ಜಕ್ಕಲಿಯಲ್ಲಿ ರಾಷ್ಟ್ರಪಿತನಿಗೆ ನಿತ್ಯ ಪೂಜೆ

ನರೇಗಲ್ಲ: ರಾಷ್ಟ್ರಪ್ರೇಮ, ಹೋರಾಟ, ಸ್ವಾಭಿಮಾನ, ತ್ಯಾಗ, ಬಲಿದಾನ, ಉದಾರತೆ, ದಾನ-ಧರ್ಮಗಳಿಗೆ ಹೆಸರಾಗಿದೆ ಜಕ್ಕಲಿ ಗ್ರಾಮ. ಸ್ವಾತಂತ್ರ್ಯ ಸಂಗ್ರಾಮ ಸೇರಿ ವಿವಿಧ ಪ್ರಾದೇಶಿಕ ಹೋರಾಟದ ನೇತೃತ್ವ ವಹಿಸಿಕೊಂಡ ನಾಯಕರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಹೆಗ್ಗಳಿಕೆ ಹೊಂದಿರುವ ಗ್ರಾಮಕ್ಕೆ ಅಸ್ಪೃಶ್ಯತೆ ನಿವಾರಣೆಗಾಗಿ ಹಮ್ಮಿಕೊಂಡಿದ್ದ ಜನ ಜಾಗೃತಿ ಸಭೆಯಲ್ಲಿ ಮಹಾತ್ಮಾ ಗಾಂಧೀಜಿ ಅವರು 1934ರ ಮಾರ್ಚ್ 3ರಂದು ಭೇಟಿ ನೀಡಿದ್ದರು.

ಇವರನ್ನು ನೋಡಲು ವಾಹನ ಸೌಲಭ್ಯವಿಲ್ಲದ ಆ ಕಾಲದಲ್ಲಿ ಉತ್ತರ ಕರ್ನಾಟಕದ ಮೂಲೆ ಮೂಲೆಗಳಿಂದ 1200ಕ್ಕೂ ಹೆಚ್ಚಿನ ಎತ್ತಿನ ಬಂಡಿಗಳಲ್ಲಿ ಜಾತ್ರೆಗೆ ಬರುವಂತೆ 25 ಸಾವಿರಕ್ಕೂ ಅಧಿಕ ಜನಸಾಗರವೇ ಹರಿದು ಬಂದಿತ್ತು. ಕರ್ನಾಟಕದ ಏಕೀಕರಣದ ರೂವಾರಿ, ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಅವರ ಹರಿಜನ ಸೇವಾ ಕಾರ್ಯವನ್ನು ಗಾಂಧೀಜಿ ಮೆಚ್ಚಿಕೊಂಡಿದ್ದರು. ಗಾಂಧೀಜಿ ಹಾಗೂ ಅಂದಾನಪ್ಪ ಅವರು ಯರವಾಡ ಜೈಲಿನಲ್ಲಿದ್ದಾಗಲೇ ಅಂದಾನಪ್ಪ ಅವರಿಗೆ ಜಕ್ಕಲಿಗೆ ಬರುವುದಾಗಿ ತಿಳಿಸಿದ್ದರು. ಅಂದಾನಪ್ಪ ದೊಡ್ಡಮೇಟಿ ಯರವಾಡ ಜೈಲಿನಲ್ಲಿರುವಾಗ ಅವರ ತಾಯಿ ಬಸಮ್ಮನವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಸುದ್ದಿ ತಿಳಿದ ಗಾಂಧೀಜಿ ತಮ್ಮ ಸ್ವ-ಹಸ್ತಾಕ್ಷರದಲ್ಲಿ ಬಸಮ್ಮನವರಿಗೆ ಪತ್ರ ಬರೆದು, ನಿಮ್ಮ ಮಗ ದೇಶದ ಸ್ವಾತಂತ್ರ್ಯ್ಕಾಗಿ ಹೋರಾಡುತ್ತಿದ್ದಾನೆ. ಅವರಿಗೆ ಏನೂ ಆಗುವುದಿಲ್ಲ, ನೀವು ಧೈರ್ಯವಾಗಿ ಇರಿ ಎಂದು ಧೈರ್ಯ ಹೇಳಿದ್ದು ಸ್ಮರಣೀಯ.

