ಜಗನ್ಮೋಹಿನಿಗೆ ಸ್ವೀಟ್ 66!

ಸಿನಿಮಾ ಕ್ಷೇತ್ರದ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಇನ್ನುಮುಂದೆ ಪ್ರತಿವಾರ ವಿಜಯವಾಣಿಗೆ ಬರೆಯಲಿದ್ದಾರೆ. ಚಿತ್ರರಂಗದ ಕುರಿತ ಅನೇಕ ಕುತೂಹಲಕಾರಿ ಸಂಗತಿ ಹಾಗೂ ಮಹತ್ವಪೂರ್ಣ ಮಾಹಿತಿಗಳ ಮೇಲೆ ಅವರು ಅಂಕಣ ರೂಪದಲ್ಲಿ ಬೆಳಕು ಚೆಲ್ಲಲಿದ್ದಾರೆ. ಅವುಗಳೆಲ್ಲ ‘ಬೆಳ್ಳಿತೆರೆಯ ಬಂಗಾರದ ಗೆರೆ’ ಶೀರ್ಷಿಕೆಯಡಿ ಪ್ರತಿ ಶುಕ್ರವಾರ ಸಿನಿವಾಣಿಯಲ್ಲಿ ಪ್ರಕಟವಾಗಲಿವೆ. ಆ ಅಂಕಣದ ಪ್ರಪ್ರಥಮ ಕಂತು ಇಂದಿನ ಸಿನಿವಾಣಿಯಲ್ಲಿ..

ಇದು ಕಥೆಯಲ್ಲ, ದಂತಕಥೆಯೂ ಅಲ್ಲ. ಚಿತ್ರಕಥೆಯಂತೂ ಅಲ್ಲವೇ ಅಲ್ಲ. 66 ವರ್ಷಗಳ ಹಿಂದೆ 25 ವಾರಗಳ ಕಾಲ ಪ್ರದರ್ಶಿತವಾಗಿ ದಾಖಲೆ ನಿರ್ವಿುಸಿದ ಮಾಯಾ ಮೋಹಿನಿಯ ಕಥೆ! ಚಿತ್ರಜಗತ್ತು ಕಂಡು ಕೇಳರಿಯದ ಸಾರ್ವಕಾಲಿಕ ದಾಖಲೆ ಬರೆದ ಈ ಚಿತ್ರದ ಹೆಸರು ‘ಜಗನ್ಮೋಹಿನಿ’. ‘ಜಗನ್ಮೋಹಿನಿ’ ಚಿತ್ರದ್ದು ಇದೊಂದೇ ದಾಖಲೆಯಲ್ಲ. ದಾವಣಗೆರೆಯಲ್ಲಿ ಈ ಚಿತ್ರವನ್ನು ಪ್ರತಿದಿನವೂ ನೋಡಿದ ಪ್ರೇಕ್ಷಕನೊಬ್ಬ ಹುಚ್ಚನಾದ ಘಟನೆಯೂ ದಾಖಲೆಯಲ್ಲಿದೆ. ಅದೇ ದಾವಣಗೆರೆಯ ಪ್ರೇಕ್ಷಕರು ‘ಜಗನ್ಮೋಹಿನಿ’ ಚಿತ್ರವನ್ನು ನೋಡುವ ಹುಚ್ಚಿನಿಂದ ತಮ್ಮ ಮನೆಯ ಹಸು, ಎಮ್ಮೆ, ಕೋಣ, ಕುರಿ, ಕೋಳಿಗಳನ್ನು ಮಾರಿದ ಪ್ರಸಂಗವೂ ನಡೆದಿದೆ!

ಒಟ್ಟಿನಲ್ಲಿ ಇಡಿಯ ಜನಜೀವನವನ್ನೇ ಅಲ್ಲೋಲ-ಕಲ್ಲೋಲ ಮಾಡಿದ ಈ ಚಿತ್ರವನ್ನು ಬ್ಯಾನ್ ಮಾಡಬೇಕೆಂದು ವ್ಯಕ್ತಿಯೊಬ್ಬ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿದ್ದು ಈಗ ಇತಿಹಾಸ. ಈ ಅರ್ಜಿಯನ್ನು ಸ್ವೀಕರಿಸಿದ ಕೋರ್ಟ್ ‘ಜಗನ್ಮೋಹಿನಿ’ ಚಿತ್ರಕ್ಕೆ ತಡೆಯಾಜ್ಞೆ ನೀಡಿ ಪ್ರದರ್ಶನವನ್ನು ನಿಲ್ಲಿಸಿದ ಘಟನೆಯೂ ನಡೆಯಿತು. ವಿವಾದ ಇತ್ಯರ್ಥವಾದ ಮೇಲೆ ಮತ್ತೆ ಈ ಚಿತ್ರ ಪ್ರದರ್ಶನಗೊಂಡಿತು.

