Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ಚುನಾವಣೆ ಜ್ವರ ಮಧ್ಯೆ ವಿವಾದಗಳ ಪರ್ವ

Thursday, 28.12.2017, 3:06 AM       No Comments

ರಾಜ್ಯದ ಮೂರೂ ಪ್ರಮುಖ ಪಕ್ಷಗಳು ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದ್ದು, ರಾಜಕೀಯ ಸಮೀಕರಣಗಳನ್ನು ಹೆಣೆಯುತ್ತಿವೆ. ಇದಕ್ಕೆ ಪೂರ್ವಭಾವಿಯಾಗಿ ಆರೋಪ-ಪ್ರತ್ಯಾರೋಪ ಗರಿಗೆದರಿ, ಹಲವು ವಿವಾದಗಳು ಸದ್ದು ಮಾಡಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರ್ಷವೂ ‘ಭಾಗ್ಯ’ ಯೋಜನೆಗಳ ಸರಣಿ ಮುಂದುವರಿಸಿದರೆ, ಬಿಜೆಪಿ ಪರಿವರ್ತನೆ ಯಾತ್ರೆ ಮೂಲಕ ಬಲ ಪಡೆದುಕೊಳ್ಳಲು ಯತ್ನಿಸುತ್ತಿದೆ. ಒಟ್ಟಾರೆ, 2017 ರಾಜ್ಯ ರಾಜಕೀಯದ ಬೆಳವಣಿಗೆಗಳು ಕೇಂದ್ರ ಮಟ್ಟದಲ್ಲೂ ಸದ್ದು ಮಾಡಿದವು.

ಸದನ ಸಮಿತಿ ಗಲಾಟೆ

ಐಟಿ ದಾಳಿ ಬಳಿಕ ಡಿಕೆಶಿ ಸಾಕಷ್ಟು ಒತ್ತಡದಲ್ಲಿದ್ದರು. ಬಿಜೆಪಿ ನಾಯಕರ ಬಾಯಿ ಮುಚ್ಚಿಸಲು ತಮ್ಮ ಬಳಿಯಿದ್ದ ವಿದ್ಯುತ್ ಖರೀದಿ ಅಕ್ರಮ ಸದನ ಸಮಿತಿಯ ಅಸ್ತ್ರ ಪ್ರಯೋಗಕ್ಕೆ ಮುಂದಾದರು. ಮೂರು ಪಕ್ಷಗಳು ಅಧಿಕಾರದಲ್ಲಿದ್ದಾಗ ನಡೆದ ಅಕ್ರಮ ಅಥವಾ ಅವ್ಯವಹಾರಗಳ ಬಗ್ಗೆ ದಾಖಲಿಸಿ ಡಿಕೆಶಿ ಕೊನೆಗೂ ವರದಿ ಸಲ್ಲಿಸಿದರು. ಯಾವುದೇ ಅಂತಿಮ ನಿರ್ಧಾರವಾಗದಿದ್ದರೂ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ರಾಜಕೀಯ ಹೊಯ್ದಾಟಕ್ಕೆ ಕಾರಣವಾಯಿತು. 5 ವರ್ಷ ಪೂರೈಸುವ ಸಾಧನೆ!

ಭೂ ಸುಧಾರಣೆ ಹರಿಕಾರ ದೇವರಾಜ ಅರಸ್ ಬಳಿಕ 5 ವರ್ಷ ಆಡಳಿತ ಪೂರೈಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಕಾರಣರಾಗಲಿದ್ದಾರೆ. ಅವಧಿಪೂರ್ವ ಚುನಾವಣೆ ಇರದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಈ ಸಾಧನೆ ಮಾಡಲಿರುವ ಅಪರೂಪದ ಮುಖ್ಯಮಂತ್ರಿಯಾಗಲಿದ್ದಾರೆ.

ಕೆಪಿಸಿಸಿಗೆ ಪರಮೇಶ್ವರ್ ಸಾರಥ್ಯ!

ರಾಜ್ಯ ಕಾಂಗ್ರೆಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಡಾ.ಜಿ.ಪರಮೇಶ್ವರ್ ಸತತ 7 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಅವಧಿ ಪೂರೈಸಿದರು. ಈಗಾಗಲೇ 2 ಅವಧಿ ಪೂರೈಸಿದ್ದ ಪರಮೇಶ್ವರ್ ಅವರನ್ನು ಮುಂದಿನ ವಿಧಾನಸಭೆ ಚುನಾವಣೆವರೆಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಡಿಕೆಶಿ ಅವರಂಥ ಪ್ರಬಲ ಪೈಪೋಟಿ ನಡುವೆಯೂ ಪರಮೇಶ್ವರ್ ಸಚಿವ ಸ್ಥಾನ ತ್ಯಜಿಸಿ ಪಕ್ಷದ ಜವಾಬ್ದಾರಿ ಮುನ್ನಡೆಸಲು ನಿರ್ಧರಿಸಿದರು.