ಗಾಂಧೀಜಿ ಆಗಮನಕ್ಕೆ ಜಕ್ಕಲಿ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. 40*80 ಅಳತೆಯ ಸ್ಥಳದಲ್ಲಿ ಚಪ್ಪರ ಹಾಕಿ, ಬಿಳಿ ಜೋಳದ ದಂಟಿನಿಂದ ವೇದಿಕೆ ಅಲಂಕರಿಸಿದ್ದರು. ಬಾಪೂಜಿ ಸಾರ್ವಜನಿಕರನ್ನು ಉದ್ದೇಶಿಸಿ 14 ಅಂಶಗಳ ಕುರಿತು ಭಾಷಣ ಮಾಡಿದ್ದರು. ಅಸ್ಪೃಶ್ಯತೆ ನಿವಾರಣೆಯಾಗಬೇಕು. ಮೂಢನಂಬಿಕೆ ತೊಲಗಬೇಕು. ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿ ಹೊಂದಬೇಕು. ಖಾದಿ ಬಟ್ಟೆ ಧರಿಸಬೇಕು. ಗ್ರಾಮಗಳು ಮದ್ಯಪಾನ ಮುಕ್ತವಾಗಬೇಕು. ರಾಷ್ಟ್ರೀಯ ಚಳವಳಿಯಲ್ಲಿ ಎಲ್ಲರೂ ಭಾಗವಹಿಸಬೇಕು. ಇವು ಅಂದಿನ ಭಾಷಣದ ಪ್ರಮುಖ ಅಂಶಗಳು. ಅಂದಾನಪ್ಪ ದೊಡ್ಡಮೇಟಿ ಅವರು ಈ ಕಾರ್ಯಕ್ರಮಕ್ಕೆ ನಾಲ್ಕೈದು ನೂರು ರೂ. ಖರ್ಚು ಮಾಡಿದ್ದರು. ವಿ.ವಿ. ಪಾಟೀಲ, ಹರ್ಡೆಕರ್ ಮಂಜಪ್ಪನವರು, ಗದಗನ ಅನಂತರಾವ ಜಾಲಿಹಾಳ, ನರೇಗಲ್ಲನ ಗಚ್ಚಿನಮಠ ಶಾಸ್ತ್ರಿ, ಡಾ. ಚಂದ್ರಶೇಖರ ಸಂಗನಾಳಮಠ, ಬಸೇಟೆಪ್ಪ ಜಕ್ಕಲಿ ಗಾಂಧೀಜಿ ಜೊತೆಗಿದ್ದರು. ಬೆಳಗಾವಿಯ ಗಂಗಾಧರರಾವ್ ಅವರು ಗಾಂಧೀಜಿಯವರ ಭಾಷಣವನ್ನು ಕನ್ನಡದಲ್ಲಿ ಭಾಷಾಂತರಿಸಿದ್ದರು.

