ಜನನಾಯಕನೂ… ಕವಿಹೃದಯಿಯೂ…

‘ನನ್ನೊಳಗಿನ ಹೋರಾಟಗಾರ ನನ್ನ ಕುಟುಂಬ ಪರಿಸರದಿಂದಲೇ ರೂಪುಗೊಂಡ. ನಮ್ಮದು ಜಮೀನ್ದಾರರ ಮನೆತನ. ಮನೆತುಂಬ ಆಳುಕಾಳು. ಆಗಿನ್ನೂ ನಮ್ಮ ಕುಟುಂಬ ನಗರಕ್ಕೆ ವಲಸೆ ಬಂದಿರಲಿಲ್ಲ. ಹಳ್ಳಿಯಲ್ಲಿಯೇ ಇದ್ದೆವು. ಕೃಷಿ ಪರಿಸರದಲ್ಲಿಯೇ ನನ್ನ ಬಾಲ್ಯ ಕಳೆಯಿತು. ಆಗ ಜನಸಾಮಾನ್ಯರೊಡನೆ ನನಗೆ ನಿಕಟ ಸಂಪರ್ಕ ಸಾಧ್ಯವಾಯಿತು. ಅವರ ಸಂಕಟ, ದುಃಖಗಳನ್ನು ಹತ್ತಿರದಿಂದ ನೋಡುವ ಅವಕಾಶವಿತ್ತು. ಆ ಪರಿಸರವೇ ನನ್ನೊಳಗೆ ಒಬ್ಬ ಹೋರಾಟಗಾರನನ್ನು ರೂಪಿಸಿತು’- ಇದು ಇತ್ತೀಚೆಗೆ ತೀರಿಕೊಂಡ ಫಿಡೆಲ್ ಕ್ಯಾಸ್ಟ್ರೊ ತನ್ನ ಬಾಲ್ಯದ ದಿನಗಳನ್ನು ಕುರಿತು ಬರೆಯುತ್ತ ಹೇಳಿದ ಮಾತುಗಳು.

ಕ್ರಾಂತಿಕಾರಿ ನಾಯಕ: ತನ್ನ ತೊಂಭತ್ತನೇ ವಯಸ್ಸಿನಲ್ಲಿ (1926- 2016) ತೀರಿಕೊಂಡ ಫಿಡೆಲ್ ಕ್ಯಾಸ್ಟ್ರೊ ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದ ಒಬ್ಬ ಕ್ರಾಂತಿಕಾರಿ ನಾಯಕ. ಸುಮಾರು ಐದು ದಶಕಗಳ ಕಾಲ (1959-2008) ಕ್ಯೂಬಾವನ್ನು ಸಮರ್ಥವಾಗಿ ಮುನ್ನಡೆಸಿದ ನೇತಾರ. ಸಾಮ್ರಾಜ್ಯಶಾಹಿ ಶಕ್ತಿಯನ್ನು ಎದುರಿಸಿ ನಿಂತ ಚತುರ ಹೋರಾಟಗಾರ. ತನ್ನ ಮೆಚ್ಚಿನ ಕವಿ ಜೋಸ್ ಮಾರ್ತಿ ಹಾಗೂ ಕಾರ್ಲ್​ವಾರ್ಕ್ಸ್ ಇವರಿಬ್ಬರನ್ನೂ ಒಂದೇ ಬಿಂದುವಿನಲ್ಲಿ ಹಿಡಿದಿದ್ದ ಫಿಡೆಲ್ ಮುಂದಿನ ಜನ್ಮದಲ್ಲಿ ಕವಿಯಾಗಬೇಕೆಂದು ಆಶಿಸಿದ್ದ. ಅವನ ಅತ್ಯುತ್ತಮ ಗೆಳೆಯರಲ್ಲಿ ಮಾರ್ಕೆಜ್ ಒಬ್ಬನಾಗಿದ್ದ. ಮಾರ್ಕೆಜ್​ಗೆ ಫಿಡೆಲ್ ಬಗ್ಗೆ ಅಪಾರ ಪ್ರೀತಿ. ಅವನ ಬಾಲ್ಯಜೀವನ ಕುರಿತ ಪುಸ್ತಕಕ್ಕೆ ಮಾರ್ಕೆಜ್​ದೇ ಮುನ್ನುಡಿ. ರಾಜಕೀಯ ನಾಯಕನೊಬ್ಬನ ಬಗೆಗಿನ ಸೊಗಸಾದ ಬರಹವದು.

