ಚುನಾವಣೆ ಹತ್ತಿರವಾದಾಗಲೆಲ್ಲ ಸಿಎಂಗೆ ಆರೋಗ್ಯ ಸಮಸ್ಯೆ

ಶಿವಮೊಗ್ಗ: ಹಾಸನ ಹಾಗೂ ಮಂಡ್ಯದಲ್ಲಿ ನಡೆಯುತ್ತಿರುವುದು ಲೋಕಸಭೆ ಚುನಾವಣೆಯಲ್ಲ. ಅದು ದೇವೇಗೌಡರ ಕುಟುಂಬದ ಅಡುಗೆ ಮನೆ ಜಗಳ ಎನ್ನುವ ಮೂಲಕ ಆ ಕುಟುಂಬದಲ್ಲಿ ರಾಜಕೀಯ ಸ್ಥಾನಮಾನಕ್ಕಾಗಿ ನಡೆಯುತ್ತಿರುವ ಶೀತಲ ಸಮರದ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವ್ಯಂಗ್ಯವಾಡಿದ್ದಾರೆ.

ಮಕ್ಕಳು, ಸೊಸೆ ಹಾಗೂ ಮೊಮ್ಮಕ್ಕಳಿಗಾಗಿ ದೇವೇಗೌಡರು ಕೆಲಸ ಮಾಡುತ್ತಾರೆ. ಮುಖ್ಯಮಂತ್ರಿ ಅವರ ಮಗನಿಗಾಗಿ ಅಳುತ್ತಾರೆ ಎಂದು ಗಾಜನೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಸಂತೋಷ್ ಲೇವಡಿ ಮಾಡಿದರು.

ಚುನಾವಣೆ ಹತ್ತಿರವಾದಾಗಲೆಲ್ಲ ಮುಖ್ಯಮಂತ್ರಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಚುನಾವಣೆ ಬಳಿಕ ಅವರ ಆರೋಗ್ಯ ಸುಧಾರಿಸುತ್ತದೆ. ಮುಖ್ಯಮಂತ್ರಿಯಾದವರು ಜನರ ಕಣ್ಣೀರು ಒರೆಸಬೇಕೆ ಹೊರತು, ಅವರೇ ಕಣ್ಣೀರು ಹಾಕುವುದು ಸರಿಯಲ್ಲ. ಪ್ರಧಾನಿ ಮೋದಿ ಒಂದು ದಿನವೂ ಸಾರ್ವಜನಿಕವಾಗಿ ಕಣ್ಣೀರು ಹಾಕಿಲ್ಲ ಎಂದರು.

ಲೆಕ್ಕ ಕೇಳಿದವರಿಗೆ ತಿರುಗೇಟು: ಬಾಲಾಕೋಟ್ ವಾಯು ದಾಳಿಯಲ್ಲಿ ಮೃತಪಟ್ಟ ಉಗ್ರರ ಲೆಕ್ಕ ಕೇಳುತ್ತಾರೆ. ಅದಕ್ಕೆ ಸಾಕ್ಷಿ ಕೊಡಿ ಎಂದು ಈ ರಾಜ್ಯದ ಮುಖ್ಯಮಂತ್ರಿ ಹೇಳುತ್ತಾರೆ. ಅಡಕೆ ಇಲ್ಲವೆ ಭತ್ತಕ್ಕೆ ಔಷಧ ಸಿಂಪಡಣೆ ಮಾಡಿದ ಬಳಿಕ ಸತ್ತ ಹುಳುಗಳನ್ನು ಯಾರೂ ಲೆಕ್ಕ ಮಾಡುವುದಿಲ್ಲ. ಔಷಧ ಹಾಕಿದ ಬಳಿಕ ನೆಮ್ಮದಿಯಾಗಿರುತ್ತಾರೆ ಎಂದು ಸಂತೋಷ್ ತಿರುಗೇಟು ನೀಡಿದರು.

ಉಗ್ರರ ವಿರುದ್ಧ ಪ್ರತೀಕಾರಕ್ಕೆ ನಮ್ಮ ಸೈನಿಕರು ಯಾವಾಗಲೂ ಸಿದ್ಧರಿದ್ದರು. ಆದರೆ ಅವರಿಗೆ ಸ್ವಾತಂತ್ರ್ಯ ಹಾಗೂ ಪ್ರೋತ್ಸಾಹವಿರಲಿಲ್ಲ. ಕೆಲಸ ಮಾಡುವವರನ್ನು ಹುರಿದುಂಬಿಸುವುದು ಪ್ರಧಾನಿ ಮೋದಿಗೆ ಗೊತ್ತು. ರಸ್ತೆ, ಸೇತುವೆ ನಿರ್ವಣದ ಫೈಲ್​ಗೆ ಸಹಿ ಹಾಕಲು ಪೆನ್​ನಲ್ಲಿ ಇಂಕ್ ಇದ್ದರೆ ಸಾಕು. ಆದರೆ ನೆರೆಯ ರಾಷ್ಟ್ರದೊಳಕ್ಕೆ ಹೋಗಿ ಬಾಂಬ್ ಹಾಕಿ ಬರಲು ಆದೇಶಿಸುವ ಫೈಲ್​ಗೆ ಸಹಿ ಹಾಕಲು ಗಟ್ಟಿ ಗುಂಡಿಗೆಯೂ ಬೇಕು. ಅದು ಮೋದಿಗೆ ಇದೆ ಎಂದರು.

ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್, ಜಿಪಂ ಸದಸ್ಯೆ ಹೇಮಾವತಿ ಶಿವನಂಜಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ಪ್ರಮುಖರಾದ ಗಿರೀಶ್ ಪಟೇಲ್ ಮುಂತಾದವರು ಸಭೆಯಲ್ಲಿದ್ದರು.

