ಜಂಭದ ಹುಡುಗಿ ನಾನಲ್ಲ!

ಸಿನಿಮಾಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಧಾವಂತ ತೋರದೆ, ತಮ್ಮದೇ ಆದ ರೀತಿಯಲ್ಲಿ ವೃತ್ತಿಬದುಕು ಕಟ್ಟಿಕೊಳ್ಳುತ್ತಿದ್ದಾರೆ ನಟಿ ಕಾವ್ಯಾ ಶೆಟ್ಟಿ. ‘ಇಷ್ಟಕಾಮ್ಯ’, ‘ಸ್ಮೈಲ್ ಪ್ಲೀಸ್’, ‘ಸಿಲಿಕಾನ್ ಸಿಟಿ’ ಮುಂತಾದ ಚಿತ್ರಗಳಲ್ಲಿ ಭಿನ್ನ ಬಗೆಯ ಪಾತ್ರ ಮಾಡಿದ್ದ ಅವರು ಈಗ ‘ಸಂಹಾರ’ ಮತ್ತು ‘3 ಗಂಟೆ, 30 ದಿನ, 30 ಸೆಕೆಂಡ್’ ಸಿನಿಮಾಗಳ ಮೂಲಕ ರಂಜಿಸಲು ಬರುತ್ತಿದ್ದಾರೆ. ಈ ಎರಡೂ ಚಿತ್ರಗಳಲ್ಲಿ ಅವರು ಪತ್ರಕರ್ತೆ ಪಾತ್ರಕ್ಕೆ ಬಣ್ಣ ಹಚ್ಚಿರುವುದು ವಿಶೇಷ. ಮೇಲ್ನೋ ಟಕ್ಕೆ ಈ ಪಾತ್ರಗಳು ಒಂದೇ ರೀತಿ ಅನಿಸಿದರೂ ಬೇರೆ ಬೇರೆ ಶೇಡ್ಸ್ ಇವೆಯಂತೆ. ಎರಡೂ ಚಿತ್ರಗಳಿಂದ ಭಿನ್ನ ಅನುಭವ ಗಿಟ್ಟಿಸಿಕೊಂಡ ಕಾವ್ಯಾ, ಸಿನಿವಾಣಿ ಜತೆ ಮಾತಾಡಿದ್ದಾರೆ.

|ಮದನ್​ಕುಮಾರ್ ಸಾಗರ ಬೆಂಗಳೂರು

ಕಳೆದ ವರ್ಷ ನಿಮ್ಮಎರಡು ಚಿತ್ರಗಳು ತೆರೆಕಂಡಿದ್ದವು. ಈ ವರ್ಷದ ಪ್ರಾರಂಭದಲ್ಲಿಯೇ ಎರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆಯಲ್ಲ?

ಕಳೆದ ವರ್ಷ ಡಿಸೆಂಬರ್​ನಲ್ಲಿಯೇ ‘3 ಗಂಟೆ..’ ರಿಲೀಸ್ ಆಗಬೇಕಿತ್ತು. ಆದರೆ ಆಗ ಹೆಚ್ಚು ಸಿನಿಮಾಗಳಿದ್ದ ಕಾರಣ ಜ. 19ಕ್ಕೆ ಶಿಫ್ಟ್ ಆಯ್ತು. ಫೆಬ್ರವರಿ ವೇಳೆಗೆ ‘ಸಂಹಾರ’ ತೆರೆ ಕಾಣಲಿದೆ. ಈ ಎರಡು ಚಿತ್ರಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ಪ್ರಾಜೆಕ್ಟ್ ನಲ್ಲಿ ನಾನು ತೊಡಗಿಕೊಂಡಿಲ್ಲ. ನನಗೆ ಇಷ್ಟವಾಗದ ಹೊರತು ಸುಮ್ಮನೇ ಯಾವ ಕಥೆಯನ್ನೂ ನಾನು ಒಪ್ಪಿಕೊಳ್ಳುವುದಿಲ್ಲ. ಆಸಕ್ತಿ ಇಲ್ಲದಿದ್ದರೆ ನಾವು ಶೂಟಿಂಗ್​ನಲ್ಲಿ ಖುಷಿಯಿಂದ ಪಾಲ್ಗೊಳ್ಳುವುದು ಕಷ್ಟ ಆಗುತ್ತದೆ.

ಎರಡೂ ಚಿತ್ರಗಳಲ್ಲಿ ನಿಮ್ಮ ಪಾತ್ರಗಳು ಹೇಗಿವೆ?

