ಶಿಕಾರಿಪುರ: ಅಡಕೆ ಖರೀದಿದಾರರ ವರ್ತನೆ ಖಂಡಿಸಿ ಹಾಗೂ ರೈತರಿಂದ ಖರೀದಿಗೆ ಷರತ್ತು ವಿಧಿಸುತ್ತಿರುವ ಚೇಣಿದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಅಡಕೆ ಬೆಳೆಗಾರರು ರೈತ ಸಂಘ( ಕೆ.ಟಿ.ಗಂಗಾಧರ್ ಬಣ) ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಕಳೆದ ಒಂದು ತಿಂಗಳಿನಿಂದ ಕೆಲವರು ಸೇರಿಕೊಂಡು ಚೇಣಿದಾರರ ಸಂಘ ಮಾಡಿಕೊಂಡು, ತಾವು ವಿಧಿಸಿದ ಷರತ್ತಿನಂತೆಯೇ ಅಡಕೆ ನೀಡಬೇಕು ಎಂದು ರೈತರಿಗೆ ಒತ್ತಡ ಹೇರುತ್ತಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಈ ಸಂಘಟನೆ ಕಟ್ಟಿಕೊಂಡು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ತಕ್ಷಣ ಇವರು ಈ ಪ್ರಕ್ರಿಯೆಯನ್ನು ನಿಲ್ಲಿಸದಿದ್ದರೆ ನಾವು ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನಗೌಡ ಎಚ್ಚರಿಸಿದರು.
ರೈತ ಸಂಘದ ರಾಜ್ಯ ಸಂಚಾಲಕ ವೀರೇಶ್ ಮಾತನಾಡಿ, ಈ ಸಂಘಟನೆಯವರು ಖರೀದಿದಾರಿಗೆ ಫೋನ್ ಮೂಲಕ ನೀವು ನಮ್ಮ ಸಂಘ ನಿಗದಿಪಡಿಸಿದ ಷರತ್ತುಗಳ ಅನ್ವಯವೇ ಖರೀದಿಸಬೇಕು ಎಂದು ಬೆದರಿಸುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರೈತಸಂಘ ಶಿಕಾರಿಪುರದಲ್ಲಿ ಸಾವಿರಾರು ರೈತರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದರು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಜಿಲ್ಲಾ ಅಧ್ಯಕ್ಷ ಹಾಲಪ್ಪ ಗೌಡರು, ತಾಲೂಕು ಅಧ್ಯಕ್ಷ ರಾಜಣ್ಣ, ಡಿ.ಎಸ್.ಈಶ್ವರಪ್ಪ, ಬೇಗೂರು ಶಿವಪ್ಪ, ಹನುಮಂತರಾವ್ ಹರಗುವಳ್ಳಿ ಇತರರಿದ್ದರು.

ರೈತರನ್ನು ಶೋಷಣೆ ಮಾಡುತ್ತಿರುವ ಚೇಣಿದಾರರ ಸಂಘವನ್ನು ವಜಾಗೊಳಿಸಬೇಕು. ಈ ಪ್ರಕ್ರಿಯೆಯಲ್ಲಿ ತೊಡಗಿರುವವರ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಬೇಕು. ತಾಲೂಕು ದಂಡಾಧಿಕಾರಿಗಳು ರೈತರ ಹಿತ ಕಾಯಬೇಕು. ಈ ಸಂಘಟನೆಯಿಂದ ಜಿಲ್ಲೆಯ ಎಲ್ಲ ಅಡಕೆ ಬೆಳೆಗಾರರಿಗೆ ಸಂಕಷ್ಟ ಉಂಟಾಗಿದೆ.
ವೀರೇಶ್
ರೈತಸಂಘದ ರಾಜ್ಯ ಸಂಚಾಲಕ