ಜಗದ ಬೆರಗು ಮತ್ತು ಸೊಗಸು

ಬೆರಗಾಗಿಪುವುವೆಲ್ಲ ಪಿರಿತನದ ನೋಟಗಳು |

ಬೆರಗೆ, ಮೈಮರೆವೆ, ಸೊಲ್ಲಣಗುವುದೆ ಸೊಗಸು ||

ಬೆರಗು ಚಿತ್ತವ ನುಂಗಲೊಗೆವ ಶಾಂತಿಯ ಕಾಂತಿ |

ಪರಮನರ್ಚನೆಗೆ ವರ – ಮಂಕುತಿಮ್ಮ ||

ನಮ್ಮ ಸುತ್ತಲಿರುವ ನಿಸರ್ಗವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋದರೆ ಅದೆಷ್ಟು ಅಚ್ಚರಿಗಳನ್ನು ಇದಿರುಗೊಳ್ಳುತ್ತೇವೆ. ಸೂರ್ಯೂೕದಯಕ್ಕೆ ಜೀವ ಪಡೆವ ಜಗತ್ತು, ಕ್ಷಣಕ್ಷಣಕ್ಕೂ ನಿಗೂಢತೆಯನ್ನು, ನಾವೀನ್ಯತೆಯನ್ನು ಕಾಯ್ದಿರಿಸಿಕೊಂಡೇ ಕಣ್ಣರಳಿಸುತ್ತದೆ. ಮುಂಜಾವದ ಬರುವಿಕೆಯೊಂದಿಗೆ ಸುಂದರ ಪ್ರಪಂಚವೊಂದು ಕಣ್ಮನ ಸೆಳೆಯುತ್ತದೆ. ಪ್ರಕೃತಿಯಲ್ಲಿರುವ ಪ್ರತಿಯೊಂದೂ ಅದ್ಭುತಗಳ ಆಗರ. ಪ್ರತೀ ಕ್ಷಣವೂ ಬದಲಾಗುತ್ತಾ ಸಾಗುವ ನಿಸರ್ಗದ ಚೆಲುವು ಋತುಮಾನಗಳಿಗೆ ಅನುಗುಣವಾಗಿ ಕಂಗೊಳಿಸುವ ಸೊಬಗು ಪದಗಳಿಗೆ ನಿಲುಕದ್ದು.

ನಿಸರ್ಗದ ಇಂತಹ ಅಚ್ಚರಿಯನ್ನು ಕಂಡು ಮುದಗೊಳ್ಳುವ ಮನಸ್ಸು ಆ ಸೃಷ್ಟಿಯ ವಿಶೇಷತೆಯ ಬಗ್ಗೆ ಕುತೂಹಲಿಯಾಗುತ್ತದೆ. ಅದರ ಹಿಂದಿರುವ ಅನುಪಮ ಶಕ್ತಿಯನ್ನು ನೆನೆದು ಅಚ್ಚರಿಯಲ್ಲಿ ಮುಳುಗೇಳುತ್ತದೆ. ನಿಸರ್ಗದ ಅದ್ಭುತಗಳನ್ನು ಮೈಮರೆತು ಕಣ್ತುಂಬಿಕೊಳ್ಳುವಾಗ ಹೃದಯದಲ್ಲಿ ಆನಂದಾಮೃತವು ಹರಿಯುತ್ತದೆ. ಸಂಯೋಜಿತವಾಗಿರುವ ಜಗತ್ತಿನ ಅನನ್ಯತೆಯು ಸಹೃದಯ ಮನಸ್ಸುಗಳನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಹೂಬಿಸಿಲ ಸಂಜೆ, ಗಾಳಿಯ ಬೀಸುವಿಕೆಯೊಂದಿಗೆ ಸಮ್ಮಿಲನಗೊಳ್ಳುವ ಕಾಮೋಡ, ಸುಳಿ ಮಿಂಚು, ಆರ್ಭಟಿಸುವ ಸಿಡಿಲು, ಎಡೆಬಿಡದೆ ಸುರಿವ ಮಳೆ, ಸುಳಿದು ಬರುವ ಮಣ್ಣಿನ ಘಮಲು; ಈ ಮಳೆಮುಗಿಲಿನ ನರ್ತನಕ್ಕೆ ಮುದಗೊಳ್ಳದ ಜೀವಗಳುಂಟೆ? ಇಂತಹ ಸೌಂದರ್ಯಾದ್ಭುತದ ವಿರಾಟ್ ದರ್ಶನದಿಂದ ಮನಸ್ಸು ಪ್ರಫುಲ್ಲಿತವಾಗುವುದರ ಜೊತೆಗೆ ತಾನೂ ಅದೇ ಸೃಷ್ಟಿಯ ಪುಟ್ಟ ಕಣವೆಂಬ ಭಾವವು ಧನ್ಯತೆಯನ್ನು ಮೂಡಿಸುತ್ತದೆ.

