ಚುನಾವಣೆಗೆ ಸಿಬ್ಬಂದಿ ಸಕಲ ಸನ್ನದ್ಧ

ಧಾರವಾಡ: ಲೋಕಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ನಗರದ ಆರ್​ಎಲ್​ಎಸ್ ಪದವಿಪೂರ್ವ ಕಾಲೇಜು ಹಾಗೂ ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಶಾಲೆಗಳ ಆವರಣದಲ್ಲಿ ಸೋಮವಾರ ನಡೆಯಿತು.

ಧಾರವಾಡ- 71 ಕ್ಷೇತ್ರದಲ್ಲಿ 231 ಹಾಗೂ ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ 266 ಮತಗಟ್ಟೆಗಳಿವೆ. ಪ್ರತಿಯೊಂದಕ್ಕೂ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮತದಾನ ಸಹಾಯಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಎರಡೂ ಶಾಲೆಗಳ ಆವರಣದಲ್ಲಿ ಸಿಬ್ಬಂದಿ ಜಮಾಯಿಸಿದ್ದರು. ಚುನಾವಣೆ ಕಾರ್ಯ ಹಾಗೂ ಮತಗಟ್ಟೆಗಳ ಬಂದೋಬಸ್ತ್್ತಾಗಿ ನಿಯೋಜಿತಗೊಂಡಿರುವ ಪೊಲೀಸರು ಕೂಡ ಆಗಮಿಸಿದ್ದರು. ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸರನ್ನು ಕರೆದುಕೊಂಡು ಹೋಗಲು ಬಸ್ ಹಾಗೂ ಜೀಪ್​ಗಳು ಕಾಲೇಜು ಆವರಣದಲ್ಲಿ ಸಾಲಾಗಿ ಜಮಾವಣೆಗೊಂಡಿದ್ದವು. ಇದಕ್ಕಾಗಿ ಜಿಲ್ಲೆಯಾದ್ಯಂತ 363 ಮಾರ್ಗಗಳನ್ನು ಗುರುತಿಸಿ, 180 ಬಸ್, 184 ಮ್ಯಾಕ್ಸಿಕ್ಯಾಬ್, 167 ಜೀಪ್ ಹಾಗೂ 21 ಇತರ ವಾಹನಗಳು ಸೇರಿ 552 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಎಲ್ಲ ವಾಹನಗಳಿಗೆ ಜಿಪಿಎಸ್: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅಧಿಕಾರಿ, ಸಿಬ್ಬಂದಿ ತೆರಳಬೇಕಿರುವ ಮತಗಟ್ಟೆಯ ವಿವರ ಹಾಗೂ ಬಸ್​ಗಳ ವಿವರವನ್ನು ಕಾಲೇಜು ಆವರಣದಲ್ಲಿ ಧ್ವನಿವರ್ಧಕ ಮೂಲಕ ತಿಳಿಸುವ ವ್ಯವಸ್ಥೆ ಮಾಡಲಾಗಿತ್ತು. ಇನ್ನೊಂದೆಡೆ, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಸಾಮಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್ ಯಂತ್ರದ ಪೆಟ್ಟಿಗೆ ಹಾಗೂ ವಿಶೇಷ ಕಿಟ್ ಬ್ಯಾಗ್ ಅನ್ನು ವಿತರಿಸಲು ಸೆಕ್ಟರ್​ವಾರು ಕೊಠಡಿಗಳನ್ನು ಸ್ಥಾಪಿಸಿ, ಆಯಾ ಮತಗಟ್ಟೆಗಳ ಸಿಬ್ಬಂದಿಗೆ ಚುನಾವಣಾ ಸಾಮಗ್ರಿ ವಿತರಿಸಲಾಯಿತು.

ಸ್ಥೈರ್ಯ ತುಂಬಿದ ಡಿಸಿ: ಧಾರವಾಡದಲ್ಲಿ ಮಸ್ಟರಿಂಗ್ ಕಾರ್ಯ ಜರುಗಿದ ಕಾಲೇಜು ಆವರಣಕ್ಕೆ ಬೆಳಗ್ಗೆಯೇ ಆಗಮಿಸಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್, ಮಸ್ಟರಿಂಗ್ ಕಾರ್ಯದ ವಿವರ ಪಡೆದರು. ಚುನಾವಣಾ ಸಾಮಗ್ರಿಯನ್ನು ಜೋಡಿಸಿಕೊಳ್ಳಲು ಸಿಬ್ಬಂದಿಗೆ ಕೊಠಡಿಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ಭೇಟಿ ನೀಡಿದ ಜಿಲ್ಲಾಧಿಕಾರಿ, ಮತಗಟ್ಟೆ ಅಧಿಕಾರಿ, ಸಿಬ್ಬಂದಿಯೊಂದಿಗೆ ಮಾತನಾಡಿ, ಆತಂಕವಿಲ್ಲದೆ, ಧೈರ್ಯ ಹಾಗೂ ಪ್ರಾಮಾಣಿಕತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.

ಪರಿಸರ ಸ್ನೇಹಿ ಸಾಮಗ್ರಿ ಬಳಕೆ:ಪ್ಲಾಸ್ಟಿಕ್ ಬದಲು ಬಟ್ಟೆಯ ಬ್ಯಾಗ್, ಪೇಪರ್ ಕವರ್​ಗಳನ್ನು ಬಳಸುವ ಮೂಲಕ ಮತಗಟ್ಟೆಯನ್ನು ಪರಿಸರ ಸ್ನೇಹಿಯನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ. ವಿವಿ ಪ್ಯಾಟ್ ಯಂತ್ರ ಹಾಗೂ ವಿದ್ಯುನ್ಮಾನ ಮತಯಂತ್ರಗಳಿಗೆ ಆದಷ್ಟು ಬಿಸಿಯ ತಾಪದಿಂದ ರಕ್ಷಿಸುವ ರೀತಿ ಕ್ರಮ ಕೈಗೊಳ್ಳುವಂತೆ ಮತಗಟ್ಟೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮತದಾನ ಗೌಪ್ಯತೆ ಕಾಪಾಡಲು ಕಿಟಕಿಗಳ ಮೂಲಕ ಮತದಾನ ಪ್ರಕ್ರಿಯೆ ಕಾಣದಂತೆ ವ್ಯವಸ್ಥೆಗೊಳಿಸಲು ಎಚ್ಚರಿಕೆ ನೀಡಲಾಗಿದೆ.

ಪ್ರಥಮ ಚಿಕಿತ್ಸಾ ಕಿಟ್: ಸಿಬ್ಬಂದಿಯ ಆರೋಗ್ಯ ರಕ್ಷಣೆಗೂ ಕಾಳಜಿ ವಹಿಸಲಾಗಿದ್ದು, ಎಲ್ಲ ಮತಗಟ್ಟೆಗಳಿಗೂ ಪ್ರಥಮ ಚಿಕಿತ್ಸಾ ಕಿಟ್, ಬಿಸ್ಕೆಟ್ ಪ್ಯಾಕೆಟ್, ಕುಡಿಯುವ ನೀರಿನ ವ್ಯವಸ್ಥೆ, ಜೀವ ರಕ್ಷಕ ಔಷಧಿಗಳು ಹಾಗೂ ಒಆರ್​ಎಸ್ ಪ್ಯಾಕೆಟ್​ಗಳನ್ನು ನೀಡಲಾಗಿದೆ. ಅಲ್ಲದೆ ತುರ್ತು ಸಂದರ್ಭದಲ್ಲಿ ವೈದ್ಯರ ಲಭ್ಯತೆ ಇರುವಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ಹೇಳಿದರು. ಧಾರವಾಡ ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್ ಮಸ್ಟರಿಂಗ್ ಕಾರ್ಯದ ನೇತೃತ್ವ ವಹಿಸಿದ್ದರು.