ಚುನಾವಣೆ ಸಿಬ್ಬಂದಿಗೇ ಬೇಕು ಮತದಾನ ಜಾಗೃತಿ!

ಹಾವೇರಿ:ಸಾರ್ವಜನಿಕರು ಮತದಾನ ಮಾಡುವುದಕ್ಕೆ ಮತ ಯಂತ್ರಗಳನ್ನು ಹೊತ್ತು ತರುವ ಹಾಗೂ ಎಲ್ಲರಿಗೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಜಾಗೃತಿ ಮೂಡಿಸುವ ಅಧಿಕಾರಿಗಳೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದಾರೆ…!

ಹೌದು! ಇಂತಹುದೊಂದು ಪ್ರಶ್ನೆ ಹಿಂದಿನ ಚುನಾವಣೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಅಧಿಕಾರಿಗಳು ಮಾಡಿದ ಮತದಾನ ಪ್ರಮಾಣದ ಅಂಕಿಅಂಶಗಳ ಮೇಲೆ ಕಣ್ಣು ಹಾಯಿಸಿದಾಗ ಕಂಡುಬರುತ್ತಿದೆ.

ಮತದಾನ ಪ್ರಜಾಪ್ರಭುತ್ವವು ನಮಗೆ ಕೊಟ್ಟಿರುವ ಹಕ್ಕು. ಈ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಬೇಕು ಎಂದು ಸ್ವೀಪ್ ಸಮಿತಿ (ವ್ಯವಸ್ಥಿತ ಮತದಾರರ ಜಾಗೃತಿ ಮತ್ತು ಭಾಗವಹಿಸುವಿಕೆ) ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಆದರೆ, ಹೀಗೆ ಜಾಗೃತಿ ಮೂಡಿಸುವ ಅಧಿಕಾರ ಶಾಹಿ ವರ್ಗವೇ ಮತದಾನದಿಂದ ದೂರ ಉಳಿಯುತ್ತಿದೆ. ಚುನಾವಣೆ ಕಾರ್ಯಕ್ಕೆ ನಿಯೋಜನೆಯಾಗುವ ಅರ್ಧಕ್ಕೂ ಹೆಚ್ಚು ಸರ್ಕಾರಿ ಸಿಬ್ಬಂದಿ ಮತದಾನ ಮಾಡುತ್ತಿಲ್ಲ ಎಂಬುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಚುನಾವಣಾ ಆಯೋಗವು ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲು ಜಿ.ಪಂ. ಸಿಇಒ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸ್ಪೀಪ್ ಸಮಿತಿ ರಚಿಸಿದೆ. ಆ ಸ್ವೀಪ್ ಸಮಿತಿ ಮೂಲಕ ಲಕ್ಷಾಂತರ ರೂ. ಖರ್ಚು ಮಾಡಿ ಜಿಲ್ಲೆಯ ಎಲ್ಲ ಭಾಗದಲ್ಲಿ ಜಾಗೃತಿ ಕಾರ್ಯಕ್ರಮ, ಬ್ಯಾನರ್, ಫ್ಲೆಕ್ಸ್​ಗಳನ್ನು ಅಳವಡಿಸಲಾಗುತ್ತದೆ. ಆದರೆ, ಚುನಾವಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಪೋಸ್ಟಲ್ ಮತದಾನ ಮಾಡಲು ಅವಕಾಶವಿದ್ದರೂ ಅರ್ಧಕ್ಕೂ ಹೆಚ್ಚು ಸಿಬ್ಬಂದಿ ಮತದಾನ ಮಾಡುತ್ತಿಲ್ಲ. ಇದು ಕಳೆದ ಲೋಕಸಭೆ, ವಿಧಾನಸಭೆ ಚುನಾವಣೆಯ ಅಂಕಿಅಂಶಗಳನ್ನು ಗಮನಿಸಿದಾಗ ತಿಳಿದುಬರುತ್ತದೆ.

8,304ರಲ್ಲಿ 910 ಮತ ಚಲಾವಣೆ: ಸ್ಪೀಪ್ ಕಾರ್ಯಕ್ರಮದಡಿ ಶಿಕ್ಷಕರು, ಸರ್ಕಾರಿ ಸಿಬ್ಬಂದಿ ಪ್ರತಿಯೊಂದು ಗ್ರಾಮ, ನಗರ, ಪಟ್ಟಣಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸುತ್ತಾರೆ. ಮತದಾನ ಹಕ್ಕಿಲ್ಲದ ಶಾಲಾ, ಕಾಲೇಜ್ ಮಕ್ಕಳಿಗೂ ಮತದಾನದ ಅರಿವು ಮೂಡಿಸುತ್ತಾರೆ. ಆದರೆ, ಅದೇ ಸಿಬ್ಬಂದಿ ಮತದಾನ ಪ್ರಕ್ರಿಯಲ್ಲಿ ಪಾಲ್ಗೊಳ್ಳುವುದಿಲ್ಲ. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಕಾರ್ಯಕ್ಕೆ 8,304 ಸರ್ಕಾರಿ ಸಿಬ್ಬಂದಿ ನೇಮಿಸಲಾಗಿತ್ತು. ಅದರಲ್ಲಿ ಕೇವಲ 910 ಸಿಬ್ಬಂದಿ ಮಾತ್ರ ಅಂಚೆ ಮೂಲಕ ಮತದಾನ ಮಾಡಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ 9,156 ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗಿದ್ದರು. ಅದರದಲ್ಲಿ ಕೇವಲ 5,805 ಸಿಬ್ಬಂದಿ ಮಾತ್ರ ಅಂಚೆ ಮತದಾನ ಮಾಡಿದ್ದರು. ಉಳಿದವರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಈ ಅಂಕಿ- ಅಂಶಗಳನ್ನು ಗಮನಿಸಿದರೆ ಸ್ವೀಪ್ ಸಮಿತಿ ಸಾರ್ವಜನಿಕರಿಗಿಂತ ಮೊದಲು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಮತದಾನದ ಪಾವಿತ್ರ್ಯೆಯ ಕುರಿತು ಜಾಗೃತಿ ಮೂಡಿಸಬೇಕಿದೆ.

ಮತದಾನದಿಂದ ದೂರ ಉಳಿಯಲು ಕಾರಣವೇನು?: ಚುನಾವಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಮತದಾನ ಮಾಡಬೇಕೆಂಬ ನಿಯಮವಿದೆ. ಆದರೆ, ಇದು ಕಡ್ಡಾಯವಿಲ್ಲ. ಅಲ್ಲದೆ, ಇದರ ಕುರಿತು ಸರಿಯಾದ ಮಾಹಿತಿ ಸಕಾಲಕ್ಕೆ ಸಿಗುವುದಿಲ್ಲ. ಚುನಾವಣೆ ಕುರಿತು ತರಬೇತಿ ನೀಡುವಾಗಲೂ ಮತದಾನದ ಬಗ್ಗೆ ಮಾಹಿತಿ ನೀಡುವುದಿಲ್ಲ. ನಾವೇ ಖುದ್ದು ಆಸಕ್ತಿ ವಹಿಸಿ ಹೆಸರು ನೋಂದಾಯಿಸಿದರೂ ಸ್ಪಂದನೆ ಸಿಗುವುದಿಲ್ಲ. ನಾವು ಎಲ್ಲೋ ಕೆಲಸ ಮಾಡುತ್ತಿರುತ್ತೇವೆ. ಅಂಚೆ ಮತಪತ್ರಗಳನ್ನು

ಸಕಾಲದಲ್ಲಿ ತಲುಪಿಸುವುದಿಲ್ಲ. ಎಲ್ಲ ಅಂಚೆ ಮತಗಳನ್ನು ತಹಸೀಲ್ದಾರ್ ಕಚೇರಿಗೆ ಖುದ್ದು ಹೋಗಿಯೇ ಪಡೆಯಬೇಕೆಂಬ ಷರತ್ತು ವಿಧಿಸುತ್ತಾರೆ. ಹೀಗಾಗಿ, ಅಲ್ಲಿಯವರೆಗೂ ಯಾರು ಹೋಗಬೇಕು. ನಮ್ಮದೊಂದು ಮತದಿಂದ ಏನಾಗಬೇಕಿದೆ ಎಂಬ ನಿರಾಸಕ್ತಿಯಿಂದ ಅನೇಕರು ಮತದಾನದಿಂದ ದೂರ ಉಳಿಯುವಂತಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳು ಗಮನಹರಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ಸಮಯದಲ್ಲಿಯೇ ಯಾವ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರಿದೆ ಎಂಬ ಮಾಹಿತಿ ಪಡೆದು ಸಕಾಲದಲ್ಲಿ ಮತಪತ್ರವನ್ನು ಚುನಾವಣೆ ಕರ್ತವ್ಯಕ್ಕೆ ಹೋಗುವ ಸಮಯದಲ್ಲಿ ನೀಡಿದರೆ ನಾವು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯದಂತೆ ಮಾಡಬಹುದು ಎಂದು ಹೆಸರು ಹೇಳಲಿಚ್ಛಿಸದ ಸರ್ಕಾರಿ ನೌಕರರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಅಂಚೆ ಮತದಾನ ಮಾಡಲು ಅವಕಾಶವಿರುತ್ತೆ. ಕಳೆದ ಚುನಾವಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಯ ಮತದಾನ ಪ್ರಮಾಣ ಕಡಿಮೆಯಾಗಿದ್ದರೇ ಅದನ್ನು ಪರಿಶೀಲಿಸುತ್ತೇನೆ. ಈ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಕರ್ತವ್ಯನಿರತ ಸರ್ಕಾರಿ ಸಿಬ್ಬಂದಿ ತಪ್ಪದೇ ಮತ ಚಲಾಯಿಸುವಂತೆ ಸೂಚಿಸಲಾಗುವುದು.

| ಕೃಷ್ಣ ಬಾಜಪೈ ಜಿಲ್ಲಾ ಚುನಾವಣಾಧಿಕಾರಿ, ಹಾವೇರಿ

Leave a Reply

Your email address will not be published. Required fields are marked *