‘30 ಗಂಟೆ..’ ಚಿತ್ರದಲ್ಲಿ ಸುದ್ದಿ ವಾಹಿನಿಯ ಮಾಲಕಿ ಪಾತ್ರ ಮಾಡಿದ್ದೇನೆ. ಅಲ್ಲಿ ನನ್ನ ಹೆಸರು ಶರ್ವಿುಳಾ, ‘ಸಂಹಾರ’ದಲ್ಲೂ ಜಾನಕಿ ಎಂಬ ಪತ್ರಕರ್ತೆ ಪಾತ್ರ. ನಾವು ಇತರೆ ಸಿನಿಮಾ ಪ್ರಚಾರಕ್ಕಾಗಿ ಟಿವಿ ಚಾನಲ್​ಗಳಿಗೆ ಆಗಾಗ ಹೋಗುತ್ತಿರುತ್ತೇವೆ. ಅಲ್ಲಿ ನಿರೂಪಕಿಯರು ಹೇಗೆ ಕೆಲಸ ಮಾಡುತ್ತಾರೆ, ಅವರ ಹಾವ ಭಾವ ಹೇಗಿರುತ್ತವೆ, ಯಾವ ರೀತಿಯ ಭಾಷೆ ಬಳಸುತ್ತಾರೆ ಎಂಬಿತ್ಯಾದಿ ಅಂಶಗಳನ್ನು ಗಮನಿಸಿದ್ದೆ. ಅದೆಲ್ಲವೂ ಶೂಟಿಂಗ್ ವೇಳೆ ಸಹಾಯ ಆಯ್ತು.

ಮತ್ತೆ ಮತ್ತೆ ಜರ್ನಲಿಸ್ಟ್ ಪಾತ್ರ ಮಾಡಲು ಒಪ್ಪಿಕೊಂಡಿದ್ದು ಏಕೆ?

ನನ್ನ ಪಾತ್ರದ ಪರಿಚಯ ಹಾಗೆ ಇರುತ್ತದೆ ಎಂದ ಮಾತ್ರಕ್ಕೆ ಇಡೀ ಚಿತ್ರದಲ್ಲಿ ಜರ್ನಲಿಸ್ಟ್ ಆಗಿಯೇ ಕಾಣಿಸಿಕೊಳ್ಳುತ್ತೇನೆ ಎಂದರ್ಥವಲ್ಲ. ಕೆಲವು ದೃಶ್ಯಗಳಲ್ಲಿ ಮಾತ್ರ ಪತ್ರಕರ್ತೆ ಆಗಿರುತ್ತೇನೆ. ಉಳಿದಂತೆ ಎರಡೂ ಚಿತ್ರಗಳಲ್ಲಿ ಬೇರೆ ರೀತಿಯ ಶೇಡ್ಸ್ ಇವೆ. ‘3 ಗಂಟೆ..’ ಚಿತ್ರದಲ್ಲಿ ಲವ್​ಸ್ಟೋರಿಗೆ ಹೆಚ್ಚು ಮಹತ್ವವಿದೆ. ‘ಸಂಹಾರ’ದಲ್ಲಿ ಥ್ರಿಲ್ಲರ್ ಅಂಶಗಳು ಹೆಚ್ಚಿವೆ. ಈ ಎರಡೂ ಚಿತ್ರಗಳು ಸಖತ್ ಭಿನ್ನವಾಗಿವೆ.

ನಿರ್ದೇಶಕರ ಪೈಕಿ ಒಬ್ಬರು ಹೊಸಬರು, ಇನ್ನೊಬ್ಬರು ಅನುಭವ ಉಳ್ಳವರು. ಹೇಗಿತ್ತು ಶೂಟಿಂಗ್ ಅನುಭವ?

‘3 ಗಂಟೆ..’ ನಿರ್ದೇಶಿಸಿರುವ ಮಧುಸೂದನ್ ಅವರಿಗೆ ಈ ಹಿಂದೆಯೇ ಹಲವು ಜಾಹೀರಾತುಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಇದು ಅವರಿಗೆ ಮೊದಲ ಪೂರ್ಣಾವಧಿ ಸಿನಿಮಾ ಎನಿಸಲೇ ಇಲ್ಲ. ಅಷ್ಟರಮಟ್ಟಿಗೆ ಅವರು ಪ್ಲಾ್ಯನಿಂಗ್ ಮಾಡಿಕೊಂಡು ಸೆಟ್​ಗೆ ಬರುತ್ತಿದ್ದರು. ನಮಗೂ ವರ್ಕ್​ಶಾಪ್ ಮಾಡಿಸಿದ್ದರಿಂದ ಚಿತ್ರೀಕರಣದ ವೇಳೆ ಯಾವುದೇ ಗೊಂದಲ ಎದುರಾಗದಂತೆ ನೋಡಿಕೊಂಡರು. ಇನ್ನು ‘ಸಂಹಾರ’ ನಿರ್ದೇಶಕ ಗುರು ದೇಶಪಾಂಡೆ ಕೂಡ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದರು. ಕಡಿಮೆ ಅವಧಿಯಲ್ಲಿ, ಎಲ್ಲ ಕಲಾವಿದರ ಡೇಟ್ಸ್ ಹೊಂದಿಸಿಕೊಂಡು ಸಿನಿಮಾ ಮುಗಿಸಿದ್ದಾರೆ.

