ಎನ್.ಆರ್.ಪುರ: ಜಂತುಹುಳು ಬಾಧೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ಉಂಟಾಗುತ್ತದೆ. ಇದರ ನಿವಾರಣೆಗಾಗಿ ಒಂದು ವಷರ್ದಿಂದ 19 ವಷರ್ದ ಒಳಗಿನ ಮಕ್ಕಳಿಗೆ ಪ್ರತಿ ವರ್ಷ ಎರಡು ಬಾರಿ ಆಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗುವುದು. ಶಾಲೆ, ಅಂಗನವಾಡಿಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರೆಗಳನ್ನು ವಿತರಿಸುವರು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಭರತ್‌ಕುಮಾರ್ ತಿಳಿಸಿದರು.
ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ರಕ್ತಹೀನತೆ ದೊಡ್ಡ ಆರೋಗ್ಯ ಸಮಸ್ಯೆ. ಜಂತುಹುಳುಗಳು ಪರಾವಲಂಬಿ ಜೀವಿಗಳಾಗಿದ್ದು ಸಣ್ಣ ಕರುಳಿನಲ್ಲಿ ವಾಸ ಮಾಡುತ್ತವೆ. ರಕ್ತಹೀನತೆ ಇದ್ದಲ್ಲಿ ಅತಿಯಾದ ಆಯಾಸ, ಕಲಿಕೆಯಲ್ಲಿ ನಿರಾಸಕ್ತಿ, ಹಸಿವಿಲ್ಲದಿರುವುದು, ವಾಂತಿ, ಹೊಟ್ಟೆ ನೋವು ಕಂಡುಬರುತ್ತದೆ. ಜಂತುಹುಳು ಬಾಧಿತ ಮಕ್ಕಳು ಬಯಲು ಮಲವಿಸರ್ಜನೆ ಮಾಡಿದಾಗ ಜಂತುಹುಳುವಿನ ಮೊಟ್ಟೆಗಳು ಮಣ್ಣಿನಲ್ಲಿ, ನೀರಿನಲ್ಲಿ, ತರಕಾರಿಗಳಲ್ಲಿ ಸೇರಿಕೊಳ್ಳುತ್ತವೆ. ಮಕ್ಕಳು ಬರಿಗಾಲಿನಲ್ಲಿ ನಡೆದಾಗ ಇವರ ದೇಹದಲ್ಲಿ ಸೇರಿ ಜಂತುಹುಳು ಬಾಧೆ ಕಾಣಿಸಿಕೊಳ್ಳುತ್ತದೆ. ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು, ಉಗುರುಗಳನ್ನು ಕತ್ತರಿಸಿ ಸ್ವಚ್ಛವಾಗಿರಿಸಿಕೊಳ್ಳುವುದು, ಚಪ್ಪಲಿ ಧರಿಸಿ ಓಡಾಡುವುದು, ವೈಯಕ್ತಿಕ ಶುಚಿತ್ವ ಪಾಲನೆ ಮಾಡುವುದರ ಮೂಲಕ ಜಂತುಹುಳು ಬಾಧೆಯಿಂದ ಮುಕ್ತರಾಗಬಹುದು ಎಂದು ಮಾಹಿತಿ ನೀಡಿದರು.
ಎನ್.ಆರ್.ಪುರ ತಾಲೂಕಿನಲ್ಲಿ 127 ಶಿಕ್ಷಣ ಸಂಸ್ಥೆಗಳು ಹಾಗೂ 137 ಅಂಗನವಾಡಿ ಕೇಂದ್ರಗಳಲ್ಲಿ ಜಂತುಹುಳು ನಿವಾರಣ ಮಾತ್ರೆ ಮಕ್ಕಳಿಗೆ ನೀಡಲಾಗುವುದು ಎಂದರು.
ಶಾಲೆಯ ಪ್ರಾಚಾರ್ಯೆ ಮಂಜುಳಾ ಮಾತನಾಡಿ, ರಕ್ತಹೀನತೆ ತಡೆಗಟ್ಟಲು ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದರು. ಸುಹಾಸ್, ಶಾಲಿನಿ, ವೇದಾವತಿ ಇದ್ದರು.