ಕ್ಯೂಬಾ ಸ್ವಾಭಿಮಾನದಿಂದ ತಲೆಯೆತ್ತಿತು: ಫಿಡೆಲ್ ಹವಾನಾದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ಅಮೆರಿಕ ಬೆಂಬಲದಿಂದ ಆಡಳಿತ ನಡೆಸುತ್ತಿದ್ದ ಬಟೆಸ್ಸಾ ಸರ್ವಾಧಿಕಾರದ ವಿರುದ್ಧ ಸಿಡಿದೆದ್ದು, ಹವಾನಾ ವೆನಿಜೂಲ ಕೊಲಂಬಿಯ ಮೊದಲಾದ ಕಡೆ ವಿದ್ಯಾರ್ಥಿಗಳನ್ನು ಸಂಘಟಿಸುತ್ತ ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದ. ಆಗಿನ್ನೂ ಆತನಿಗೆ ಇಪ್ಪತ್ತೆರಡರ ಹರಯ. ಆ ವೇಳೆಗಾಗಲೇ ಅಮೆರಿಕ ಗುಪ್ತಚರ ಇಲಾಖೆ ಈತನ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿತ್ತು. ‘ಒಳ್ಳೆಯ ಮನೆತನದಿಂದ ಬಂದ ಈ ಹುಡುಗ ಸರಿಯಾದ ಶಿಕ್ಷಣ, ಮಾರ್ಗದರ್ಶನವಿಲ್ಲದೆ ಪುಂಡರ ಗುಂಪಿಗೆ ಸೇರಿದ್ದಾನೆ, ದೇಶದ್ರೋಹದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾನೆ’ ಎಂದು ಸರ್ಕಾರಕ್ಕೆ ವರದಿ ನೀಡಿತ್ತು. ವ್ಯವಸ್ಥೆಯ ವಿರುದ್ಧ ದನಿಯೆತ್ತಿದರೆ ಎಲ್ಲ ಕಾಲದಲ್ಲೂ ಅದು ಪುಂಡತನ, ದೇಶದ್ರೋಹ ಎಂದು ಗುರ್ತಿಸಲ್ಪಡುತ್ತದೆ. ಆದರೆ 1959ರ ವೇಳೆಗೆ ಫಿಡೆಲ್ ಕ್ಯಾಸ್ಟ್ರೊ ಬಸೆಟ್ಟಾ ಸರ್ಕಾರವನ್ನು ಕಿತ್ತೊಗೆದು ಕ್ಯೂಬಾವನ್ನು ಅಮೆರಿಕದ ಹಿಡಿತದಿಂದ ಬಿಡುಗಡೆಗೊಳಿಸಿದ. ಪುಟ್ಟ ಕ್ಯೂಬಾ ಜಗತ್ತಿನಲ್ಲಿ ಸ್ವಾಭಿಮಾನದಿಂದ ತಲೆಯೆತ್ತಿ ನಿಂತಿತು.

ಅಧ್ಯಯನಶೀಲ ನಾಯಕ: ಫಿಡೆಲ್​ನ ತಾರುಣ್ಯದಲ್ಲೇ ಆತನ ಜೊತೆಗೂಡಿದವನು ನಮ್ಮ ಕಾಲದ ಮತ್ತೊಬ್ಬ ಮಹಾನ್ ಚಿಂತಕ ಚೆಗೆವಾರ. ಅವರಿಬ್ಬರೂ ಭೇಟಿಯಾದಾಗ ಫಿಡೆಲ್​ಗೆ ಇಪ್ಪತ್ತೇಳು, ಚೆಗೆವಾರನಿಗೆ ಇಪ್ಪತ್ತೊಂಭತ್ತು. ಚೆಗೆವಾರನ ಚಿಂತನೆಗಳಿಗೆ ಕ್ರಿಯಾಚೇತನವಾಗಿದ್ದವನು ಕ್ಯಾಸ್ಟ್ರೊ. ಯಾರದೇ ಬದುಕಿನಲ್ಲೂ ಜೊತೆಗಾರರು ಮಹತ್ವದ ಪಾತ್ರ ವಹಿಸುತ್ತಾರೆ. ಹತ್ತಿರದವರೇ ನಮ್ಮ ಹಿತಶತ್ರುಗಳು. ಫಿಡೆಲ್ ಈ ಬಗ್ಗೆ ಸದಾ ಎಚ್ಚರದಿಂದಿದ್ದ. ತನ್ನ ಸುದೀರ್ಘ ರಾಜಕೀಯ ಬದುಕಿನಲ್ಲಿ ಆತ ತನ್ನ ಆಯ್ಕೆಯನ್ನು ಜತನದಿಂದ ಮಾಡುತ್ತಿದ್ದ. ಆತನ ಜೊತೆಗೆ ಸದಾ ಅತ್ಯುತ್ತಮ ಮನಸ್ಸುಗಳು ಪುಸ್ತಕಗಳ ರೂಪದಲ್ಲಿರುತ್ತಿದ್ದವು. ಕ್ಯಾಸ್ಟ್ರೊ ಓದಿನ ಕಡು ವ್ಯಾಮೋಹಿ. ತನ್ನ ಮೆಚ್ಚಿನ ಕವಿ ಜೋಸ್ ಮಾರ್ತಿಯ ಇಪ್ಪತ್ತೆಂಟು ಸಂಪುಟಗಳೂ ಹೆಚ್ಚೂ ಕಡಿಮೆ ಅವನಿಗೆ ಬಾಯಿಪಾಠವಾಗಿತ್ತು. ತನ್ನ ಮಾತುಗಳಲ್ಲಿ ಅವನನ್ನು ಮತ್ತೆ ಮತ್ತೆ ಉಲ್ಲೇಖಿಸುತ್ತಿದ್ದ. ಆತನ ಕಾರಿನಲ್ಲಿ ಸದಾ ಪುಸ್ತಕಗಳಿರುತ್ತಿದ್ದವು. ಒಮ್ಮೆ ಮಾರ್ಕೆಜ್ ಕೆಲವು ಪುಸ್ತಕಗಳ ಪಟ್ಟಿ ನೀಡಿ ಅವುಗಳನ್ನು ಓದಬಹುದೆಂದು ಸೂಚಿಸಿದಾಗ ಫಿಡೆಲ್ ಅವುಗಳ ಸ್ವಾರಸ್ಯವನ್ನು ವಿವರಿಸತೊಡಗಿದ. ಅಂದಿನಿಂದ ಮಾರ್ಕೆಜ್ ಆತನನ್ನು ಭೇಟಿಯಾದಾಗಲೆಲ್ಲ, ಓದಬೇಕಾದ ಅತ್ಯುತ್ತಮ ಪುಸ್ತಕಗಳನ್ನು ಫಿಡೆಲ್​ಗಾಗಿ ಕೊಂಡೊಯ್ಯುತ್ತಿದ್ದ. ಒಮ್ಮೆ ರಾತ್ರಿ ಮಾರ್ಕೆಜ್ ತನ್ನ ಪುಸ್ತಕವೊಂದನ್ನು ಫಿಡೆಲ್​ಗೆ ಕೊಟ್ಟ. ಮಾರನೇ ದಿನ ಫಿಡೆಲ್ ಆ ಪುಸ್ತಕದ ಬಗ್ಗೆ ಸುದೀರ್ಘವಾಗಿ ಅವನೊಂದಿಗೆ ರ್ಚಚಿಸಿದ. ಇಡೀ ರಾತ್ರಿ ಫಿಡೆಲ್ ಆ ಪುಸ್ತಕವನ್ನು ಓದಿ ಮುಗಿಸಿದ್ದ. ಹೀಗಿತ್ತು ಆತನ ಓದಿನ ದಾಹ. ಅದರಲ್ಲೂ ಚರಿತ್ರೆಯ ಪುಸ್ತಕಗಳನ್ನು ಆತ ಅಧ್ಯಯನವೆಂಬಂತೆ ಓದುತ್ತಿದ್ದ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳು ಸದಾ ಆತನ ಜೊತೆಗಿರುತ್ತಿದ್ದವು. ಕವಿಗೆ ಕನಸುಗಳಿರುತ್ತವೆ, ಅಧಿಕಾರವಿರುವುದಿಲ್ಲ. ನಮ್ಮ ರಾಜಕೀಯ ನಾಯಕರಿಗೆ ಅಧಿಕಾರವಿರುತ್ತದೆ, ಕನಸುಗಳಿರುವುದಿಲ್ಲ. ಅವರ ಕಣ್ಣು ಸದ್ಯದ ಲಾಭದ ಮೇಲೆ. ಫಿಡೆಲ್ ಅದ್ಭುತ ಕನಸುಗಾರನಾಗಿದ್ದ. ಪುಟ್ಟ ದೇಶದ ಈ ಮಹಾನ್ ನಾಯಕ ತನ್ನ ಪ್ರತಿಭೆ, ಚಿಂತನೆ, ಸಂಘಟನೆಗಳ ಮೂಲಕ ಜಗತ್ತಿನ ಗಮನ ಸೆಳೆದ. ನಮ್ಮ ಈಗಿನ ಅನೇಕ ಮಹಾನ್ ನಾಯಕರು ಓದಿನ ಶತ್ರುಗಳು. ಸಾಹಿತಿಗಳೆಂದರೆ ಅವರಿಗೆ ಅಸಡ್ಡೆ. ಪರಿಣಾಮವನ್ನು ನಾವೆಲ್ಲ ಅನುಭವಿಸುತ್ತಿದ್ದೇವೆ. ಫಿಡೆಲ್​ನ ಶಕ್ತಿಯಿದ್ದದ್ದು ಆತನ ನಿರಂತರ ಅಧ್ಯಯನದಲ್ಲಿ.