ಆಂತರಿಕ ಬೇಗುದಿ

ರಾಜ್ಯದಲ್ಲಿನ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ಆಂತರಿಕ ಬೇಗುದಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಕಾಂಗ್ರೆಸ್​ನಿಂದ ಇದೇ ಕಾರಣಕ್ಕೆ ಎಸ್.ಎಂ.ಕೃಷ್ಣ ಹಾಗೂ ಎಚ್.ವಿಶ್ವನಾಥ್ ದೂರವಾದರು. ಇದರ ಜತೆಗೆ ಯಡಿಯೂರಪ್ಪ-ಈಶ್ವರಪ್ಪ ನಡುವಿನ ಹಗ್ಗಜಗ್ಗಾಟ ವರ್ಷವಿಡಿ ಸುದ್ದಿ ಮಾಡಿತು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಯಡಿಯೂರಪ್ಪ ನಿದ್ದೆಗೆಡಿಸಲು ಈಶ್ವರಪ್ಪ ಸಫಲರಾದರು. ಆದರೆ ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ವಿವಾದಕ್ಕೆ ತೆರೆ ಬಿತ್ತು. ಇನ್ನು ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಹಾಗೂ ಮೂಲ ಕಾಂಗ್ರೆಸಿಗರ ತೆರೆಮರೆಯ ಕಿತ್ತಾಟ ಇನ್ನೂ ಮುಗಿದಿಲ್ಲ. ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬಾರದು ಎಂದು ಹಳೆ ಕಾಂಗ್ರೆಸಿಗರು ಪ್ರಯತ್ನ ಮುಂದುವರಿಸಿದ್ದಾರೆ. ಪರಿಣಾಮವಾಗಿ ಪಕ್ಷ ಹಾಗೂ ಸರ್ಕಾರದ ಚುನಾವಣೆ ಪ್ರವಾಸದಲ್ಲೂ ಬಿರುಕು ಕಾಣಿಸಿತು.

ಅಮಿತ್ ಷಾ ಸಂಚಲನ!

ಜಡ ಸ್ಥಿತಿಯಲ್ಲಿದ್ದ ರಾಜ್ಯ ಬಿಜೆಪಿಗೆ ಸಂಚಲನ ಮೂಡಿಸಲು ಅಮಿತ್ ಷಾ ಪ್ರವೇಶವಾಯಿತು. ರಾಜ್ಯ ನಾಯಕರಿಗೆ ಬಿಸಿ ಮುಟ್ಟಿಸಿದ ಅಮಿತ್ ಷಾ, 2018ರ ವಿಧಾನಸಭೆ ಚುನಾವಣೆ ತಯಾರಿಗೆ ಪರೋಕ್ಷ ಚಾಲನೆ ನೀಡಿದರು. ಆ ಬಳಿಕ ಮೂರು ಪಕ್ಷಗಳಲ್ಲಿನ ಚುನಾವಣೆ ತಯಾರಿ ‘ಕಾಪಿ-ಪೇಸ್ಟ್’ ಮಾದರಿಯಲ್ಲಿ ನಡೆಯುತ್ತಾ ಸಾಗಿದೆ.

ಡಿಕೆಶಿ ಸಾಮ್ರಾಜ್ಯಕ್ಕೆ ಐಟಿ ಶಾಕ್!

