ಚೆಕ್​ಪೋಸ್ಟ್ ದಾಳಿಯ ಕಾರಣ ನಿಗೂಢ

ಚಿಕ್ಕಮಗಳೂರು: ಕಳಸ ಸಮೀಪದ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಬಸ್ರಿಕಲ್ ಅರಣ್ಯ ಇಲಾಖೆ ಚೆಕ್​ಪೋಸ್ಟ್ ಮೇಲೆ ಭಾನುವಾರ ನಡೆದ ಪೆಟ್ರೋಲ್ ಬಾಂಬ್ ದಾಳಿ ನಾನಾ ಚರ್ಚೆಗೆ ಕಾರಣವಾಗಿದೆ. ಪ್ರಕರಣ ಯಾವ ಕಾರಣಕ್ಕೆ ನಡೆದಿದ್ದರೂ ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆಗಳು ಗಂಭೀರ ಕ್ರಮಕ್ಕೆ ಮುಂದಾಗಿವೆ.

ಅರಣ್ಯ ಉತ್ಪನ್ನಗಳ ಕಳ್ಳಸಾಗಣೆ, ವನ್ಯ ಪ್ರಾಣಿಗಳನ್ನು ಕೊಂದು ಮಾರಾಟ ಮಾಡುವ ಮಾಫಿಯಾ, ಟಿಂಬರ್ ಕಳ್ಳರು, ಗೋ ಕಳ್ಳರು ಹಾಗೂ ಅರಣ್ಯ ಒತ್ತುವರಿದಾರರ ಮೇಲೆ ಅನುಮಾನ ವ್ಯಕ್ತವಾಗಿದೆ. ಇದರಲ್ಲಿ ಯಾರು ಪೆಟ್ರೋಲ್ ಬಾಂಬ್ ಹಾಕಿದ್ದಾರೆ? ಯಾವ ಕಾರಣಕ್ಕೆ ಇಂಥ ಕೃತ್ಯಕ್ಕೆ ಮುಂದಾಗಿದ್ದಾರೆ? ಅರಣ್ಯ, ಪೊಲೀಸ್ ಮತ್ತು ಎಎನ್​ಎಸ್ ಗಮನ ಬೇರೆಡೆ ಸೆಳೆದು ಬೇರೆ ರೀತಿಯ ಚುಟುವಟಿಕೆ ಮಾಡಲು ಇಂಥ ಕೃತ್ಯ ಮಾಡಲಾಗಿದೆಯೇ? ಮತ್ತಿತರೆ ದೃಷ್ಟಿಕೋನಗಳಿಂದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚೆಕ್​ಪೋಸ್ಟ್ ಬಳಿ ಸಿಕ್ಕಿರುವ ಬಾಟಲಿಗಳು ಮದ್ಯದ ಖಾಲಿ ಬಾಟಲಿಗಳಾಗಿವೆ. ಇದೇ ಸ್ಥಳದಲ್ಲಿ ಮದ್ಯ ಸೇವಿಸಿದ ಗುರುತುಗಳಿವೆ. ಬಾಟಲಿಗೆ ಪೆಟ್ರೋಲ್, ಟರ್ಪಂಟೈನ್ ಆಯಿಲ್ ಮತ್ತು ಮರಳು ಮಿಶ್ರಣ ಮಾಡಿ ಬತ್ತಿಗೆ ಬೆಂಕಿ ಕೊಟ್ಟು ಎಸೆಯಲಾಗಿದೆ.

ಮಲೆನಾಡಲ್ಲಿ ಇತ್ತೀಚೆಗೆ ನಕ್ಸಲ್ ಚಟುವಟಿಕೆ ಕಾಣಿಸಿಕೊಂಡಿಲ್ಲ. ಒಂದು ವೇಳೆ ತಾವೇ ಮಾಡಿದ್ದರೆ ತಮ್ಮಿಂದಲೇ ಈ ಘಟನೆ ಆಗಿದೆ ಎಂಬ ಸಂದೇಶ ಪೊಲೀಸರಿಗೆ ತಲುಪುವಂತೆ ಅವರು ಮಾಡುತ್ತಾರೆ. ಆದರೆ ಇಲ್ಲಿ ಯಾವುದೆ ಕರಪತ್ರ ಕಾಣಸಿಕೊಂಡಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಕೂಗಾಡುತ್ತಿದ್ದಂತೆ ದುಷ್ಕರ್ವಿುಗಳು ಪರಾರಿಯಾಗಿದ್ದಾರೆ.

ಮಲೆನಾಡಲ್ಲಿ ಇತ್ತೀಚೆಗೆ ಗೋ ಕಳವು, ಅರಣ್ಯೋತ್ಪನ್ನ ಮತ್ತು ವನ್ಯಪ್ರಾಣಿಗಳನ್ನು ಕೊಂದು ಕಳ್ಳ ಸಾಗಣೆ ಮಾಡುವ ಜಾಲ ಸಕ್ರಿಯವಾಗಿದೆ. ಇಂಥ ಚಟುವಟಿಕೆ ಮಾಡುವ ಖದೀಮರಿಗೆ ಅರಣ್ಯ ಇಲಾಖೆ ಚೆಕ್​ಪೋಸ್ಟ್​ಗಳೇ ಅಡ್ಡಿಯಾಗಿವೆ. ಬಸ್ರಿಕಲ್ ಚೆಕ್​ಪೋಸ್ಟ್ ಉಡುಪಿ, ಮಂಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ದಟ್ಟ ಮಲೆನಾಡನ್ನು ಬೆಸೆಯುವ ದಾರಿಯಲ್ಲಿದೆ.

ಐದು ತಿಂಗಳ ಹಿಂದೆ ಅರಣ್ಯ ಇಲಾಖೆ ಬಾಬಾಬುಡನ್ ಗಿರಿ ಹಾಗೂ ಇತರೆ ಪ್ರದೇಶದಿಂದ ಉಡ ಸೇರಿ ವನ್ಯ ಪ್ರಾಣಿಗಳನ್ನು ಕೊಂದು ಸಾಗಿಸುವ ಅಂತರರಾಜ್ಯ ಕಳ್ಳರನ್ನು ಬಂಧಿಸಿತ್ತು. ಆ ಮೂಲಕ ಆನ್​ಲೈನ್ ವಹಿವಾಟನ್ನು ಸಹ ಅರಣ್ಯ ಇಲಾಖೆ ಬೆನ್ನುಹತ್ತಿತ್ತು. ಕಳ್ಳ ಸಾಗಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕೈಗೊಂಡ ಕ್ರಮದಿಂದ ಇಂತಹ ಮಾಫಿಯಾಕ್ಕೆ ಎರಡು ತಿಂಗಳಿಂದ ತೊಂದರೆಯಾಗಿತ್ತು. ಸುಲಭವಾಗಿ ಹಣ ಮಾಡುವ ದಾರಿಗೆ ಅಡ್ಡವಾಗಿದ್ದ ಅರಣ್ಯ ಇಲಾಖೆಗೆ ಭಯ ಹುಟ್ಟಿಸಲು ಈ ದಾಳಿ ನಡೆದಿರಬಹುದೆಂಬ ಅನುಮಾನ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗಿದೆ.

