ಚುನಾವಣೆ ವರ್ಷದಲ್ಲಿ ಅಧಿಕಾರ ಅದಲು ಬದಲು

2018ನೇ ಸಾಲು ಚುನಾವಣೆ ವರ್ಷವಾದ್ದರಿಂದ ಜಿಲ್ಲೆಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳ ಉಂಟಾದವು. ಈ ವರುಷ ಯಾರಿಗೆ ಹರುಷ ತಂದಿತು, ಯಾರ ಸಂತಸ ಕಸಿಯಿತು ಎಂಬುದರ ಹಿನ್ನೋಟ ಇಲ್ಲಿದೆ.

ಕಾರವಾರ: ಜಿಲ್ಲೆಯಲ್ಲಿ ಬಿಜೆಪಿಗೆ ಸಾಕಷ್ಟು ಸಿಹಿ ನೀಡಿದ ವರುಷ 2018. ಈ ಸಾಲಿನಲ್ಲಿ ಕಾಂಗ್ರೆಸ್ ಸಾಕಷ್ಟು ಕಹಿ ಉಂಡರೆ, ಜೆಡಿಎಸ್​ಗೆ ಕರಾಳ ವರ್ಷವಾಗಿ ಪರಿಣಮಿಸಿತು.

2018ರ ಮೇ 12ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಿತು. ನಂತರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸಮಬಲ ಸಾಧಿಸಿದವು. ಜೆಡಿಎಸ್ ಮಾತ್ರ ಎರಡೂ ಚುನಾವಣೆಗಳಲ್ಲಿ ನೆಲಕ್ಕಚ್ಚಿತು.

ಕೇಸರಿಮಯ: 2017ರಲ್ಲಿ ಹೊನ್ನಾವರದಲ್ಲಿ ನಡೆದ ಹಿಂದು ಯುವಕನ ಸಾವು, ಅದರ ನಂತರದ ಗಲಾಟೆಗಳು, ಬಿಜೆಪಿ ಮುಖಂಡರ ಭಾಷಣ, ಮೋದಿ ಆಡಳಿತಕ್ಕೆ ಕರಾವಳಿಯ ಜನರ ಒಲವು ಮುಂತಾದ ಕಾರಣದಿಂದಾಗಿ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕೇಸರಿ ರಾರಾಜಿಸಿತು. 2013ರಲ್ಲಿ 3 ವಿಧಾನಸಭೆ ಕ್ಷೇತ್ರಗಳನ್ನು ಗೆದ್ದು, ಇನ್ನೆರಡು ಪಕ್ಷೇತರರನ್ನು ಸೇರಿಸಿಕೊಂಡು ಮುಕ್ಕಾಲು ಜಿಲ್ಲೆಯಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ 2018ರ ಚುನಾವಣೆಯಲ್ಲಿ ಎರಡೇ ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬಿಜೆಪಿಯು 2013 ರಲ್ಲಿ ಗೆದ್ದ ಒಂದು ಸ್ಥಾನ ಉಳಿಸಿಕೊಂಡು ಮತ್ತೆ ಮೂರು ಸ್ಥಾನ ಹೆಚ್ಚಿಸಿಕೊಂಡು ಗೆಲುವಿನ ನಗೆ ಬೀರಿತು.

ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಆರ್.ವಿ.ದೇಶಪಾಂಡೆ 5,140 ಮತಗಳ ಅಂತರದಿಂದ ಬಿಜೆಪಿಯ ಸುನೀಲ ಹೆಗಡೆ ಅವರನ್ನು ಮರು ಆಯ್ಕೆಯಾದರು. ಕಾರವಾರದಲ್ಲಿ ಬಿಜೆಪಿಯ ರೂಪಾಲಿ ನಾಯ್ಕ 14,064 ಮತಗಳ ಅಂತರದಿಂದ ಜೆಡಿಎಸ್​ನ ಆನಂದ ಅಸ್ನೋಟಿಕರ್ ಅವರನ್ನು ಸೋಲಿಸಿದರು. ಕುಮಟಾದಲ್ಲಿ ಬಿಜೆಪಿಯ ದಿನಕರ ಶೆಟ್ಟಿ 32,239 ಮತಗಳ ಅಂತರದಿಂದ ಕಾಂಗ್ರೆಸ್​ನ ಶಾರದಾ ಶೆಟ್ಟಿ ಅವರನ್ನು ಸೋಲಿಸಿದರು. ಭಟ್ಕಳದಲ್ಲಿ ಬಿಜೆಪಿಯ ಸುನೀಲ ನಾಯ್ಕ 5,930 ಮತಗಳ ಅಂತರದಿಂದ ಕಾಂಗ್ರೆಸ್​ನ ಮಂಕಾಳ ವೈದ್ಯ ಅವರನ್ನು ಸೋಲಿಸಿದರು. ಶಿರಸಿಯಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 17,461 ಮತಗಳಿಂದ ಕಾಂಗ್ರೆಸ್​ನ ಭೀಮಣ್ಣ ನಾಯ್ಕ ಅವರನ್ನು ಮರು ಆಯ್ಕೆಯಾದರು. ಯಲ್ಲಾಪುರದಲ್ಲಿ ಕಾಂಗ್ರೆಸ್​ನ ಶಿವರಾಮ ಹೆಬ್ಬಾರ 1,483 ಅಂತರದಿಂದ ವಿ.ಎಸ್.ಪಾಟೀಲ ಅವರನ್ನು ಸೋಲಿಸಿ ಮರು ಆಯ್ಕೆಯಾದರು.