ಇಷ್ಟೆಲ್ಲ ವಿವರಗಳ ನಂತರ ‘ಜಗನ್ಮೋಹಿನಿ’ ಚಿತ್ರದ ಪ್ರೊಡಕ್ಷನ್ ಕಡೆ ಬರುವುದಿದ್ದರೆ.. ಈ ಚಿತ್ರ ತಯಾರಾದದ್ದು 1951ರಲ್ಲಿ, ಅಂದರೆ 2017ಕ್ಕೆ ಭರ್ತಿ 66 ವರ್ಷ! ಕಪ್ಪು ಬಿಳುಪಿನಲ್ಲಿ ತಯಾರಾದ ಈ ಚಿತ್ರ ಜಾನಪದ ಕಥಾವಸ್ತು ಉಳ್ಳದ್ದು. 14,225 ಅಡಿ ಉದ್ದದ ಈ ಚಿತ್ರದ ನಿರ್ದೇಶಕರ ಹೆಸರು: ಡಿ. ಶಂಕರ್ ಸಿಂಗ್ ಮತ್ತು ಬಿ. ವಿಠಲಾಚಾರ್ಯರು. ‘ನಾಗಕನ್ನಿಕಾ’ ಎಂಬ ಚಿತ್ರದ ಅದ್ಭುತ ಯಶಸ್ಸಿನಿಂದ ಉತ್ತೇಜಿತರಾಗಿ ಈ ಇಬ್ಬರು ಪ್ರತಿಭಾವಂತರು ಜಂಟಿಯಾಗಿ ಕಥೆ ಬರೆದು ನಿರ್ದೇಶಿಸಿದ ಚಿತ್ರವಿದು. ‘ಮಹಾತ್ಮಾ ಪಿಕ್ಚರ್ಸ್’ ಲಾಂಛನದಲ್ಲಿ ತಯಾರಾದ ಈ ಚಿತ್ರದ ನಿರ್ದೇಶಕರಲ್ಲೊಬ್ಬರಾದ ಶಂಕರ ಸಿಂಗ್ ಬೇರೆ ಯಾರೂ ಅಲ್ಲ, ಹತ್ತಾರು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರ ತಂದೆ. ಈ ಚಿತ್ರದಲ್ಲಿ ನಟಿಸಿದ ಪ್ರತಿಮಾದೇವಿ, ಶಂಕರ್ ಸಿಂಗ್ ಅವರ ಪತ್ನಿ, ಅರ್ಥಾತ್ ರಾಜೇಂದ್ರ ಸಿಂಗ್ ಬಾಬು ಅವರ ತಾಯಿ.

ಒಂದು ಚಿತ್ರದ ಅದ್ಭುತ ಯಶಸ್ಸಿಗೆ ಆ ಚಿತ್ರದ ನಾಯಕಿಯ ಸೌಂದರ್ಯವೂ ಒಂದು ಕಾರಣ ಅಂದರೆ ನೀವು ನಂಬುತ್ತೀರಾ; ನಂಬಲೇಬೇಕು, ಏಕೆಂದರೆ ಈ ಚಿತ್ರದ ನಾಯಕಿ ಹರಿಣಿ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ದಂತದ ಬೊಂಬೆಯಾಗಿದ್ದವರು. ಇತರ ಪಾತ್ರವರ್ಗದಲ್ಲಿ ಮಹಾಬಲರಾವ್, ಶ್ರೀನಿವಾಸ ರಾವ್, ರಾಧಾಬಾಯಿ, ವೀರಭದ್ರಪ್ಪ, ಲಕ್ಷ್ಮಮ್ಮ, ಮರಿರಾವ್, ಈಶ್ವರಪ್ಪ, ಎಂ.ಎಸ್. ಸುಬ್ಬಣ್ಣ, ಸರೋಜಾ, ಪಟ್ಟಾಭಿ, ನರಸಯ್ಯ ಮೊದಲಾದವರಿದ್ದಾರೆ. ಜಿ.ದೊರೈ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರಕ್ಕಾಗಿ ಗೀತೆ ಮತ್ತು ಸಂಭಾಷಣೆ ಬರೆದವವರು ಕೆ.ಎಂ. ಹುಣಸೂರ್, ಇದು ಹುಣಸೂರು ಕೃಷ್ಣಮೂರ್ತಿಯವರ ಅಂದಿನ ಹೆಸರು.

