ಚುನಾವಣೆ ಗುಂಗಿಂದ ಕಾರ್ಯಾಂಗ ಹೊರಬರಲಿ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯ ಒತ್ತಡ ಬಹುತೇಕ ಮುಗಿದಿದೆ. ಇನ್ನಾದರೂ ಆಡಳಿತ ಯಂತ್ರ ಕುಂಟು ನೆಪ ಹೇಳುವುದನ್ನು ಬಿಟ್ಟು ಸರ್ಕಾರಿ ಕಚೇರಿಗಳಿಗೆ ಬರುವ ಜನರಿಗೆ ತ್ವರಿತ ಸೇವೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕೆಂಬ ಒತ್ತಾಯ ಕೇಳಿಬಂದಿದೆ.

ಹೌದು, ಒಂದೂವರೆ ತಿಂಗಳಿಂದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಜನರ ಕೈಗೆ ಸಿಗುತ್ತಿರಲಿಲ್ಲ. ಚುನಾವಣೆ ತರಬೇತಿ, ಮತದಾನ ಜಾಗೃತಿ, ನಾನಾ ಸಭೆ, ಕಾರ್ಯಕ್ರಮ ಸೇರಿ ನೂರೆಂಟು ನೆಪ ಹೇಳಿ ನುಣುಚಿಕೊಳ್ಳುತ್ತಿದ್ದರು. ಅಮಾಯಕ ಜನರನ್ನು ವಾಪಸ್ ಕಳುಹಿಸುತ್ತಿದ್ದರು.

ಜಿಲ್ಲಾಡಳಿತ ಭವನ, ಉಪ ವಿಭಾಗಾಧಿಕಾರಿ ಕಚೇರಿ, ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರ ಕೆಲಸದ ವ್ಯತ್ಯಯದ ಬಗೆಗಿನ ಭಿತ್ತಿ ಚೀಟಿ ಅಂಟಿಸಲಾಗಿತ್ತು. ಮತ್ತೊಂದೆಡೆ ಪೊಲೀಸ್ ಇಲಾಖೆ ಸಹ ಶಾಂತಿ ಸುವ್ಯವಸ್ಥೆ ಕಾಪಾಡುವಿಕೆ ಮತ್ತು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದುದರಿಂದ ಠಾಣೆಗಳಲ್ಲೂ ಜನರ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿದ್ದವು. ಇದೀಗ ಚುನಾವಣೆ ಗೊಡವೆ ಮುಗಿದಿದೆ. ಇನ್ನು ಅಧಿಕಾರಿಗಳು ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕಾಗಿದೆ.

ಜಿಲ್ಲೆಯ ಆರು ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು, ಇಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ 250ಕ್ಕೂ ಹೆಚ್ಚು ಗ್ರಾಮಗಳನ್ನು ಗುರುತಿಸಲಾಗಿದೆ. ಆದರೂ ಕೊಳವೆಬಾವಿ ಮತ್ತು ಖಾಸಗಿ ಟ್ಯಾಂಕರ್ ಮೂಲಕ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಅಲ್ಲಲ್ಲಿ ಜನರು ಖಾಲಿ ಕೊಡ ಹಿಡಿದು ಪ್ರತಿಭಟಿಸುತ್ತಿದ್ದಾರೆ. ವಿಲೇವಾರಿಯಾಗದ ಕಸ, ಮ್ಯಾನ್​ಹೋಲ್​ಗಳಿಂದ ಕೊಳಚೆ ನೀರು ರಸ್ತೆಗೆ ಹರಿಯುವಿಕೆ, ಕೆಟ್ಟು ಹೋದ ಬೀದಿದೀಪಗಳು ಸೇರಿ ನಾನಾ ಸಮಸ್ಯೆಗಳು ಜನರನ್ನು ಕಾಡುತ್ತಿವೆ.

ಕೃಷಿ ಸಾಲ ಮನ್ನಾ, ಬೆಳೆ ವಿಮೆ, ಸಾಗುವಳಿ ಚೀಟಿ, ಸರ್ವೆ ಭೂ ದಾಖಲೆ, ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಪಡೆಯಲು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಬಹುತೇಕ ತಾಂತ್ರಿಕ ದೋಷ, ವಿಲೇವಾರಿಯಾಗದ ಕಡತ, ಪರಿಶೀಲನೆ ಹಂತ ಸೇರಿ ಹಲವು ಕಾರಣಗಳ ಹಿನ್ನೆಲೆಯಲ್ಲಿ ಬಾಕಿ ಉಳಿಸಿಕೊಳ್ಳಲಾಗಿದೆ. ಇದಕ್ಕೆ ಚುನಾವಣೆ ಬಳಿಕ ಸೇವೆ ಸಿಗುವ ನಿರೀಕ್ಷೆಯಲ್ಲಿ ಇಲ್ಲಿಯವರೆಗೂ ಅನೇಕರು ಸುಮ್ಮನಿದ್ದರು. ಇದೀಗ ಕೆಲಸ ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿರುವ ದೃಶ್ಯ ಕಂಡು ಬರುತ್ತಿದ್ದು ಆಡಳಿತ ಯಂತ್ರ ಚುರುಕಾಗಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯ.

Leave a Reply

Your email address will not be published. Required fields are marked *