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾಗೆ ಪ್ರತಿಷ್ಠೆಯಾಗಿದ್ದ ಗುಜರಾತ್ ರಾಜ್ಯಸಭಾ ಚುನಾವಣೆಗೆ ಪರೋಕ್ಷವಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪ್ರವೇಶಿಸಿದ್ದರು. ಕಾಕತಾಳೀಯ ಎನ್ನುವಂತೆ ಅದೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಡಿಕೆಶಿ ಸಾಮ್ರಾಜ್ಯಕ್ಕೆ ಭಾರಿ ಶಾಕ್ ನೀಡಿತು. ಸತತ 3 ದಿನಗಳ ಪರಿಶೀಲನೆಯಲ್ಲಿ 400 ಕೋಟಿ ರೂ.ಗಳಿಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂಬ ಆರೋಪಗಳು ಕೇಳಿಬಂದವು. ಈಗಲೂ ವಿಚಾರಣೆ ಮುಂದುವರಿದಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ವಿಷಯವಾಯಿತು. ಡಿಕೆಶಿ ಮನೆ ಹಾಗೂ ಉದ್ಯಮದ ಮೇಲಿನ ಐಟಿ ದಾಳಿ ಸರ್ಕಾರದಲ್ಲಿನ ಅರ್ಧ ಡಜನ್ ಸಚಿವರಿಗೆ ನಡುಕ ಹುಟ್ಟಿಸಿತು. ಇದಕ್ಕೂ ಮುಂಚೆ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮೇಲಿನ ಐಟಿ ದಾಳಿಯೂ ರಾಜ್ಯದ ಗಮನ ಸೆಳೆಯಿತು. ನೋಟು ಅಮಾನ್ಯೀಕರಣದ ತರುವಾಯ ಈ ದಾಳಿ ನಡೆಯಿತು. ಇವೆರಡು ವಿಚಾರಗಳು 2017ರಲ್ಲಿ ಭಾರಿ ಸದ್ದು ಮಾಡಿದ್ದಲ್ಲದೇ, 2018ರ ಚುನಾವಣೆಯಲ್ಲಿ ಇನ್ನಷ್ಟು ರಾಜಕೀಯ ಕಚ್ಚಾಟಗಳಿಗೆ ವಿಷಯವಾಗುವ ಸಾಧ್ಯತೆ ನಿಚ್ಚಳವಾಗಿದೆ.

ಉಪ ಚುನಾವಣೆಯಲ್ಲಿ ‘ಕೈ’ ಮೇಲು

ಸಂಪುಟ ಪುನಾರಚನೆ ಬಳಿಕ ಹಿರಿಯ ಕಾಂಗ್ರೆಸ್ ಮುಖಂಡ ವಿ.ಶ್ರೀನಿವಾಸ್​ಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತಿ ಕಾಂಗ್ರೆಸ್ ತೊರೆದರು. ಇದರಿಂದ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯಿತು. ಇದೇ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಪರಮಾಪ್ತ ಸಚಿವ ಎಚ್.ಎಂ.ಮಹದೇವ್​ಪ್ರಸಾದ್ ಹೃದಯಾಘಾತದಿಂದ ನಿಧನ ಹೊಂದಿದರು. ಈ ಹಿನ್ನೆಲೆಯಲ್ಲಿ ನಂಜನಗೂಡಿನ ಜತೆಗೆ ಗುಂಡ್ಲುಪೇಟೆಗೂ ಉಪಚುನಾವಣೆ ನಿಗದಿಯಾಯಿತು. ಎರಡೂ ಕ್ಷೇತ್ರದಲ್ಲಿ ಗೆಲುವಿನ ಕನಸು ಕಂಡಿದ್ದ ಬಿಜೆಪಿಗೆ ಫಲಿತಾಂಶ ಬಂದಾಗ ನಿರಾಸೆಯಾಯಿತು. ಎರಡೂ ಕ್ಷೇತ್ರ ಕಾಂಗ್ರೆಸ್ ಪಾಲಾದವು.

