ಜನತೆ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ತೋರಲಿ

2 Min Read
Abhinava Sanganabasava Shivacharya Sri, Jatre, Kumbh Mela, Basavanbagewadi,
ಮನಗೂಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆದ ಕುಂಭೋತ್ಸವದಲ್ಲಿ ಕುಂಭಮೇಳ ಗಮನ ಸೆಳೆಯಿತು.

ಬಸವನಬಾಗೇವಾಡಿ: ಮಾನವ ಆಧುನಿಕ ಅಲೆಯಲ್ಲಿ ಸಿಲುಕಿ ನೆಮ್ಮದಿಯಿಲ್ಲದೆ ಗೊಂದಲಕ್ಕೀಡಾಗಿದ್ದಾನೆ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಶ್ರೀಗಳು ಹೇಳಿದರು.

ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದ ಲಿಂ.ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ 41ನೇ ಪುಣ್ಯಸ್ಮರಣೋತ್ಸವ ಹಾಗೂ 2008 ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಡಾ.ಮಹಾಂತ ಶಿವಾಚಾರ್ಯರ 11ನೇ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕುಂಭ ಮೆರವಣಿಗೆ, ಉಭಯ ಶ್ರೀಗಳ ರಜತ ಮೂರ್ತಿಗಳ ಪಲ್ಲಕ್ಕಿ ಉತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ, ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ತಂದೆ-ತಾಯಿ ಮತ್ತು ಗುರು-ಹಿರಿಯರ ಮೇಲೆ ಪ್ರೀತಿ ಗೌರವ ಕಮ್ಮಿಯಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಕೂಡ ಹೆಚ್ಚಿನ ಆಸಕ್ತಿ ತೋರಿಸುವುದು ಮರೀಚಿಕೆಯಾಗುತ್ತಿದೆ. ಪ್ರತಿಯೊಬ್ಬ ತಾನು ಐಶ್ವರ್ಯವಂತನಾಗಬೇಕು ಎಂಬ ಭ್ರಮೆಯಲ್ಲಿ ಸದಾ ಓಡಾಡುವಂತಾಗಿರುವುದು ವಿಪರ‌್ಯಾಸ ಎಂದು ಹೇಳಿದರು.

ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ವೀರಶೈವ ಲಿಂಗಾಯತ ಮಠಮಾನ್ಯಗಳು ರಾಜ್ಯದಲ್ಲಿ ಅನೇಕ ಬಡ ಕುಟುಂಬದ ಮಕ್ಕಳಿಗೆ ಆಶ್ರಯ, ಅಕ್ಷರ, ದಾಸೋಹ ಹಾಗೂ ಧಾರ್ಮಿಕ ಪರಿಕಲ್ಪನೆಯನ್ನು ನೀಡುವ ಮೂಲಕ ಅಜ್ಞಾನದಿಂದ ಸುಜ್ಞಾನದತ್ತ ಸಾಗಿಸುವ ಕಾರ್ಯ ಸದಾ ಸ್ಮರಣೀಯ ಎಂದರು.

ಮನಗೂಳಿ ಶ್ರೀಮಠದ ಹಿಂದಿನ ಪೀಠಾಧಿಪತಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಭಕ್ತರಲ್ಲಿ ಜ್ಞಾನದ ಅರಿವು ಮೂಡಿಸುತ್ತಿದ್ದರು. ಆ ಪರಂಪರೆಯನ್ನು ಇಂದಿನ ಶ್ರೀಮಠದ ಸಂಗನಬಸವ ಶ್ರೀಗಳು ಕೂಡ ಮುಂದುವರಿಸಿರುವುದು ಸ್ಮರಣೀಯ ಎಂದು ಹೇಳಿದರು.

ಉಭಯ ಶ್ರೀಗಳ ಗದ್ದುಗೆಗಳಿಗೆ ಮಹಾರುದ್ರಾಭೀಷೇಕ ಮಾಡಲಾಯಿತು. ಉಭಯ ಶ್ರೀಗಳ ರಜತ ಮೂರ್ತಿಗಳ ಪಲ್ಲಕ್ಕಿ ಉತ್ಸವ ಶ್ರೀಮಠದಿಂದ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವದೊಂದಿಗೆ ಸಂಚರಿಸಿ ಮರಳಿ ಶ್ರೀಮಠಕ್ಕೆ ಆಗಮಿಸಿತು. ಕುಂಭೋತ್ಸವದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು.

See also  ಮತಾಂತರ ನಿಷೇಧ ಕಾನೂನು ಹಿಂಪಡೆದರೆ ಹೋರಾಟ

ಸಿಂದಗಿಯ ಹಿರೇಮಠದ ರಾಜಯೋಗಿ ವೀರರಾಜೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಸೋಮಪುರ, ನಿಂಗನಗೌಡ ಬಿರಾದಾರ, ಶಿವನಗೌಡ ಗುಜಗೊಂಡ, ಗಂಗಪ್ಪ ಕುಂಬಾರ, ಮಹಾಂತಪ್ಪಗೌಡ ಗುಜಗೊಂಡ, ಎಚ್.ಎಂ.ಸಾರವಾಡ, ರವಿಗೌಡ ಪಾಟೀಲ, ವಿರುಪಾಕ್ಷಿ ತಪಶೆಟ್ಟಿ ಇತರರಿದ್ದರು. ಕುಂಭೋತ್ಸವದಲ್ಲಿ ಮಹಾದೇವಿ ಕಸವಾಪುರ, ರೂಪಾ ಮಠ, ಲಕ್ಷ್ಮೀ ಬಿರಾದಾರ, ಶಶಿಕಲಾ ಬೂದಿಹಾಳ, ಕಸ್ತೂರಿ ಚಿಮ್ಮಲಗಿ, ಶಾರದಾ ಲೇಸಪ್ಪಗೊಳ, ಜ್ಯೋತಿ ಹಿಟ್ನಳಿ, ಶಂಕ್ರಮ್ಮ ಬಿರಾದಾರ, ಪ್ರಿಯಾ ಹಂಚನಾಳ ಇತರರಿದ್ದರು.

Share This Article