ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರದಲ್ಲಿದ್ದ 370ನೇ ವಿಧಿ ರದ್ದುಗೊಳಿಸುವ ಮೂಲಕ ಇದುವರೆಗೆ ಅಸಾಧ್ಯವೆಂದಾಗಿದ್ದನ್ನು ಸಾಧ್ಯವಾಗಿಸಿದ ಛಲಗಾರಿಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೋರಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಮಹಾ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸರದಾರ ವಲ್ಲಭಭಾಯಿ ಪಟೇಲ್ ನಂತರ ದೇಶದ ಗೃಹ ಮಂತ್ರಿ ಸ್ಥಾನದ ಮಹತ್ವವನ್ನು ತೋರಿಸಿಕೊಟ್ಟಿದ್ದು ಅಮಿತ್ ಷಾ. ದೇಶಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ಆಸೀನರಾಗಿರುವ ಅಮಿತ್ ಷಾ, ದೇಶದ್ರೋಹಿಗಳ ಹೃದಯ ನಡುಗಿಸುವ ವ್ಯಕ್ತಿತ್ವ ಹೊಂದಿದ್ದಾರೆ ಎಂದರು.
ಪೂರ್ವಾಂಚಲದ ತ್ರಿಪುರಾದಲ್ಲಿ 25 ವರ್ಷಗಳಿಂದ ಆಡಳಿತದಲ್ಲಿದ್ದ ಕಮ್ಯುನಿಸ್ಟರನ್ನು ತೊಲಗಿಸಿ ಬಿಜೆಪಿ ಅಧಿಕಾರಕ್ಕೆ ಏರಿದೆ. ಗುಜರಾತ, ಹರಿಯಾಣ, ಗೋವಾ, ಉತ್ತರಾಖಂಡ, ಅಸ್ಸಾಂ, ಕರ್ನಾಟಕ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇದ್ದು, ಮುಂದಿನ ದಿನಗಳಲ್ಲಿ ಎಲ್ಲೆಡೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಶ್ರೀರಾಮುಲು, ಸಿ.ಸಿ. ಪಾಟೀಲ, ಸಂಸದರಾದ ಸಂಗಣ್ಣ ಕರಡಿ, ಪಿ.ಸಿ. ಗದ್ದಿಗೌಡರ, ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕರಾದ ಸಿ.ಎಂ. ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಸಿ.ಎಂ. ಉದಾಸಿ, ರೂಪಾಲಿ ನಾಯಕ, ಉಮೇಶ ಕತ್ತಿ, ಬಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್, ಮಾಜಿ ಸಚಿವ ಮುರುಗೇಶ ನಿರಾಣಿ ಮತ್ತಿತರರಿದ್ದರು. ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಶಾಸಕ ಅರವಿಂದ ಬೆಲ್ಲದ ಸ್ವಾಗತಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ನಿರೂಪಿಸಿದರು. ಧಾರವಾಡ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳಮಠ ವಂದಿಸಿದರು.
ಗಂಡು ಮೆಟ್ಟಿನ ನೆಲ ಹುಬ್ಬಳ್ಳಿ ಬಿಜೆಪಿ ಪಾಲಿಗೆ ದೊಡ್ಡ ಶಕ್ತಿ. ಸಿಎಎಯಿಂದ ದೇಶದ ಯಾವೊಬ್ಬ ನಾಗರಿಕರಿಗೂ ತೊಂದರೆಯಾಗುವುದಿಲ್ಲ ಎಂಬುದನ್ನು ತಿಳಿಸಿಕೊಡಬೇಕಿದೆ. ದೇಶದಲ್ಲಿರುವ ಯಾವುದೇ ಮುಸ್ಲಿಂರನ್ನು ಹೊರಹಾಕುವ ಕಾನೂನು ಇದಲ್ಲ. ಈ ಕಾಯ್ದೆ ಬಗ್ಗೆ ಮನೆ ಮನೆಗೆ ಹೋಗಿ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ. | ಜಗದೀಶ ಶೆಟ್ಟರ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ
ರಾಗಾಗೆ ಷಾ ಸವಾಲು: ಪೌರತ್ವ ತಿದ್ದುಪಡಿ ಕಾಯ್ದೆಯಡಿ ದೇಶದ ಜನರ ನಾಗರಿಕತ್ವ ಕಿತ್ತುಕೊಳ್ಳುವ ಸಾಧ್ಯತೆ ಇದ್ದರೆ ರಾಹುಲ್ ಬಾಬಾ ಸಮಯ ಮತ್ತು ಸ್ಥಳ ನಿಗದಿಪಡಿಸಲಿ. ಅವರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚರ್ಚೆಗೆ ಇಳಿಯುತ್ತಾರೆ ಎಂದು ಷಾ ಅವರು ರಾಹುಲ್ ಗಾಂಧಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ರಾಹುಲ್ ಬಾಬಾ ಮೊದಲು ಸಂಪೂರ್ಣವಾಗಿ ಓದಿಕೊಳ್ಳಲಿ. ಮತಬ್ಯಾಂಕ್ಗಾಗಿ ಮುಸ್ಲಿಮರ ದಾರಿ ತಪ್ಪಿಸುವುದನ್ನು ರಾಹುಲ್ ಬಾಬಾ ಮತ್ತವರ ಗುಂಪು ಬಿಡಬೇಕು ಎಂದು ಒತ್ತಾಯಿಸಿದರು.