ಚೆಕ್​ಪೋಸ್ಟ್​ಗಳ ಕಾರ್ಯವೈಖರಿಗೆ ಸಾರ್ವಜನಿಕರ ಆಕ್ರೋಶ

ಗದಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆಯಲಿರುವ ಅಕ್ರಮಕ್ಕೆ ಬ್ರೇಕ್ ಹಾಕಲು ತೆರೆಯಲಾಗಿರುವ ಚೆಕ್​ಪೋಸ್ಟ್​ಗಳ ಕಾರ್ಯವೈಖರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಟಾಚಾರಕ್ಕೆ ಚೆಕ್ ಪೋಸ್ಟ್ ತೆರೆಯಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಗದಗ ನಗರದ ಮುಂಡರಗಿ ರಸ್ತೆ, ಮುಳಗುಂದ ರಸ್ತೆ, ಹುಬ್ಬಳ್ಳಿ ರಸ್ತೆ ಮತ್ತು ರೋಣ ರಸ್ತೆಯಲ್ಲಿ ಚೆಕ್ ಪೋಸ್ಟ್​ಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 18 ತೆರೆಯಲಾಗಿದೆ. ಚೆಕ್ ಪೋಸ್ಟ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ, ಅಲ್ಲಿರುವ ಸಿಬ್ಬಂದಿ ಕಾರ್ಯನಿರ್ವಹಣೆ ಬಗ್ಗೆ ಆರೋಪ ಕೇಳಿಬರುತ್ತಿದೆ. ನಗರದಲ್ಲಿ ಈಗಾಗಲೇ ತೆರೆಯಲಾಗಿರುವ ಚೆಕ್​ಪೋಸ್ಟ್​ಗಳ ಮೂಲಕ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪ್ರತಿ ವಾಹನದ ನಂಬರ್ ಮತ್ತು ವಾಹನ ಎಲ್ಲಿಂದ ಎಲ್ಲಿಗೆ ಹೊರಟಿದೆ ಎಂಬ ಮಾಹಿತಿಯನ್ನು ರಿಜಿಸ್ಟರ್ ಪುಸ್ತಕದಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಆದರೆ, ನಗರದ ಕೆಲ ಚೆಕ್​ಪೋಸ್ಟ್​ಗಳಲ್ಲಿ ಕೇವಲ 200 ರಿಂದ 300 ವಾಹನಗಳ ತಪಾಸಣೆ ಮಾಡಿರುವುದು ಕಂಡು ಬಂದಿದೆ. ಅಲ್ಲದೇ, ಚೆಕ್ ಪೋಸ್ಟ್​ನಲ್ಲಿರುವ ಸಿಬ್ಬಂದಿ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗದಗ ನಗರದ ಮುಳಗುಂದ ರಸ್ತೆ, ಮುಂಡರಗಿ ರಸ್ತೆ ಮತ್ತು ಹುಬ್ಬಳ್ಳಿ ರಸ್ತೆಯಲ್ಲಿರುವ ಚೆಕ್​ಪೋಸ್ಟ್​ಗಳಲ್ಲಿ ಸರಿಯಾಗಿ ಪರಿಶೀಲನೆ ಮಾಡುತ್ತಿಲ್ಲ. ಬಿಸಿಲಿನ ಹೊಡೆತಕ್ಕೆ ಮರದ ನೆರಳಲ್ಲಿ ಕುಳಿತು ಕಬ್ಬು ಜಿಗಿಯುವುದು, ಹರಟೆ ಹೊಡೆಯುವುದು, ಮೊಬೈಲ್​ನಲ್ಲಿ ಚಾಟ್ ಮಾಡುತ್ತ ಸಿಬ್ಬಂದಿ ಹೊತ್ತು ಕಳೆಯುತ್ತಿದ್ದಾರೆ.

ಇಲ್ಲಿವರೆಗೆ ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 76 ಲಕ್ಷ ಮೌಲ್ಯದ ಮದ್ಯ ವಶ ಪಡಿಸಿಕೊಳ್ಳಲಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಝುಣ ಝುಣ ಕಾಂಚಾಣದ ಅಬ್ಬರ ಜೋರಾಗಲಿದೆ. ಚೆಕ್​ಪೋಸ್ಟ್ ಸಿಬ್ಬಂದಿ ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ಮಾಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಚೆಕ್​ಪೋಸ್ಟ್​ಗಳಿಗೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಆದರೆ, ಅವರು ಅಲ್ಲಿಂದ ಹೊರಟು ಹೋದ ಮೇಲೆ ಸಿಬ್ಬಂದಿ ತಿಳಿದರೆ ಮಾತ್ರ ತಪಾಸಣೆ ಮಾಡುತ್ತಾರೆ. ಸಿಬ್ಬಂದಿಗಳ ನಿರ್ಲಕ್ಷ್ಯಂದ ಅನೇಕ ವಾಹನಗಳು ನಿಲ್ಲಿಸದೇ ಹೋಗಿಬಿಡುತ್ತವೆ. ಅಂಥವರ ವಿರುದ್ಧ ಚೆಕ್​ಪೋಸ್ಟ್ ಸಿಬ್ಬಂದಿ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಹೋದರೆ ಹೋಗಲಿ ಎಂಬ ಉದಾಸೀನ ಮಾಡುತ್ತಾರೆ. ಈ ರೀತಿ ಕಾರ್ಯನಿರ್ವಹಿಸಿದರೆ ಚುನಾವಣೆ ಅಕ್ರಮ ತಡೆಯಲು ಸಾಧ್ಯವಿಲ್ಲ ಎಂದು ರಾಜಶೇಖರ ಪಾಟೀಲ ಆರೋಪಿಸುತ್ತಾರೆ.

ಚುನಾವಣೆ ನಿಮಿತ್ತ ತೆರೆಯಲಾಗಿರುವ ಚೆಕ್​ಪೋಸ್ಟ್​ಗಳಲ್ಲಿ ಸಿಬ್ಬಂದಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು. ಈ ಬಗ್ಗೆ ಯಾರೂ ನಿರ್ಲಕ್ಷ್ಯ ತೋರುವಂತಿಲ್ಲ. ಚೆಕ್​ಪೋಸ್ಟ್ ಸಿಬ್ಬಂದಿ ಕಾರ್ಯವೈಖರಿ ಕುರಿತು ಮಾಹಿತಿ ಪಡೆದು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
|ಶ್ರೀನಾಥ ಜೋಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