ಸೃಷ್ಟಿಯ ಚೈತನ್ಯವನ್ನು ಆಂತರ್ಯದಿಂದ ಕಾಣಬಲ್ಲೆವಾದರೆ, ನಾನು ಎಂಬ ಭಾವವು ನಾಶವಾಗುತ್ತದೆ. ಇವೆಲ್ಲವನ್ನೂ ರೂಪಿಸಿರುವ ನಿಯಾಮಕ ಶಕ್ತಿಗೆ ವಿನಮ್ರತೆಯಿಂದ ಶರಣಾಗುತ್ತೇವೆ. ಸೃಷ್ಟಿಯನ್ನು ಅಚ್ಚರಿಯಿಂದ ಗಮನಿಸುವುದರ ಜೊತೆಗೆ ನಮ್ಮ ಬದುಕಿನ ತಿರುವುಗಳೂ ಬೆರಗು ಹುಟ್ಟಿಸುತ್ತವೆ. ನಮ್ಮರಿವಿಗಷ್ಟೇ ನಿಲುಕಬಲ್ಲ ಶಕ್ತಿಯ ಸಾಮೀಪ್ಯದಿಂದಾಗಿ ಯಾವ ನೋವು, ಸಂಕಟಗಳೂ ತೀವ್ರವಾಗಿ ಬಾಧಿಸಲಾರವು. ಪ್ರತಿಕೂಲ ಸಂದರ್ಭದಲ್ಲಿಯೂ ಉದ್ವೇಗಕ್ಕೆ ಒಳಗಾಗದ ಮನಸ್ಸು. ಎಲ್ಲರೊಂದಿಗಿದ್ದೂ ನಂಟಿಗಂಟದ ವ್ಯಕ್ತಿತ್ವ, ಸಮದರ್ಶಿ ನಿಲುವು ವ್ಯಕ್ತಿಯನ್ನು ಔನ್ನತ್ಯಕ್ಕೇರಿಸುತ್ತದೆ. ಬದುಕಿನರ್ಥವು ಮನನವಾಗುವುದರಿಂದಾಗಿ ನಡೆ, ನುಡಿ, ಚಿಂತನೆಗಳೆಲ್ಲ ಉದಾತ್ತವಾಗಿರುತ್ತವೆ. ಸದ್ವಿಚಾರ, ಸನ್ನಡತೆಗಳಿಂದಾಗಿ ಆತ್ಮಪ್ರಭೆಯು ಪ್ರಜ್ವಲಿಸುತ್ತದೆ. ಹೀಗೆ ಧನಾತ್ಮಕವಾಗಿ ಹೊಮ್ಮುವ ವ್ಯಕ್ತಿತ್ವವುಳ್ಳವರ ಜೊತೆ ಅರೆಕ್ಷಣವಿದ್ದರೂ ಋಣಾತ್ಮಕ ಯೋಚನೆಗಳು ಕಳಚಿಕೊಳ್ಳುತ್ತವೆ. ಉನ್ನತ ಆದರ್ಶಗಳನ್ನು ಪಾಲಿಸಿ ಸಾಧಕರಾದವರ ಪ್ರಭಾವಕ್ಕೆ ಹಲವರು ಒಳಗಾಗಿ ದೌರ್ಬಲ್ಯಗಳಿಂದ ಮುಕ್ತರಾಗುವುದು ಇದಕ್ಕೆ ಉತ್ತಮ ಉದಾಹರಣೆ.

ಪ್ರಕೃತಿಯನ್ನು ಪೊರೆಯುವ ವಿಶ್ವಾತ್ಮಚೈತನ್ಯದ ಪುಟ್ಟ ಅಂಶವು ಪರಿಸರದಲ್ಲಿರುವುದರ ಜೊತೆಗೆ ನಮ್ಮೊಳಗೂ ಇದೆ ಎಂಬ ಸತ್ಯವು ಮನವರಿಕೆಯಾದಂದು ಜೀವನವು ಆಪ್ತವಾಗುತ್ತದೆ. ಭಗವಂತನನ್ನು ಆಂತರ್ಯದಲ್ಲಿ ತುಂಬಿಕೊಳ್ಳುವುದರಿಂದ ಮತ್ತಷ್ಟು ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳುವುದಕ್ಕೆ ಮನಸ್ಸು ತುಡಿಯುತ್ತದೆ. ಹಾಗಾಗಿ ಜಗದ ಬೆರಗಿನಲ್ಲಿರುವ ಭಗವಂತನನ್ನು ಮತ್ತು ಜೀವನಾನಂದವನ್ನು ಗ್ರಹಿಸುವ ಸಾಮರ್ಥ್ಯವು ಆಂತರ್ಯಕ್ಕೆ ಸಿದ್ಧಿಯಾಗಬೇಕು. ಅದುವೇ ಪರಮಾತ್ಮನ ನಿಜವಾದ ಆರಾಧನೆ.