ಚುನಾವಣೆ ಬಹಿಷ್ಕಾರ ವಾಪಸ್

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಅವರಗುಪ್ಪ ಗ್ರಾಮಸ್ಥರು ತಹಸೀಲ್ದಾರ್ ವಿನಂತಿ ಮೇರೆಗೆ ಲೋಕಸಭೆ ಚುನಾವಣೆ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ.

ಕೋಲಸಿರ್ಸಿ ಗ್ರಾಪಂ ಸಭಾಂಗಣದಲ್ಲಿ ತಹಸೀಲ್ದಾರ್ ಗೀತಾ ಸಿ.ಜಿ.ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರಗುಪ್ಪ ಗ್ರಾಮಸ್ಥರು ಕುಡಿಯುವ ನೀರಿನ ವ್ಯವಸ್ಥೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಗ್ರಾಪಂ ಸದಸ್ಯ ಎಚ್.ಆರ್. ನಾಯ್ಕ, ‘ನೀರು ಸಂಗ್ರಹ ಟ್ಯಾಂಕ್ ಸೋರುತ್ತಿದೆ, ಪೈಪ್​ಲೈನ್ ಒಡೆದಿದ್ದು ನೀರು ಪೂರೈಕೆ ಸಮರ್ಪಕವಾಗುತ್ತಿಲ್ಲ. ಗ್ರಾಮದ ಕೆರೆಯ ಹೂಳು ತೆಗೆಯಬೇಕು. ಹೆಸ್ಕಾಂ ಇಲಾಖೆ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಎಂಜಿಸಿ ಕಾಲೇಜ್, ಮಳವತ್ತಿ ಪ್ರದೇಶ, ಪಾಲಿಟೆಕ್ನಿಕ್ ಕಾಲೇಜ್​ಗೆ ಪಟ್ಟಣ ವ್ಯಾಪ್ತಿಯ ಮೀಟರ್ ನಂಬರ್ ಕೊಟ್ಟಿದ್ದಾರೆ. ಆದರೆ, ಇಲ್ಲಿನ ನಿವಾಸಿಗಳಿಗೆ ಪಟ್ಟಣ ವ್ಯಾಪ್ತಿಯ ಮೀಟರ್ ನಂಬರ್ ಕೊಟ್ಟಿಲ್ಲ. ಎಂಜಿಸಿ ಕಾಲೇಜ್ ಹಾಗೂ ಧನ್ವಂತರಿ ಆಯುರ್ವೆದ ಕಾಲೇಜ್ ನಿಯಮ ಉಲ್ಲಂಘಿಸಿ ಅರಣ್ಯ ಇಲಾಖೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಮತದಾನ ಬಹಿಷ್ಕರಿಸಿದ್ದೇವೆ’ ಎಂದರು. ಆರ್​ಎಫ್​ಒ ವೈ.ಕೆ. ಕಿರಣಕುಮಾರ ಮಾತನಾಡಿ, ‘ಎಂಜಿಸಿ ಕಾಲೇಜ್ ಹಾಗೂ ಆಯುರ್ವೆದ ಕಾಲೇಜ್ ನಿಯಮ ಉಲ್ಲಂಘಿಸಿ ಜಾಗ ಒತ್ತುವರಿ ಮಾಡಿಕೊಂಡಿದ್ದರೆ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ’ ಎಂದರು.

ಗ್ರಾಪಂ ಉಪಾಧ್ಯಕ್ಷ ಕೆ.ಆರ್.ವಿನಾಯಕ ಮಾತನಾಡಿ, ‘ಕಾಲೇಜ್​ಗಳಿಗೆ ಕಾನೂನುಬಾಹೀರವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಅವರಗುಪ್ಪ ಗ್ರಾಮಕ್ಕೂ ನಿರಂತರ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ಚುನಾವಣೆ ಬಹಿಷ್ಕಾರ ಅನಿವಾರ್ಯ’ ಎಂದರು. ಸಮಸ್ಯೆ ಆಲಿಸಿದ ತಹಸೀಲ್ದಾರ್ ಗೀತಾ ಸಿ.ಜಿ., ‘ಪೈಪ್​ಲೈನ್ ಹಾಗೂ ನೀರು ಸಂಗ್ರಹ ಟ್ಯಾಂಕ್ ಸರಿಪಡಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ವೈಯಕ್ತಿಕ ಹಿತಾಸಕ್ತಿಗಿಂತ ಸಾಮೂಹಿಕ ಸಮಸ್ಯೆ ಪರಿಗಣಿಸಲಾಗುವುದು. ಅಕ್ರಮ ವಿದ್ಯುತ್ ಸಂಪರ್ಕದ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಹೀಗಾಗಿ ಮತದಾನ ಬಹಿಷ್ಕಾರ ವಾಪಸ್ ಪಡೆದುಕೊಳ್ಳಿ’ ಎಂದು ಮನವಿ ಮಾಡಿದರು. ಗ್ರಾಮದ ಮುಖಂಡ ಎಂ.ವಿಠ್ಠಲ ಹಾಗೂ ಗ್ರಾಪಂ ಉಪಾಧ್ಯಕ್ಷ ಕೆ.ಆರ್.ವಿನಾಯಕ ಸಾರ್ವಜನಿಕರೊಂದಿಗೆ ರ್ಚಚಿಸಿ ಮತದಾನ ಬಹಿಷ್ಕಾರ ವಾಪಸ್ ಪಡೆಯಲಾಗುವುದು ಎಂದು ಭರವಸೆ ನೀಡಿದರು.

ತಾಪಂ ಇಒ ದಿನೇಶ, ಹೆಸ್ಕಾಂ ಇಂಜಿನಿಯರ್ ಡಿ.ಟಿ.ಹೆಗಡೆ, ಗ್ರಾಪಂ ಪಿಡಿಒ ಸುಬ್ರಹ್ಮಣ್ಯ ಭಟ್ಟ ಉಪಸ್ಥಿತರಿದ್ದರು. ನೂರೈವತ್ತಕ್ಕೂ ಹೆಚ್ಚು ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *