Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಚುನಾವಣಾ ಚಿಹ್ನೆಗೂ ಕಾದಾಟ ನಡೆಯುವುದೇಕೆ?

Wednesday, 29.11.2017, 3:03 AM       No Comments

| ಸಜ್ಜನ್​ ಪೂವಯ್ಯ

ನಿರ್ದಿಷ್ಟ ವರ್ಗ ಅಥವಾ ಸಿದ್ಧಾಂತವೊಂದನ್ನು ಪ್ರತಿನಿಧಿಸುವ, ಅದರ ಉದ್ದೇಶಗಳಿಗೆ ಒತ್ತಾಸೆಯಾಗಿ ನಿಲ್ಲುವ ಪ್ರವೃತ್ತಿಯನ್ನು ರಾಜಕೀಯ ಪಕ್ಷಗಳು ತೋರುವಂತೆಯೇ, ಆಯಾ ಪಕ್ಷಗಳ ವಿಶಿಷ್ಟ ಪರಿಕಲ್ಪನೆ, ಗುಣಲಕ್ಷಣಗಳನ್ನು ಪ್ರತಿನಿಧಿಸಲು ಅವು ಚಿಹ್ನೆಗಳನ್ನು ಅಳವಡಿಸಿಕೊಂಡವು ಎನ್ನಬೇಕು. ಹೀಗಾಗಿ ಪ್ರತಿಯೊಂದು ರಾಜಕೀಯ ಪಕ್ಷದ ‘ಪ್ರಚಾರ ಶಸ್ತ್ರಾಗಾರ’ದಲ್ಲಿ ಚಿಹ್ನೆ ಒಂದು ಪ್ರಮುಖಾಸ್ತ್ರವೂ ಆಗಿರುವುದು ದಿಟ.

 ‘ಚುನಾವಣಾ ಕದನದಲ್ಲಿ ಗೆಲುವು ದಾಖಲಾಗುವುದು ಚುನಾವಣಾ ಚಿಹ್ನೆಗಾಗಿ ನಡೆಸಿದ ಸಾಂಕೇತಿಕ ಹೋರಾಟ/ಕಸರತ್ತಿನಿಂದಲ್ಲ; ಬದಲಿಗೆ ಯಾರು ಸೇವಾಕಾಂಕ್ಷಿಗಳಾಗಿದ್ದು ಅರ್ಹತೆಯನ್ನು ಹೊಂದಿರುತ್ತಾರೋ ಅಂಥವರ ಪರವಾಗಿ ಶ್ರೀಸಾಮಾನ್ಯರು ಪುಟ್ಟಪುಟ್ಟ ಮತಗಟ್ಟೆಗಳಲ್ಲಿ ದಾಖಲಿಸುವ ಹನಿಹನಿ ರೂಪದ ಅಂಕಿತಗಳೇ ಸಾಪೇಕ್ಷ ಬಹುಮತವಾಗಿ ಪರಿಣಮಿಸುವುದರಿಂದ’- ಇದು ‘ರಾಮಕೃಷ್ಣ ಹೆಗಡೆ ವರ್ಸಸ್ ಚುನಾವಣಾ ಆಯುಕ್ತರು (1980)’ ಪ್ರಕರಣದಲ್ಲಿ ನ್ಯಾ. ಕೃಷ್ಣ ಅಯ್ಯರ್ ನೀಡಿದ ತೀರ್ಪಿನಲ್ಲಿನ ಉಲ್ಲೇಖ.

ಪ್ರಜಾಸತ್ತಾತ್ಮಕ ಸರ್ಕಾರದ ಸ್ವರೂಪದಲ್ಲಿ ರಾಜಕೀಯ ಪಕ್ಷಗಳ ಪ್ರಾಮುಖ್ಯವು ಅಂತರ್ಗತವಾಗಿದೆ. ಪ್ರತಿ ಬಾರಿ ಸರ್ಕಾರ ಬದಲಾದಾಗಲೂ, ಸಾಂವಿಧಾನಿಕ ಕಾರ್ಯವಿಧಾನ ಹಾಗೂ ಸುಧಾರಣೆಯ ಮೂಲಕ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಅವುಗಳ ಅಸ್ತಿತ್ವ ನಿರ್ಣಾಯಕವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಪ್ರಜಾಪ್ರಭುತ್ವದ ಒಂದು ಅತ್ಯವಶ್ಯಕ ಸಹವರ್ತಿಯಾಗಿರುವ ಬಹುತ್ವ ಸಿದ್ಧಾಂತಕ್ಕೂ/ಸಾಪೇಕ್ಷ ಬಹುಮತಕ್ಕೂ ರಾಜಕೀಯ ಪಕ್ಷಗಳು ಕಾರಣೀಭೂತವಾಗಿರುತ್ತವೆ. ‘ವ್ಯವಸ್ಥಿತ ಅಭಿಪ್ರಾಯಭೇದಗಳು’ ಮತ್ತು ‘ಬಗೆಹರಿಸಲಾಗದ ತಿಕ್ಕಾಟಗಳೇ’ ವೈಶಿಷ್ಟ್ಯವಾಗಿರುವ ಬಹುಮುಖಿ ರಾಜಕೀಯ ಚರ್ಚೆಗಳು ಮತ್ತು ಕದನಗಳು, ‘ಸಾಪೇಕ್ಷ ಬಹುಮತದ ಮೂಲಸತ್ವ’ವನ್ನು ಸಾರೀಕರಿಸುವುದಕ್ಕೆ ಅಂತಿಮವಾಗಿ ಅನುವು ಮಾಡಿಕೊಡುವುದರ ಜತೆಗೆ, ‘ಅಲ್ಪಸಂಖ್ಯಾತರ ಪರಿಣಾಮಕಾರಿ ಪ್ರಾತಿನಿಧ್ಯ’ವೊಂದನ್ನು ಖಾತ್ರಿಪಡಿಸುವಲ್ಲಿಯೂ ಸಮರ್ಥವಾಗುತ್ತವೆ.

ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದಾಗ ಇದ್ದುದು ಒಂದೇ ಒಂದು ರಾಜಕೀಯ ಪಕ್ಷ; ಇದು ಬಹುಕಾಲದವರೆಗೆ ದೇಶವನ್ನಾಳಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್​ಸಿ) ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ವಾಸ್ತವವಾಗಿ, ಸ್ವತಂತ್ರ ಭಾರತಕ್ಕಾಗಿ ಸಂವಿಧಾನದ ಕರಡುಪ್ರತಿ ರಚಿಸಲೆಂದು ಹುಟ್ಟುಹಾಕಲಾಗಿದ್ದ ಮತ್ತು ಪರೋಕ್ಷವಾಗಿ ಚುನಾಯಿತರಾದ ಭಾರತೀಯ ಪ್ರತಿನಿಧಿಗಳನ್ನು ಒಳಗೊಂಡಿದ್ದ ಸಂವಿಧಾನ ರಚನಾ ಮಂಡಳಿಯಲ್ಲಿನ ಒಟ್ಟು 299 ಸ್ಥಾನಗಳ ಪೈಕಿ ಐಎನ್​ಸಿ 207 ಸ್ಥಾನಗಳನ್ನು ಹೊಂದಿತ್ತು. ಸಂಖ್ಯಾಬಲದ ದೃಷ್ಟಿಯಿಂದ ಸಂವಿಧಾನ ರಚನಾ ಮಂಡಳಿಯಲ್ಲಿ ಏಕಪಕ್ಷದ ಪ್ರಾಬಲ್ಯವಿತ್ತಾದರೂ, ವಿಭಿನ್ನ ಚಿಂತನಾ ಪ್ರವೃತ್ತಿಯ ಪ್ರತಿನಿಧಿಗಳನ್ನು ಮಂಡಳಿಗೆ ನೇಮಕ ಮಾಡಿಕೊಳ್ಳುವ ಮೂಲಕ ದೃಷ್ಟಿಕೋನಗಳು, ಪರಿಕಲ್ಪನೆಗಳು ಮತ್ತು ಆಯ್ಕೆಗಳ ಸಾಪೇಕ್ಷ ಬಹುಮತವನ್ನು ಅಥವಾ ಬಹುತ್ವವನ್ನು ಖಾತ್ರಿಪಡಿಸಿದ್ದು ಅದೇ ಪಕ್ಷವೇ ಎಂಬುದನ್ನಿಲ್ಲಿ ಗಮನಿಸಬೇಕು. ಐಎನ್​ಸಿಯ ಪ್ರಾಬಲ್ಯದ ಕುರಿತಾಗಿ ದಿಗಿಲುಗೊಂಡ ವಿಶ್ವವು, ‘ಪ್ರಾತಿನಿಧ್ಯ ತತ್ತ್ವದ ತಳಹದಿಯುಳ್ಳ’ ಸಂವಿಧಾನವೊಂದನ್ನು ರೂಪಿಸುವಲ್ಲಿನ ಸಂವಿಧಾನ ರಚನಾ ಮಂಡಳಿಯ ಸಾಮರ್ಥ್ಯವನ್ನು ಶಂಕಿಸಿತ್ತು. ಅಂಥ ಸಂದರ್ಭದಲ್ಲಿ, ಆಡಳಿತ ವ್ಯವಸ್ಥೆಯ ಪಾಲಿನ ನಿಜಾರ್ಥದ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಸಲಕರಣೆಯೊಂದನ್ನು ಅದು ಭಾರತೀಯರಿಗೆ ಕಟ್ಟಿಕೊಟ್ಟಿದ್ದನ್ಜು ನಾವು ಮರೆಯಲಾಗದು. ಬಹುತ್ವ ಸಿದ್ಧಾಂತದ ಅಸ್ತಿತ್ವವಿಲ್ಲದ ಏಕಪಕ್ಷದ ಪದ್ಧತಿಯೊಂದರ ಅಪಾಯಗಳಿಗೆ ಚೀನಾದಂಥ ರಾಷ್ಟ್ರಗಳು ಈಡಾದಾಗ, ಭಾರತದ ಸಂವಿಧಾನ ರಚನಾ ಮಂಡಳಿಯು, -ಒಂದೊಮ್ಮೆ ಎಲ್ಲರ ಎನ್ನಲಾಗದಿದ್ದರೂ- ಬಹುತೇಕ ಭಾರತೀಯರ ಹಿತಾಸಕ್ತಿಗಳನ್ನು ಸಂರಕ್ಷಿಸಿತು ಮತ್ತು ಪ್ರವರ್ತಿಸಿತು.

ಸಂವಿಧಾನ ರಚನಾ ಮಂಡಳಿಯಿಂದ ಭಾರತದ ಮೊಟ್ಟಮೊದಲ ಹಂಗಾಮಿ ಸರ್ಕಾರ (ಇದನ್ನು 1947-1952ರ ಅವಧಿಯ ನೆಹರುರ ಮೊದಲ ಸಚಿವ ಸಂಪುಟ ಎಂದು ಸಾಮಾನ್ಯವಾಗಿ ಉಲ್ಲೇಖಿಸುವುದುಂಟು) ರೂಪುಗೊಂಡಾಗ, ಐಎನ್​ಸಿ ಸದಸ್ಯರು ಮಾತ್ರವಲ್ಲದೆ ಇತರ ರಾಜಕೀಯ ಪಕ್ಷಗಳ ಸದಸ್ಯರನ್ನೂ ಅದು ಒಳಗೊಂಡಿತ್ತು; ಐಎನ್​ಸಿ ಸದಸ್ಯರೂ ಸೇರಿದಂತೆ ನಮ್ಮ ರಾಷ್ಟ್ರಸ್ಥಾಪಕರಿಗೆ ಬಹುತ್ವ ಸಿದ್ಧಾಂತದ ಪರಿಕಲ್ಪನೆಯೆಡೆಗೆ ಒಲವಿತ್ತು ಎಂಬುದಕ್ಕೆ ಇದು ದ್ಯೋತಕ. ಪರಿಶಿಷ್ಟ ಜಾತಿಗಳ ಒಕ್ಕೂಟದ ಸದಸ್ಯರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್​ರನ್ನು ಕೇಂದ್ರ ಕಾನೂನು ಮಂತ್ರಿಯಾಗಿ ನೇಮಿಸಿದರೆ, ರಕ್ಷಣಾ ಮಂತ್ರಿಯಾಗಿ ಪಂಥಿಕ್ ಪಕ್ಷದ ಬಲದೇವ್ ಸಿಂಗ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಹಿಂದು ಮಹಾಸಭಾದ ಶ್ಯಾಮ ಪ್ರಸಾದ್ ಮುಖರ್ಜಿ ನಿಯೋಜಿತರಾದರು. ಆ ಲೆಕ್ಕದಲ್ಲಿ ನೋಡಿದರೆ, ಇಂದಿನ ದಿನಮಾನದಲ್ಲಿ ಸರ್ಕಾರದಲ್ಲಿ ಇಂಥದೊಂದು ಬಹುತ್ವ ಸಿದ್ಧಾಂತವಿರುವುದು ಕನಸೇ ಸರಿ!

