ಚೀಂವ್ ಚೀಂವ್ ಅಳಿಲು

| ಶುಭಶ್ರೀ ಕಾಸರವಳ್ಳಿ

ಮರಗಿಡಗಳ ಮೇಲೆ ಅತ್ತಿಂದಿತ್ತ ಪುಟಪುಟನೇ ಓಡಾಡುತ್ತ, ಎರಡು ಪುಟಾಣಿ ಕೈಗಳಲ್ಲಿ ಏನೋ ಹಿಡಿದು ತಿನ್ನುವ ಅಳಿಲನ್ನು ನೋಡಿದರೆ ಒಮ್ಮೆಯಾದರೂ ಮುಟ್ಟಬೇಕು ಎನಿಸುವುದು ಸಹಜ. ಆದರೆ ಅವು ಕೈಗೆ ಸಿಗುವುದು ಬಲು ಅಪರೂಪ.

ಅಂದಹಾಗೆ ಈ ಅಳಿಲು ಶ್ರೀರಾಮನ ಬಂಟ. ಅದರ ಬೆನ್ನ ಮೇಲಿರುವ ಮೂರು ಗೆರೆ ಶ್ರೀರಾಮ ಎಳೆದದ್ದು ಎಂದೆಲ್ಲ ಪುರಾಣದ ಕಥೆಯನ್ನು ಹಿರಿಯರು ಹೇಳುತ್ತಾರೆ. ಲಂಕಾ ಮತ್ತು ರಾಮೇಶ್ವರದ ಮಧ್ಯೆ ಶ್ರೀರಾಮ ಸೇತುವೆ ನಿರ್ವಿುಸುವಾಗ ಅಳಿಲುಗಳು ಮರಳನ್ನು ಸಮುದ್ರದಿಂದ ತಂದು ಹಾಕುವ ಮೂಲಕ ಸಹಾಯ ಮಾಡಿದವಂತೆ. ಅದನ್ನು ಗಮನಿಸಿದ ಶ್ರೀರಾಮ ಪ್ರೀತಿಯಿಂದ ಅಳಿಲ ಬೆನ್ನನ್ನು ಸವರಿದಾಗ ಮೂರು ಗೆರೆಗಳು ಮೂಡಿದವು ಎಂಬುದು ಪ್ರತೀತಿ.

ಸದಾ ಚೀಂವ್ ಚೀಂವ್ ಎಂದು ಕೂಗುತ್ತಾ ಓಡಾಡುವ ಇವು ಎಲ್ಲೆಡೆ ಕಾಣಸಿಗುತ್ತವೆ. ಪ್ರತಿ ಬಾರಿ ಚೀಂವ್ ಎಂದಾಗಲೂ ಇವುಗಳ ಬಾಲ ಮೇಲೇರುತ್ತದೆ. ಯಾವುದಾದರೂ ಶತ್ರುವನ್ನು ನೋಡಿದಾಗ ಗಾಬರಿಯಿಂದ ಚೀಂವ್​ಗುಟ್ಟುವ ಶಬ್ದ ಜೋರಾಗಿರುತ್ತದೆ. ಒಂದರ ಹಿಂದೆ ಇನ್ನೊಂದು ಓಡುತ್ತಿರುತ್ತವೆ. ಆದರೆ ಸಂಜೆ ಐದಾರು ಗಂಟೆಯ ನಂತರ ಇವು ನಮ್ಮ ಕಣ್ಣಿಗೆ ಕಾಣ ಸಿಗುವುದಿಲ್ಲ. ಇವುಗಳ ಜೀವನಶೈಲಿಯಲ್ಲಿ ಬಾಲದ ಪಾತ್ರ ಬಹಳ ಮುಖ್ಯ. ಅಕಸ್ಮಾತ್ ಬಾಲ ತುಂಡಾದರೆ ಇವು ಮರದಿಂದ ಮರಕ್ಕೆ ಹಾರಲಾಗುವುದಿಲ್ಲ, ತಮ್ಮ ಸಂಗಾತಿಗಳ ಜತೆೆ ಸಂವಹನ ಮಾಡಲೂ ಆಗುವುದಿಲ್ಲ.

