ಚುನಾವಣೆಗೆ ಮಾತ್ರ ಮಹದಾಯಿ ನೆನಪು ಮಾಡಿಕೊಳ್ಳುವ ನಾಯಕರು

ಹುಬ್ಬಳ್ಳಿ: ನರೇಂದ್ರ ಮೋದಿ ವಿರೋಧಿಗಳು ಹಾಗೂ ಕಾಂಗ್ರೆಸ್​ನವರಿಗೆ ಚುನಾವಣೆ ಬಂದಾಗ ಮಾತ್ರ ಮಹದಾಯಿ ಸಮಸ್ಯೆ ನೆನಪಾಗುತ್ತದೆ, ಒಂದಲ್ಲ ಒಂದು ನೆಪ ಮಾಡಿಕೊಂಡು ಮಹದಾಯಿ ಸಮಸ್ಯೆಗೆ ಮೋದಿ ಸರ್ಕಾರ ಹಾಗೂ ಬಿಜೆಪಿಯೇ ಕಾರಣವೆಂದು ಹೇಳುವ ಕೆಟ್ಟ ಚಾಳಿ ಬೆಳೆಸಿಕೊಂಡಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಖಿತ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಜನವರಿ ತಿಂಗಳು ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ, ಗೋವಾ ಹಾಗೂ ಕರ್ನಾಟಕ ಸರ್ಕಾರಗಳು ಮಹದಾಯಿ ನ್ಯಾಯಾಧಿಕರಣ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರಿಂದ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡಲು ತೊಂದರೆಯಾಗಿರುವುದಾಗಿ ಹೇಳಿದ್ದಾರೆ. ಆದರೆ ಈಗ ಕಾಂಗ್ರೆಸ್-ಜೆಡಿಎಸ್​ನವರ ಮಾತು ತದ್ವಿರುದ್ಧವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಹಾಗೂ ನನ್ನನ್ನೂ ಸೇರಿದಂತೆ ನಮ್ಮ ನಾಯಕರ ಮೇಲೆ ಅನವಶ್ಯಕ ಗೂಬೆ ಕೂರಿಸುವ ಉದ್ದೇಶದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಯಾವುದೇ ರಾಜಕೀಯ ಪ್ರಯೋಜನವಾಗುವುದಿಲ್ಲ. ಜನ ಪ್ರಬುದ್ಧರಾಗಿದ್ದಾರೆ. ಯಾರದು ತಪ್ಪು, ಯಾರದು ಸರಿ ಎನ್ನುವುದು ಅರ್ಥವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಗೋವಾದ ಆಗಿನ ಕಾಂಗ್ರೆಸ್ ಸರ್ಕಾರ ಮಹದಾಯಿ ವಿವಾದವನ್ನು ಸವೋಚ್ಚ ನ್ಯಾಯಾಲಯಕ್ಕೆ ಕೊಂಡೊಯ್ದಾಗ 2010ರಲ್ಲಿ ಪ್ರಧಾನಿ ಮನಮೋಹನ್​ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ, ಇದು ಮಾತುಕತೆಯಿಂದ ಬಗೆಹರಿಯದ ವಿಷಯ ಎಂದು ಹೇಳಿತ್ತು. ಅಂತಾರಾಜ್ಯ ನದಿ ವಿವಾದಕ್ಕೆ ನ್ಯಾಯಾಧಿಕರಣ ರಚನೆಯೊಂದೇ ಪರಿಹಾರವೆಂದು ಸುಪ್ರಿಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ್ದೇ ಯುಪಿಎ ಸರ್ಕಾರ. ಈಗ ಬಿಜೆಪಿ ವಿರುದ್ಧ ಆರೋಪಿಸುತ್ತಿರುವ ವಿನಯ ಕುಲಕರ್ಣಿ ಅವರಿಗೆ ಗೊತ್ತಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

2007ರ ಗೋವಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು, ಕರ್ನಾಟಕಕ್ಕೆ ಮಹದಾಯಿಯ ಒಂದು ಹನೀ ನೀರನ್ನು ಗೋವಾ ಬಿಟ್ಟುಕೊಡುವುದಿಲ್ಲವೆಂದು ಹೇಳಿದ್ದರು. ಇದು ವಿನಯ ಕುಲಕರ್ಣಿಯವರಿಗೆ ಗೊತ್ತಿಲ್ಲದಿದ್ದರೆ ಅದು ಅವರ ಅಜ್ಞಾನ ಅಥವಾ ಜಾಣಕುರುಡು ಅಷ್ಟೇ. ಇದು ರಾಜ್ಯದ ಜನರಿಗೆ ತಿಳಿದಿದೆ ಎಂಬುದನ್ನಾದರೂ ಅವರು ಅರಿತುಕೊಳ್ಳಲಿ ಎಂದರು.