ಶರ್ವಿುಳಾ ಮತ್ತು ಜಾನಕಿ ಇಬ್ಬರಲ್ಲಿ ನಿಮ್ಮ ರಿಯಲ್ ಲೈಫ್ ವ್ಯಕ್ತಿತ್ವಕ್ಕೆ ಹತ್ತಿರ ಯಾರು?

ಜಾನಕಿ ನನ್ನ ಬದುಕಿಗೆ ಸ್ವಲ್ಪ ಹತ್ತಿರವಾದವಳು ಅಂತ ನನಗೆ ಅನಿಸುತ್ತದೆ. ಪೂರ್ತಿ ಅಲ್ಲದಿದ್ದರೂ ಕೆಲವು ವಿಚಾರಗಳಲ್ಲಿ ನನಗೂ ಆ ಪಾತ್ರಕ್ಕೂ ಸಾಮ್ಯತೆ ಇದೆ. ಮಾತನಾಡುವ ಶೈಲಿ, ಉಡುಗೆ-ತೊಡುಗೆ, ಸೌಮ್ಯ ಸ್ವಭಾವ ಇತ್ಯಾದಿ ವಿಷಯಗಳಲ್ಲಿ ನನ್ನನ್ನು ಆಕೆಗೆ ಕನೆಕ್ಟ್ ಮಾಡಿಕೊಳ್ಳಬಹುದು. ಆದರೆ ಚಾನಲ್ ಓನರ್ ಶರ್ವಿುಳಾ ಪಾತ್ರ ನನಗಿಂತ ಸಂಪೂರ್ಣ ಭಿನ್ನವಾಗಿದೆ. ಸದಾ ಕಾರ್ಪೆರೇಟ್ ಹುಡುಗಿಯ ರೀತಿ ಆಕೆ ನಡೆದುಕೊಳ್ಳುತ್ತಾಳೆ. ತುಂಬ ಶ್ರೀಮಂತೆ. ತಾನೊಬ್ಬ ಬಾಸ್ ಎಂಬ ಜಂಭ ಅವಳ ಮಾತಿನಲ್ಲಿ ಎದ್ದು ಕಾಣುತ್ತದೆ. ರಿಯಲ್ ಲೈಫ್​ನಲ್ಲಿ ನಾನು ಜಂಭದ ಹುಡುಗಿ ಅಲ್ಲ. ಶೂಟಿಂಗ್​ಗಿಂತ ಮೊದಲು ವರ್ಕ್​ಶಾಪ್ ಮಾಡಿದ್ದರಿಂದ ಆ ಪಾತ್ರ ಮಾಡಲು ಸಾಧ್ಯವಾಯ್ತು.

ಚಿರಂಜೀವಿ ಸರ್ಜಾ ಮತ್ತು ಅರು ಗೌಡ ಅವರಿಂದ ನೀವು ಕಲಿತಿದ್ದೇನು?

ಅರು ಗೌಡ ಮತ್ತು ನನ್ನ ನಡುವಿನ ದೃಶ್ಯಗಳು ಚಿತ್ರದಲ್ಲಿ ಹೆಚ್ಚು ಬರುತ್ತದೆ. ಹಾಗಾಗಿ ವರ್ಕ್​ಶಾಪ್ ನಡೆಸುತ್ತಿರುವಾಗಲೇ ನಾವಿಬ್ಬರು ಪರಸ್ಪರ ಅನೇಕ ವಿಚಾರಗಳನ್ನು ಕಲಿತುಕೊಂಡೆವು. ಇನ್ನು ಹಾರ್ಡ್​ವರ್ಕ್ ಎಂದರೇನು ಎಂಬುದನ್ನು ಚಿರು ಅವರಿಂದ ಕಲಿಯಬೇಕು. ‘ಸಂಹಾರ’ದಲ್ಲಿ ನಾವು ಇಬ್ಬರು ನಾಯಕಿಯರು. ಡೇಟ್ಸ್ ಹೊಂದಾಣಿಕೆ ಮಾಡಲು ಹರಿಪ್ರಿಯಾ ಮತ್ತು ನಾನು ಒಟ್ಟೊಟ್ಟಿಗೆ ಶೂಟಿಂಗ್ ಮಾಡಬೇಕಾಗುತ್ತಿತ್ತು. ಹಗಲು ಹೊತ್ತಲ್ಲಿ ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡರೆ, ರಾತ್ರಿ ವೇಳೆ ಹರಿಪ್ರಿಯಾ ಸೆಟ್​ಗೆ ಬರುತ್ತಿದ್ದರು. ಇಂಥ ಸಂದರ್ಭಗಳಲ್ಲಿ ಚಿರು ಹಗಲು-ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ಆಯಾಸವಾಗಿದ್ದರೂ ಅದು ತೆರೆಮೇಲೆ ಕಾಣಿಸದಂತೆ ನಟಿಸಿದ್ದಾರೆ.