ಹೈಕಮಾಂಡ್ ಕಪ್ಪ ಕಾಣಿಕೆ

ಉಕ್ಕಿನ ಸೇತುವೆ ನಿರ್ವಣದಲ್ಲಿ ಭ್ರಷ್ಟಾಚಾರದ ವಾಸನೆಯಿದೆ ಎಂಬ ಆರೋಪದಲ್ಲಿ ಬೃಹತ್ ಹೋರಾಟ ರಾಜಧಾನಿಯಲ್ಲಿ ನಡೆಯಿತು. ಈ ಹೊತ್ತಿನಲ್ಲೇ ವಿಧಾನ ಪರಿಷತ್ ಸದಸ್ಯರೊಬ್ಬರ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಡೈರಿಯಲ್ಲಿ ಕಾಂಗ್ರೆಸ್ ಹೈಕಮಾಂಡ್​ಗೆ 600 ಕೋಟಿ ರೂ.ಗಳಿಗೂ ಅಧಿಕ ಕಪ್ಪ ಕಾಣಿಕೆ ಸಂದಾಯವಾಗಿದೆ ಎನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಯಿತು. ವಿಧಾನ್ ಪರಿಷತ್ ಸದಸ್ಯರ ಮನೆಯಲ್ಲಿ ಡೈರಿ ಸಿಕ್ಕಿದೆ ಹಾಗೂ ಅದರಲ್ಲಿ ಹಣ ಹಾಗೂ ಕೆಲವರ ಹೆಸರುಗಳಿರುವುದು ನಿಜ ಎಂದು ಆದಾಯ ತೆರಿಗೆ ಇಲಾಖೆ ಕೂಡ ಸ್ಪಷ್ಟಪಡಿಸಿತು. ಸಿದ್ದರಾಮಯ್ಯ ಸರ್ಕಾರದ ಮೇಲೆ ಅರ್ಕಾವತಿ ಡಿನೋಟಿಫಿಕೇಷನ್ ಬಳಿಕ ಬಂದಂತಹ ಅತಿ ದೊಡ್ಡ ಭ್ರಷ್ಟಾಚಾರದ ಆರೋಪ ಇದಾಗಿತ್ತು. ಈ ಕಪ್ಪ ಕಾಣಿಕೆ ಸಲ್ಲಿಕೆ ವಿಚಾರದಲ್ಲಿ ರಾಜಕೀಯ ಹೋರಾಟಕ್ಕೆ ಮುಂದಾದ ಸಂದರ್ಭದಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್​ಕುಮಾರ್ ನಡುವಿನ ಕಪ್ಪ ಕಾಣಿಕೆ ಸಂಭಾಷಣೆ ಇನ್ನೊಂದು ವಿವಾದಕ್ಕೆ ಕಾರಣವಾಯಿತು.

ಜಾರ್ಜ್ ರಾಜೀನಾಮೆ ಪ್ರಹಸನ

ಸಿದ್ದರಾಮಯ್ಯ ಅವರ ಪರಮಾಪ್ತ ಸಚಿವ ಹಾಗೂ ಕಾಂಗ್ರೆಸ್​ನಲ್ಲಿ ಆಪತ್ಬಾಂಧವರಾಗಿರುವ ಕೆ.ಜೆ.ಜಾರ್ಜ್ ರಾಜೀನಾಮೆ ಪ್ರಹಸನ 2016ರಿಂದ ಆರಂಭವಾಗಿ, 2017ರಲ್ಲಿಯೂ ಮುಂದುವರಿಯಿತು. ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಸುಪ್ರೀಂ ಕೋರ್ಟ್ ಆದೇಶ ನೀಡುತ್ತಿದ್ದಂತೆ ಮತ್ತೆ ರಾಜಕೀಯ ಹೋರಾಟ ಹಾಗೂ ರಾಜೀನಾಮೆ ವಿಚಾರ ಪ್ರಮುಖವಾಯಿತು. ಆದರೆ ಇದು 2018ರ ವರ್ಷದಲ್ಲಿಯೂ ಸದ್ದು ಮಾಡುವುದು ಖಾತ್ರಿ.

ಹೊಸ ಪಕ್ಷಗಳ ಪ್ರವೇಶ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸದ್ದು ಮಾಡಿದ್ದರು. ಈ ಬಾರಿ ‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ದ ಮೂಲಕ ರೀಯಲ್ ಸ್ಟಾರ್ ಉಪೇಂದ್ರ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. 2018ರ ವಿಧಾನಸಭೆ ಚುನಾವಣೆಗೆ ಕೆಪಿಜೆಪಿ ಜತೆಗೆ ಮಾಜಿ ಡಿವೈಎಸ್​ಪಿ ಅನುಪಮಾ ಶೆಣೈ ಅವರ ‘ಭಾರತೀಯ ಜನಶಕ್ತಿ ಕಾಂಗ್ರೆಸ್’ ಕೂಡ ಕಣದಲ್ಲಿದೆ. ರಾಜಕೀಯವಾಗಿ ಇನ್ನೂ ತಳ ಊರದಿದ್ದರೂ ಈ ವರ್ಷದಲ್ಲಿ ಆರಂಭವಾದ ಎರಡು ಪಕ್ಷಗಳಿವು.

ಭೂ ಚಕ್ರದ ಸುಳಿಯಲ್ಲಿ ಸಿದ್ದರಾಮಯ್ಯ!

ಅರ್ಕಾವತಿ ಡಿನೋಟಫಿಕೇಷನ್ ಅಕ್ರಮಕ್ಕೆ ಸಂಬಂಧಿಸಿ ಈಗಾಗಲೇ ನ್ಯಾ.ಕೆಂಪಣ್ಣ ಆಯೋಗ ವರದಿ ನೀಡಿದೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರವೇನು ಎನ್ನುವುದು ಇನ್ನೂ ನಿಗೂಢವಾಗಿರುವಾಗಲೇ, ಭೂಪಸಂದ್ರದಲ್ಲಿನ ಭೂ ಅಕ್ರಮ ಸುಳಿಯಲ್ಲಿ ಸಿದ್ದರಾಮಯ್ಯ ಹೆಸರು ಕೇಳಿ ಬಂತು. ಮೊದಲು ದಾಖಲೆ ಬಿಡುಗಡೆ ಮಾಡಿದ್ದ ಬಿಜೆಪಿ, ವಿವಾದವನ್ನು ರಾಜಭವನದ ಅಂಗಳಕ್ಕೆ ಕೊಂಡೊಯ್ದಿದೆ. ಒಂದೊಮ್ಮೆ ರಾಜ್ಯಪಾಲರು ಕ್ರಿಮಿನಲ್ ವಿಚಾರಣೆಗೆ ಒಪ್ಪಿಗೆ ನೀಡಿದರೆ ಸಿದ್ದರಾಮಯ್ಯ ವಿರುದ್ಧ ಮೊದಲ ಬಾರಿಗೆ ಭೂ ಅಕ್ರಮದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿದೆ.

ಸಂಪುಟ ವಿಸ್ತರಣೆ

ಸಂಪುಟದಲ್ಲಿ ಖಾಲಿ ಇದ್ದ ಮೂರು ಸ್ಥಾನಗಳನ್ನು ಬಹು ದಿನಗಳವರೆಗೆ ಸಿದ್ದರಾಮಯ್ಯ ಖಾಲಿ ಉಳಿಸಿಕೊಂಡಿದ್ದರು. ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಇಲ್ಲ ಎಂದಿದ್ದ ಸಿದ್ದರಾಮಯ್ಯ ಚುನಾವಣೆ ಹೊಸ್ತಿಲಲ್ಲಿ ಇಬ್ಬರು ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ ಹಾಗೂ ಆರ್.ಬಿ.ತಿಮ್ಮಾಪುರ ಅವರಿಗೆ ಮಂತ್ರಿಸ್ಥಾನ ನೀಡುವ ಮೂಲಕ ಅಚ್ಚರಿಗೆ ಕಾರಣವಾದರು. ಇನ್ನೊಂದೆಡೆ ಗುಂಡ್ಲುಪೇಟೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಮಹದೇವಪ್ರಸಾದ್​ರ ಪತ್ನಿ ಮೋಹನಕುಮಾರಿಗೆ ಸಚಿವ ಸ್ಥಾನ ನೀಡಿದರು.

ಲಿಂಗಾಯತಕ್ಕೆ ಗುಜರಾತ್ ಮಾದರಿ!

ಪಾಟಿದಾರಿ ಹೋರಾಟ ಗುಜರಾತ್​ನಲ್ಲಿ ಬಿಜೆಪಿಯ ನಿದ್ದೆಗೆಡಿಸಿತ್ತು. ಕಾಂಗ್ರೆಸ್ಸೇತರ ಸಂಘಟನೆ ಹೋರಾಟದ ಮುಂಚೂಣಿಯಲ್ಲಿ ನಿಂತುಕೊಂಡು, ನಂತರ ಚುನಾವಣೆ ಯಲ್ಲಿ ಕಾಂಗ್ರೆಸ್​ಗೆ ಬೆಂಬಲ ಸೂಚಿಸಿತು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್​ನಿಂದಲೇ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಆರಂಭವಾಗಿದೆ. ಈಗ ತಜ್ಞರ ಸಮಿತಿ ಕೂಡ ರಚಿಸಲಾಗಿದ್ದು, ಶೀಘ್ರದಲ್ಲಿಯೇ ಕೇಂದ್ರಕ್ಕೆ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಸಾಮಾಜಿಕವಾಗಿ ಈ ವರ್ಷದ ಅತಿ ಪ್ರಮುಖ ಘಟನೆ ಇದಾಗಿದೆ.

ಬಿಜೆಪಿ ರಥ ಏರಿದ ಕೃಷ್ಣ

ಸಿದ್ದರಾಮಯ್ಯ ಪ್ರಾಬಲ್ಯ ಕಾಂಗ್ರೆಸ್​ನಲ್ಲಿ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ಹಿರಿಯರ ಬಳಗವು ಪಕ್ಷದಿಂದ ದೂರವಾಗುತ್ತ ಹೋಯಿತು. ಶ್ರೀನಿವಾಸ್​ಪ್ರಸಾದ್ ಬಳಿಕ ರಾಜ್ಯ ಕಾಂಗ್ರೆಸ್​ನ ಮುತ್ಸದ್ದಿ ರಾಜಕಾರಣಿ ಎಸ್.ಎಂ.ಕೃಷ್ಣ ಬಿಜೆಪಿ ಸೇರಿದರು. ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಗೆ ಮೆಚ್ಚಿ ತಾವು ಬಿಜೆಪಿ ಸೇರುವುದಾಗಿ ಘೋಷಿಸಿದರು. ಕೃಷ್ಣ ಅವರ ಈ ನಿರ್ಧಾರವನ್ನು ಇವತ್ತಿನವರೆಗೂ ಕಾಂಗ್ರೆಸ್​ನಲ್ಲಿರುವ ಎಸ್​ಎಂಕೆ ಶಿಷ್ಯಂದರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ರಾಜ್ಯ ರಾಜಕೀಯ ಇತಿಹಾಸದ ಅಚ್ಚರಿಯ ಪಕ್ಷಾಂತರದಲ್ಲಿ ಇದು ಮುಂಚೂಣಿಯಲ್ಲಿರುತ್ತದೆ. ಇದರ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ಸಿಗ ಎಚ್.ವಿಶ್ವನಾಥ್ ಜೆಡಿಎಸ್ ಸೇರಿದರು.

ಜೆಡಿಎಸ್​ಗೆ ಹೊಸ ಕಚೇರಿ

ಕಾಂಗ್ರೆಸ್​ಗೆ ಸೇರಿದ್ದ ಕಚೇರಿಯಲ್ಲೇ ಇಷ್ಟು ದಿನ ಇದ್ದ ಜೆಡಿಎಸ್ ಜೆ.ಪಿ.ಭವನದ ಮೂಲಕ ಹೊಸ ಕಚೇರಿಗೆ ಸ್ಥಳಾಂತರವಾಯಿತು. ಹೊಸ ಕಚೇರಿ ಮೂಲಕ ಪಕ್ಷದ ವರ್ಚಸ್ಸು ಕೂಡ ಬದಲಾಗಲಿದೆ ಎಂದು ನಾಯಕರು ನಂಬಿದ್ದಾರೆ. ಏತನ್ಮಧ್ಯೆ ಕುಟುಂಬ ಪಕ್ಷವಲ್ಲ ಎಂದುಕೊಂಡೇ ರೇವಣ್ಣ ಅವರ ಪುತ್ರ ಪ್ರಜ್ವಲ್​ಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಯಿತು. ಆದಾಗ್ಯೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬದಿಂದ ಯಾರಿಗೆ ಟಿಕೆಟ್ ಎನ್ನುವ ವಿಚಾರವೇ ವರ್ಷಂಪೂರ್ತಿ ಜೆಡಿಎಸ್ ವಲಯದಲ್ಲಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಯಿತು. ಪಕ್ಷಕ್ಕೆ ಇನ್ನೊಂದು ಆಘಾತಕಾರಿ ವಿಚಾರವೆಂದರೆ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ಸಿಎಂ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರು.

ಅಚ್ಚರಿ ತಂದ ಹೆಗಡೆ

ರಾಜ್ಯ ರಾಜಕೀಯದ ಅಚ್ಚರಿಯ ಬೆಳವಣಿಗೆಯೆಂದರೆ ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತ್​ಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದು. ರಾಜ್ಯ ಬಿಜೆಪಿ ನಾಯಕರು ಅಥವಾ ಸ್ವತಃ ಹೆಗಡೆ ಕೂಡ ಇದನ್ನು ನಿರೀಕ್ಷಿಸಿರಲಿಲ್ಲ. ಸಚಿವರಾದ ಬಳಿಕ ಅವರ ರಾಜಕೀಯ ಭಾಷಣಗಳು ಇನ್ನಷ್ಟು ಅಚ್ಚರಿ ಹಾಗೂ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ನಾಯಕರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆಯೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ. ಹೆಗಡೆ ಅವರ ಫೈರ್ ಬ್ರಾಂಡ್ ಭಾಷಣಗಳು ಬಲಪಂಥೀಯರ ಮೆಚ್ಚುಗೆಗೆ ಕಾರಣವಾಗಿವೆ.

Leave a Reply

Your email address will not be published. Required fields are marked *

Back To Top