ಕಾಲ ಸರಿದಂತೆ, ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಬಹುತ್ವ ಸಿದ್ಧಾಂತಕ್ಕೆ ಹೊಸತೊಂದು ಆಕಾರ ದಕ್ಕಿತು. ಕುಟುಂಬ/ವಂಶಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನಂಥ ಪಕ್ಷವನ್ನೇ ತಮ್ಮ ಹತೋಟಿಗೆ ತೆಗೆದುಕೊಂಡಿದ್ದು ಒಂದೆಡೆಯಾದರೆ, ಕೆಲವೊಂದು ರಾಜಕೀಯ ಪಕ್ಷಗಳು, ಭಿನ್ನ ವರ್ಗಗಳು ಅಥವಾ ಸಿದ್ಧಾಂತಗಳನ್ನು ಪ್ರತಿನಿಧಿಸುವ ಹೊಸ ಪಕ್ಷಗಳು ಚಿಗುರೊಡೆಯಲಾರಂಭಿಸಿದ್ದು ಮತ್ತೊಂದು ಬೆಳವಣಿಗೆ. ಪಕ್ಷದ ವಿಭಿನ್ನ ಹುದ್ದೆಗಳಿಗೆ ನಡೆಯುವ ಆಂತರಿಕ ಚುನಾವಣೆಗಳಿಗೆ ಕೃತ್ರಿಮ ಸ್ವರೂಪ ದಕ್ಕಿದ್ದರಿಂದಾಗಿ, ಚುನಾವಣೆ ಎಂಬ ತಥಾಕಥಿತ ಔಪಚಾರಿಕ ವಿಧಿವಿಧಾನದ ನೆರವಿನಿಂದಾಗಿ ಪ್ರಭಾವಿ ಕುಲ/ವಂಶಕ್ಕೆ ಸೇರಿದ ಸದಸ್ಯರು ಪಕ್ಷದ ಮಹತ್ವದ ಸ್ಥಾನಗಳಿಗೆ ಹಕ್ಕು ಸಾಧಿಸುವುದು ಸುಲಭವಾಗಿಬಿಟ್ಟಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಇಂಥದೊಂದು ಬದಲಾವಣೆಯಿಂದಾಗಿ, ಸಮರರೇಖೆಗಳು ರಾಜಕೀಯ ಪಕ್ಷಗಳ ಒಳಗೆ ರೂಪುಗೊಳ್ಳುವುದರ ಬದಲಿಗೆ ಈಗ ರಾಜಕೀಯ ಪಕ್ಷಗಳ ನಡುವೆ ರೂಪುಗೊಳ್ಳುವಂತಾಗಿದೆ.

ಅದೇನೇ ಇರಲಿ, ಪಕ್ಷಗಳಲ್ಲಿ ಒಳಗೊಳಗೇ ತಿಕ್ಕಾಟಗಳು ಅಥವಾ ಹಿತಾಸಕ್ತಿಯ ಘರ್ಷಣೆಗಳು ಇರಲೇ ಇಲ್ಲ ಎಂಬುದು ಈ ಮಾತಿನರ್ಥವಲ್ಲ. ನಿಜ ಹೇಳಬೇಕೆಂದರೆ, ಚಿಹ್ನೆಗಾಗಿ ನಡೆದ ಹೋರಾಟವು ಪಕ್ಷದಲ್ಲಿನ ಇಂಥದೊಂದು ಒಳಜಗಳದ ಫಲಶ್ರುತಿಯಾಗಿತ್ತು; ನಿರ್ದಿಷ್ಟ ವರ್ಗ ಅಥವಾ ಸಿದ್ಧಾಂತವೊಂದನ್ನು ಪ್ರತಿನಿಧಿಸುವ ಹಾಗೂ ಅದರ ಉದ್ದೇಶಗಳಿಗೆ ಒತ್ತಾಸೆಯಾಗಿ ನಿಲ್ಲುವ ಪ್ರವೃತ್ತಿಯನ್ನು ರಾಜಕೀಯ ಪಕ್ಷಗಳು ತೋರುವಂತೆಯೇ, ಆಯಾಯ ಪಕ್ಷಗಳ ವಿಶಿಷ್ಟ ಪರಿಕಲ್ಪನೆಗಳು ಹಾಗೂ ಗುಣಲಕ್ಷಣಗಳನ್ನು ಪ್ರತಿನಿಧಿಸಲು ಅವು ಚಿಹ್ನೆಗಳನ್ನು/ಪ್ರತಿಮಾ ವಿಧಾನವನ್ನು ಅಳವಡಿಸಿಕೊಂಡವು ಎನ್ನಬೇಕು. ಪ್ರತಿಯೊಂದು ರಾಜಕೀಯ ಪಕ್ಷದ ‘ಪ್ರಚಾರ ಶಸ್ತ್ರಾಗಾರ’ದಲ್ಲಿ ಚಿಹ್ನೆ/ಪ್ರತಿಮಾ ವಿಧಾನ ಒಂದು ಪ್ರಮುಖಾಸ್ತ್ರವೂ ಆಗಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಅಂಥ ಒಂದಷ್ಟು ಉದಾಹರಣೆಗಳನ್ನು ನೋಡೋಣ: ‘ಕಮಲ್ ಖಿಲೇಗಾ ಬಸ್ ಕಮಲ್ ಹೀ ಖಿಲೇಗಾ’- ಅಂದರೆ ‘ಕಮಲ ಅರಳಲಿದೆ ಮತ್ತು ಕಮಲ ಮಾತ್ರವೇ ಅರಳಲಿದೆ’ (ಬಿಜೆಪಿ), ‘ಕಾಂಗ್ರೆಸ್​ನ ಹಸ್ತ ಶ್ರೀಸಾಮಾನ್ಯನೊಂದಿಗಿದೆ’ (ಐಎನ್​ಸಿ), ‘ಈ ಸಲ ಗೆಲ್ಲುವುದು ಯಾರು? ಕುಡುಗೋಲು-ಸುತ್ತಿಗೆ, ಇನ್ನು ಮುಂದೆ ಭೂಮಿಯ ಮೇಲೆ ತಾರೆಗಳದ್ದೇ ಕಾರುಬಾರು’ (ಸಿಪಿಐ-ಎಂ). ಇನ್ನು ಶ್ರೀಸಾಮಾನ್ಯರು ಬಳಸುವ ಅಗ್ಗದ ಸಾರಿಗೆ ಸಾಧನವೆಂಬ ಸೂಚ್ಯಾರ್ಥವನ್ನು ಹೊಂದಿರುವ ಬೈಸಿಕಲ್, ಸಮಾಜವಾದಿ ಪಕ್ಷದ ಚಿಹ್ನೆಯಾಗಿರುವುದು ಗೊತ್ತಿರುವಂಥದ್ದೇ.

ಸುಲಭವಾಗಿ ಗುರುತಿಸುವುದಕ್ಕೆ ಮತ್ತು ರಾಜಕೀಯ ಪಕ್ಷಗಳನ್ನು/ಅಭ್ಯರ್ಥಿಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಮತದಾರರಿಗೆ ನೆರವಾಗುವುದು ಚುನಾವಣಾ ಚಿಹ್ನೆಗಳ ‘ಕಾರ್ಯತಃ ಉದ್ದೇಶ’ ಎಂಬುದು ಸುಸ್ಪಷ್ಟ. ಹಾಗೆ ನೋಡಿದರೆ ಚಿಹ್ನೆಗಳು ಭಾರತೀಯ ರಾಜಕೀಯ ವ್ಯವಸ್ಥೆಯ ಒಂದು ವಿಶಿಷ್ಟ ಲಕ್ಷಣವೇನಲ್ಲ. ಬೇರೆ ದೇಶಗಳಲ್ಲಾದರೆ, ಚುನಾವಣಾ ಚಿಹ್ನೆಗಳು ಅಥವಾ ಲಾಂಛನಗಳನ್ನು ಒದಗಿಸುವುದರ ಜತೆಜತೆಗೆ, ಚುನಾವಣಾ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯ ಹೆಸರಿನ ಎದುರು ಸಂಖ್ಯೆಗಳ ರೂಪದಲ್ಲಿ ವಿವರಗಳನ್ನು ಸೇರಿಸಲಾಗುತ್ತದೆ. ಚುನಾವಣಾ ಪ್ರಕ್ರಿಯೆಯು ಸಾಧ್ಯವಾದಷ್ಟರ ಮಟ್ಟಿಗೆ ಯಥಾರ್ಥವಾಗಿ, ನ್ಯಾಯಸಮ್ಮತವಾಗಿ ಹಾಗೂ ಸರ್ವಾನ್ವಯಿಕವಾಗಿ ನಡೆಯುತ್ತದೆ ಹಾಗೂ ಮತದಾರನು ತನ್ನಾಯ್ಕೆಯ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುವಾಗ ವ್ಯವಸ್ಥೆಯಲ್ಲಿ ಯಾವುದೇ ಕೊರತೆ ಆತನನ್ನು ಬಾಧಿಸುವಂತಾಗಬಾರದು ಎಂಬುದನ್ನು ಖಾತ್ರಿಪಡಿಸುವುದು ಇಂಥ ಚಿಹ್ನೆಗಳು ಅಥವಾ ಪ್ರತಿಮಾ ವಿಧಾನದ ಅನುಸರಣೆಯ ಉದ್ದೇಶವಾಗಿರುತ್ತದೆ.