ಮೇಕಪ್ ಕಲಾವಿದರ ಹೆಸರು: ಎಂ.ಎಸ್. ಸುಬ್ಬಣ್ಣ. ಇವರು ಬೇರೆ ಯಾರೂ ಅಲ್ಲ, ನಾಲ್ಕಾರು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ನಿರ್ದೇಶಕ ಎಂ.ಎಸ್. ರಾಜಶೇಖರ್ ಅವರ ತಂದೆ. ಮೈಸೂರು ಅರಮನೆ ವಾದ್ಯಗೋಷ್ಠಿಯ ಮೂಲಕ ಜನಪ್ರಿಯರಾಗಿದ್ದ ಪಿ. ಶಾಮಣ್ಣ ಎಂಬುವರು ಈ ಚಿತ್ರಕ್ಕಾಗಿ ಸಂಗೀತ ಸಂಯೋಜಿಸಿದ್ದಾರೆ. ಒಟ್ಟು 12 ಹಾಡುಗಳಿರುವ ಈ ಚಿತ್ರ ಗೆಲ್ಲಲೇಬೇಕಾದ ಒತ್ತಡದಿಂದಾಗಿ ಹಿಂದಿಯ ‘ಮಹಲ್’ ಚಿತ್ರದ ಹಾಡುಗಳನ್ನು ಅನುಕರಿಸಲಾಯಿತು. ಅದೃಷ್ಟವಶಾತ್ ‘ಮಹಲ್’ಚಿತ್ರದ ಬಿಡುಗಡೆ ತಡವಾದುದರಿಂದ ‘ಜಗನ್ಮೋಹಿನಿ’ ಚಿತ್ರದ ಹಾಡುಗಳನ್ನೇ ‘ಮಹಲ್’ ಚಿತ್ರದಲ್ಲಿ ಅನುಕರಣೆ ಮಾಡಲಾಯಿತೆಂದು ಜನ ಮಾತಾಡತೊಡಗಿದರು!

‘ಜಗನ್ಮೋಹಿನಿ’ ಚಿತ್ರದ ಚಿತ್ರೀಕರಣ ಬಹುತೇಕ ಹೊರಾಂಗಣದಲ್ಲೇ ನಡೆಯಿತು. ಮೇಕೆದಾಟುವಿನ ಸುಂದರ ಪರಿಸರವನ್ನು ಅಷ್ಟೇ ಸುಂದರವಾಗಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕ ಜಿ. ದೊರೈ. ಈ ದೊರೈ ಬೇರೆ ಯಾರೂ ಅಲ್ಲ, ನಂತರದ ದಿನಗಳಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ದೊರೈ ಭಗವಾನ್ ಜೋಡಿಯ ದೊರೆ! ಈ ಚಿತ್ರದ ಚಿತ್ರೀಕರಣ ನಡೆದಾಗ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರಿಗೆ ಕೇವಲ ಒಂದು ವರ್ಷ ವಯಸ್ಸು. ಈಗ ಇವರಿಗೆ 67 ವರ್ಷ! ಇವರ ತಾಯಿ, ‘ಜಗನ್ಮೋಹಿನಿ’ ಚಿತ್ರದ ಪಾತ್ರಧಾರಿ ಪ್ರತಿಮಾದೇವಿ ಹೇಳುವುದನ್ನು ಕೇಳಿ: ‘ನಾನು ಶಂಕರ್ ಸಿಂಗ್, ವಿಠಲಾಚಾರ್ಯ ಮತ್ತು ಸೌಂಡ್ ಇಂಜಿನಿಯರ್ ಅಯ್ಯಂಗಾರ್ ನಾಲ್ಕೂ ಜನ ಮೊದಲ ದಿನವೇ ಸ್ಥಳ ನೋಡಿ ಬರಲು ಹೋದೆವು. ರಾಜೇಂದ್ರ ಸಿಂಗ್ ಒಂದು ವರ್ಷದ ಮಗು, ಗುಂಡಗೆ ತೂಕವಾಗಿದ್ದ. ಕಾಡಿನಲ್ಲಿ ಒಬ್ಬರಾದ ಮೇಲೊಬ್ಬರು ಎತ್ತಿಕೊಂಡು 4 ಮೈಲಿ ಹೋದೆವು. ಮೇಕೆದಾಟುವಿನ ಕಿರಿದಾದ ಸ್ಥಳವನ್ನು ಆರಿಸಿ ಅಲ್ಲೊಂದು ಪುಟ್ಟ ಸೇತುವೆ ಹಾಕಲಾಗಿತ್ತು. ಅದನ್ನು ದಾಟುವಾಗ ಸೇತುವೆ ತುಂಡಾಗುತ್ತದೆ. ಇಂಥ ಚಿತ್ರಿಕೆಗಳನ್ನೆಲ್ಲ ತೆಗೆಯಲಾಯಿತು.. ಆ ದಿನಗಳಲ್ಲಿ ಒಂದು ಚಿತ್ರದ ಎಲ್ಲ ಕೆಲಸಗಳೂ ಆಫೀಸಿನಲ್ಲೇ ಆಗುತ್ತಿತ್ತು. ಈಗಿನ ಹಾಗೆ ಹೋಟೆಲ್, ವಿಶ್ರಾಂತಿಧಾಮ ಅಂತೆಲ್ಲ ಇರಲಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ ಅಂತ ಎಲ್ಲರೂ ಜತೆಯಾಗಿ ಕೂತು ಚರ್ಚೆ ಮಾಡೋರು. ಇನ್ನೊಂದು ಕಡೆ ಸಂಗೀತದ ರಿಹರ್ಸಲ್ ಇತ್ಯಾದಿ.. ಕಲಾವಿದರಿಗೂ ಪ್ರತ್ಯೇಕ ವಸತಿ ವ್ಯವಸ್ಥೆಯೂ ಇರಲಿಲ್ಲ. ಎಲ್ಲರೂ ನಮ್ಮ ಮನೇಲೇ ಕ್ಯಾಂಪ್. ಒಂದೇ ಊಟ, ಒಂದೇ ವಸತಿ. ಈಗಿನ ಹಾಗೆ ಕ್ಯಾರವಾನ್ ಗೀರವಾನ್ ಅಂತ ಏನೂ ಇರ್ಲಿಲ್ಲ. ಆ ದಿನಗಳಲ್ಲಿ ಪ್ರತ್ಯೇಕ ಕಾಸ್ಟ್ಯೂಮರ್ ಸಹ ಇರಲಿಲ್ಲ. ಮೇಕಪ್​ನವರೇ ಕೇಶಾಲಂಕಾರ ಮಾಡುತ್ತಿದ್ದರು..’ ಎಂದು ಹೇಳಿ ಪ್ರತಿಮಾದೇವಿ ನಿಟ್ಟುಸಿರು ಬಿಡುತ್ತಾರೆ.

‘ಜಗನ್ಮೋಹಿನಿ’ ಚಿತ್ರ ಭಾರೀ ಯಶಸ್ಸು ಗಳಿಸಿತು. ದಾವಣಗೆರೆ ಮತ್ತು ಗುಲ್ಬರ್ಗ ಗಳಲ್ಲಿ 25 ವಾರ ಪ್ರದರ್ಶಿತವಾಯಿತು. ಹುಬ್ಬಳ್ಳಿ, ಬೆಳಗಾವಿ, ರಾಯಚೂರು, ಬಿಜಾಪುರಗಳಲ್ಲೂ ಅದ್ಭುತ ಯಶಸ್ಸು ಕಂಡಿತು. ಈ ಚಿತ್ರದ ಬಗ್ಗೆ ಅಪಾರ ಪ್ರೀತಿ ತೋರಿದ ದಾವಣಗೆರೆಯ ಜನ ಅದ್ಧೂರಿ ಸಮಾರಂಭ ಏರ್ಪಡಿಸಿ ಹಾಸ್ಯ ಪಾತ್ರ ಧಾರಿ ಮಹಾಬಲರಾಯರಿಗೆ ದಶಾವತಾರದ ಬೆಳ್ಳಿ ಸ್ಮರಣಿಕೆ ನೀಡಿ ಗೌರವಿಸಿದರು. ಆನೆ ಮೇಲೆ ಕೂರಿಸಿ ಹಾಸ್ಯನಟರೊಬ್ಬರನ್ನು ಮೆರೆಸಿದ್ದು ಆ ದಿನಗಳ ಒಂದು ಹೈಲೈಟ್… ಏನಾದರೇನು, ‘ಜಗನ್ಮೋಹಿನಿ’ ಚಿತ್ರವನ್ನು ತೆರೆಯ ಮೇಲೆ ನೋಡೋಣವೆಂದರೆ ಅದರ ಪ್ರಿಂಟ್ ಸಂಪೂರ್ಣವಾಗಿ ನಾಶವಾಗಿದೆ. ಆದರೂ ಈ ಚಿತ್ರ ಆ ಕಾಲದಲ್ಲಿ ಜನಮಾನಸವನ್ನು ಸೂರೆಗೊಂಡ ವಿಷಯ ಬಚ್ಚಿಡುವುದು ಸಾಧ್ಯವಾಗಿಲ್ಲ. ಚಿತ್ರದ ಪ್ರಿಂಟ್ ನಾಶ ವಾಗಿರಬಹುದು, ಆದರೆ ಆ ಚಿತ್ರದ ನೆನಪು ಮಾತ್ರ ಶಾಶ್ವತ…

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರá-)

(ಮಾಹಿತಿ: ಕರ್ನಾಟಕ ಚಲನಚಿತ್ರ ಇತಿಹಾಸ)

Leave a Reply

Your email address will not be published. Required fields are marked *