ಗೆದ್ದರೂ ಸದಸ್ಯರಲ್ಲ: ಆಗಸ್ಟ್ 31ರಂದು ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ 199 ಸ್ಥಾನಗಳಿಗೆ ಮತದಾನ ನಡೆದಿತ್ತು. ಸೆ. 3ರಂದು ಫಲಿತಾಂಶ ಪ್ರಕಟವಾಯಿತು. ಆದರೆ, ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟಣೆಯ ವಿಷಯ ನ್ಯಾಯಾಲಯದ ಮೆಟ್ಟಿಲೇರಿದೆ. ಇದರಿಂದಾಗಿ ನಗರ ಸ್ಥಳೀಯ ಸಂಸ್ಥೆಗಳು ನಾಲ್ಕು ತಿಂಗಳಿಂದ ಆಡಳಿತಾಧಿಕಾರಿಗಳಿಂದಲೇ ನಡೆಯುತ್ತಿವೆ. ಚುನಾವಣೆಯಲ್ಲಿ ಗೆದ್ದರೂ ತಾವು ಸದಸ್ಯರು ಎಂದು ಅಧಿಕಾರ ಚಲಾಯಿಸುವ ಹಕ್ಕನ್ನು ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಇದುವರೆಗೂ ಪಡೆದುಕೊಂಡಿಲ್ಲ.

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಪ್ರದರ್ಶಿಸಿದವು. ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಜಿಲ್ಲೆಯಲ್ಲಿ ಜೆಡಿಎಸ್ ಧರಾಶಾಹಿಯಾಯಿತು.

ಕಾಂಗ್ರೆಸ್​ನ 87, ಬಿಜೆಪಿಯ 85 ಹಾಗೂ ಜೆಡಿಎಸ್​ನ 8 ಮತ್ತು ಪಕ್ಷೇತರ 20 ಸದಸ್ಯರು ಆಯ್ಕೆಯಾಗಿದ್ದಾರೆ. 2013ರಲ್ಲಿ ಇದೇ ಸಂಸ್ಥೆಗಳ 184 (ಹಳಿಯಾಳ, ಅಂಕೋಲಾ ಪಪಂಗಳು ಪುರಸಭೆಯಾಗಿ ಮೇಲ್ದರ್ಜೆಗೇರಿ ವಾರ್ಡ್​ಗಳು ಹೆಚ್ಚಿವೆ. ಮುಂಡಗೋಡ,ಯಲ್ಲಾಪುರದಲ್ಲಿ ವಾರ್ಡ್​ಗಳ ಸಂಖ್ಯೆ ಹೆಚ್ಚಾಗಿದೆ.) ವಾರ್ಡ್​ಗಳ ಪೈಕಿ ಕಾಂಗ್ರೆಸ್ 92 ಬಿಜೆಪಿ 41, ಜೆಡಿಎಸ್ 35 ಹಾಗೂ ಇತರರು 16 ಸ್ಥಾನ ಪಡೆದಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಸ್ಥಾನ ದ್ವಿಗುಣಗೊಂಡಿದೆ. ಕಾಂಗ್ರೆಸ್ 5 ಸ್ಥಾನ ಕಳೆದುಕೊಂಡಿದೆ. ಜೆಡಿಎಸ್ 27 ಸ್ಥಾನ ಕಳೆದುಕೊಂಡು ನೆಲಕ್ಕಚ್ಚಿದೆ. ಶಿರಸಿ, ಕುಮಟಾ ಹಾಗೂ ಮುಂಡಗೋಡಿನಲ್ಲಿ ಬಿಜೆಪಿ ಬಹುಮತ ಪಡೆದರೆ, ಹಳಿಯಾಳ ಯಲ್ಲಾಪುರ ಮತ್ತು ದಾಂಡೇಲಿಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ. ಕಾರವಾರ ಹಾಗೂ ಅಂಕೋಲಾ ಅತಂತ್ರವಾಗಿದ್ದು, ಪಕ್ಷೇತರರು ಕಿಂಗ್ ಮೇಕರ್ ಆಗಿದ್ದಾರೆ.

ದೇಶಪಾಂಡೆ ಮತ್ತೆ ಉಸ್ತುವಾರಿ: ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದರೂ ರಾಜ್ಯದಲ್ಲಿ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಆರ್.ವಿ.ದೇಶಪಾಂಡೆ ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜಿಲ್ಲೆಯ ಹಲವೆಡೆ ಬಿಜೆಪಿ ಶಾಸಕರಿದ್ದರೂ ಸೋತ ಮಾಜಿಗಳೇ ತಮ್ಮ ಪ್ರಭಾವ ಬಳಸಿ ಕಾರ್ಯ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

ಎನ್​ಡಬ್ಲ್ಯುಕೆಆರ್​ಟಿಸಿ ಅಧ್ಯಕ್ಷ ಹುದ್ದೆಗೆ ತೃಪ್ತಿ: ಪ್ರಯಾಸಪಟ್ಟು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ ಶಾಸಕ ಶಿವರಾಮ ಹೆಬ್ಬಾರ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಿರಿ ಪಡೆಯಲು ಸಾಕಷ್ಟು ಯತ್ನ ನಡೆಸಿದ್ದರು. ಅದು ಸಿಗದೇ ಇದ್ದಾಗ, ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಯೂ ಹರಡಿತ್ತು. ಇತ್ತೀಚೆಗೆ ಎನ್​ಡಬ್ಲ್ಯುಕೆಆರ್​ಟಿಸಿ ಅಧ್ಯಕ್ಷ ಹುದ್ದೆಯನ್ನು ಅವರಿಗೆ ನೀಡಿ ಸಮಾಧಾನಪಡಿಸಲಾಗಿದೆ.

ಆನಂದ ಬಿಜೆಪಿಯತ್ತ?: 2013 ರ ಚುನಾವಣೆಯಲ್ಲಿ ಸೋತ ನಂತರ ಸಾರ್ವಜನಿಕ ಜೀವನದಿಂದಲೇ ದೂರವಾಗಿದ್ದ ಆನಂದ ಅಸ್ನೋಟಿಕರ್ 2018ರಲ್ಲಿ ಜೆಡಿಎಸ್ ಸೇರಿ ವಿಧಾನಸಭೆ ಚುನಾವಣೆಯ ಅಭ್ಯರ್ಥಿಯಾದರು. ಆದರೆ, ಬಿಜೆಪಿ ಅಲೆಯಲ್ಲಿ ಕೊಚ್ಚಿ ಹೋದರು. ಸಮ್ಮಿಶ್ರ ಸರ್ಕಾರದಲ್ಲಿ ನಿಗಮ- ಮಂಡಳಿ ಆಕಾಂಕ್ಷಿಯಾಗಿದ್ದ ಅವರಿಗೆ ನಿರಾಸೆಯಾಗಿದೆ. ಲೋಕಸಭೆ ಚುನಾವಣೆ ಅಭ್ಯರ್ಥಿಯಾಗುತ್ತೇನೆ ಎನ್ನುತ್ತಿದ್ದವರಿಗೆ ಅದೂ ದಕ್ಕುವ ಲಕ್ಷಣ ಕಾಣುತ್ತಿಲ್ಲ. ಇದರಿಂದಾಗಿ ಅವರು ಮತ್ತೆ ಬಿಜೆಪಿ ಸೇರುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸುದ್ದಿಯಲ್ಲಿದ್ದ ಸಚಿವ: ಕೇಂದ್ರ ಸಚಿವ ಹುದ್ದೆ ಪಡೆದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ತಮ್ಮ ನಾಲಿಗೆ ಹರಿಬಿಟ್ಟು ವರ್ಷವಿಡೀ ಸುದ್ದಿಯಲ್ಲಿದ್ದರು. ಸಂವಿಧಾನ ಬದಲಾಯಿಸಬೇಕು ಎಂಬ ಅವರ ಹೇಳಿಕೆಯು ಭಾರಿ ಪ್ರತಿಭಟನೆಗೆ ಕಾರಣವಾಯಿತು. ನಂತರ ಆಗಿನ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಇದರಿಂದ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ಚರ್ಚೆಯ ವಸ್ತುವಾಗಿದ್ದರು. ಈಗ ಮತ್ತೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಹೆಗಡೆ ಬೇಕಾಬಿಟ್ಟಿ ಮಾತನಾಡುವುದನ್ನು ಕೊಂಚ ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ.

ರಾಜಕೀಯ ಚುರುಕು: 2019ರ ಪ್ರಾರಂಭದಲ್ಲೇ ಲೋಕಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಪಕ್ಷಗಳು ತಯಾರಿ ನಡೆಸುತ್ತಿವೆ. ಜಿಲ್ಲಾಡಳಿತವು ಮತದಾರರ ಪಟ್ಟಿ ಸಿದ್ಧ ಮಾಡಿ, ಮತ ಯಂತ್ರಗಳನ್ನು ರಿಪೇರಿ ಮಾಡಿದೆ. ಅಭ್ಯರ್ಥಿ ಯಾರು ಎಂಬ ಬಗೆಗೆ ಪಕ್ಷಗಳ ವಲಯದಲ್ಲಿ, ಸಾರ್ವಜನಿಕರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.