ಅದರಲ್ಲೂ, ನಮ್ಮ ಪ್ರಜಾಧಿಪತ್ಯದ ಆರಂಭಿಕ ವರ್ಷಗಳಲ್ಲಿ, ಸಾಕ್ಷರತಾ ಪ್ರಮಾಣವು ಸೀಮಿತ ಮಟ್ಟದಲ್ಲಿದ್ದಂಥ ಕಾಲಘಟ್ಟದಲ್ಲಿ ಇದಕ್ಕಿದ್ದ ಪ್ರಾಮುಖ್ಯ ಒಂದು ಮುಷ್ಟಿ ಹೆಚ್ಚೇ ಇತ್ತು ಎನ್ನಬೇಕು. 1951ರ ಅವಧಿಯಲ್ಲಿ ದಾಖಲಾಗಿದ್ದ ಸಾಕ್ಷರತಾ ಪ್ರಮಾಣ ಶೇ. 18.33ರಷ್ಟು; ಹೀಗಾಗಿ ಮತದಾನದ ಸಂದರ್ಭದಲ್ಲಿ, ಮತದಾರರ ಸಮ್ಮುಖದಲ್ಲಿ ಅಭ್ಯರ್ಥಿಯ ಮತ್ತು ಆತ ಪ್ರತಿನಿಧಿಸುವ ಪಕ್ಷದ ಹೆಸರು ಮಾತ್ರವಲ್ಲದೆ, ಪಕ್ಷದ ಚಿಹ್ನೆಯೂ ಇರುತ್ತಿತ್ತು (ಈಗಲೂ ಅದು ಇದೆಯೆನ್ನಿ). ಇದರ ಜತೆಗೆ, ಪ್ರತಿಯೊಂದು ರಾಜಕೀಯ ಪಕ್ಷದ ಚಿಹ್ನೆಯು ಕಾಲ ಸರಿಯುತ್ತಿದ್ದಂತೆ ಮಹತ್ತರ ಮೌಲ್ಯ/ಪ್ರಾಮುಖ್ಯವನ್ನು ದಕ್ಕಿಸಿಕೊಂಡಿತು; ಚುನಾವಣೆಗಳ ಸಂದರ್ಭದಲ್ಲಿ ಮತದಾರ ಸಮೂಹದ ಸಿಂಹಪಾಲು, ರಾಜಕೀಯ ಪಕ್ಷ ಮತ್ತು ಅದರ ಚಿಹ್ನೆಯೊಂದಿಗೆ ‘ಅವಿನಾಭಾವ’ ನಂಟುಕಲ್ಪಿಸುವುದು ಇದಕ್ಕಿರುವ ಕಾರಣ. ಹೀಗಾಗಿ, ಇಂಥ ಚಿಹ್ನೆಗಳ ವಿಷಯದಲ್ಲಿ ಸಾಧನೆಗಳು ಮತ್ತು ಅಪಯಶಸ್ಸು/ಅಪಖ್ಯಾತಿಗಳೂ ಹೊಮ್ಮಿದವೆನ್ನಬೇಕು.

ಈ ನಿಟ್ಟಿನಲ್ಲಿನ ಮತ್ತಷ್ಟು ಸ್ವಾರಸ್ಯಕರ ಸಂಗತಿಗಳನ್ನು ಮುಂದಿನ ಕಂತಿನಲ್ಲಿ ಅವಲೋಕಿಸೋಣ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top