ಜನತಾ ಪಿಎಲ್​ಡಿ ಬ್ಯಾಂಕ್ ಚುನಾವಣೆ 19 ರಂದು

ಭಟ್ಕಳ: ತಾಲೂಕಿನ ಜನತಾ ಕೋ-ಆಫ್ ಸೊಸೈಟಿ ಮತ್ತು ಪಿಎಲ್​ಡಿ ಬ್ಯಾಂಕ್​ಗಳ ಚುನಾವಣೆ ಆ.19 ರಂದು ನಡೆಯಲಿದ್ದು, ನೂಕಾಟ ಗೌಜು ಗದ್ದಲದ ನಡುವೆ ಮೊದಲ ದಿನ ದಾಖಲೆ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ. ವಿಧಾನಸಭೆಯ ಚುನಾವಣೆಯ ಬಳಿಕ ಬಿಜೆಪಿ ವಿಎಸ್​ಎಸ್ ಬ್ಯಾಂಕಿನ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿತ್ತು. ಆದರೆ, 6 ಸ್ಥಾನಗಳಲ್ಲಿ ಹೀನಾಯ ಸೋಲು ಕಂಡ ಬಳಿಕ ಗೇಮ್ ಪ್ಲಾನ್ ಬದಲಿಸಿದೆ. ಜನತಾ ಬ್ಯಾಂಕಿನಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯರು ಅಧ್ಯಕ್ಷರಾಗಿದ್ದರೆ, ಪಿಎಲ್​ಡಿ ಬ್ಯಾಂಕಿನಲ್ಲಿ ಶಾಸಕ ಸುನೀಲ ನಾಯ್ಕ ಮಾಜಿ ಅಧ್ಯಕ್ಷರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಈ ಚುನಾವಣೆಯನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿವೆ. ಅಧಿಕಾರ ಪಡೆಯಲು ಎರಡು ಪಕ್ಷಗಳು ಪಣತೊಟ್ಟಿವೆ.

ಶನಿವಾರ ನಾಮಪತ್ರ ಸಲ್ಲಿಸಲು ಮೊದಲ ದಿನವಾಗಿದ್ದರಿಂದ ಬೆಳಗ್ಗೆ 7 ಗಂಟೆಯಿಂದಲೇ ಬ್ಯಾಂಕಿನ ಆವರಣದಲ್ಲಿ ಉಮೇದುವಾರರೊಂದಿಗೆ ನೂರಾರು ಸಂಖ್ಯೆಯ ಜನರು ಸೇರಿದ್ದರು. ಮೊದಲು ನಾಮ ಪತ್ರ ಸಲ್ಲಿಸಿದರೆ ಬೇಕಾಗಿರುವ ಚಿಹ್ನೆ ಪಡೆಯಲು ಅವಕಾಶ ಇದೆ. 11 ಗಂಟೆಗೆ ನಾಮಪತ್ರ ಸಲ್ಲಿಸಲು ಸಮಯ ಆರಂಭವಾಗುತ್ತಿದ್ದಂತೆ ಮೊದಲು ನಾಮ ಪತ್ರ ಸಲ್ಲಿಸಲು ಸದಸ್ಯರು ಮುಗಿಬಿದ್ದಿದ್ದರು. ಬ್ಯಾಂಕಿನ ಜಿ.ಎಂ ಸದಸ್ಯರನ್ನು ವಿನಂತಿಸಿ ಸರದಿಯ ಸಾಲಿನಲ್ಲಿ ಬರುವಂತೆ ಮನವೊಲಿಸಿದ್ದರಿಂದ ಪರಿಸ್ಥಿತಿ ಶಾಂತಗೊಂಡಿತು.

ಮೊದಲ ದಿನ ನಾಮ ಪತ್ರ ಸಲ್ಲಿಸಿದ ಘಟನಾನುಘಟಿಗಳು

ಶಾಸಕ ಸುನೀಲ ನಾಯ್ಕ, ಕಾಸ್ಕಾರ್ಡ್ ಬ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ, ಬ್ಯಾಂಕಿನ ಅಧ್ಯಕ್ಷ ಮಹೇಶ ನಾಯ್ಕ, ಮಾಜಿ ಅಧ್ಯಕ್ಷ ದೇವಿದಾಸ ನಾಯ್ಕ, ಬ್ಲಾಕ್ ಕಾಂಗ್ರೆಸ್ ಮುಖಂಡ ವಿಠಲ್ ನಾಯ್ಕ, ಈರಪ್ಪ ಗರ್ಡಿಕರ್ ಸೇರಿ ಒಟ್ಟು 44 ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ.