ಚುನಾವಣೆಗೆ ಮುನ್ನ ಮಂದಿರ ವಿವಾದ ಇತ್ಯರ್ಥ ಕಷ್ಟಸಾಧ್ಯ

ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಪ್ರಕರಣದ ತೀರ್ಪು ಲೋಕಸಭಾ ಚುನಾವಣೆಗೆ ಮುನ್ನ ಹೊರಬೀಳುವ ಸಾಧ್ಯತೆ ಕಡಿಮೆ. ಸಾಂವಿಧಾನಿಕ ಪೀಠ ಎದುರು ಜ. 29ಕ್ಕೆ ಈ ಪ್ರಕರಣ ವಿಚಾರಣೆಗೆ ಬರಲಿದೆ. ಆದರೆ, ಮಾರ್ಚ್ ಮೊದಲ ವಾರದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ 36 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಪ್ರಕಟವಾಗುವುದು ಅನುಮಾನ. ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದ ಅನೇಕ ದಾಖಲೆಗಳು ಬೇರೆ ಬೇರೆ ಭಾಷೆಗಳಲ್ಲಿ ಇವೆ. ಇವೆಲ್ಲವನ್ನೂ ಸುಪ್ರೀಂಕೋರ್ಟ್​ನ ರಿಜಿಸ್ಟ್ರಾರ್ ಪರಿಶೀಲನೆ ನಡೆಸಲು ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ವಿಚಾರಣೆ ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ.

ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ಜತೆಗೆ ಇನ್ನಿತರ ಅರ್ಜಿಗಳನ್ನು ಸೇರಿಸಿ ಅದರ ವಿಚಾರಣೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಸಾಂವಿಧಾನಿಕ ಪೀಠ ರಚಿಸಿದ್ದರು. ಆದರೆ, ಈ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಯು.ಯು. ಲಲಿತ್, ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿದ್ದ ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್​ಸಿಂಗ್ ಪರ ವಕಾಲತ್ತು ವಹಿಸಿದ್ದರು ಎಂಬ ಆಕ್ಷೇಪ ಕೇಳಿಬಂದ ಕಾರಣ ಅವರು ಪೀಠದಿಂದ ಹಿಂದೆ ಸರಿದಿದ್ದಾರೆ. ಈಗ ಸಿಜೆಐ ಸಾಂವಿಧಾನಿಕ ಪೀಠಕ್ಕೆ ಹೊಸಬರನ್ನು ನೇಮಿಸಬೇಕಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *