ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ

ಧಾರವಾಡ: ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ. ಅವುಗಳ ಬಗ್ಗೆ ಗೌರವ, ಅಭಿಮಾನ ಇರಬೇಕು. ಯುವಕರು ಸೈನ್ಯ ಸೇರಿ ದೇಶ ರಕ್ಷಣೆಗೆ ಮುಂದಾಗಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು, ವೀರಯೋಧರ ಸ್ಮಾರಕಕ್ಕೆ ಗೌರವ ಸಮರ್ಪಿಸಿ ಮಾತನಾಡಿದರು.

ಭಾರತೀಯ ಸೇನೆಗೆ ಕರ್ನಾಟಕದ ಕೊಡುಗೆ ಅಪಾರ. ಕನ್ನಡಿಗರಾದ ಜನರಲ್ ಕೆ.ಎಸ್. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ ಹಾಗೂ ಜನರಲ್ ಜಿ.ಜಿ. ಬೇವೂರ ಅವರು ಮಹಾದಂಡನಾಯಕರಾಗಿ ಸೇವೆ ಸಲ್ಲಿಸಿರುವುದು ಇದಕ್ಕೆ ಸಾಕ್ಷಿ. ಯಾವುದೇ ಕ್ಷೇತ್ರವಾದರೂ ಶ್ರದ್ಧೆ, ಪ್ರಾಮಾಣಿಕತೆಗಳಿಂದ ಸೇವೆ ಸಲ್ಲಿಸಬೇಕು. ದೇಶದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸೈನಿಕರ ತ್ಯಾಗ, ಬಲಿದಾನ, ದೇಶಪ್ರೇಮ ನಮ್ಮ ಮುಂದೆ ಸದಾಕಾಲ ಇರಬೇಕು. ಉತ್ತರ ಕರ್ನಾಟಕದ ಜಿಲ್ಲೆಗಳ ಹಾಗೂ ಕೊಡಗಿನ ಯುವಕರೇ ಸೈನ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಉಳಿದ ಭಾಗದ ಯುವಕರೂ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಸೇರಿ ಸೇವೆ ಸಲ್ಲಿಸಬೇಕು ಎಂದರು.

ಸಮಿತಿಯ ಅಧ್ಯಕ್ಷ ಚಂದ್ರಶೇಖರ ಅಮೀನಗಡ ಮಾತನಾಡಿ, ಜನರಲ್ ಕೆ.ಎಸ್. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ ಹಾಗೂ ಜನರಲ್ ಜಿ.ಜಿ. ಬೇವೂರ ಅವರ ಕಂಚಿನ ಪುತ್ಥಳಿಗಳನ್ನು ಕಾರ್ಗಿಲ್ ಸ್ತೂಪದಲ್ಲಿ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಸ್ತೂಪ ಸ್ಥಾಪನೆಯ ಹಿನ್ನೆಲೆ ಕುರಿತು ಸಮಿತಿ ಪ್ರ. ಕಾರ್ಯದರ್ಶಿ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಟಿ.ಜಿ. ಪಾಟೀಲ, ಸತ್ಯಕುಮಾರ ಅಮೀನಗಡ, ರವೀಂದ್ರ ಪಾಟೀಲ, ಪ್ರವೀಣ ಅಮೀನಗಡ, ಪಂಡಿತ ಮುಂಜಿ, ಶಿವಯೋಗಿ ಅಮೀನಗಡ, ಇತರರಿದ್ದರು.

ಸಹಕಾರ ನೀಡಲು ಸಿದ್ಧ: ಕಾರ್ಗಿಲ್ ಯುದ್ಧದ ಸ್ಮರಣಾರ್ಥ ದೇಶದ ಮೊಟ್ಟಮೊದಲ ಕಾರ್ಗಿಲ್ ಸ್ತೂಪ ಸ್ಥಾಪಿಸಿದ ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ. ಜೊತೆಗೆ ಜಿಲ್ಲಾಡಳಿತ, ಪಾಲಿಕೆಯ ಕೊಡುಗೆ ಪ್ರಶಂಸನೀಯ. ಉ.ಕ. ಸೈನಿಕರ ಕಲ್ಯಾಣ ಸಮಿತಿಯ ಕಾರ್ಯಗಳಿಗೆ ವಿಆರ್​ಎಲ್ ಸಂಸ್ಥೆಯಿಂದ ಸಹಕಾರ ನೀಡಲು ಸಿದ್ಧ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

Leave a Reply

Your email address will not be published. Required fields are marked *