. ಅದೇ ರೀತಿಯೇ ಆಗಿದೆ.

*ಇದು ಮೋದಿ ಅಲೆಯ ವಿಜಯ ಎಂದು ಒಪ್ಪಿಕೊಳ್ಳುತ್ತೀರಾ?

ಯೆಸ್ ಮೋದಿ ಅಲೆ ಎಲ್ಲಿದೆ ಎಂದು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್​ನವರು ಮೋದಿ ಹೆಸರು ಹೇಳಿ ಮತ ಕೇಳುತ್ತಿದ್ದಾರೆ ಎಂದು ದೂರುತ್ತಿದ್ದರು. ಆಗಲೇ ಅವರಿಗೆ ಮೋದಿ ಅಲೆಯ ಭಯವಿತ್ತು. ಇದೀಗ ಅವರೇ ಒಪ್ಪಿಕೊಂಡಿದ್ದಾರೆ.

*ಮೈತ್ರಿ ಅಭ್ಯರ್ಥಿಯಿಂದ ನಿಮ್ಮ ಗೆಲುವು ಸುಲಭವಾಯಿತೇ?

ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಿಂದ ಗೆಲುವು ಸುಲಭವಾಯಿತು ಎನ್ನುವುದಕ್ಕಿಂತ ಕಾಂಗ್ರೆಸ್​ನ ಅಭ್ಯರ್ಥಿ ನನಗಿಂತ ಹಿರಿಯರು, ಉತ್ತಮ ನಾಯಕರಾಗಿದ್ದರು. ಆದರೆ, ಅವರು ರಾಂಗ್ ಪಾರ್ಟಿಯಿಂದ ಸ್ಪರ್ಧಿಸಿದ್ದರಿಂದ ಗೆಲುವು ಸುಲಭವಾಯಿತು. ಅವರೇ ಏನಾದರೂ ಬಿಜೆಪಿಯಿಂದ ಸ್ಪರ್ಧಿಸಿದ್ದರೇ ಅವರೇ ಗೆಲ್ಲುತ್ತಿದ್ದರು. ಜನತೆ ಮೈತ್ರಿ ಸರ್ಕಾರದ ಆಡಳಿತ ವಿರುದ್ಧ ಸಂದೇಶ ರವಾನಿಸಿದ್ದಾರೆ.

*ಸಂಸದರಾಗಿ ನಿಮ್ಮ ಕೇತ್ರದ ಜನರಿಗೆ ಯಾವ ಭರವಸೆ ನೀಡಲು ಬಯಸುತ್ತೀರಿ?

ಇದುವರೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಕ್ಷೇತ್ರದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತೇನೆ. ರೋಣ, ಗದಗ, ಶಿರಹಟ್ಟಿ ಭಾಗದಲ್ಲಿ ಉಳ್ಳಾಗಡ್ಡಿ ಸಂಸ್ಕರಣಾ ಘಟಕ ಹಾಗೂ ಮಾರುಕಟ್ಟೆ ಬೇಡಿಕೆಯಿದೆ. ಅದನ್ನು ಸಾಕಾರಗೊಳಿಸುತ್ತೇನೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ, ಕೆರೆ ತುಂಬಿಸುವುದು, ಕೃಷಿ ಪೂರಕ ಕೈಗಾರಿಕೆ, ಮೂಲಸೌಕರ್ಯ ಸೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ.

Leave a Reply

Your email address will not be published. Required fields are marked *