ನಾವು ಬಹುತೇಕ ಮರಗಳ ಮೇಲೆ ಓಡಾಡುವ ಮತ್ತು ಒಂದೇ ರೀತಿಯ ಅಳಿಲುಗಳನ್ನು ನೋಡಿದ್ದೇವೆ. ಆದರೆ ಪ್ರಪಂಚದಾದ್ಯಂತ ಸುಮಾರು 200 ಜಾತಿಯ ಅಳಿಲುಗಳಿವೆ. ನೆಲದ ಮೇಲೆ ವಾಸಿಸುವ ಅಳಿಲುಗಳು ಅವುಗಳ ಹೆಸರೇ ಹೇಳುವಂತೆ ನೆಲದ ಮೇಲೆ ಗೂಡು ಕಟ್ಟಿಕೊಂಡು, ಸುರಂಗ ಕೊರೆದು ವಾಸಿಸುತ್ತವೆ. ಚಳಿಗಾಲದಲ್ಲಿ ಗೂಡಿನೊಳಗೆ ಭೂಮಿಯಿಂದ ಹೊರಹೊಮ್ಮುವ ಉಷ್ಣಾಂಶದಿಂದಾಗಿ ಗೂಡಿನಿಂದ ಹೊರಗೆ ಬರುವುದೇ ಇಲ್ಲ. ಹಾರುವ ಅಳಿಲು ಮರದಿಂದ ಮರಕ್ಕೆ ಜಿಗಿಯುತ್ತಾ ಪೊಟರೆ ಅಥವಾ ರೆಂಬೆಯ ಮಧ್ಯೆ ಗೂಡು ಮಾಡಿಕೊಂಡು ವಾಸಿಸುತ್ತವೆ. ಆದರೆ ಹಕ್ಕಿಗಳ ರೀತಿ ರೆಕ್ಕೆ ಬಡಿಯುವುದಿಲ್ಲ. ಮುಂದಿನ ಬೆರಳುಗಳನ್ನು ಅಗಲವಾಗಿ ಹರಡಿದಾಗ ಬೆರಳುಗಳ ಮಧ್ಯದಲ್ಲಿ ತೆಳುವಾದ ಪೊರೆ ಹರಡಿಕೊಳ್ಳುತ್ತದೆ. ಅದರ ಸಹಾಯದಿಂದ ಒಂದು ಮರದಿಂದ ಇನ್ನೊಂದು ಮರಕ್ಕೆ ನೆಗೆಯುತ್ತವೆ. 150 ಅಡಿಗಳವರೆಗೆ ಇಳಿಮುಖವಾಗಿ ಜಾರುತ್ತವೆ.

ಸಾಮಾನ್ಯವಾಗಿ ಇವುಗಳ ಚರ್ಮ ಮೆತ್ತಗಿರುತ್ತದೆ. ಬೇರೆ ಬೇರೆ ವರ್ಗದ ಅಳಿಲುಗಳ ಬಣ್ಣಗಳ ನಡುವೆ ವ್ಯತ್ಯಾಸವಿದೆ. ಹಿಂದಿನ ಕಾಲುಗಳು ಮುಂದಿನ ಕಾಲುಗಳಿಗಿಂತ ಉದ್ದವಿದ್ದು, ಪ್ರತಿ ಪಾದದಲ್ಲಿ ನಾಲ್ಕು ಅಥವಾ ಐದು ಬೆರಳುಗಳಿರುತ್ತವೆ. ಮುಂದಿನ ಪಾದದಲ್ಲಿ ಹೆಬ್ಬೆರಳು ಇರುತ್ತದೆ.

ಸುಮಾರು 40 ದಶಲಕ್ಷ ವರ್ಷಗಳ ಹಿಂದೆ ಅಳಿಲುಗಳು ಮೊದಲ ಬಾರಿಗೆ ಕಂಡದ್ದು ಇಯೊಸಿನ್​ನಲ್ಲಿ. ಇವು ಬಹುತೇಕ ನೀರುನಾಯಿ ಮತ್ತು ಡೊರ್​ವೆುೖಸ್ ಜಾತಿಗೆ ಸೇರಿದವು. ಅತಿ ಎತ್ತರ ವಲಯದ ಗಾಳಿಯಿಲ್ಲದ ಪ್ರದೇಶ ಹೊರತುಪಡಿಸಿ ಬಹುತೇಕ ಎಲ್ಲ ಉಷ್ಣವಲಯ, ಮಳೆಕಾಡಿನಿಂದ ಹಿಡಿದು ಕಡಿಮೆ ಗಾಳಿಯಿರುವ ಮರುಭೂಮಿ ಪ್ರದೇಶಗಳಲ್ಲೂ ಕಾಣಸಿಗುತ್ತವೆ.