ಲಾಠಿಪ್ರಹಾರ ಮಾಡಿಸಿದ್ದೇಕೆ?: ಮಹದಾಯಿ ಹೋರಾಟಗಾರರ ಬಗ್ಗೆ ಪದೇಪದೆ ಮೊಸಳೆ ಕಣ್ಣೀರು ಸುರಿಸುವ ವಿನಯ ಕುಲಕರ್ಣಿಯವರೆ, ನೀವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಯಮನೂರಿನಲ್ಲಿ ಅಮಾಯಕ ಹೋರಾಟಗಾರರ ಮೇಲೆ ಹೆಂಗಸರು, ಮಕ್ಕಳೆನ್ನದೇ ಪೊಲೀಸರಿಂದ ಲಾಠಿ ಪ್ರಹಾರ ಮಾಡಿಸಿ ದೌರ್ಜನ್ಯ ಎಸಗಿದ್ದು ಕಾಂಗ್ರೆಸ್ ಸರ್ಕಾರವೇ ಅಲ್ಲವೆ? ಇದನ್ನು ನೀವು ಮರೆತಿರುವುದು ನಿಮ್ಮ ಸಮಯ ಸಾಧಕತೆಗೆ ಸಾಕ್ಷಿಯಾಗಿದೆ ಎಂದು ಕಟುಕಿದ್ದಾರೆ. ಹೊಡೆತ ಬೀಳದಿದ್ದರೂ ಹೋರಾಟಗಾರರು ಮೈಗೆ ಕೆಂಪು ಬಣ್ಣ ಹಚ್ಚಿಕೊಂಡು ನಾಟಕ ಮಾಡುತ್ತಿದ್ದಾರೆಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟವರು ನೀವೇ ಅಲ್ಲವೆ? ಹೋರಾಟಗಾರರನ್ನು ಅವಮಾನಿಸಿದ ನಿಮಗೆ ಮಹದಾಯಿ ಹೋರಾಟದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ. ಈಗ ಸೋಲಿನ ಭೀತಿ ನಿಮ್ಮನ್ನು ನಿದ್ದೆಗೆಡಿಸಿದ್ದು ಹತಾಶರಾಗಿ ಅನರ್ಥಕಾರಿ ಮಾತನಾಡುವುದನ್ನು ನಿಲ್ಲಿಸಿ ಎಂದು ಜೋಶಿ ಒತ್ತಾಯಿಸಿದ್ದಾರೆ.

ಕೈ ವರಿಷ್ಠರ ನಿಲುವು ಬಹಿರಂಗಗೊಳಿಸಲಿ: ನವಲಗುಂದ: ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ತಮ್ಮ ನಿಲುವು ಬಹಿರಂಗಪಡಿಸಲಿ ಎಂದು ಶಾಸಕ ಶಂಕರಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮಹದಾಯಿ ವಿಚಾರ ಬಳಸಿಕೊಂಡು ಜನತೆಯ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕ ಕಾಂಗ್ರೆಸ್ ಮುಖಂಡರು ಮತ್ತೆ ಕಳಸಾ-ಬಂಡೂರಿ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ನೆಲ, ಜಲ ಹಾಗೂ ಭಾಷೆಯ ವಿಷಯದಲ್ಲಿ ರಾಜಕೀಯ ಮಾಡಿದವರಿಗೆಲ್ಲ ಏನು ಗತಿಯಾಗಿದೆ ಎಂಬುದು ಗೊತ್ತಿರುವ ವಿಚಾರ ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿಯ ನಿಲುವು ಸ್ಪಷ್ಟವಾಗಿದ್ದು, ಕಾಲುವೆಯಲ್ಲಿ ನೀರು ಹರಿಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.