ನಕ್ಸಲ್ ಚಟುವಟಿಕೆ ದುರ್ಬಲ: ಎಎನ್​ಎಸ್ ಮತ್ತು ಪೊಲೀಸ್ ಇಲಾಖೆ ಮೂಲಗಳ ಪ್ರಕಾರ ಮಲೆನಾಡಲ್ಲಿ ನಕ್ಸಲ್ ಚಟುವಟಿಕೆ ದುರ್ಬಲವಾಗಿದೆ. 2010ರಿಂದ ಈಚೆಗೆ 13 ನಕ್ಸಲ್ ಬೆಂಬಲಿಗರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಎಎನ್​ಎಸ್ ಪ್ರಕಾರ ನಕ್ಸಲ್ ಪ್ರಮುಖರೆನ್ನಲಾದ ಬಿ.ಜಿ.ಕೃಷ್ಣಮೂರ್ತಿ, ಮುಂಡಗಾರು ಲತಾ, ವನಜಾಕ್ಷಿ, ವಿಕಾಸ ಗೌಡ ಮಲೆನಾಡ ಪ್ರದೇಶದಲ್ಲಿ ಕಾಣಿಸುತ್ತಿಲ್ಲ. ಅಲ್ಲದೆ ಇತ್ತೀಚೆಗೆ ನಕ್ಸಲ್ ಚಟುವಟಿಕೆಗೆ ಮಲೆನಾಡಿನ ನಿವಾಸಿಗಳು ಬೆಂಬಲ ಕೊಡುತ್ತಿಲ್ಲ. ಬಸ್ರಿಕಲ್ ಘಟನೆಯಲ್ಲಿ ನಕ್ಸಲ್ ಪಾತ್ರ ಇರುವ ಬಗ್ಗೆ ಎಎನ್​ಎಸ್​ಗೆ ಅನುಮಾನ ಕಾಣುತ್ತಿಲ್ಲ. ಆದರೂ ಇಲಾಖೆ ಸುತ್ತಮುತ್ತಲಿನ ಕಾಡಿನೊಳಗೆ ಕೂಂಬಿಂಗ್ ನಡೆಸುತ್ತಿದೆ.

ಚೆಕ್​ಪೋಸ್ಟ್​ಗಳೇ ಪ್ರಮುಖ ಟಾರ್ಗೆಟ್: ಮಲೆನಾಡಲ್ಲಿ ಇದೂ ಸೇರಿ ನಾಲ್ಕನೇ ಬಾರಿ ಅರಣ್ಯ ಇಲಾಖೆ ಚೆಕ್​ಪೋಸ್ಟ್ ಮೇಲೆ ದಾಳಿಯಾಗಿದೆ. ಶೃಂಗೇರಿ ಸಮೀಪದ ತನಿಕಲ್ ಅರಣ್ಯ ಚೆಕ್​ಪೋಸ್ಟ್ ಮೇಲೆ 2005ರ ನ.5ರಂದು ಆರ್​ಡಿಎಕ್ಸ್ ಜಿಲೆಟಿನ್ ಬಳಸಿ ನಕ್ಸಲರು ಬಾಂಬ್ ಬ್ಲಾಸ್ಟ್ ಮಾಡಿದ್ದರು. ಆಗಿನ ಮುಖ್ಯಮಂತ್ರಿ ಧರಂ ಸಿಂಗ್ ಎಎನ್​ಎಸ್ ಸ್ಥಾಪಿಸಿ ನಕ್ಸಲ್ ಚಟುವಟಿಕೆಗೆ ನಿಯಂತ್ರಣ ಹಾಕಿದ್ದರು. ಇದಾದ ನಂತರ 2006ರ ಆ.24ರಂದು 20 ಜನರ ನಕ್ಸಲರ ತಂಡ ಶೃಂಗೇರಿ ಸಮೀಪದ ಕೆರೆಕಟ್ಟೆ ಚೆಕ್​ಪೋಸ್ಟ್ ಮೇಲೆ ದಾಳಿ ಮಾಡಿತ್ತು. ಭಿತ್ತಿ ಪತ್ರ ಅಂಟಿಸಿ, ಕರ ಪತ್ರ ಅಲ್ಲಲ್ಲಿ ಹಾಕಿ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟಿತ್ತು. ಇದಾದ ನಂತರ 2013ರ ನವೆಂಬರ್​ನಲ್ಲಿ ನಕ್ಸಲರು ತನಿಕೋಡು ಚೆಕ್​ಪೋಸ್ಟ್ ಮೇಲೆ ದಾಳಿ ನಡೆಸಿ ಕೆಲ ದಾಖಲೆಗಳಿನ್ನು ಹೊರತಂದು ಬೆಂಕಿ ಹಾಕಿದ್ದರು. ಅಲ್ಲದೆ ಸಿಸಿ ಕ್ಯಾಮರಾ ಹಾನಿಗೊಳಿಸಿ ಉಪಕರಣಗಳನ್ನು ಅಪಹರಿಸಿದ್ದರು. ಇದೀಗ ನಡೆದ ದಾಳಿ ಮಾಡಿದ್ದು ಯಾರು ಎಂಬುದು ಮಾತ್ರ ನಿಗೂಢವಾಗಿದೆ.