ಚಿಹ್ನೆ ಹೆಸರೇ ನೆನಪಿಗೆ ಬಾರದು

ಕಾರವಾರ: ಮೈತ್ರಿ ಸರ್ಕಾರದ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ತಮ್ಮ ಮೈತ್ರಿ ಅಭ್ಯರ್ಥಿಯ ಚಿಹ್ನೆಯೇ ನೆನಪಿಗೆ ಬರುತ್ತಿಲ್ಲವಂತೆ. ಇದನ್ನು ಅವರೇ ಪ್ರಚಾರ ಸಭೆಯಲ್ಲೂ ಹೇಳಿದ್ದಾರೆ.

ನಗರದ ಕೆಇಬಿ ಎದುರು ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ನಂತರ ಅವರು ಕೈ ಚಿಹ್ನೆ ಬೆಂಬಲಿಸಿ ಎಂದು ಹೇಳಲು ಹೊರಟರು. ನಂತರ ಅರಿವಾಗಿ ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹಸ್ತದ ಚಿಹ್ನೆ ಮತಯಂತ್ರದಲ್ಲಿ ಇಲ್ಲ ಎಂಬ ನೋವಿದೆ. ತೆನೆ ಹೊತ್ತ ಮಹಿಳೆಯ ಚಿಹ್ನೆಯ ಹೆಸರೇ ನೆನಪಿಗೆ ಬಾರದು. ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಸದಸ್ಯರಿದ್ದಾರೆ. ನಾವು ಎಲ್ಲಿ ಸಭೆ ನಡೆಸಿದರೂ ಕಾಂಗ್ರೆಸ್ ಕಾರ್ಯಕರ್ತರೇ ಕಾಣಿಸುತ್ತಾರೆ. ಜೆಡಿಎಸ್​ನವರು ಬರುವುದೇ ಇಲ್ಲ. ಜಿಲ್ಲೆಯಲ್ಲಿ ನೀವೇ ಅಣ್ಣ ಎಂದು ಅವರೇ ಹೇಳುತ್ತಿದ್ದಾರೆ. ನಮ್ಮ ಕಾಂಗ್ರೆಸ್ ನಾಯಕರು ತನು, ಮನ, ಧನದಿಂದ ಪ್ರಚಾರ ನಡೆಸಿದ್ದಾರೆ. ಆದರೂ ಯಾರೂ ಸೋಲು, ಗೆಲುವು ನಿರ್ಧರಿಸಲು ಸಾಧ್ಯವಿಲ್ಲ. ಅದು ಮತದಾರರಿಗೆ ಬಿಟ್ಟಿದ್ದು ಎಂದರು.

ವೈಯಕ್ತಿಕ ಟೀಕೆ ಬೇಡ: ವೈಯಕ್ತಿಕ ಟೀಕೆಯಿಂದ ಮತ ಬರುವುದಿಲ್ಲ. ಕೀಳು ಭಾಷೆ ಬಳಸಿದಲ್ಲಿ ಚಪ್ಪಾಳೆ ಬರಬಹುದು ಅಷ್ಟೆ. 10 ಜನ ಚಪ್ಪಾಳೆ ಹೊಡೆದರೆ 100 ಜನ ಅದನ್ನು ಗಮನಿಸುತ್ತಿರುತ್ತಾರೆ ಎಂದು ಕೀಳು ಭಾಷೆ ಪ್ರಯೋಗಿಸುತ್ತಿರುವ ತಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಹಾಗೂ ವಿರೋಧಿ ಅಭ್ಯರ್ಥಿಗೆ ಬಹಿರಂಗ ಸಭೆಯಲ್ಲಿ ಟಾಂಗ್ ಕೊಟ್ಟರು.

ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭಂಡಾರಿ,ಭೀಮಣ್ಣ ನಾಯ್ಕ, ಗಣಪತಿ ಮಾಂಗ್ರೆ, ಪ್ರಭಾಕರ ಮಾಳ್ಸೇಕರ್, ಜಿಪಂ ಸದಸ್ಯರಾದ ಚೈತ್ರಾ ಕೊಠಾರಕರ್, ಕೃಷ್ಣ ಮೇಥಾ, ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ, ಸದಸ್ಯ ಮಾರುತಿ ನಾಯ್ಕ ಇತರರು ಇದ್ದರು. ಸಮೀರ ನಾಯ್ಕ ಸ್ವಾಗತಿಸಿದರು. ಶಂಭು ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮಾತನಾಡುವಾಗ ಎಚ್ಚರ ವಹಿಸಿ: ‘ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಗೆಲುವು, ಸೋಲಿಗೆ ಸಚಿವ ದೇಶಪಾಂಡೆ ಅವರೇ ಕಾರಣ’ ಎಂಬ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿಕೆಗೆ ಶಾಸಕ ಸತೀಶ ಸೈಲ್ ಅಸಮಾಧಾನ ವ್ಯಕ್ತಪಡಿಸಿದರು. ದೇಶಪಾಂಡೆ ಅವರು ದಿನದ 18 ಗಂಟೆ ಕೆಲಸ ಮಾಡುತ್ತಾರೆ. ಆದರೆ, ಚುನಾವಣೆಯ ಸಂದರ್ಭದಲ್ಲಿ ಅವರ ಮೇಲೆ ಹೊಣೆ ಹೊರಿಸಲು ಸಾಧ್ಯವಿಲ್ಲ. ಜೆಡಿಎಸ್ ನಾಯಕರು ಮಾತನಾಡುವಾಗ ಎಚ್ಚರ ವಹಿಸಬೇಕು ಎಂದರು. ಸಚಿವ ದೇಶಪಾಂಡೆ ಸ್ಪಷ್ಟನೆ ನೀಡಿ, ಹೊರಟ್ಟಿ ನಮ್ಮ ಆತ್ಮೀಯ ಸ್ನೇಹಿತರು. ಮೈತ್ರಿ ಅಭ್ಯರ್ಥಿ ಗೆಲ್ಲಿಸಲಿ ಎಂಬ ಕಳಕಳಿಯಿಂದ ಹಾಗೇ ಹೇಳಿರಬೇಕು ಎಂದರು.