ರೋಹಿಂಗ್ಯಾಗಳ ವಿರುದ್ಧ ಕಿಡಿ: ಪಕ್ಕದ ಬರ್ವದಿಂದ ನಮ್ಮ ದೇಶದೊಳಕ್ಕೆ ನುಸುಳಿ ಬಂದಿರುವ ರೋಹಿಂಗ್ಯಾಗಳ ವಿರುದ್ಧ ಕೇಂದ್ರ ಕ್ರಮಕ್ಕೆ ಮುಂದಾದರೆ ನಮ್ಮ ಮುಖ್ಯಮಂತ್ರಿಯ ಕಣ್ಣಲ್ಲಿ ನೀರು ಬರುತ್ತದೆ. ಪಕ್ಕದ ಮನೆಯವರು ಜಗಳ ಮಾಡಿಕೊಂಡು ಆಶ್ರಯಕ್ಕಾಗಿ ನಮ್ಮ ಮನೆಗೆ ಬಂದರೆ ನಾವು ಅವರಿಗೆ ಆಶ್ರಯ ಕೊಡಬೇಕೆ ಎಂದು ಬಿ.ಎಲ್.ಸಂತೋಷ್ ಪ್ರಶ್ನಿಸಿದರು. ಬರ್ವದಲ್ಲಿ ನಡೆಯುತ್ತಿರುವ ಜಗಳವನ್ನು ಅವರೇ ಬಗೆಹರಿಸಿಕೊಳ್ಳಬೇಕು. ಅದು ಅವರ ನಡುವಿನ ಸಂಗತಿ. ಅಲ್ಲಿ ಜಗಳ ಮಾಡಿಕೊಂಡು ಭಾರತದೊಳಕ್ಕೆ ನುಸುಳಿದರೆ ನಾವು ಸುಮ್ಮನಿರುವುದು ಸಾಧ್ಯವಿಲ್ಲ ಎಂದರು.

ಕಮ್ಯನಿಸ್ಟ್ ಸರ್ಕಾರದ ವಿರುದ್ಧ ಆಕ್ಷೇಪ: ಶಬರಿಮಲೈಗೆ ಮಹಿಳೆಯರ ಪ್ರವೇಶ ವಿಷಯದಲ್ಲಿ ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೆ ಜನರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಜನರಿಂದ ಆಯ್ಕೆಯಾದ ಸರ್ಕಾರ ಜನರ ಮನಸ್ಸಿಗೆ ಘಾಸಿ ಉಂಟು ಮಾಡಿದೆ ಎಂದು ಬಿ.ಎಲ್.ಸಂತೋಷ್ ಹೇಳಿದರು.

ಇಂದು ಪುರುಷರಿಗೆ ಪ್ರವೇಶ ನಿಷೇಧವಿರುವ ಅನೇಕ ದೇವಸ್ಥಾನಗಳಿವೆ. ಹಾಗೆಂದು ಪುರುಷರು ಪ್ರತಿಭಟನೆ ಮಾಡಿದ್ದಾರೆಯೇ? ಹಲವು ವರ್ಷಗಳಿಂದ ಶಬರಿಮಲೈನಲ್ಲಿ ಅನುಸರಿಸುತ್ತಿರುವ ರಿವಾಜುಗಳಲ್ಲಿ 50 ವರ್ಷದೊಳಗಿನ ಮಹಿಳೆಯರ ಪ್ರವೇಶ ನಿರ್ಬಂಧವೂ ಒಂದು. ಇದನ್ನು ಪ್ರಶ್ನಿಸಿದ ನಮ್ಮ ಕಾರ್ಯಕರ್ತರ ಮೇಲೆ ಅಲ್ಲಿನ ಸರ್ಕಾರ ನೂರಿನ್ನೂರು ಸುಳ್ಳು ದೂರುಗಳನ್ನು ದಾಖಲಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಂದಿರ ಆಗಲೇ ಬೇಕು: ಆಯೋಧೆ್ಯೆಯಲ್ಲಿ ರಾಮಮಂದಿರ ನಿರ್ವಣವಾಗಲೇ ಬೇಕು. ಅದಕ್ಕೆ ನಾವು ಪ್ರಯತ್ನಿಸುತ್ತಲೇ ಇದ್ದೇವೆ. ಆದರೆ ಕಾಂಗ್ರೆಸ್ ಮುಖಂಡ ಕಪಿಲ್ ಸಿಬ್ಬಲ್, ಚುನಾವಣೆ ಮುಗಿದ ಬಳಿಕ ರಾಮಮಂದಿರ ವಿಚಾರವನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ. ವಿಚಾರಣೆ ನಡೆದು ಮಂದಿರ ನಿರ್ವಣಕ್ಕೆ ಹಸಿರು ನಿಶಾನೆ ಸಿಕ್ಕರೆ ಅದರ ಲಾಭ ಬಿಜೆಪಿಗೆ ಆಗಬಹುದೆಂಬ ಹೆದರಿಕೆ ಅವರದ್ದು. ಹಾಗೆಂದು ರಾಮಮಂದಿರವೇ ಬೇಡ ಎಂದು ಹೇಳುವ ಧೈರ್ಯವೂ ಅವರಿಗಿಲ್ಲ. ಹಾಗೆ ಹೇಳಿದರೆ ರಾಷ್ಟ್ರದ ಜನತೆ ಕಾಂಗ್ರೆಸ್ ವಿರುದ್ಧ ಮುಗಿ ಬೀಳುತ್ತಾರೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಬಿ.ಎಲ್.ಸಂತೋಷ್ ಹೇಳಿದರು.