ಮಾನವೀಯ ಕಾಳಜಿಯ ಕವಿ: ಕ್ಯಾಸ್ಟ್ರೊ ಆಡಳಿತದಲ್ಲಿ ಕ್ಯೂಬಾದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವವಿತ್ತು. ಸಾಮಾಜಿಕ ಬದಲಾವಣೆಯಲ್ಲಿ ಶಿಕ್ಷಣದ ಪಾತ್ರ ಎಷ್ಟು ಮಹತ್ವದ್ದೆಂಬುದನ್ನು ಆತ ಅರಿತಿದ್ದ. ಅನಕ್ಷರತೆ, ಅಜ್ಞಾನಗಳೇ ಶೋಷಣೆಗೆ ಕಾರಣವೆಂಬುದನ್ನು ಆತ ತನ್ನ ಜೀವನಾನುಭವದಿಂದ ಕಂಡುಕೊಂಡಿದ್ದ. ಆತನ ಕಾಲದಲ್ಲಿ ಕ್ಯೂಬಾದ ಸಾಕ್ಷರತೆಯ ಪ್ರಮಾಣ ಶೇಕಡ 98ಕ್ಕೆ ಏರಿತು. ಒಂದು ರೀತಿ ಸರ್ವಾಧಿಕಾರಿಯ ರೀತಿ ಫಿಡೆಲ್ ಕ್ಯಾಸ್ಟ್ರೊ ಆಡಳಿತ ನಡೆಸಿದ. ಆತನ ಮಾತಿಗೆ ಎದುರುತ್ತರವಿರಲಿಲ್ಲ. ಆತ ನಡೆದದ್ದೇ ದಾರಿ. ಆದರೆ ಅವನೊಳಗೊಬ್ಬ ಮಾನವೀಯ ಕಾಳಜಿಯ ಕವಿಯಿದ್ದ. ಜನಪರ ಕಾಳಜಿಯ ಚಿಂತಕನಿದ್ದ.

ಕ್ಯಾಸ್ಟ್ರೊ ಒಳ್ಳೆಯ ಮಾತುಗಾರನಾಗಿದ್ದ. ಮಾತಿಗೆ ನಿಂತರೆ ಕಡಿಮೆಯೆಂದರೆ ನಿರಂತರ ಸರಾಸರಿ ಮೂರು ಗಂಟೆ ಮಾತನಾಡುತ್ತಿದ್ದನಂತೆ. ಆತ ವಿದ್ಯಾರ್ಥಿಯಾಗಿದ್ದಾಗ ಹವಾನಾ ವಿಶ್ವವಿದ್ಯಾಲಯದಲ್ಲಿ ನಿರಂತರ ಏಳು ಗಂಟೆ ಮಾತನಾಡಿದ್ದು ಒಂದು ದಾಖಲೆ. ಕೆಲಸ ಮಾಡುವುದು ಎಷ್ಟು ಮುಖ್ಯವೋ ವಿಶ್ರಾಂತಿಯೂ ಅಷ್ಟೇ ಮುಖ್ಯ ಎಂದು ಹೇಳುತ್ತಿದ್ದ ಫಿಡೆಲ್​ಗೆ ವಿಶ್ರಾಂತಿಯೆಂದರೆ ಹರಟೆ ಹೊಡೆಯುವುದು. ಈಗ ನಮ್ಮಲ್ಲಿ ಹರಟೆಯ ಪರಿಕಲ್ಪನೆಯೆ ಬದಲಾಗಿದೆ. ವಿದ್ವಜ್ಜನರ ಜೊತೆಗಿನ ಹರಟೆ ವಿವೇಕದ ಅನೇಕ ಸಾಧ್ಯತೆಗಳನ್ನು ಒದಗಿಸುತ್ತದೆ. ಒಮ್ಮೆ ತಡರಾತ್ರಿ ತುಂಬ ಆಯಾಸವಾದಾಗ ಫಿಡೆಲ್ ಸರಿರಾತ್ರಿಯಲ್ಲಿ ಗೆಳೆಯನೊಬ್ಬನ ಮನೆಯ ಬಾಗಿಲು ತಟ್ಟುತ್ತಾನೆ. ‘ನಿನಗೆ ಏನೋ ಹೇಳುವುದಿತ್ತು’ ಎಂದು ನಿಂತೇ ಮಾತು ಶುರು ಮಾಡಿದವನು ನಂತರ ಹಾಗೇ ಆರಾಮ ಕುರ್ಚಿಯಲ್ಲಿ ಒರಗಿ ಮಾತು ಮುಗಿಸಿದಾಗ ಬೆಳಗಾಗಿತ್ತು. ‘ಈಗ ಆಯಾಸವೆಲ್ಲ ಹೋಯಿತು, ಹೊಸ ಮನುಷ್ಯನಾದೆ’ ಎನ್ನುತ್ತಾ ಅಲ್ಲಿಂದ ಹೊರಟನಂತೆ. ಮಾರ್ಕೆಜ್ ಇದನ್ನು ಉಲ್ಲೇಖಿಸುತ್ತಾನೆ. ಕ್ಯಾಸ್ಟ್ರೊ ಸುತ್ತಮುತ್ತ ಯಾವಾಗಲೂ ಜನರಿರುತ್ತಿದ್ದರಂತೆ. ಆತ ನಿಜಾರ್ಥದಲ್ಲಿ ಜನನಾಯಕ. ಹಾಗೆಂದ ಮಾತ್ರಕ್ಕೆ ಆತನಿಗೆ ಜೀವಭಯವಿರಲಿಲ್ಲ ಎಂದಲ್ಲ. ಅಮೆರಿಕ ಕ್ಯಾಸ್ಟ್ರೊನನ್ನು ಕೊಲ್ಲಲು 638 ಸಲ ವಿಫಲ ಯತ್ನ ನಡೆಸಿತ್ತು ಎಂಬ ಮಾಹಿತಿಯಿದೆ. ಅದೆಲ್ಲವನ್ನೂ ಫಿಡೆಲ್ ತಪ್ಪಿಸಿಕೊಂಡದ್ದೇ ಒಂದು ರೋಮಾಂಚಕಾರಿ ಕಥನ. ವಿಷ ತುಂಬಿದ ಸಿಗಾರ್, ವಿಷದ ಸಿರಿಂಜ್ ಅಳವಡಿಸಿದ ಬಾಲ್ ಪೆನ್, ಮೀನು ಹಿಡಿಯುವ ಹವ್ಯಾಸವಿದ್ದ ಆತನಿಗೆ ಕಪ್ಪೆಚಿಪ್ಪಿನಲ್ಲಿ ಸ್ಫೋಟ ನಡೆಸುವ ಸಂಚು ಇತ್ಯಾದಿ. ಇದೆಲ್ಲಕ್ಕಿಂತ ಹೆಚ್ಚಾಗಿ ಆತನ ಪತ್ನಿಯನ್ನೇ ಫಿಡೆಲ್​ನನ್ನು ಕೊಲ್ಲಲು ಬಳಸಿಕೊಂಡದ್ದು ಅಮೆರಿಕ ಕ್ಯಾಸ್ಟ್ರೊ ಬಗ್ಗೆ ಎಷ್ಟು ಆತಂಕಗೊಂಡಿತ್ತು ಎಂಬುದನ್ನು ಸೂಚಿಸುತ್ತದೆ. ವಿಷಪೂರಿತ ಗುಳಿಗೆಯನ್ನು ಆತನ ಪಾನೀಯದಲ್ಲಿ ಬೆರೆಸಲು ಸೂಚಿಸಲಾಗಿತ್ತು. ಗೊತ್ತಾದ ಫಿಡೆಲ್ ಆಕೆಯ ಕೈಗೆ ಪಿಸ್ತೂಲು ಕೊಟ್ಟು ಕೊಲ್ಲಲು ಹೇಳಿದ. ಆಕೆ ಪಶ್ಚಾತ್ತಾಪದಿಂದ ಕುಗ್ಗಿ ಹೋದಳು.

