ಚುನಾವಣೆಗೆ 11 ಸಾವಿರ ಬಸ್

ಬೆಂಗಳೂರು: ಚುನಾವಣಾ ಕಾರ್ಯಕ್ಕಾಗಿ ರಾಜ್ಯದಲ್ಲಿ 4 ನಿಗಮಗಳ 11 ಸಾವಿರ ಸರ್ಕಾರಿ ಬಸ್​ಗಳು ಬಳಕೆಯಾಗುವ ನಿರೀಕ್ಷೆ ಇದೆ. ಆದರೆ, ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಕೆಎಸ್ಸಾರ್ಟಿಸಿ ಕಾರ್ಯಯೋಜನೆ ರೂಪಿಸುತ್ತಿದೆ.

ಕೆಎಸ್ಸಾರ್ಟಿಸಿಯ 3ರಿಂದ 4 ಸಾವಿರ ಬಸ್​ಗಳು ಚುನಾವಣೆ ಕಾರ್ಯಕ್ಕಾಗಿ ನಿಯೋಜನೆಗೊಳ್ಳಲಿವೆ. ಆದ್ದರಿಂದ ಏ. 17 ಮತ್ತು 19ರಂದು ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ದೂರದ ಊರಿಗೆ ಪ್ರಯಾಣಿಸುವ ಜನರಿಗೆ ಬಸ್ ವ್ಯತ್ಯಯ ಕಾಡಲಿದೆ.

ಏ. 18ರಂದು ಬೆಂಗಳೂರು ಗ್ರಾಮಾಂತರ, ಬೆಂ. ಕೇಂದ್ರ, ಬೆಂ. ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ಹಾಸನ, ಮೈಸೂರು-ಕೊಡಗು, ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಬೆಂಗಳೂರು ಸುತ್ತಲಿನ ಜಿಲ್ಲೆಗೆ ತೆರಳುವವರಿಗೆ ಹೆಚ್ಚಿನ ಸಮಸ್ಯೆ ಆಗದಿದ್ದರೂ ಕರಾವಳಿ ಹಾಗೂ ಚಿತ್ರದುರ್ಗ ಕಡೆಗೆ ಪ್ರಯಾಣಿಸುವ ಜನರಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ಏ.17ಕ್ಕೆ ಮಹಾವೀರ ಜಯಂತಿ, ಏ.18ರಂದು ಮತದಾನ, ಏ.19ಕ್ಕೆ ಗುಡ್​ಫ್ರೈಡೇ, ಏ.20ರಂದು ಶನಿವಾರ. ಹೀಗೆ ಸಾಲು ರಜೆ ಹಿನ್ನೆಲೆಯಲ್ಲಿ ಏ.16 ರಾತ್ರಿಯೇ ಬಹಳಷ್ಟು ಜನ ಊರಿಗೆ ಪ್ರಯಾಣಿಸಲಿದ್ದಾರೆ. ಆದರೆ, ಏ.16ರ ಸಂಜೆಯೇ ಚುನಾವಣೆ ಕಾರ್ಯಕ್ಕೆ ಬಸ್​ಗಳು ತೆರಳಲಿವೆ. 11 ಸಾವಿರ ಬಸ್ ಬೇಕಾಗ ಬಹುದು ಎಂದು ಚುನಾವಣಾ ಆಯೋಗ ಅಂದಾಜಿಸಿದೆ. ಎರಡು ಹಂತದ ಮತದಾನ ಇರುವುದರಿಂದ ಬಸ್ ಸಂಚಾರದಲ್ಲಿ ಹೆಚ್ಚು ವ್ಯತ್ಯಯ ಆಗುವುದಿಲ್ಲ. ಏ.18ರಂದು ಇತರ ನಿಗಮಗಳಿಂದ ಕೆಎಸ್ಸಾರ್ಟಿಸಿ ಕಾರ್ಯಾಚರಣೆ ನಡೆಸುವ ಜಿಲ್ಲೆಗೆ ಹೆಚ್ಚಿನ ಬಸ್ ಕಾರ್ಯಾಚರಣೆ ಮಾಡಲಿವೆ. ಏ.23ರಂದು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕೆಎಸ್ಸಾರ್ಟಿಸಿಯ ಹೆಚ್ಚಿನ ಬಸ್ ಬಳಕೆ ಆಗಲಿವೆ. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಎಂಡಿ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.

ಹೆಚ್ಚು ಅಂಚೆ ಮತ ಸಂಗ್ರಹಕ್ಕೆ ಬಹುಮಾನ

ಚುನಾವಣಾ ಕರ್ತವ್ಯನಿರತ ಸಿಬ್ಬಂದಿಗೆ ಅಂಚೆ ಮತ ಚಲಾಯಿಸಲು ಅವಕಾಶವಿದೆ. ನಿಗಮದ ಎಲ್ಲ ವಿಭಾಗಗಳಿಂದ ನೋಡಲ್ ಅಧಿಕಾರಿಗಳನ್ನು ಇದಕ್ಕಾಗಿ ನೇಮಿಸಲಾಗಿದೆ. ಶೇಕಡಾವಾರು ಅತಿ ಹೆಚ್ಚು ಅಂಚೆ ಮತ ಸಂಗ್ರಹಿಸುವ ಘಟಕ ಹಾಗೂ ವಿಭಾಗಕ್ಕೆ ಬಹುಮಾನ ನೀಡುವುದಾಗಿ ವ್ಯವಸ್ಥಾಪಕ ನಿರ್ದೇಶಕರು ಘೋಷಿಸಿದ್ದಾರೆ.

ಅಭ್ಯರ್ಥಿಗಳ ಖರ್ಚಿನ ಮೇಲೆ ನಿಗಾ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚಿನ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲು 24 ಸಹಾಯಕ ಖರ್ಚು-ವೆಚ್ಚ ಅಧಿಕಾರಿಗಳನ್ನು ನೇಮಿಸಲಾಗಿದೆ.

ಲೋಕಸಭಾ ಚುನಾ ವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಮತ್ತು ಪಕ್ಷ ಗಳ ಖರ್ಚಿನ ಮೇಲೆ ನಿಗಾವಹಿಸಲು ಚುನಾವಣಾ ಆಯೋಗ ಹಲವು ಕ್ರಮ ಕೈಗೊಳ್ಳುತ್ತಿದೆ. ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿನ 24 ವಿಧಾನಸಭಾ ಕ್ಷೇತ್ರಕ್ಕೂ ತಲಾ ಒಬ್ಬರು ಸಹಾಯಕ ಖರ್ಚು-ವೆಚ್ಚ ಅಧಿಕಾರಿಗಳನ್ನು ನೇಮಿಸಲಾಗಿದೆ. ಜತೆಗೆ ಬೆಂಗಳೂರು ದಕ್ಷಿಣ, ಉತ್ತರ ಮತ್ತು

ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಒಂದೊಂದು ಕ್ಷೇತ್ರಕ್ಕೂ ತಲಾ 8 ಅಧಿಕಾರಿಗಳಿರುವ 3 ಲೆಕ್ಕ ಪರಿಶೀಲನೆ ತಂಡಗಳನ್ನು ನೇಮಿಸಲಾಗಿದೆ. ಈ ತಂಡಗಳು ಪ್ರತಿ ಅಭ್ಯರ್ಥಿ ಮತ್ತು ಪಕ್ಷಗಳ ಸಭೆ, ಸಮಾರಂಭ ಸೇರಿ ಇನ್ನಿತರ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸಲಿವೆ.

ಪ್ರತಿದಿನ ವರದಿ: ಈವರೆಗಿನ ಚುನಾವಣೆಯಲ್ಲಿ ಅಭ್ಯರ್ಥಿ ಮತ್ತು ಪಕ್ಷಗಳ ಖರ್ಚಿನ ವಿವರದ ವರದಿ ಸಿದ್ಧಪಡಿಸಲು 1 ವಾರ ಬೇಕಾಗುತ್ತಿತ್ತು. ಆದರೆ, ಈ ಬಾರಿ ಪ್ರತಿ ದಿನ ಆಯಾ ದಿನದಲ್ಲಿ ಅಭ್ಯರ್ಥಿ ಮತ್ತು ಪಕ್ಷ ಮಾಡಿದ ವೆಚ್ಚದ ವಿವರವುಳ್ಳ ವರದಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಲು ನಿರ್ಧರಿಸಲಾಗಿದೆ. ಆಮೂಲಕ ಖರ್ಚಿನ ಬಗೆಗಿನ ಗೊಂದಲ ನಿವಾರಣೆಯಾಗಲಿದೆ.

ಹತ್ತು ಲಕ್ಷಕ್ಕೂ ಹೆಚ್ಚಿನ ಹಣ ಬಿಡುಗಡೆ ಮೇಲೆ ಕಣ್ಗಾವಲು

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಯಾವುದೇ ಬ್ಯಾಂಕ್​ನಿಂದ 10 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಬಿಡಿಸಿಕೊಂಡರೆ ಅದಕ್ಕೆ ಲೆಕ್ಕ ನೀಡಬೇಕಿದೆ. ಹೀಗೆ ಹಣ ಬಿಡಿಸಿಕೊಳ್ಳುವವರ ವಿವರವನ್ನು ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಈಗಾಗಲೇ ನಗರದ ಎಲ್ಲ ಬ್ಯಾಂಕ್​ಗಳಿಗೂ ತಿಳಿಸಿದ್ದಾರೆ. ಬ್ಯಾಂಕ್​ಗಳು ನೀಡುವ ವಿವರವನ್ನಾಧರಿಸಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.