ಜಗಳ ಬಿಡಿಸಿದ ಶಾಸಕರು

ಕುಮಟಾ: ಎಪಿಎಂಸಿ ಆವಾರದಲ್ಲಿನ ವಾರದ ಸಂತೆ ಕಟ್ಟೆಯು ವ್ಯಾಪಾರಸ್ಥರ ನಡುವೆ ಜಗಳದ ಕಟ್ಟೆಯಂತಾಗಿ, ಸಮಸ್ಯೆ ಬಗೆಹರಿಸಲು ಶಾಸಕ ದಿನಕರ ಶೆಟ್ಟಿ ಮಧ್ಯ ಪ್ರವೇಶಿಸಿದ ಘಟನೆ ಬುಧವಾರ ನಡೆಯಿತು.

ಎಪಿಎಂಸಿಯೊಳಗಿನ ನೂತನ ಸಂತೆಕಟ್ಟೆಯಲ್ಲಿ ಆರಂಭದಿಂದಲೂ ಹೊರಗಿನ ವ್ಯಾಪಾರಸ್ಥರು ಹಾಗೂ ಗೋಕರ್ಣ ಭಾಗದ ತರಕಾರಿ ಮಾರಾಟಗಾರರ ನಡುವೆ ಜಾಗಕ್ಕಾಗಿ ತಿಕ್ಕಾಟ ನಡೆದಿತ್ತು. ಇನ್ನೊಂದೆಡೆ ಜಾಗದ ಶುಲ್ಕ ಜಾಸ್ತಿಯಾಯಿತೆಂದು ಎಪಿಎಂಸಿ ಆಡಳಿತದೊಟ್ಟಿಗೂ ಗೋಕರ್ಣ ಭಾಗದ ತರಕಾರಿ ಮಾರಾಟಗಾರ ಮಹಿಳೆಯರ ತಕರಾರು ಇತ್ತು. ಸಂತೆಯನ್ನು ವಾರದಿಂದ ವಾರಕ್ಕೆ ಸಮರ್ಪಕಗೊಳಿಸಿದ ಎಪಿಎಂಸಿ, ಸ್ಥಳೀಯರು ಹಾಗೂ ಗೋಕರ್ಣ ಭಾಗದ ಮಹಿಳೆಯರಿಗೆ ಆದ್ಯತೆ ಮೇರೆಗೆ ಜಾಗ ನಿಗದಿಪಡಿಸಿ ಸಮಸ್ಯೆ ಬಗೆಹರಿಸಿತ್ತು.

ಆದರೆ, ಬುಧವಾರದ ಸಂತೆಯಲ್ಲಿ ಬೆಳಗ್ಗೆಯಿಂದ ಪುನಃ ಜಾಗಕ್ಕಾಗಿ ಜಗಳ ಶುರುವಾಗಿದೆ. ಎಪಿಎಂಸಿ ಕೊಟ್ಟ ಜಾಗದಲ್ಲಿ ವ್ಯಾಪಾರ ಮಾಡದ ಗೋಕರ್ಣ ಭಾಗದ ಮಹಿಳೆಯರು, ಎಲ್ಲೆಂದರಲ್ಲಿ ಕುಳಿತು ತರಕಾರಿ ವ್ಯಾಪಾರಕ್ಕೆ ಮುಂದಾದರು. ಆಗ ಹೊರಗಿನ ಜಿಲ್ಲೆಯ ಕಾಯಂ ವ್ಯಾಪಾರಸ್ಥರು ಇದಕ್ಕೆ ತಕರಾರು ಮಾಡಿದರು. ಕೆಲವೆಡೆ ಸಂತೆಕಟ್ಟೆಯ ಮುಂದಿನ ಪಾದಚಾರಿ ಜಾಗದಲ್ಲೂ ತರಕಾರಿ ರಾಶಿ ಹಾಕಿ ಗೋಕರ್ಣದ ಮಹಿಳೆಯರು ಮಾರಾಟಕ್ಕೆ ಮುಂದಾದರು. ಸಂತೆಕಟ್ಟೆಯೊಳಗೆ ಎಪಿಎಂಸಿಯವರು ಕೊಟ್ಟ ಜಾಗದಲ್ಲಿ ವ್ಯಾಪಾರ ಕಡಿಮೆ. ಸಂತೆಕಟ್ಟೆಗಿಂತ ಎಪಿಎಂಸಿಯೊಳಗಿನ ರಸ್ತೆ ಬದಿಯಲ್ಲೇ ಚೆನ್ನಾಗಿ ವ್ಯಾಪಾರವಾಗುತ್ತದೆ. ನಮಗೆ ಸಂತೆಕಟ್ಟೆಯೇ ಬೇಡ, ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುತ್ತೇವೆ ಎಂದು ಕೆಲವರು ರಸ್ತೆ ಬದಿ ತರಕಾರಿ ರಾಶಿ ಹಾಕಿದರು. ಇದರಿಂದ ಗೊಂದಲ ಉಂಟಾಗಿ ಜಗಳ ತಾರಕಕ್ಕೇರಿತು.

ಬಳಿಕ ಶಾಸಕ ದಿನಕರ ಶೆಟ್ಟಿ ಆಗಮಿಸಿ ಸಂತೆಯ ಪರಿಸ್ಥಿತಿ ಅವಲೋಕಿಸಿದರು. ವ್ಯಾಪಾರಸ್ಥರೊಟ್ಟಿಗೆ ಮಾತುಕತೆ ನಡೆಸಿದರು. ಎಪಿಎಂಸಿ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಿರುವುದನ್ನು ನೋಡಿಯೂ ಸುಮ್ಮನಿದ್ದ ಪೊಲೀಸರನ್ನು ತರಾಟೆ ತೆಗೆದುಕೊಂಡರು. ಸಂತೆಕಟ್ಟೆಯಲ್ಲಿ ಶಿಸ್ತು ಕಾಯ್ದುಕೊಳ್ಳಬೇಕು. ಮಾರಾಟಗಾರರ ಅನುಕೂಲದ ಜತೆಗೆ ಇಲ್ಲಿ ಗ್ರಾಹಕರ ಅನುಕೂಲವೂ ಮುಖ್ಯ. ಸ್ಥಳೀಯ ಮಾರಾಟಗಾರರಿಗೆ ಸಂತೆಯಲ್ಲಿ ಆದ್ಯತೆ ಕೊಡಲಾಗಿದೆ. ಏನೇ ಇದ್ದರೂ ಸಂತೆಕಟ್ಟೆಯೊಳಗೇ ತರಕಾರಿ ಮಾರಾಟ ಮಾಡಬೇಕು. ರಸ್ತೆ ಬದಿ ತರುವಂತಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದರು. ಬಳಿಕ ರಸ್ತೆ ಬದಿ ತರಕಾರಿ ವ್ಯಾಪಾರ ನಡೆಸುತ್ತಿದ್ದವರನ್ನು ಕರೆಸಿ ಸಂತೆಕಟ್ಟೆಯೊಳಗೇ ಅವಕಾಶ ಮಾಡಿಕೊಡಲಾಯಿತು.

ಸ್ಥಳೀಯ ವ್ಯಾಪಾರಸ್ಥರಿಗೆ ಬೆಂಬಲ…

ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಇತರರು ಬಂದು ಸ್ಥಳೀಯ ಮಾರಾಟಗಾರರಿಗೆ ಬೆಂಬಲವಾಗಿ ನಿಂತರು. ಸಂತೆಯ ಗೊಂದಲ ವಿಪರೀತವಾದಾಗ ಎಪಿಎಂಸಿ ಅಧ್ಯಕ್ಷ ಧೀರೂ ಶಾನಭಾಗ, ಪೊಲೀಸರ ಸಹಾಯದಿಂದ ಪರಿಸ್ಥಿತಿ ಸರಿಪಡಿಸುವ ಪ್ರಯತ್ನ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಸುರೇಶ ಆಗಮಿಸಿ, ಇಲ್ಲಿ ಸಾರ್ವಜನಿಕ ರಸ್ತೆ ಬದಿ ತರಕಾರಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಹೇಳಿದರು.