ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಮುಂಡರಗಿ:ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಅರ್ಧಕ್ಕೆ ನಿಂತಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಹದಿನೈದು ದಿನದಲ್ಲಿ ಕೈಗೊಳ್ಳದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಬುಧವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ವೀರನಗೌಡ ಪಾಟೀಲ ಮಾತನಾಡಿ, ಎರಡು ವರ್ಷಗಳ ಹಿಂದೆಯೇ ಪ್ರಾರಂಭಗೊಂಡ ಮುಂಡರಗಿ-ಹರಪನಹಳ್ಳಿ ಹೆದ್ದಾರಿ ಕಾಮಗಾರಿಯಲ್ಲಿ ಕೊರ್ಲಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿ ಅಂದಾಜು 500 ಮೀಟರ್ ರಸ್ತೆ ಕಾಮಗಾರಿ ಕೈಗೊಳ್ಳದೆ ಹಾಗೇ ಬಿಟ್ಟಿದ್ದಾರೆ. ಇದರಿಂದ ವಾಹನ ಸವಾರರಿಗೆ ಮತ್ತು ಗ್ರಾಮಸ್ಥರಿಗೆ ಕಿರಿಕಿರಿಯಾಗಿದೆ. ಹಲವು ಬಾರಿ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ 15 ದಿನದೊಳಗೆ ಕಾಮಗಾರಿ ಕೈಗೊಳ್ಳಬೇಕು. ಇಲ್ಲವಾದರೆ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದರು.

ಹಮ್ಮಿಗಿ ಬ್ಯಾರೇಜ್​ನಿಂದ ತುಂಗಭದ್ರಾ ನದಿಗೆ ನೀರು ಹರಿಸಬೇಕು. ಬ್ಯಾರೇಜ್ ಕೆಳಗಡೆ ಭಾಗದಲ್ಲಿರುವ ಹತ್ತಾರು ಗ್ರಾಮಗಳ ರೈತರು ನದಿ ನೀರು ನಂಬಿಕೊಂಡು ಭತ್ತ, ಶೇಂಗಾ, ಮೊದಲಾದ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ಹಾಗೇ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮರಳು ದಂಧೆಕೋರರು ನದಿಯಲ್ಲಿ ಅಕ್ರಮವಾಗಿ ಕಚ್ಚಾ ರಸ್ತೆ ನಿರ್ವಿುಸಿಕೊಂಡಿದ್ದಾರೆ. ಅದು ನೀರಿನ ಹರಿವಿಗೆ ತೊಂದರೆಯಾಗುತ್ತದೆ. ಕೂಲೇ ಎಲ್ಲ ಕಚ್ಚಾ ರಸ್ತೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬ್ಯಾರೇಜ್​ನಿಂದ ನದಿಗೆ ನೀರು ಹರಿಸದಿದ್ದರೆ ಮಾ.19 ರಂದು ನದಿ ಭಾಗದ ರೈತರು ಬ್ಯಾರೇಜ್ ಬಳಿ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ತಹಸೀಲ್ದಾರ್ ಡಾ.ವೆಂಕಟೇಶ ನಾಯಕ ಮನವಿ ಸ್ವೀಕರಿಸಿದರು. ಹೋರಾಟಗಾರ ವೈ.ಎನ್. ಗೌಡರ, ಸುರೇಶ ಹಲವಾಗಲಿ, ಮತ್ತಿತರರು ಇದ್ದರು.