ಜಂಜಡ ಮರೆತು ಪ್ರಾರ್ಥಿಸಿದರೆ ಅಮೃತ ಪ್ರಾಪ್ತಿ

ಸಿದ್ದಾಪುರ: ಭಾವವನ್ನು ಕ್ಷುಲ್ಲಕದಿಂದ ಮೇಲೆತ್ತುವ ಕಾರ್ಯ ದೇವಾಲಯಗಳಿಂದ ಸಾಧ್ಯ. ದೇವರ ಸನ್ನಿಧಿಯಲ್ಲಿ ನಮ್ಮಲ್ಲಿರುವ ಎಲ್ಲ ಜಂಜಡ ಮರೆತು ಪ್ರಾರ್ಥಿಸಿದಲ್ಲಿ ಅಮೃತವನ್ನು ಒಯ್ಯಬಹುದು. ಬದುಕು ಮಂಗಲವಾಗಲು ದೇವರು, ಗುರು, ಸಂಸ್ಕೃತಿ ಹಾಗೂ ಸಂಸ್ಕಾರ ಅಗತ್ಯ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿಳಗಿಯ (ಹೊಸಮಂಜು) ಪುರಾತನ ಶ್ರೀದುರ್ಗಾಂಬಿಕಾ ದೇವಾಲಯದ ನೂತನ ಕಟ್ಟಡದಲ್ಲಿ ಗುರುವಾರ ಸಪರಿವಾರ ಶ್ರೀ ದುರ್ಗಾಂಬಿಕಾ ದೇವರ ಪಾದ ಪ್ರತಿಷ್ಠಾಪನಾ ಮಹೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಈ ಜಗತ್ತು ನೆಲೆ ನಿಲ್ಲಲು ಜಗದೋದ್ಧಾರಿಣಿಯಾದ ಶ್ರೀದುರ್ಗಾಂಬಿಕೆ ಕಾರಣ ಎಂದು ಶಂಕರಾಚಾರ್ಯರು ವರ್ಣಿಸಿದ್ದಾರೆ. ದುರ್ಗಾಂಬಿಕೆಯ ಒಂದು ಚರಣ ಅಭಯ ನೀಡಿದರೆ, ಮತ್ತೊಂದು ಚರಣ ಇಷ್ಟಾರ್ಥವನ್ನು ನೆರವೇರಿಸುವ ವರದ ಪಾದವಾಗಿದೆ. ಸಮಸ್ತ ಭೂಮಂಡಲ ದುರ್ಗಿಯ ಪಾದ ಧೂಳು. ಆಕೆಯ ಚರಣ ಇದ್ದರೆ ರಣ (ಯುದ್ಧ)ವಿಲ್ಲ. ಚರಣ ಆಶ್ರಯಿಸಿದರೆ ಸಕಲವೂ ಲಭ್ಯ. ದುರ್ಗೆ ಗಂಭೀರ ರೂಪಳಾದರೆ, ಮಾರಿ ಉಗ್ರರೂಪ. ಮಾರಿ ದುಷ್ಟರ ಶಿಕ್ಷೆಗಾಗಿ ಇದ್ದರೆ ದುರ್ಗೆ ಶಿಷ್ಟರ ರಕ್ಷಣೆಗಾಗಿ ಇದ್ದಾಳೆ. ಇವೆರಡರ ಸಂಗಮವೂ ಈ ಕ್ಷೇತ್ರವಾಗಿದೆ. ಜ್ಞಾನಶಕ್ತಿಯಂತೆ ಕ್ರೀಯಾಶೀಲತೆಯೂ ಅಗತ್ಯ. ಕ್ರಿಯೆಗೆ ಬದ್ಧತೆ, ತ್ಯಾಗ ಮುಖ್ಯ ಎಂದು ಶ್ರೀಗಳು ಹೇಳಿದರು.

ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ದೇವಾಲಯ ಮೊಕ್ತೇಸರ ಕುಟುಂಬದ ಶಿವರಾಮ ಹೆಗಡೆ ಉಪಸ್ಥಿತರಿದ್ದರು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನಮನೆ ಸ್ವಾಗತಿಸಿದರು. ವಿನೋದಾ ಭಟ್ಟ ನಿರ್ವಹಿಸಿದರು.

ಇಂದಿನ ಕಾರ್ಯಕ್ರಮ: ಮಾ. 1ರಂದು ಬೆಳಗ್ಗೆ ಶಕ್ತಿ ಹೋಮ, ಮೂಲಮಂತ್ರ ಹವನ, ಕಲಾವೃದ್ಧಿ ಹವನ, ದುರ್ಗಾಶಾಂತಿ ಹವನ, ಬ್ರಹ್ಮ ಕಲಶಾಭಿಷೇಕ, ಪೂರ್ಣಾಹುತಿ, ಮಂಗಳಾರತಿ, ಪ್ರಸಾದ. 4ಗಂಟೆಯಿಂದ ವೈದಿಕ ಮಂತ್ರಾಕ್ಷತೆ, ಆಶೀರ್ವಚನ. ರಾತ್ರಿ 9.30ರಿಂದ ದೇವಾಲಯದ ಕಟ್ಟಡ ಸಹಾಯಾರ್ಥವಾಗಿ ಪೆರ್ಡರು ಮೇಳದವರಿಂದ ಚಂದ್ರಲೇಖ ಯಕ್ಷಗಾನ