ರೆಹಮಾನ್ ಶ್ಯಾವಲಿಗಳಿಂದ ಸ್ವಾಗತ

ಗದಗದಿಂದ ನರೇಗಲ್ಲ ಮಾರ್ಗವಾಗಿ ಆಗಮಿಸಿದ ಗಾಂಧೀಜಿಯವರನ್ನು ನರೇಗಲ್ಲನ ಜಕ್ಕಲಿ ಕ್ರಾಸ್ ಹತ್ತಿರ ದರ್ಗಾರ ರೆಹಮಾನ್ ಶ್ಯಾವಲಿ ಶರಣರು ಹೂವಿನ ಮಾಲೆ ಹಾಕಿ ಸ್ವಾಗತಿಸಿದ್ದರು. ನರೇಗಲ್ಲನಲ್ಲಿ ನಿಂತು ಹೋದ ಸ್ಥಳದ ಸವಿನೆಪಿಗಾಗಿ ಸಂಸದ ಐ.ಜಿ. ಸನದಿ ಅವರು ಗಾಂಧಿ ಭವನವನ್ನು ನಿರ್ವಿುಸಿದ್ದಾರೆ. ಸ್ಥಳೀಯ ಶಿಲ್ಪಿಗಳಿಂದ ತಯಾರಿಸಿದ ಗಾಂಧೀಜಿ ಮೂರ್ತಿಯನ್ನು ಮಾದರಿ ಕೇಂದ್ರ ಶಾಲೆಯ ಆವರಣದಲ್ಲಿ 1970ರ ಏಪ್ರಿಲ್ 4ರಂದು ಅನಾವರಣಗೊಳಿಸುವ ಮೂಲಕ ಸದಾ ಅವರನ್ನು ಸ್ಮರಿಸುವಂತೆ ಮಾಡಲಾಗಿದೆ. ಈ ಮೂರ್ತಿಗೆ ನಿತ್ಯವೂ ಪೂಜೆ ಸಲ್ಲಿಸಲಾಗುತ್ತಿದೆ. ಮೂರ್ತಿಯ ಸುತ್ತಲೂ ಗಾಂಧೀಜಿಯವರ ಕೈ ಬರಹ, ಅವರ ಭಾಷಣದ ತುಣುಕುಗಳನ್ನು ಕೆತ್ತಲಾಗಿದೆ. ಗಾಂಧೀಜಿ ಮರಣದ ನಂತರ ಸ್ವತಃ ಅಂದಾನಪ್ಪ ದೊಡ್ಡಮೇಟಿಯವರು ಗಾಂಧೀಜಿಯವರ ಚಿತಾ ಭಸ್ಮವನ್ನು ತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಚಾವಡಿ ಮುಂಭಾಗದಲ್ಲಿ ಬಂಗಾರದ(ಕರಂಡಿಕೆ) ಕುಡಿಕೆಯಲ್ಲಿಟ್ಟು ಸಮಾಧಿ ಮಾಡಿ, ಕಲ್ಲಿನ ಸ್ತಂಭವನ್ನು ನಿರ್ವಿುಸಲಾಗಿದೆ. ಜಕ್ಕಲಿಗೆ ಬರುವ ಮುನ್ನ ಗದಗನಲ್ಲಿ ಸಾರ್ವಜನಿಕರಿಗಾಗಿ ಸ್ವಲ್ಪ ಸಮಯ ನಿಂತು ಹೋದ ಸ್ಥಳವೇ ಈಗ ಗದುಗಿನ ಗಾಂಧಿ ವೃತ್ತವಾಗಲು ಕಾರಣ.

ಗಾಂಧೀಜಿ ತತ್ತ್ವ ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಬಹಳ ಮುಖ್ಯವಾಗಿದೆ. ಇದರಿಂದ ಮಾತ್ರ ಅವರ ರಾಮರಾಜ್ಯದ ಕನಸು ಸಾಕಾರವಾಗಲು ಸಾಧ್ಯ. ಗಾಂಧೀಜಿ ಅವರನ್ನು ಜಕ್ಕಲಿಯಂತಹ ಕುಗ್ರಾಮಕ್ಕೆ ಕರೆಸಿದ ಕೀರ್ತಿ ದಿ. ಅಂದಾನಪ್ಪ ದೊಡ್ಡಮೇಟಿಯವರಿಗೆ ಸಲ್ಲುತ್ತದೆ. ಇಂತಹ ಮನೆತನ, ಗ್ರಾಮದಲ್ಲಿ ಹುಟ್ಟಿದ ನಾವೇ ಧನ್ಯರು.

ರವೀಂದ್ರನಾಥ ದೊಡ್ಡಮೇಟಿ, ಅಂದಾನಪ್ಪ ದೊಡ್ಡಮೇಟಿ ವಂಶಸ್ಥರು, ಜಕ್ಕಲಿ