ಸಂಕೀರ್ಣ ವ್ಯಕ್ತಿತ್ವ: ಫಿಡೆಲ್ ಭಾಷಣದ ರೀತಿಯ ಬಗ್ಗೆಯೂ ಮಾರ್ಕೆಜ್ ಪ್ರಸ್ತಾಪಿಸುತ್ತಾನೆ. ಮೊದಲು ಮಾತು ಮಂದ್ರ ಸ್ಥಾಯಿಯಲ್ಲಿ ಶುರುವಾಗುತ್ತಿತ್ತಂತೆ. ಕುತೂಹಲ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ ಜನ ಕ್ರಮೇಣ ಕೆಲಸದ ಒತ್ತಡದಿಂದ ತಮ್ಮ ತಮ್ಮ ಕೆಲಸ ಮಾಡುತ್ತಲೇ ಕಿವಿಯನ್ನು ಮಾತ್ರ ಫಿಡೆಲ್​ನ ಮಾತುಗಳಿಗೆ ಮೀಸಲಿಡುತ್ತಿದ್ದರಂತೆ. ಏಕೆಂದರೆ ಆತನ ಮಾತು ಮುಗಿಯುವಂಥದಾಗಿರುತ್ತಿರಲಿಲ್ಲ. ಆಗ ಫಿಡೆಲ್​ನ ದನಿ ಸಹಜವಾಗಿಯೇ ತಾರಕದ ಲಯ ಪಡೆದುಕೊಳ್ಳುತ್ತಿತ್ತಂತೆ. ಎಲ್ಲ ವರ್ಗದ ಜನರನ್ನೂ ತಲುಪುವ ಕಲೆಗಾರಿಕೆ ಆತನಿಗೆ ಸಿದ್ಧಿಸಿತ್ತು ಎಂದು ಮಾರ್ಕೆಜ್ ಬರೆಯುತ್ತಾನೆ. ಆತ ತನ್ನ ಅಧಿಕಾರಿಗಳಿಂದ, ತನ್ನ ಅಧ್ಯಯನದಿಂದ ತನಗೆ ಅಗತ್ಯವಿದ್ದ ಮಾಹಿತಿಗಳನ್ನು ಸಂಗ್ರಹಿಸಿದರೂ ನಿಜಮಾಹಿತಿ ಆತನಿಗೆ ದೊರಕುತ್ತಿದ್ದುದು ಆತ ಜನರೊಡನೆ ನಡೆಸುತ್ತಿದ್ದ ಸಂವಾದಗಳಿಂದಲೇ. ಜನರೊಡನೆ ಬೆರೆತು ಮಾತನಾಡುವುದು ಆತನ ವ್ಯಕ್ತಿತ್ವದ ಪ್ರಧಾನ ಅಂಶವಾಗಿತ್ತು. ತನಗೆ ಗೊತ್ತಿದ್ದ ಸಂಗತಿಗಳನ್ನೇ ಆತ ಮತ್ತೆ ಮತ್ತೆ ಕೇಳುತ್ತಿದ್ದ. ಬೇರೆ ಬೇರೆ ಜನರ ಬಳಿ, ಬೇರೆ ಬೇರೆ ಸಂದರ್ಭಗಳಲ್ಲಿ ಅದನ್ನೇ ಪ್ರಸ್ತಾಪಿಸುತ್ತಾ, ಆ ಬಗ್ಗೆ ಎಲ್ಲ ರೀತಿಯ ಮಾಹಿತಿ ಸಂಗ್ರಹಿಸುತ್ತಿದ್ದ. ಆ ಮೂಲಕ ಒಂದು ಖಚಿತ ತೀರ್ಮಾನ ತೆಗೆದುಕೊಳ್ಳುವುದು ಆತನಿಗೆ ಸಾಧ್ಯವಾಗುತ್ತಿತ್ತು. ಹೀಗೆ ಆತ ಎಲ್ಲರೊಡನೆ ಸಹಜವಾಗಿ ಬೆರೆತು ಆಪ್ತನೆಂಬಂತ್ತಿದ್ದರೂ ಯಾರಿಗೂ ಆತ ಏನೆಂಬುದು ಸುಲಭವಾಗಿ ಅರ್ಥವಾಗುತ್ತಿರಲಿಲ್ಲ. ಆತನ ವ್ಯಕ್ತಿತ್ವ ಸಂಕೀರ್ಣವಾಗಿತ್ತು. ಸದಾ ಚಿಂತನೆಯಲ್ಲಿರುತ್ತಿದ್ದ ಆತ ಸಂಗದಲ್ಲಿದ್ದೂ ನಿಸ್ಸಂಗನಾಗಿರುತ್ತಿದ್ದ.

ಒಮ್ಮೆ ವಿದೇಶಿ ಪತ್ರಕರ್ತನೊಬ್ಬ ಅವನನ್ನು ಸಂದರ್ಶನ ಮಾಡಿದಾಗ ಕ್ಯಾಸ್ಟ್ರೊ ಒಂದೇ ವಿಷಯವನ್ನು ಏಳು ಸಲ ಪ್ರಸ್ತಾಪಿಸಿದನಂತೆ. ಆ ನಂತರ ಆ ಪತ್ರಕರ್ತ ಮಾರ್ಕೆಜ್ ಹತ್ತಿರ ಈ ವಿಷಯ ಹೇಳಿ ಫಿಡೆಲ್​ಗೆ ವಯಸ್ಸಾಯಿತು, ಹೇಳಿದ್ದೇ ಹೇಳುತ್ತಿರುತ್ತಾನೆ ಎಂದನಂತೆ. ಈ ಘಟನೆಯನ್ನು ಉಲ್ಲೇಖಿಸಿ ಮಾರ್ಕೆಜ್ ಹೇಳುತ್ತಾನೆ: ಅದು ಕ್ಯಾಸ್ಟ್ರೊನ ರೀತಿ. ಒಂದು ಆಲೋಚನೆ ಮನಸ್ಸಿಗೆ ಬಂತೆಂದರೆ ಆತ ಅದರ ಬಗ್ಗೆಯೇ ಚಿಂತಿಸುತ್ತಿದ್ದ. ಮತ್ತೆ ಮತ್ತೆ ಅದರ ಬಗ್ಗೆ ಎಲ್ಲರ ಹತ್ತಿರ ಪ್ರಸ್ತಾಪಿಸುತ್ತಿದ್ದ. ಒಂದು ಆಲೋಚನೆ ಆತನಲ್ಲಿ ಮೊಳೆಯಿತೆಂದರೆ ಅದನ್ನು ಬೆಳೆಸಿ, ವಿಸ್ತರಿಸಿ, ಪಕ್ವ ಮಾಡಿಕೊಂಡು, ಅದನ್ನು ಕಾರ್ಯರೂಪಕ್ಕೆ ತರುವವರೆಗೂ ಆತ ವಿಶ್ರಮಿಸುತ್ತಿರಲಿಲ್ಲ. ಇದು ಒಬ್ಬ ಜನನಾಯಕನಿಗೆ ಅತ್ಯಗತ್ಯವಾಗಿ ಬೇಕಾದ ಗುಣ ಎಂದು ಮಾರ್ಕೆಜ್ ಹೇಳುತ್ತಾನೆ.

ಅದ್ಭುತ ಸ್ಮರಣ ಶಕ್ತಿ: ಫಿಡೆಲ್​ಗೆ ಓದಿನ ವಿಸ್ತಾರದ ಜೊತೆಗೆ ಅಸಾಧ್ಯ ನೆನಪಿನ ಶಕ್ತಿಯೂ ಇತ್ತು. ಒಮ್ಮೆ ಓದಿದ್ದನ್ನು ಆತ ಅಲ್ಲಿಯೇ ಮರೆಯುತ್ತಿರಲಿಲ್ಲ. ಆ ಓದು ಇನ್ನು ಯಾವಾಗಲೋ, ಯಾವ ಸಮಸ್ಯೆಗೋ ನೆರವಿಗೆ ಬಂದು ಅನುಕೂಲವಾಗುತ್ತಿತ್ತು. ಫಿಡೆಲ್ ಮನರಂಜನೆಗಾಗಿ ಓದುತ್ತಿರಲಿಲ್ಲ. ಆತನಿಗೆ ಓದು ಬದುಕಿನ ಅನಿವಾರ್ಯ ಭಾಗವಾಗಿತ್ತು. ಪ್ರತಿದಿನ ಎಲ್ಲ ಪತ್ರಿಕೆಗಳನ್ನೂ ಸ್ವತಃ ಓದಿ ತನಗೆ ಅಗತ್ಯವಾದ ಸಂಗತಿಗಳನ್ನು ಗುರುತು ಮಾಡಿಕೊಳ್ಳುತ್ತಿದ್ದ. ಆತನ ಕಾರಿನಲ್ಲಿ ಒಂದು ಸಣ್ಣ ದೀಪವಿದ್ದು ಅದು ಆತನ ಓದಿಗೆಂದೇ ಅಳವಡಿಸಲಾಗಿತ್ತು. ಓದು ಮಾತ್ರವಲ್ಲ, ಬರವಣಿಗೆಯಲ್ಲೂ ಆತನಿಗೆ ಆಸಕ್ತಿಯಿತ್ತು. ತನ್ನ ಭಾಷಣಕ್ಕೆ ಆತ ಮೊದಲೇ ಟಿಪ್ಪಣಿ ಗುರುತು ಮಾಡಿಕೊಳ್ಳುತ್ತಿದ್ದ. ಯಾವ ಪದ ಬಳಸಿದರೆ ಎಂತಹ ಪರಿಣಾಮ ಬೀರುತ್ತದೆ ಎಂದು ಹತ್ತು ಸಲ ಆಲೋಚಿಸಿ ಸರಿಯಾದ ಪದಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ. ಇಂತಹ ಸಂದರ್ಭದಲ್ಲಿ ಆತನ ವಿಸ್ತಾರ ಓದು ನೆರವಾಗುತ್ತಿತ್ತು. ನಿಘಂಟುಗಳ ನೆರವು ಪಡೆಯುತ್ತಿದ್ದ. ಗೆಳೆಯರ ಬಳಿ ಆ ಬಗ್ಗೆ ರ್ಚಚಿಸುತ್ತಿದ್ದ. ಒಬ್ಬ ಒಳ್ಳೆಯ ಕವಿಗಿರಬೇಕಾದ ಎಲ್ಲ ಲಕ್ಷಣಗಳೂ ಅವನಿಗಿದ್ದವು. ಹಾಗೆ ನೋಡಿದರೆ ಅವನಿಗೆ ಕವಿಯಾಗುವ ಹಂಬಲ ತೀವ್ರವಾಗಿತ್ತು.

ಫಿಡೆಲ್ ಕ್ಯಾಸ್ಟ್ರೊ ಬಗ್ಗೆ ಇಷ್ಟೆಲ್ಲ ಬರೆಯಲು ಕಾರಣವಿದೆ. ಒಬ್ಬ ಜನಪ್ರತಿನಿಧಿ ಹೇಗಿರಬಹುದು ಎಂಬುದಕ್ಕೆ ಫಿಡೆಲ್ ಬದುಕು ಅನೇಕ ಒಳನೋಟಗಳನ್ನು ನೀಡುತ್ತದೆ. ನಮ್ಮ ಜನನಾಯಕರೆನ್ನಿಸಿ ಕೊಂಡವರು ಫಿಡೆಲ್​ನನ್ನು ಅನುಸರಿಸಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಅವನ ಬಗ್ಗೆ ತಿಳಿದುಕೊಂಡರೆ ಅವರ ಸಾರ್ವಜನಿಕ ಬದುಕು ಅರ್ಥಪೂರ್ಣವಾಗಬಲ್ಲುದು. ಅವರ ಚಟುವಟಿಕೆಗಳಿಗೆ ಅಂತಃಕರಣದ ಸ್ಪರ್ಶ ಒದಗಬಹುದು. ಹಿಂಬಾಲಕರ ಜಯಘೊಷದಲ್ಲಿ ಕೊಚ್ಚಿಹೋಗುವ ಮೊದಲು ಹೀಗೆ ಸಂವಾದ, ಓದು, ಅಧ್ಯಯನ, ಚಿಂತನ ಇವುಗಳತ್ತ ನಮ್ಮ ಜನನಾಯಕರು ಗಮನ ಹರಿಸಿದರೆ ಜನಸಾಮಾನ್ಯರ ಸಮಸ್ಯೆಗಳ ಅರಿವಾಗುತ್ತದೆ. ಅಧಿಕಾರ ಜನಸೇವೆ ಮಾಡಲು ಇರುವ ಅದ್ಭುತ ಅವಕಾಶ ಎಂಬ ಸತ್ಯದ ದರ್ಶನವಾಗುತ್ತದೆ. ಬದುಕಿನ ಗುರಿ ಅಧಿಕಾರ ಪಡೆಯುವುದು ಮಾತ್ರವಲ್ಲ, ಅದನ್ನು ಸಾರ್ಥಕ ಪಡಿಸಿಕೊಳ್ಳುವುದು ಹೇಗೆಂಬ ತಿಳಿವಳಿಕೆ ಮೂಡುತ್ತದೆ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *