ಜಡೆಯ ಅಮರ ಕಥೆ

| ಚಿತ್ರ-ಲೇಖನ: ಸುನೀಲ್ ಬಾರ್ಕೂರ್

ಬನವಾಸಿ… ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು ಕನ್ನಡದ ಪ್ರಥಮ ರಾಜವಂಶವಾದ ಕದಂಬರು. ಆ ವಂಶ ಕನ್ನಡವನ್ನು ಕಟ್ಟಿ ಬೆಳೆಸಿದ ಕಥೆ ಕೇಳಿ ರೋಮಾಂಚನಗೊಳ್ಳುವ ನಾವೆಲ್ಲರೂ ಅಭಿಮಾನಪಡುವ ಇನ್ನೊಂದು ಕಾರಣವಿದೆ. ಮೊದಲನೆಯದು ಭಾಷೆಯ, ಈ ನೆಲದ ಅಸ್ಮಿತೆಯ ಕಥೆಯಾಗಿದ್ದರೆ, ಇನ್ನೊಂದು ಅಪ್ಪಟ ಪರಿಸರ ಪ್ರೇಮದ ಕಥಾನಕ.

ಕನ್ನಡದ ಮೊದಲ ರಾಜಧಾನಿ ಬನವಾಸಿಯಿಂದ ಏಳು ಕಿ.ಮೀ. ದೂರದಲ್ಲಿದೆ ಜಡೆ ಎಂಬ ಪುಟ್ಟ ಗ್ರಾಮ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ 20 ಕಿ.ಮೀ. ಜಡೆಯ ದಾರಿಯಲ್ಲಿ ಹೊರಳಿ ತುಸು ಮುಂದೆ ಸಾಗುತ್ತಿದ್ದಂತೆಯೇ ಎಡ ಬಲದುದ್ದಕ್ಕೂ ಹೊಲಗಳು ಇದೊಂದು ಪಕ್ಕಾ ರೈತಾಪಿ ಜನರ ಪ್ರದೇಶವೆಂಬುದನ್ನು ಸಾರಿ ಹೇಳುತ್ತವೆ. ಇನ್ನೇನು ಜಡೆಗ್ರಾಮ ಆರಂಭವಾಗಲಿದೆ ಎನ್ನುವಾಗಲೇ ಬಲಕ್ಕೆ ಸಿಗುವುದು ನಿಂಗಪ್ಪ ಎಂಬುವರ ಹೊಲ. ಹೊಲದತ್ತ ನೋಡುತ್ತಲೇ ನಿಮಗೆ ಧುತ್ತನೆ ಎದುರಾಗಿ ತನ್ನ ವಿರಾಟದರ್ಶನ ನೀಡುವ ಈ ಪಿಳಲಿ ವೃಕ್ಷ.

‘ಈ ಮರಾ ನೋಡಾಕ ರಗಡ ಜನಾ ಬರ್ತಾರ. ಬಂದವ್ರ ಫೋಟೊ ಹೊಡ್ಕೋಳ್ಳಾ್ತರ.. ಸ್ವಲ್ಪ ಮಂದಿ ಅಂತೂ ಊಟಾ ಕಟ್ಕೊಂಡ ಬರ್ತಾರ… ಅಲ್ಲೆ ಮಗ್ಗಾ್ಲಗ ಕುಂತು ಊಟಾ ಮಾಡಿ ಹಾಂಗೆ ಸ್ವಲ್ಪ ಹೊತ್ತು ಮಲ್ಕೊಂಡು ಹೋಗ್ತಾರ. ನಾನೂ ಸಣ್ಯಾವಿದ್ದಾಗ್ಲಿಂದ ನೋಡಾಕತ್ತಿನಿ… ಈ ಮರಾ ಹಂಗೆ ಮುಂದಕ ಬರಾಕತ್ತೈತಿ. ಮೊದಲ ಇದರ ಮ್ಯಾಗ ಟೊಪ್ಪಿ ಇಟ್ಟಂಗ ಇನ್ನೊಂದು ಮರ ಇತ್ತ್ರಿ… ಭಾಳ ಛಲೊ ಕಾಣ್ತಿತ್ರಿ.. ಈಗ ಎರಡು ವರ್ಷ ಆತು… ಬಿದ್ದೋಯ್ತ್ರಿ. ಅಲ್ಲೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಶಿವರುದ್ರಪ್ಪ ಹೇಳುತ್ತಾ ಮಾತು ಮುಂದುವರೆಸಿದ ನಂಗ ಐವತ್ತಾತು.. ನನ್ನಪ್ಪ ಸಾಯಾಕ ಬಂದಾನ… ನಮ್ಮ ಮುತ್ತಜ್ಜನ ಕಾಲದಿಂದ ಈ ಮರಾ ಐತಿ ಅಂದ್ರ ಸುಮಾರು 250 ವರ್ಷ ಇರಬಹುದ್ರಿ.. ಈ ಮರದಾಗ ಬೀರಪ್ಪ ದ್ಯಾವ್ರು ಇದಾರ್ರಿ.. ಹಾಂಗಾಗಿ ಈ ಮರಾ ಯಾರೂ ಮುಟ್ಟಾಂಗಿಲ್ರಿ.. ಇಲ್ಲಿ ರೈತ್ರು ಬೆಳಿ ಕಟಾವ ಮಾಡಿದ ಮ್ಯಾಲೆ ಈ ದ್ಯಾವ್ರಿಗೆ ಪೂಜೆ ಮಾಡಿ ತೊಕೊಂಡ ಹೊಕ್ಯಾರ್ರಿ. ಆಗ ನೋಡ್ಬೇಕ್ರಿ ಇಲ್ಲಿ ಜಾತ್ರೆ ಇದ್ದಂಗ ಜನಾ ಇರ್ತಾರ್ರಿ…’

ಆ ರೈತ ಇಷ್ಟು ಹೇಳುವ ಹೊತ್ತಿಗೆ ಮರ ನೋಡಲು ಹೋದ ನಮಗೆ ಈ ಮರದ ಜತೆಗೆ ಅಲ್ಲಿನ ಜನರ ಭಾವನಾತ್ಮಕ ಸಂಬಂಧದ ಚಿತ್ರಣವೂ ಸಿಕ್ಕಿತ್ತು. ಹತ್ತಿರ ಹೋಗಿ ನಾವೂ ಒಂದಿಷ್ಟು ಫೋಟೋ ಕ್ಲಿಕ್ಕಿಸುತ್ತಿದ್ದಾಗ ಅಲ್ಲೇ ಕಂಡ ಬಾಲಕ ಭುವನೇಶ ಹರ್ಷದಲ್ಲೇ ಹೇಳಿದ. ‘ಬರ್ರೀ ಸಾಹೇಬ್ರ.. ಒಳಗೆ ತೋರ್ಸಿ್ತೕನಿ. ಚಪ್ಪಲಿ ಹೊರ್ಗಿಡ್ರಿ. ಇಲ್ಲಿ ಒಳಗೆ ದ್ಯಾವ್ರು ಅದಾರ್ರಿ. ಮೊದ್ಲು ಅಲ್ಲಿ ಹೋಗೋಣ್ರಿ .. ಸಾಲಿಗೆ ಪರೀಕ್ಷೆ ಬರಿಬೇಕಾದ್ರ ಇಲ್ಲೇ ಬಂದು ಕೇಳ್ಕೊಂಡು ಹೋಗ್ತಿವ್ರಿ.. ಸೀದಾ ಅಲ್ಲಿಗೆ ಕರೆದುಕೊಂಡು ಹೋದ. ದೇವರ ಕಲ್ಲಿಗೆ ನಮಸ್ಕರಿಸಿ ಅಲ್ಲಿನ ಕುಂಕುಮವನ್ನು ಹಣೆಗೆ ಹಚ್ಚಿಕೊಂಡು ನಮಗೂ ಬೊಟ್ಟು ಇಟ್ಟು ಮುನ್ನಡೆದ. ಮರದ ಒಳಗಿನ ಲೋಕವೇ ಬೇರೆ ವಿವಿಧ ರೀತಿಯ ಹಕ್ಕಿಗಳು ಅಲ್ಲಿ ಮನೆ ಮಾಡಿ ಚೀಂವ್​ಗುಡುತ್ತಿದ್ದವು. ಒಂಚೂರು ಸೂರ್ಯ ಕಿರಣವೂ ಬೀಳದ ಆ ಪ್ರದೇಶವನ್ನು ಸುತ್ತಲು ನಮಗೆ ಬರೋಬ್ಬರಿ ಅರ್ಧ ಗಂಟೆ ಬೇಕಾಯಿತು.

ಅಲ್ಲೇ ಮರದಡಿಯಲ್ಲಿ ಸ್ವಲ್ಪ ವಿರಮಿಸಿ ನಂತರ ದೂರದಿಂದ ಮರದ ವಿಸ್ತಾರವನ್ನು ಸೆರೆಹಿಡಿಯಲು ಕ್ಲಿಕ್ಕಿಸುತ್ತಿದ್ದ ನನಗೆ ಆ ಬೃಹತ್ ಮರದ ಕೆಳಗೆ ತಮ್ಮಪಾಡಿಗೆ ತಮ್ಮ ಕಾಯಕ ಮುಂದುವರೆಸುತ್ತಿದ್ದ ರೈತರು ಸಹ ದೊಡ್ಡವರಾಗಿಯೇ ಕಂಡರು.

ಎರಡೆಕರೆ ವಿಸ್ತಾರದ ಭಾರಿ ಮರ

ಸುಮಾರು 400 ವರ್ಷದ ಈ ಪಿಳಲಿ ವೃಕ್ಷವು ಆರು ಮೀಟರ್ ಉದ್ದವಿದ್ದು ಅಂದಾಜು ಎರಡು ಎಕರೆ ವಿಸ್ತಾರದಲ್ಲಿ ಚಾಚಿಕೊಂಡಿದೆ. ಪ್ರತಿವರ್ಷವೂ ಬೆಳೆಯುತ್ತಲೇ ಇದೆ ಈ ಮರ. ನಿಂಗಪ್ಪ ಎನ್ನುವ ರೈತರ ಜಾಗದಲ್ಲಿ ಸ್ಥಿತವಾಗಿರುವ ಈ ಮರದ ಬಗ್ಗೆ ಅಲ್ಲಿನ ಜನರಲ್ಲಿ ಬಹಳಷ್ಟು ನಂಬಿಕೆಗಳು ಮನೆಮಾಡಿವೆ. ಮೊದಲೊಮ್ಮೆ ನಿಂಗಪ್ಪನು ಈ ಮರದ ಕೊಂಬೆಗಳನ್ನು ಕಡಿಯಲು ಯತ್ನಿಸಿದ ಮರುಕ್ಷಣವೇ ಅವನು ಸಾಕಿದ ನೂರಾರು ಕುರಿಹಿಂಡು ನಿಗೂಢ ಕಾಯಿಲೆಗೆ ತುತ್ತಾದವು ಎಂಬ ಕಥೆಯೂ ಇದೆ. ಹೀಗಾಗಿ ಈ ಮರದಲ್ಲಿ ದೈವಿಶಕ್ತಿಯಿದೆ ಎಂದು ಸ್ಥಳೀಯರು ನಂಬುತ್ತಾರೆ. ಈ ಮರದ ರಕ್ಷಣೆಗಾಗಿ ಈ ಜನ ಟೊಂಕಕಟ್ಟಿ ನಿಂತಿದ್ದಾರೆ. ಹೆಚ್ಚು ಪ್ರಚಾರಕ್ಕೆ ಬಾರದ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಪ್ರತಿವರ್ಷವೂ ಈ ಮರವು ಬೆಳೆಯುತ್ತಲೇ ಇರುವುದರಿಂದ ಸರ್ಕಾರವೇ ಈ ಜಾಗವನ್ನು ತೆಗೆದುಕೊಂಡು ಬಡರೈತನಿಗೆ ಪರಿಹಾರ ಒದಗಿಸಬೇಕು ಎಂಬುದು ಕೆಲವರ ವಾದ. ಸರ್ಕಾರವು ಈ ವೃಕ್ಷವನ್ನು ರಾಷ್ಟ್ರೀಯಮಟ್ಟದಲ್ಲಿ ಮಹಾವೃಕ್ಷವೆಂದು ಘೊಷಿಸಿದೆ. ಪಾರಂಪರಿಕ ವೃಕ್ಷವೆಂಬ ಬಿರುದನ್ನೂ ಗಳಿಸಿರುವ ಈ ವೃಕ್ಷಕ್ಕೆ ಯಾವುದೇ ರೀತಿಯ ಹಾನಿಯುಂಟುಮಾಡುವುದನ್ನು ಕಾನೂನಿನರೀತ್ಯ ನಿಷೇಧಿಸಲಾಗಿದೆ.