ಒಂದು ರಿಮೇಕ್, ಇನ್ನೊಂದು ಸ್ವಮೇಕ್. ಈ ಎರಡು ಪ್ರಕಾರದ ಬಗ್ಗೆ ನಿಮ್ಮ ಅಭಿಪ್ರಾಯ?

ಸ್ವಮೇಕ್ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈಗ ನಮ್ಮ ಕನ್ನಡ ಚಿತ್ರಗಳೇ ಬೇರೆ ಭಾಷೆಗೆ ರಿಮೇಕ್ ಆಗುತ್ತಿವೆಯಲ್ಲ. ಇಂಥ ಕೊಡುಕೊಳ್ಳುವಿಕೆ ಸಹಜ. ಆದರೆ ನಮ್ಮ ನೇಟಿವಿಟಿಗೆ ತಕ್ಕಂತೆ ‘ಸಂಹಾರ’ದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ನಾವು ಶೂಟಿಂಗ್ ಮಾಡುವ ಸಂದರ್ಭದಲ್ಲಿ ತಮಿಳಿನ ‘ಅದೇ ಕಂಗಳ್’ ಸಿನಿಮಾ ನೋಡಿದ್ದೆ. ಹಾಗಂತ ಅಲ್ಲಿ ನೋಡಿದ್ದನ್ನು ನೇರವಾಗಿ ಕಾಪಿ ಮಾಡಿಲ್ಲ. ನಟನೆ ವಿಚಾರದಲ್ಲಿ ನನಗೆ ರಿಮೇಕ್-ಸ್ವಮೇಕ್ ಎಂಬ ಭೇದವಿಲ್ಲ.

2018 ಹೀಗೆಯೇ ಇರಬೇಕು ಎಂದು ಪ್ಲಾ್ಯನ್ ಮಾಡಿಕೊಂಡಿದ್ದೀರ?

ಪ್ಲಾ್ಯನ್ ಮಾಡಬಹುದು. ಆದರೆ ನಾವಂದುಕೊಂಡಂತೆಯೇ ಎಲ್ಲವೂ ನಡೆಯುತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಅದಕ್ಕಾಗಿ, ಜೀವನ ಹೇಗೆ ಬರುತ್ತದೋ ಹಾಗೆ ಸ್ವೀಕರಿಸುತ್ತೇನೆ. ವರ್ಷದ ಪ್ರಾರಂಭದಲ್ಲಿಯೇ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ಮುಂದೆಯೂ ಒಳ್ಳೆಯ ಪ್ರಾಜೆಕ್ಟ್​ಗಳು ಬರಲಿ ಎಂದು ಬಯಸುತ್ತೇನೆ.

ಯಾವ ಬಗೆಯ ಸಿನಿಮಾ ಮತ್ತು ಪಾತ್ರಗಳ ನಿರೀಕ್ಷೆ ಇದೆ?

ನಾಯಕಿಯರಿಗೆ ಒಳ್ಳೆಯ ಪಾತ್ರ ಸಿಗುವುದೇ ಕಷ್ಟ. ಕೆಲವು ಚಿತ್ರಗಳಲ್ಲಿ ಪಾತ್ರಕ್ಕೆ ಸ್ಕ್ರೀನ್ ಸ್ಪೇಸ್ ಕಡಿಮೆ ಇದ್ದರೂ ಪರವಾಗಿಲ್ಲ. ಪ್ರಾಮುಖ್ಯತೆ ಇರಬೇಕು. ನನ್ನ ಪಾತ್ರ ಎಗ್ಸೆ ೖಟಿಂಗ್ ಅಂತ ಅನಿಸಬೇಕೇ ಹೊರತು ಹೆಚ್ಚೇನೂ ಅಪೇಕ್ಷಿಸುವುದಿಲ್ಲ.

Leave a Reply

Your email address will not be published. Required fields are marked *