ನಮಗೆ ಇವುಗಳ ಆಟ ನೋಡೋದು ಒಂದು ತರದ ಮೋಜು. ಆದರೆ ಆಸ್ಟ್ರೇಲಿಯನ್ನರಿಗೆ ಆ ಅದೃಷ್ಟ ಇಲ್ಲ. ಅಲ್ಲಿ ಅಳಿಲುಗಳೇ ಇಲ್ಲ. ಆದರೂ ಅವುಗಳನ್ನು ಸಾಕಲು ಬಯಸುವ ಅಳಿಲುಪ್ರಿಯರಿದ್ದಾರೆ. ಆದ್ದರಿಂದ ಅಲ್ಲಿ ಒಂದು ಅಳಿಲಿನ ಬೆಲೆ ಸುಮಾರು 50 ಸಾವಿರ ರೂ. ಇದೆ.

ಆಹಾರಾಭ್ಯಾಸ: ಅಳಿಲುಗಳು ಪ್ರೊಟೀನ್, ಕಾಬೋಹೈಡ್ರೇಟ್ ಹಾಗೂ ಕೊಬ್ಬಿನಂಶ ಜಾಸ್ತಿ ಇರುವ ಆಹಾರ ಅವಲಂಬಿಸಿರುತ್ತವೆ. ಅವುಗಳಿಗೆ ಬಹುತೇಕ ಪೋಷಕಾಂಶಗಳು ವಿವಿಧ ಕಾಯಿ, ಬೀಜ, ಹಣ್ಣುಗಳಿಂದ, ನಾಯಿಕೊಡೆ ಮತ್ತು ಹಸಿರು ತರಕಾರಿಗಳಿಂದ ದೊರಕುತ್ತವೆ. ಕೆಲವೊಮ್ಮೆ ಹಸಿವಾದಾಗ ಅಳಿಲುಗಳು ಮಾಂಸ ತಿನ್ನುತ್ತವೆ. ಸಾಮಾನ್ಯವಾಗಿ ಹುಳ, ಮೊಟ್ಟೆ, ಸಣ್ಣ ಪಕ್ಷಿ, ಸಣ್ಣ ಹಾವು ಮತ್ತು ಚಿಕ್ಕ ಪ್ರಾಣಿಗಳನ್ನು ಸೇವಿಸಿ ಸ್ಥಳೀಯ ಮಟ್ಟದಲ್ಲಿ ಇವು ಸಮತೋಲನ ಕಾಪಾಡುತ್ತವೆ. ಕೆಲವು ಉಷ್ಣವಲಯದಲ್ಲಿನ ಪ್ರಭೇದಗಳು ಬಹುತೇಕ ಪೋಷಕಾಂಶಗಳನ್ನು ಕೀಟಗಳಿಂದ ಪಡೆಯುತ್ತವೆ. ನೆಲದಲ್ಲಿನ ಅಳಿಲು ಪ್ರಭೇದಗಳು, ಅದರಲ್ಲೂ ವಿಶೇಷವಾಗಿ 13 ಗೆರೆಗಳಿರುವ ನೆಲದ ಅಳಿಲುಗಳು ದರೋಡೆಕೋರ ಸ್ವಭಾವದವು.

