ಕೂಡ್ಲಿಗಿ: ಗರ್ಭಿಣಿಯರು ಹಾಗೂ ಮಕ್ಕಳು ಸಕಾಲದಲ್ಲಿ ಚುಚ್ಚುಮದ್ದು ಪಡೆದರೆ ಆರೋಗ್ಯದಲ್ಲಿ ಯಾವುದೇ ತೊಂದರೆ ಎದುರಾಗದು ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಹೇಳಿದರು.

ಪಟ್ಟಣದ ಕನ್ಯಕಾಪರಮೇಶ್ವರಿ ದೇವಸ್ಥಾನ ಹಿಂಭಾಗದ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಗರ್ಭಿಣಿಯರು ಪ್ರತಿ ತಿಂಗಳು ಚುಚ್ಚುಮದ್ದು ಪಡೆದಲ್ಲಿ ಮಗುವಿಗೆ ಯಾವುದೇ ಮಾರಕ ಕಾಯಿಲೆ ಬಾಧಿಸುವುದಿಲ್ಲ. ಇನ್ನು ನವಜಾತ ಶಿಶುವಿನಿಂದ 16 ವರ್ಷಗಳವರೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಚುಚ್ಚುಮದ್ದು ಪಡೆದಲ್ಲಿ ಪೊಲಿಯೋ ಸೇರಿದಂತೆ ಯಾವುದೇ ಗಂಭೀರ ಕಾಯಿಲೆಗಳು ಬರುವುದಿಲ್ಲ ಎಂದರು.
ತಾಲೂಕಿನಲ್ಲಿ ಬಹುತೇಕ ಕೂಲಿ ಕಾರ್ಮಿಕರು ಹಾಗೂ ಅನಕ್ಷರಸ್ಥರು ಜೀವನ ಮಾಡುತ್ತಿದ್ದು, ಅವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಶಿವಪ್ಪನಾಯಕ ಹೇಳಿದರು.
ಟಿಎಚ್‌ಒ ಎಸ್.ಪಿ.ಪ್ರದೀಪ್ ಕುಮಾರ್ ಮಾತನಾಡಿ, ಪ್ರತಿ ಗುರುವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಹಾಕಲಾಗುತ್ತದೆ. ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಗರ್ಭಿಣಿಯರಿಗೆ ತಿಳಿವಳಿಕೆ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗರ್ಭಿಣಿಯರು, ಬಾಣಂತಿಯರು ಹಾಗೂ ನವ ಜಾತ ಶಿಶುಗಳು ಲಸಿಕೆಯಿಂದ ದೂರ ಉಳಿಯದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಗಮನಹರಿಸುತ್ತಿದ್ದಾರೆ ಎಂದು ತಿಳಿಸಿದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯ್ಯದ್ ಶುಕೂರ್, ಸದಸ್ಯರಾದ ಸಿರಿಬಿ ಮಂಜುನಾಥ, ಢಾಣಿ ಚೌಡಮ್ಮ, ಕೆ.ಈಶಪ್ಪ, ಬಾಸು ನಾಯ್ಕ, ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿಗಳಾದ ಕೆ.ಜಗದೀಶ್, ಕೆ.ಸುನೀತಾ, ಭವ್ಯಾ, ಆಶಾ ಕಾರ್ಯಕರ್ತೆಯರು ಇದ್ದರು.