ಚುನಾವಣೆ ಕಮಿಷನ್ ಹೊಡೆದ ಸರ್ಕಾರ

ಹಾವೇರಿ: ರಾಜ್ಯ ಸರ್ಕಾರ ಐದು ಕಾಮಗಾರಿಗಳಿಗೆ ಸಂಬಂಧಿಸಿದಂತೆ 1344 ಕೋಟಿ ರೂ.ಗಳನ್ನು ಕಾಮಗಾರಿ ಆಗುವ ಮುನ್ನವೇ ಬಿಡುಗಡೆ ಮಾಡಿದೆ. ಇದು ಚುನಾವಣೆಗೆ ಕಮಿಷನ್ ಹೊಡೆಯಲು ಅಲ್ಲದೆ, ಮತ್ತಾವ ಉದ್ದೇಶಕ್ಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.

ನಗರದ ಮುನ್ಸಿಪಲ್ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಐಟಿ ದಾಳಿಯಾದಾಗ ಕುಮಾರಸ್ವಾಮಿ ಬಾಯಿ ಬಡಿದುಕೊಂಡರು. ಈಗ ಏನು ಉತ್ತರ ಕೊಡ್ತೀರಿ? ಕಾಮಗಾರಿ ಮುಗಿಯುವ ಮುನ್ನವೇ ಹಣ ಏಕೆ ಕೊಟ್ಟೀರಿ? ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸ್ತೀರಾ? ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ನಿಮ್ಮ ಬಣ್ಣ ಬಯಲಾಗುತ್ತೆ. ಚುನಾವಣಾ ಫಲಿತಾಂಶದ ನಂತರ ಇವರ ಕಿತ್ತಾಟ ಹೆಚ್ಚಾಗಿ ಸರ್ಕಾರ ಬಿದ್ದು, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಮೋದಿಯವರು ಕಳೆದ ಚುನಾವಣೆಯಲ್ಲಿ ಆಶ್ವಾಸನೆ ಕೊಟ್ಟಂತೆ ಐದು ವರ್ಷ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದ್ದಾರೆ. ದೇಶ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇನೆಂದು ಹೇಳಿದ್ದರು. ಅದೇ ರೀತಿ ಕೆಲಸ ಮಾಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸುಧಾರಿಸಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಮೋದಿ ಗಾಳಿ ಈ ಬಾರಿ ನಿರೀಕ್ಷೆ ಮೀರಿ ಹೆಚ್ಚಾಗಿದೆ. ಬಹುತೇಕ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಈಗಾಗಲೇ ಗೆದ್ದಾಗಿದೆ. ಎಷ್ಟು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂಬುದನ್ನು ತಿಳಿಯುವುದಷ್ಟೇ ಬಾಕಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ನವರು ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಸನೆ ಈಡೇರಿಸಲು ದೇಶದ ಒಂದು ವರ್ಷದ ಬಜೆಟ್ ಪೂರ್ತಿ ಹಣ ಕೂಡ ಸಾಕಾಗಲ್ಲ. ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಇದುವರೆಗೂ ರೈತರ ಸಾಲ ಸಂಪೂರ್ಣ ಮನ್ನಾ ಮಾಡಿಲ್ಲ. 45,000 ಕೋಟಿ ರೂಪಾಯಿ ಮೊತ್ತದಷ್ಟು ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರೂ 4,500 ಕೋಟಿ ರೂ.ಗಳನ್ನು ಕೂಡ ಮನ್ನಾ ಮಾಡಿಲ್ಲ. ಕಳೆದ ಒಂಬತ್ತು ತಿಂಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ನೀರಾವರಿ ಯೋಜನೆಗಳಿಗೆ ಹಣ ಕೊಟ್ಟಿಲ್ಲ. ಎಸ್​ಸಿ- ಎಸ್​ಟಿಯವರಿಗೆ ಸೌಲಭ್ಯ ನೀಡಿಲ್ಲ ಎಂದು ಆರೋಪಿಸಿದರು.

ಸಭೆಯಲ್ಲಿ ಲೋಕಸಭೆ ಚುನಾವಣೆ ಕ್ಷೇತ್ರದ ಉಸ್ತುವಾರಿ, ಶಾಸಕ ಬಸವರಾಜ ಬೊಮ್ಮಾಯಿ, ಶಾಸಕರಾದ ನೆಹರು ಓಲೇಕಾರ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿರೂಪಾಕಪ್ಪ ಬಳ್ಳಾರಿ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ಮಾಜಿ ಶಾಸಕರಾದ ಯು.ಬಿ. ಬಣಕಾರ, ಸುರೇಶಗೌಡ ಪಾಟೀಲ, ಇನ್ನಿತರರು ಇದ್ದರು.

ಚುನಾವಣೆ ಮುಗಿಯುವವರೆಗೆ ವಿಶ್ರಾಂತಿ ಬೇಡ: ಪಕ್ಷದ ಕಾರ್ಯಕರ್ತರು ಒಂದು ದಿನವೂ ವಿಶ್ರಮಿಸದೇ ಮನೆಮನೆಗೆ ಹೋಗಿ ಮತ ಹಾಕಿಸಬೇಕು. ಮತದಾನ ಮುಗಿಯುವವರೆಗೂ ಕಾರ್ಯಕರ್ತರು ಮನೆ ಸೇರದೇ ಕೆಲಸ ಮಾಡಿ ದೊಡ್ಡ ಅಂತರದಲ್ಲಿ ಉದಾಸಿಯವರನ್ನು ಗೆಲ್ಲಿಸಿ. ಈ ಗೆಲುವಿನ ಅಂತರ ನೋಡಿ ಮುಂದಿನ ಚುನಾವಣೆಯಲ್ಲಿ ಯಾರೂ ಉದಾಸಿ ಎದುರು ಸ್ಪರ್ಧಿಸುವ ಧೈರ್ಯ ತೋರಬಾರದು. ಆ ರೀತಿ ಗೆಲುವಿನ ಅಂತರ ಹೆಚ್ಚಿಸಿರಿ. ಸಂಸತ್ ಸದಸ್ಯ ಹೇಗಿರಬೇಕು ಎಂಬುದನ್ನು ಶಿವಕುಮಾರ ಉದಾಸಿ ತೋರಿಸಿಕೊಟ್ಟಿದ್ದಾರೆ ಎಂದು ಬಿ.ಎಸ್.ವೈ ಹೇಳಿದರು.