ಇಲಿಯಂತೆ ಸದಾ ಕಡಿಯುತ್ತಿರಬೇಕು

ಇವುಗಳಲ್ಲಿ ಅತಿ ಚಿಕ್ಕ ಜಾತಿಯದೆಂದರೆ ಆಫ್ರಿಕನ್ ಅಳಿಲು. 7 ಸೆಂಟಿಮೀಟರ್ ಉದ್ದ ಮತ್ತು 10 ಗ್ರಾಂ ತೂಕ. ದೊಡ್ಡದು ಸುಮಾರು 90 ಸೆಂಟಿಮೀಟರ್ ಉದ್ದ ಮತ್ತು 2 ಕೆ.ಜಿ. ತೂಕ. ಈ ಗುಂಪಿನ ಪ್ರಾಣಿಗಳ ಮುಂದಿನ ನಾಲ್ಕು ಹಲ್ಲುಗಳೇ ಇವುಗಳ ವಿಶೇಷ. ಈ ಹಲ್ಲುಗಳು ಸಾಯುವವರೆಗೆ ನಿರಂತರವಾಗಿ ವರ್ಷಕ್ಕೆ 6 ಇಂಚಿನಷ್ಟು ಬೆಳೆಯುತ್ತಲೇ ಇರುತ್ತವೆ. ಆದ್ದರಿಂದ ಇವು ನಿರಂತರವಾಗಿ ಕಚ್ಚುತ್ತಲೇ ಇರಬೇಕು, ಇಲ್ಲದಿದ್ದರೆ ಹಲ್ಲುಗಳು ಉದ್ದವಾಗಿ ವಕ್ರ ವಕ್ರವಾಗಿ ಬೆಳೆದು, ಮುಂದೆ ಬೇಟೆಯಾಡಲಾಗದೆ, ಅಗಿಯಲಾಗದೆ ಸಾಯಬೇಕಾಗುತ್ತದೆ. ಇವು ಒಂದು ವಾರಕ್ಕೆ ಸುಮಾರು ಅರ್ಧ ಕೆ.ಜಿ.ಯಷ್ಟು ಆಹಾರ ತಿನ್ನುತ್ತವೆ.

ಅರಣ್ಯ ವೃದ್ಧಿಗೆ ಅಳಿಲು ಸೇವೆ!

ಚಳಿಗಾಲದಲ್ಲಿ ಬಹುತೇಕ ಮರಗಳು ಹಣ್ಣು ಕೊಡುವುದಿಲ್ಲ. ಆದ್ದರಿಂದ, ಇವು ಬೀಜ ಮತ್ತು ಕಾಳುಗಳನ್ನು ಮಣ್ಣಿನ ಒಳಗೆ ಮತ್ತು ಬೇರೆ ಅಳಿಲುಗಳಿಗೆ ಗೊತ್ತಾಗದ ರೀತಿ ಹೂತಿಟ್ಟು ಚಳಿಗಾಲದಲ್ಲಿ ತಿನ್ನುತ್ತವೆ. ಆದರೆ, ಹೂತಿಟ್ಟ ಬೀಜಗಳನ್ನು ಎಲ್ಲಿ ಹೂಳಿಟ್ಟಿದ್ದೇವೆ ಎಂದು ಮರೆತು ಹೋಗುತ್ತವೆೆ. ಆದ್ದರಿಂದ ಅವುಗಳು ಹೂತಿಟ್ಟ ಬೀಜಗಳಲ್ಲಿ ಸುಮಾರು ಶೇ.40ರಷ್ಟು ಬೀಜಗಳಿಂದ ಅರಣ್ಯ ಬೆಳೆಯುತ್ತದೆ!

ಅಳಿಲುಗಳ ಆಯಸ್ಸು

ಅಳಿಲುಗಳು ಒಟ್ಟಿಗೆ 2ರಿಂದ 8 ಮರಿಗಳಿಗೆ ಜನ್ಮ ಕೊಡುತ್ತವೆ. ಇವುಗಳ ಸರಾಸರಿ ಆಯಸ್ಸು 5-6 ವರ್ಷ. ಆದರೆ 15 ವರ್ಷ ಬದುಕಿರುವ ಉದಾಹರಣೆಯೂ ಇದೆ. ಇವು ಒಂದು ವರ್ಷದಲ್ಲಿ ದೈಹಿಕವಾಗಿ ಪಕ್ವವಾಗಿ, ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮರಿ ಹಾಕುತ್ತವೆ. ಹುಟ್ಟಿದ ಮರಿಗಳಿಗೆ ಕೂದಲು, ಹಲ್ಲುಗಳು ಇರುವುದಿಲ್ಲ. ಕುರುಡಾಗಿರುತ್ತವೆ. ಬಹುತೇಕ ಎಲ್ಲ ಪ್ರಭೇದಗಳಲ್ಲೂ ಮರಿಗಳನ್ನು 6-10 ತಿಂಗಳವರೆಗೆ ತಾಯಿ ಅಳಿಲು ಪೋಷಿಸುತ್ತದೆ.

Leave a Reply

Your email address will not be published. Required fields are marked *